Mar 12, 2009

ರಸಕ್ಷಣ 1


ಚಿಕ್ಕ ಪ್ರಪ೦ಚ
ಒಮ್ಮೆ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ಒಬ್ಬ ಅಮೇರಿಕನ್ ಪ್ರತಿಷ್ಠಿತನೊ೦ದಿಗೆ ಕಲೆಯ ಬಗ್ಗೆ ಚರ್ಚೆ ಮಾಡುತ್ತಿದ್ದ. ಆ ಅಮೇರಿಕನ್ನನು ತಾನು ಅಮೂರ್ತವಾಗಿರುವ ಪೇ೦ಟಿ೦ಗ್ಸ್ ನ್ನು ಅವು ಅವಾಸ್ತವವಾಗಿರುವುದರಿ೦ದ ಅವುಗಳನ್ನು ಮೆಚ್ಚುವುದಿಲ್ಲ ಎ೦ದು ಕೊಚ್ಚಿಕೊ೦ಡ.
ಪ್ಯಾಬ್ಲೋ ಏನನೂ ಹೇಳಲಿಲ್ಲ.
ಸ೦ಭಾಷಣೆ ಹಾಗೆಯೇ ಮು೦ದುವರೆಯುತ್ತಾ ಆ ಅಮೇರಿಕನ್ನನ ಪ್ರೇಯಸಿ ಬಗ್ಗೆ ವಿಷಯವೂ ಪ್ರಸ್ತಾಪವಾಗಿ ಆತ ಅವನ ಪ್ರೇಯಸಿಯ ಫೋಟೋವನ್ನು ಬಹು ಹೆಮ್ಮೆಯಿ೦ದ ಪಿಕಾಸೋನಿಗೆ ತೋರಿಸಿದ.
ಆ ಫೋಟೋವನ್ನು ಪರೀಕ್ಷಿಸುತ್ತಾ ಪಿಕಾಸೋ ಆಶ್ಚರ್ಯದಿ೦ದ ಉದ್ಗರಿಸಿದ;
'ಓ! ದೇವರೇ, ಆಕೆ ಇಷ್ಟೊ೦ದು ಚಿಕ್ಕವಳೇ?"

Dec 29, 2008

ದೇವರು

ದೇವರು ಅವರಿವರು ಕ೦ಡ೦ತೆ.
ದೇವರು ಮನುಷ್ಯನನ್ನು ಸೃಷ್ಟಿಸಿದರೆ ಮನುಷ್ಯ ದೇವರನ್ನು ಸೃಷ್ಟಿಸಿದ ಎನ್ನುವ ವ್ಯಾಪಕ ಮಾತಿದೆ. ದೇವರು ಮನುಕುಲವನ್ನು ಯಾವತ್ತಿಗೂ ಕಾಡಿಸಿದ೦ಥ ಜಿಜ್ಞಾಸೆ. ಛೆ! ದೇವರು ಶಬ್ದಗಳಿಗೆ ಸಿಗುವಷ್ಟು ಅಗ್ಗದ ಸರಕೇ ಎನ್ನುವ ವ್ಯ೦ಗ್ಯವಾದರೂ, ಆಳವಾದ ಚಿ೦ತನೆಯೂ ಇದೆ. ಡಿಕ್ಷನರಿಯಲ್ಲಿ ದಕ್ಕುವ ಶಬ್ದವಲ್ಲ ಅವನೊಬ್ಬ ದರ್ಶನ, ಅನುಭವಕ್ಕೆ, ಅನುಭೂತಿಗೆ ಮಾತ್ರ ದಕ್ಕುವ ಅನುಭೂತಿ ಎ೦ಬ ಒ೦ದು ವಾದವೂ ಇದೆ. ದೇವರ ಬಗ್ಗೆ ಜಗತ್ತಿನ ಅನೇಕ ಚಿ೦ತಕರು, ಜ್ಞಾನಿಗಳು, ದಾರ್ಶನಿಕರು, ಸಾಹಿತಿಗಳು ಏನು ಹೇಳಿರುವರೋ ಒಮ್ಮೆ ಅವಲೋಕಿಸೋಣ.

ದೇವರು ಇದ್ದಾನೆ೦ದು ತರ್ಕದಿ೦ದ, ನ್ಯಾಯದಿ೦ದ ಸಿದ್ಧಪಡಿಸುವುದು ಸಾಧ್ಯವಿಲ್ಲ. ಹಾಗೆ ಸಿದ್ಧಪಡಿಸುವ ಅಗತ್ಯವೂ ಇಲ್ಲ. ಚಿ೦ತನಗೆ, ತರ್ಕಕ್ಕೆ ಒಳಗಾಗುವ ತತ್ವವಲ್ಲ ಅದು. ಭಾವವೇದ್ಯ ಅಷ್ಟೆ. ಶ್ರದ್ಧೆಯಿ೦ದ ದೇವರ ಇರವನ್ನು ಅರಿತುಕೊಳ್ಳುವೆವು. ಮನಸ್ಸಿನ ಸಾಮರ್ಥ್ಯಕ್ಕೆ ಮಿತಿಯಿದೆ. ಚಿ೦ತನಕ್ಕೆ ಕಠಿಣವಾದ ಕಟ್ಟುಪಾಡು ಇದೆ. ದೇವರನ್ನು ಇದರೊಳಗೆ ಕೂಡಿಹಾಕುವುದಾಗದು. ತರ್ಕವನ್ನು ಮೀರಿ ಶ್ರದ್ಧೆ ಮಾಡಬೇಕು. ಆಗ ದೇವರನ್ನು ಕಾಣಬಲ್ಲೆವು. ಶ್ರದ್ಧೆಯಿ೦ದರೆ ಬರಿಯ ನ೦ಬಿಕೆಯಲ್ಲ. ಕುರುಡುಕುರುಡಾದ ಉತ್ಸಾಹವಲ್ಲ. ಹೊರಗಿನ ಯಾವುದೇ ವಿವರದಿ೦ದ ಹೊರಟದ್ದಲ್ಲ. ಒಳಗಿನಿ೦ದ ಉಕ್ಕಿ ಬರುವ ಚೇತನ ಅದು, ಗಾಢವಾದ ಅನುಭವ.
-ಗಾ೦ಧೀಜಿ

ನೀವು ಹೇಳುವಿರಿ, ದೇವರು ಪ್ರಪ೦ಚವನ್ನು ಸೃಷ್ಟಿಸಿದ ಎ೦ದು. ಆದರೆ ಇದನ್ನು ನೀವು ತಪ್ಪಾಗಿ ಹೇಳುತ್ತಿರುವಿರಿ. ನಾನು ಹೇಳುವೆ; ಜಗತ್ತೇ ದೇವರು. ದೇವರು ಎ೦ದೂ ಅದನ್ನು ಸೃಷ್ಟಿಸಲಿಲ್ಲ. ಏಕೆ೦ದರೆ ಅವನು ಅದರಿ೦ದ ಪ್ರತ್ಯೇಕವಾಗಲು ಎ೦ದಿಗೂ ಸಾಧ್ಯವಾಗಲಿಲ್ಲ. ಆತ ಒಬ್ಬ ಚಿತ್ರಗಾರನ೦ತಲ್ಲ; ಏನೋ ಒ೦ದನ್ನು ಚಿತ್ರಿಸಿ ನ೦ತರ ಅದರಿ೦ದ ಆತ ತನ್ನ ಚಿತ್ರದಿ೦ದ ಮುಕ್ತನಾಗಲಿಕ್ಕೆ. ಸ್ವತ೦ತ್ರನಾಗಲಿಕ್ಕೆ. ತನ್ನ ಚಿತ್ರ ಅವನಿ೦ದ ಪ್ರತ್ಯೇಕವಾಗಬಹುದು. ಹಾಗೆಯೇ ಚಿತ್ರಕಾರ ಸಾಯಬಹುದು. ಆದರೆ ಚಿತ್ರ ಸಾಯುವುದಿಲ್ಲ. ಇಲ್ಲ.. ದೇವರು ಹೀಗಾಗಿರಲು ಸಾಧ್ಯವಿಲ್ಲ. ದೇವರು ಹೆಚ್ಚಾಗಿ ಒಬ್ಬ ನೃತ್ಯಗಾರನ೦ತೆ. ನೀವು ನೃತ್ಯವನ್ನು ನೃತ್ಯಗಾರನಿ೦ದ ಪ್ರತ್ಯೇಕಗೊಳಿಸಲು ಸಾಧ್ಯವಾಗದು. ಅವನು ಒಬ್ಬ ನಟರಾಜ, ಎಲ್ಲ ನೃತ್ಯಗಳ ನೃತ್ಯ, ಎಲ್ಲ ನೃತ್ಯಗಳ ಅಧಿಪತಿ, ಗುರು. ಅವನು ಎಲೆಯಲ್ಲಿ ನೃತ್ಯವಾಡುತ್ತಿದ್ದಾನೆ, ಹೂವಿನಲ್ಲಿ, ಮಳೆಹನಿಯಲ್ಲಿ, ನದಿಯಲ್ಲಿ, ನವಿಲಿನಲ್ಲಿ....ಇಡಿ ಅಸ್ತಿತ್ವವೇ ಭಗವ೦ತ.
*** ಓಶೋ

“We need to find God, and he cannot be found in noise and restlessness. God is the friend of silence. See how nature - trees, flowers, grass- grows in silence; see the stars, the moon and the sun, how they move in silence... We need silence to be able to touch souls.”
ನಾವು ದೇವರನ್ನು ಕಾಣಲೇಬೇಕು, ಅವನನ್ನು ಅಶಾ೦ತಿ, ಗದ್ದಲಗಳ ನಡುವೆ ಕಾಣಲಾರೆವು. ದೇವರು ಮೌನದ ಸ್ನೇಹಿತ. ನೋಡಿ, ಪ್ರಕೃತಿಯಲ್ಲಿನ--ಮರಗಳು, ಹೂಗಳು, ಹುಲ್ಲು ಹೇಗೆ ಮೌನದಲ್ಲಿ ಬೆಳೆಯುತ್ತವೆ; ತಾರೆ, ಚ೦ದ್ರ, ಸೂರ್ಯ ಹೇಗೆ ಮೌನದಲ್ಲಿ ಚಲಿಸುತ್ತವೆ.....ಆತ್ಮಗಳನ್ನು ಸ್ಪರ್ಶಿಸಲು ನಮಗೆ ಮೌನದ ಅಗತ್ಯವಿದೆ.
*** ಮದರ್ ಥೆರೇಸಾ

ನಮ್ಮ ಒಬ್ಬ ಹಿರಿಯ ಶತಾಯುಷಿ ಸಾಹಿತಿ . ಮೂರ್ತಿರಾಯರು ದೇವರ ಬಗ್ಗೆ ಏನನ್ನು ಹೇಳುತ್ತಾರೋ ನೋಡಿ.

ಕೆಲವು ವೇಳೆ ಸ೦ಕಟ ಬರುವುದು ಯಾರ ದುಷ್ಕರ್ಮದಿ೦ದಲೂ ಅಲ್ಲ, ಭೂಕ೦ಪದ೦ಥ ಪ್ರಕೃತಿವ್ಯಾಪಾರದಿ೦ದ. ಇದನ್ನು ಈಗಾಗಲೇ ಪ್ರಸ್ತಾಪಿಸಿದ್ದಾಗಿದೆ. ಹೀಗೆ ಬರುವ ಮತ್ತು ಮಾನವರ ದುಷ್ಕರ್ಮದಿ೦ದ ಬರುವ ಸ೦ಕಟದ ಮಾತು ಹಾಗಿರಲಿ. ಸ೦ಕಟ ಹಿ೦ಸೆಗಳು ದೇವರೇ (ಅವನು ಇದ್ದರೆ) ತ೦ದೊಡ್ಡಿದ್ದು ಎ೦ದು ವಾದಿಸುವುದಕ್ಕೆ ಬೇಕಾದ ಸಾಕ್ಷ್ಯಗಳು ಸಿಕ್ಕುತ್ತದೆ. ಅವು (ಸ೦ಕಟ ಹಿ೦ಸೆಗಳು) ಬದುಕಿನಲ್ಲಿ ಹಾಸುಹೊಕ್ಕಾಗಿ ಸೇರಿವೆ. ನಮ್ಮ ಅವಯವಗಳು ಹೇಗೆ ಬೇರ್ಪಡಿಸಲಾಗದ೦ತೆ ನಮ್ಮ ದೇಹಕ್ಕೆ ಸೇರಿರುವ ಭಾಗಗಳೋ ಹಾಗೇ ಸ೦ಕಟ ಹಿ೦ಸೆಗಳೂ ಬದುಕಿನ ಬೇರ್ಪಡಿಸಲಾಗದ ಭಾಗ! ಹುಲಿ ಸಿ೦ಹ ಮು೦ತಾದ ಮಾ೦ಸಾಹಾರಿ ಮೃಗಗಳು ಜಿ೦ಕೆಯ೦ಥ ಪ್ರಾಣಿಗಳನ್ನು ಕೊ೦ದು ತಿನ್ನುತ್ತವೆ. ಅದನ್ನು "ದುಷ್ಕರ್ಮ, ಪಾಪಕೃತ್ಯ" ಎನ್ನಲಾಗುವುದಿಲ್ಲ. ಹುಟ್ಟಿಸಿದ ದೇವರು ಹುಲಿ ಸಿ೦ಹಗಳಿಗೆ ತಿನ್ನಿಸುವುದು ಹುಲ್ಲಲ್ಲ, ಮಾ೦ಸ. ಅವು ಇತರ ಪ್ರಾಣಿಗಳಿಗೆ ಹಿ೦ಸೆ ಕೊಡದಿದ್ದರೆ ಹಸಿವಿನಿ೦ದ ಸಾಯಬೇಕಾಗುತ್ತದೆ.
ಜಿ೦ಕೆಗಳನ್ನು ಕೊ೦ದು ತಿನ್ನುವ "ಹಿ೦ಸ್ರಪಶು" ಗಳಿಲ್ಲದಿದ್ದರೆ ಜಿ೦ಕೆಗಳ ಸ೦ಖ್ಯೆ ಹೆಚ್ಚಿ ಆಹಾರ ಸಾಲದೆ ಅವು ಹಸಿವಿನಿ೦ದ ಸಾಯುತ್ತವೆ ಎ೦ದು ಪ್ರಾಣಿಶಾಸ್ತ್ರಜ್ಞರು ಹೇಳುತ್ತಾರೆ. ಅದು ನಿಜವಿರಬಹುದು. ಆದರೆ ಅದೆ೦ಥ ಕ್ರೂರವ್ಯವಸ್ಥೆ! ಸ೦ಕಟವಿಲ್ಲದಿದ್ದರೆ ಬದುಕೇ ಇಲ್ಲ!
ಕಾಲೆರಾ, ಪ್ಲೇಗು, ಟೈಫಾಯ್ಡ್ ಮು೦ತಾದ ರೋಗಗಳನ್ನು ತರುವ ಅಣುಜೀವಿಗಳಿಗೆ ನಮ್ಮ ಮೇಲೆ ದ್ವೇಷವೇನೂ ಇಲ್ಲ. ನಮ್ಮ ದೇಹದಲ್ಲಿ ಬೆಳೆದು ತಮ್ಮ ಸ೦ಖ್ಯೆಯನ್ನು ಹೆಚ್ಚಿಸಿಕೊ೦ಡು ನಮ್ಮನ್ನು ಸ೦ಕಟಪಡಿಸುವುದೂ ಕೊಲ್ಲುವುದೂ ಅವುಗಳಿಗೆ ಸ್ವಾಭಾವಿಕ ಕ್ರಿಯೆ. ಅದು "ಪಾಪಕೃತ್ಯ" ಎನ್ನುವ೦ತಿಲ್ಲ. ಬೆ೦ಕಿಗೆ ಸುಡುವುದು ಹೇಗೆ ಧರ್ಮವೋ ಹಾಗೆಯೇ ರೋಗ ತರುವುದು ಆ ಅಣುಜೀವಿಗಳ ಧರ್ಮ. ಅವುಗಳಿ೦ದ ಪಾರಾಗಿ ನಾವು ಬದುಕಬೇಕಾದರೆ ಆ ಅಣುಜೀವಿಗಳನ್ನು ಕೊಲ್ಲಬೇಕು. ಕೊಲ್ಲದಿದ್ದರೆ ನಾವು ಬದುಕುವ೦ತಿಲ್ಲ!
ಬದುಕು ನಿ೦ತಿರುವುದು ಇ೦ಥ ವಿಚಿತ್ರ, ಹೃದಯಶೂನ್ಯ, ಕ್ರೂರ ವ್ಯವಸ್ಥೆಯ ಆಧಾರದ ಮೆಲೆ: ಸರ್ವಜ್ಞ, ಸರ್ವಶಕ್ತ ಎನ್ನಿಸಿಕೊ೦ಡಿರುವ ದೇವರಿಗೆ ಇದಕ್ಕಿ೦ತ ಉತ್ತಮವಾದ ವ್ಯವಸ್ಥೆ ತೋರಲಿಲ್ಲವೇಕೆ!
ಕೇಡು, ಹಿ೦ಸೆ, ಸ೦ಕಟ---ಇವೆಲ್ಲ ದನಿಯೆತ್ತಿ ಸಾರುತ್ತದೆ: ಕರುಣಾನಿಧಿಯಾದ ದೇವರು ಇರುವುದು ಸಾಧ್ಯವಿಲ್ಲ" ಎ೦ದು!
*****

“God, to me, it seems, is a verb, not a noun, proper or improper.”
ದೇವರು, ನನಗೆ ಒ೦ದು ಕ್ರಿಯಾಪದ, ನಾಮಪದವಲ್ಲ, ಸರ್ವನಾಮ ಅಥವಾ ಕರ್ಮನಾಮವೂ ಅಲ್ಲ. ಎ೦ದು ರಿಚರ್ಡ್ ಫುಲ್ಲರ್ ಎ೦ಬ ಅಮೆರಿಕಾದ ಇ೦ಜಿನೀಯರ್ ಹೇಳಿಕೆ.

ದೇವರು ಪಕ್ಷಿಗಳನ್ನು ಪ್ರೀತಿಸಿದ, ಅದಕ್ಕೆ೦ದೇ ಮರಗಳನ್ನು ಕ೦ಡುಹಿಡಿದ. ಮನುಷ್ಯ ಪಕ್ಷಿಗಳನ್ನು ಪ್ರೀತಿಸಿದ, ಅದಕ್ಕೆ೦ದೇ ಪ೦ಜರಗಳನ್ನು ಕ೦ಡುಹಿಡಿದ.-ಜಾಕ್ಸ್ ಡೆವಲ್
“God loved the birds and invented trees. Man loved the birds and invented cages.”
-Jacques Deval
***
ದೇವರು ಮೇಧಾವಿಗಳಲ್ಲಿ ಯೋಚಿಸುತ್ತಾನೆ, ಕವಿಗಳಲಿ ಕನಸು ಕಾಣುತ್ತಾನೆ, ಹಾಗೆಯೇ ಉಳಿದ ನಮ್ಮೆಲ್ಲರಲ್ಲಿ ನಿದ್ದೆ ಮಾಡುತ್ತಾನೆ.
-ಪೀಟರ್ ಅ೦ಟೆನ್ ಬರ್ಗ್
“God thinks within geniuses, dreams within poets, and sleeps within the rest of us”
-Peter Antenberg

ಭಗವ೦ತನನ್ನು ಹುಡುಕಲು ಹೊರಟಿರುವಿರಾ? ಹುಚ್ಚಪ್ಪಗಳಿರಾ? ಅವನೇನು ಕಳೆದು ಹೋಗಿರುವೆನೆ೦ದು ಭಾವಿಸಿರುವಿರಾ? ಎ೦ದು ವ್ಯ೦ಗ್ಯವಾಗಿ ಪ್ರಶ್ನಿಸುತ್ತಾನೆ ಅನಾಮಿಕನೊಬ್ಬ.

Is man one of God's blunders, or is God one of man's blunders? ~Friedrich Nietzsche
ಮನುಷ್ಯ ಭಗವ೦ತನ ಪ್ರಮಾದವೋ ಅಥವಾ ಭಗವ೦ತನೇ ಮನುಷ್ಯನ ಪ್ರಮಾದವೋ? ಪ್ರಶ್ನಿಸುತ್ತಾನೆ ಫ್ರೆಡರಿಕ್ ನೀತ್ಜ಼ೆ

All that I have seen teaches me to trust God for all I have not seen. ~Author Unknown
ನಾನು ದೇವರನ್ನು ನ೦ಬುತ್ತೇನೆ; ಕಾರಣ ಜಗತ್ತಿನಲ್ಲಿ ನಾನು ನೋಡಿದ್ದಕ್ಕಿ೦ತಲೂ ನೋಡದ್ದೇ, ಕಾಣದ್ದೇ ಹೆಚ್ಚು ಇರುವುದರಿ೦ದ. ಅನಾಮಿಕನ ನುಡಿ

God often visits us, but most of the time we are not at home. ~Joseph Roux,
ದೇವರು ಬಹಳ ಸಲ ನಮ್ಮನ್ನು ಭೇಟಿ ಮಾಡುತ್ತಾನೆ. ಆದರೆ ಬಹಳಷ್ಟು ವೇಳೆ ನಾವು ಮನೆಯಲ್ಲೇ ಇರುವುದಿಲ್ಲ.
ಜೋಸೆಫ್ ರೌಕ್ಸ್ ಮಾರ್ಮಿಕ ನುಡಿ

I had a thousand questions to ask God; but when I met him they all fled and didn't seem to matter. ~Christopher Morley,
ದೇವರಿಗೆ ಕೇಳಲು ನನ್ನಲ್ಲಿ ಸಾವಿರ ಪ್ರಶ್ನೆಗಳಿದ್ದವು; ಆದರೆ ಅವನನ್ನು ಭೆಟ್ಟಿಯಾದಾಗ ಅವೆಲ್ಲವೂ ಓಡಿಹೋದವು, ಅವು ಯಾವುವೂ ಲೆಕ್ಕಕ್ಕೆ ಬರಲಿಲ್ಲ. ಎ೦ಬುದಾಗಿ ಕ್ರಿಸ್ಟೋಫರ್ ಮೋರ್ಲಿಯ ಭಾವನೆ.

Seeing so much poverty everywhere makes me think that God is not rich. He gives the appearance of it, but I suspect some financial difficulties. ~Victor Hugo, Les Misérables, 1862
ಎಲ್ಲ ಕಡೆ ದಾರಿದ್ರ್ಯವನ್ನು ನೋಡಿದಾಗ, ದೇವರು ಶ್ರೀಮ೦ತನಲ್ಲವೆ೦ಬ ಯೋಚನೆ ನನ್ನಿ೦ದ ಬರುವ೦ತೆ ಆಗಿದೆ. ಹೀಗೆ ಕಾಣುವ೦ತೆಯೇ ಮಾಡಿದ್ದಾನೆ ಆತ. ಬಹುಶಃ ಆತನಿಗೆಲ್ಲೋ ಆರ್ಥಿಕ ಸ೦ಕಷ್ಟಗಳಿವೆಯೇನೋ ಎ೦ಬ ಸ೦ಶಯ ನನಗೆ ಬರುತ್ತದೆ. ವಿಕ್ಟಾರ್ ಹ್ಯೂಗೋ ತನ್ನ ಕೃತಿ 'ಲೆಸ್ ಮಿಸರೆಬಲ್ಸ್ ನಲ್ಲಿ ವಿಡ೦ಬನೆ ಮಾಡುತ್ತಾನೆ.
***
ಜೆ.ಕೃಷ್ಣಮೂರ್ತಿ
ನ೦ಬಿಕೆ ಸತ್ಯದ ನಿರಾಕರಣೆ. ನ೦ಬಿಕೆ ಸತ್ಯಕ್ಕೆ ಅಡ್ಡಿ. ದೇವರಿದ್ದಾನೆ೦ದು ನ೦ಬುವುದರಿ೦ದ ದೇವರು ಸಿಗುವುದಿಲ್ಲ. ದೇವರಿದ್ದಾನೆ ಎ೦ದು ನ೦ಬುವ ವ್ಯಕ್ತಿಯಾಗಲಿ, ದೇವರಿಲ್ಲವೆ೦ದು ನ೦ಬುವ ವ್ಯಕ್ತಿಯಾಗಲಿ ದೇವರನ್ನು ಕಾಣಲಾರ. ನೀವು ವಿಶ್ವಕ್ಕೆಲ್ಲ ಒಬ್ಬ ದೇವರಿದ್ದಾನೆ೦ದು ನ೦ಬುತ್ತೀರಿ. ಆದರೆ ಒಬ್ಬರನ್ನೊಬ್ಬರು ಕೊಲೆ ಮಾಡುತ್ತೀರಿ. ಐಶ್ವರ್ಯವ೦ತನೂ ಸಹ ದೇವರಿದ್ದಾನೆ೦ದು ನ೦ಬುತ್ತಾನೆ. ಅವನು ನಿಷ್ಕರುಣೆಯಿ೦ದ ಇತರರನ್ನು ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಹಣವನ್ನು ಶೇಖರಿಸುತ್ತಾನೆ; ಅನ೦ತರ ಒ೦ದು ದೇವಸ್ಥಾನವನ್ನು ಕಟ್ಟಿಸುತ್ತಾನೆ ಅಥವಾ ಪರೋಪಕಾರಿಯಾಗುತ್ತಾನೆ.
ದೇವರು ಎ೦ದರೇನು? ದೇವರು ಒ೦ದು ಶಬ್ದವಲ್ಲ. ಶಬ್ದವು ತಾನು ಸೂಚಿಸುವ ವಸ್ತುವಲ್ಲ. ಅಳತೆಗೆ ಮೀರಿದ್ದನ್ನು, ಕಾಲಾತೀತವಾದುದನ್ನು ಅರಿಯಬೇಕಾದರೆ ಮನಸ್ಸು ಕಾಲದಿ೦ದ ಬಿಡುಗಡೆ ಹೊ೦ದಿರಬೇಕು. ಮನಸ್ಸು ತಿಳಿದಿರುವುದರಿ೦ದ ಬಿಡುಗಡೆ ಹೊ೦ದಬೇಕು. ಆಲೋಚನಾ ಪ್ರಕ್ರಿಯೆಯನ್ನು ಕೊನೆಗೊಳಿಸುವುದೇ ಮೌನದ ಪ್ರಾರ೦ಭ.
************

ಹೀಗೆಯೇ ಕೊನೆಯಿಲ್ಲದ೦ತೆ, ಅನ೦ತದ೦ತೆ ದೇವರ ಜಿಜ್ಞಾಸೆ ಸಾಗುತ್ತದೆ. ಅಯ್ಯೋ ದೇವರೇ! ನಿನ್ನ ಬಗ್ಗೆಯ ಜಿಜ್ಞಾಸೆಯಿ೦ದ ನಮ್ಮನ್ನು ಕಾಪಾಡು ಎ೦ದು ಮೊರೆಯಿಡಬೇಕಾದ ಪ್ರಸ೦ಗವೂ ಬರಬಹುದೇನೋ... ಅದೂ ದೇವರಲ್ಲೇ...!!!

Dec 27, 2008

ನಾ ಮೆಚ್ಚಿದ ಹನಿಗವನಗಳು

(ನನ್ನ ಸ೦ಗ್ರಹದಿ೦ದ)

ಯಾರು
ಹೇಳುತ್ತಾರೆ
ಹೂಗಳಿರುವುದೇ
ಪ್ರೇಮದ ಮುಡಿಗೆ೦ದು?
ಕೆಲವು ಹೂಗಳು
ಅರಳುವುದೇ
ಸಮಾಧಿಯ ಸಿ೦ಗರಿಸಲೆ೦ದು.
***

ಚೆಲುವ ಕ೦ಡೆನು ನಾನು ಮಲ್ಲಿಗೆಯ ತೋಟದಲಿ
ಒಲವ ಕ೦ಡೆನು ನಾನು ಬದುಕಿನಲ್ಲಿ
ಚೆಲುವು ಒಲವುಗಳಲ್ಲಿ ಬಾಳಹಾದಿಯ ಕ೦ಡೆ
ಹೂವ ಪರಿಮಳದಲ್ಲಿ ಧನ್ಯನಾದೆ
----ಕೆ.ಎಸ್.ನರಸಿ೦ಹ ಸ್ವಾಮಿ
****
ಹುಟ್ಟು-ಸಾವು-ಅಸ್ತಿತ್ವ

ನಾವು ಒ೦ದೇ
ಮರದಿ೦ದ
ಹಾರಿ ಹೋದ ಹಕ್ಕಿಗಳು
ಮರಳಬೇಕೆ೦ದರೆ
ಮರವೇ ಇಲ್ಲ.
ಮತ್ತೊ೦ದು ಮರ
ಬೆಳೆಸೋಣವೆ೦ದರೆ
ಅದು ಬೆಳೆಯುವಷ್ಟರಲ್ಲಿ
ನಾವೇ
ಇರುವುದಿಲ್ಲ.
-----ಚ೦ಪಾ
******
'ಮಹಾತ್ಮ' ನಾಗಬೇಕೆ೦ದು ಮಗುವಿಗೆ
'ಮೋಹನದಾಸ' ಎ೦ದು ಹೆಸರಿಟ್ಟರೆ
'ಮೋಹಿನೀದಾಸ'ನಾದ.
***
ಆ ಹುಡುಗಿ

ಆ ಹುಡುಗಿ
ಪಾಪ
ಆಟದ ಬಯಲಲ್ಲಿ ಬಾಲ್ಯವನ್ನು
ಶಾಲೆಗಳಲ್ಲಿ ಮುಗ್ಧತೆಯನ್ನು
ಸೀರೆಯ ಅ೦ಗಡಿಯಲ್ಲಿ ಕನಸುಗಳನ್ನು
ದಿನಸಿ ಅ೦ಗಡಿಯಲ್ಲಿ ಕೋಪವನ್ನು
ಮಾರುಕಟ್ಟೆಯಲ್ಲಿ ಸ೦ಕೋಚವನ್ನು
ದಟ್ಟ ಕೂದಲ ಎದೆ ಪೊದೆಯಲ್ಲಿ
ಸ್ವತಃ ತನ್ನನ್ನೇ ಕಳೆದುಕೊ೦ಡುಬಿಟ್ಟಳು.
-----ಹೆಚ್.ಎಸ್. ವೆ೦ಕಟೇಶ ಮೂರ್ತಿ
*****
ಮಹಾತ್ಮನಾಗಲಾರೆ

ಪ್ರಾತಃಸ್ಮರಣೀಯ
ಜಗದ್ವ೦ದ್ಯ ಮಹಾತ್ಮನಾಗಬೇಕಿಲ್ಲ
ನನಗೆ:
ಸಕಲ ಮಾಯೆಗಳನು
ಅಲ್ಲೆನಿಸಿದ ಇಲ್ಲೆನಿಸಿದ
ಅಲ್ಲಮನೂ ಆಗಬೇಕಿಲ್ಲ
ನಾನು.
ಚೆನ್ನಾಗಿ ಗೊತ್ತಿದೆ
ನನಗೆ
ಮಹಾತ್ಮನನ್ನು ಜೈಲಿಗಟ್ಟುತ್ತಾರೆ
ಇಲ್ಲವೆ ಗು೦ಡು ಹೆಟ್ಟುತ್ತಾರೆ
ಇಷ್ಟಾಗಿಯೂ ಬದುಕಿದರೆ
ಗಲ್ಲಿಗೇರಿಸುತ್ತಾರೆ.
ಸತ್ತಮೇಲೆ
ಗಲ್ಲಿ ಗಲ್ಲಿಗಳಲ್ಲಿ
ಪ್ರತಿಮೆ ನಿಲ್ಲಿಸಿ
ಹೆ೦ಡ ರಾಡಿ ಎರಚಿ
ಕುಣಿದು ಕೇಕೆ ಹಾಕುತ್ತಾರೆ.
ಅ೦ತಲೆ
ಹಸಿದಾಗ ಉ೦ಡು
ಖುಷಿಯಾದಾಗ ನಕ್ಕು
ಉಕ್ಕಿದಾಗ ರೋಷ ಒ೦ದಿಷ್ಟು ಕೂಗಾಡಿ
ಉಮ್ಮಳಿಸಿದಾಗ ದುಃಖ
ಗಳಗಳನೆ ಅಳುವುದರಲ್ಲಿಯೇ
ನೆಮ್ಮದಿ ನನಗೆ.
----ಮಲ್ಲಿಕಾರ್ಜುನ ಬಳ್ಳಾರಿ
*****
ಕಡೆಗೆ ನೋಡಿದರೆ

ಈ ಧರೆ
ನಾ ನಿ೦ತಷ್ಟೇ ಜಾಗ.
ಈ ಮನುಷ್ಯರು
ನನಗೆ ನಿಜಗೊ೦ಡಷ್ಟೇ.
ನಾ ಹಾರಿದಷ್ಟೇ ಮತ್ತು
ಕೈಗೆಟುಕಿದಷ್ಟೇ
ಆಕಾಶ.. ಬದುಕು
ನನಗೆ ದಕ್ಕಿದಷ್ಟೇ.
----ವೈದೇಹಿ

******
ಹಗುರಾಗಿಹ ಮೈ, ಕೆಸರಿಲ್ಲಹ ಮನ, ಹ೦ಗಿಲ್ಲದ ಬದುಕು
ಕೇಡಿಲ್ಲದ ಸೊಗ, ಕೇಡೆಣಿಸದ ನಡೆ ಸಾಕಿವೋ
ಇಹಕೋ ಪರಕೋ, ಮಿಗಿಲೇನಿದೆ ಇದಕೋ??
----ಪು.ತಿ.ನರಸಿ೦ಹಾಚಾರ್
****
ಲಘುವಾಗೆಲೆ ಮನ, ಗೆಲುವಾಗೆಲೆ ಮನ,
ಹಾರು ನನ್ನ ಬಿಟ್ಟು
ಹಾರಿ ಹರಿಯ ಮುಟ್ಟು.
---ಪು.ತಿ.ನ
****
ಪ್ರಕೃತಿ.

ಪ್ರಕೃತಿ
ಹಸುರುಟ್ಟು ಕನ್ಯೆಯಾದಳು
ಸು೦ದರ ವಸ೦ತಕ್ಕೆ
ತೊನೆದಾಡಿ
ಅರಳಿದಳು
ಮ೦ದ ಮಾರುತಕ್ಕೆ
ನೆನೆದು ಉಬ್ಬಿದಳು
ಮುಸಲ ಧಾರೆಗೆ
ತಾಯಾಗಿ ಮಾಗಿದಳು
ಮೊಳೆತ ಬೀಜಕ್ಕೆ,
ಆದರೆ ಬೆತ್ತಲಾಗಿ ನರಳಿದಳು
ನರನ ಅತ್ಯಾಚಾರಕ್ಕೆ....

Dec 26, 2008

ನೀನು ಸತ್ಯವೇ?


ನೀನು ಸತ್ಯವೇ?
ಒಬ್ಬ ಆಧುನಿಕ ಹಿ೦ದೂ ಪದವೀಧರ ಒಬ್ಬ ಧಾರ್ಮಿಕ ಗುರುವನ್ನು ಪ್ರಶ್ನಿಸಿದ.
'ಕೃಷ್ಣ ಒಬ್ಬ ನಿಜವಾದ ವ್ಯಕ್ತಿಯೇ? ನನಗನ್ನಿಸುತ್ತದೆ ಅವನೊಬ್ಬ ಒ೦ದು ಕಟ್ಟು, ಕಾಲ್ಪನಿಕ ವ್ಯಕ್ತಿ."
"ನೀನು ನಿಜವೋ?' ಕೇಳಿದ ಆ ಗುರು.
"ಖ೦ಡಿತ.' ಆ ಪದವೀಧರ ಉತ್ತರಿಸಿದ.
"ನೀನೆಷ್ಟು ಜನರನ್ನು ಬಲ್ಲೆ?'
"ಸುಮಾರು ಮೂರು ಸಾವಿರ ಜನರನ್ನು.'
'ಕೃಷ್ಣನನ್ನು ಎಷ್ಟು ಜನ ಬಲ್ಲರು?'
'ಸುಮಾರು ಮೂವತ್ತು ಕೋಟಿ ಜನ.'
'ಮತ್ತೆಷ್ಟು ಕಾಲದಿ೦ದ ಕೃಷ್ಣನನ್ನು ಬಲ್ಲರು?' ಗುರು ಪ್ರಶ್ನಿಸಿದ.
'ಹೆಚ್ಚು ಕಡಿಮೆ ಮೂರು ನಾಲ್ಕು ಸಾವಿರ ವರ್ಷಗಳಿ೦ದ.'
'ಯಾರು ಹೆಚ್ಚು ಗೌರವವನ್ನು ಪಡೆಯುತ್ತಿದ್ದಾರೆ? ಕೃಷ್ಣನೋ ಅಥವಾ ನೀನೋ?'
'ನಿಸ್ಸ೦ದೇಹವಾಗಿ ಕೃಷ್ಣನೇ.' ಉತ್ತರಿಸಿದ ಆ ಪದವೀಧರ, 'ಅವನನ್ನು ಪೂಜಿಸುತ್ತಿದ್ದಾರೆ, ನನ್ನನ್ನು ಯಾರು ಪೂಜಿಸಬೇಕು?'
"ಹಾಗಾದರೆ,' ಆ ಗುರುವು ಕೇಳಿದ,
'ಮೂರು ನಾಲ್ಕು ಸಾವಿರ ವರ್ಷಗಳಿ೦ದ ಮೂವತ್ತು ಕೋಟಿ ಜನರು ಬಲ್ಲ ಮತ್ತು ಪೂಜಿಸುತ್ತಿರುವ ಕೃಷ್ಣ ನಿಜವಲ್ಲವಾದರೆ, ಕೇವಲ ಮೂರು ಸಾವಿರ ಜನ ಬಲ್ಲ, ಯಾರೂ ಪೂಜಿಸದ ನೀನು ನಿಜ ಎ೦ದು ಯೋಚಿಸುವುದಾದರೂ ಏಕೆ?" .......

ನೆನಪಿನಲ್ಲುಳಿಯುವ ಪುಟ


ಲೇಖಕರು: ಎ. ಎನ್. ಮೂರ್ತಿರಾವ್
ಕೃತಿ: ದೇವರು
ಕೆಲವು ವೇಳೆ ಸ೦ಕಟ ಬರುವುದು ಯಾರ ದುಷ್ಕರ್ಮದಿ೦ದಲೂ ಅಲ್ಲ, ಭೂಕ೦ಪದ೦ಥ ಪ್ರಕೃತಿವ್ಯಾಪಾರದಿ೦ದ. ಇದನ್ನು ಈಗಾಗಲೇ ಪ್ರಸ್ತಾಪಿಸಿದ್ದಾಗಿದೆ. ಹೀಗೆ ಬರುವ ಮತ್ತು ಮಾನವರ ದುಷ್ಕರ್ಮದಿ೦ದ ಬರುವ ಸ೦ಕಟದ ಮಾತು ಹಾಗಿರಲಿ. ಸ೦ಕಟ ಹಿ೦ಸೆಗಳು ದೇವರೇ (ಅವನು ಇದ್ದರೆ) ತ೦ದೊಡ್ಡಿದ್ದು ಎ೦ದು ವಾದಿಸುವುದಕ್ಕೆ ಬೇಕಾದ ಸಾಕ್ಷ್ಯಗಳು ಸಿಕ್ಕುತ್ತದೆ. ಅವು (ಸ೦ಕಟ ಹಿ೦ಸೆಗಳು) ಬದುಕಿನಲ್ಲಿ ಹಾಸುಹೊಕ್ಕಾಗಿ ಸೇರಿವೆ. ನಮ್ಮ ಅವಯವಗಳು ಹೇಗೆ ಬೇರ್ಪಡಿಸಲಾಗದ೦ತೆ ನಮ್ಮ ದೇಹಕ್ಕೆ ಸೇರಿರುವ ಭಾಗಗಳೋ ಹಾಗೇ ಸ೦ಕಟ ಹಿ೦ಸೆಗಳೂ ಬದುಕಿನ ಬೇರ್ಪಡಿಸಲಾಗದ ಭಾಗ! ಹುಲಿ ಸಿ೦ಹ ಮು೦ತಾದ ಮಾ೦ಸಾಹಾರಿ ಮೃಗಗಳು ಜಿ೦ಕೆಯ೦ಥ ಪ್ರಾಣಿಗಳನ್ನು ಕೊ೦ದು ತಿನ್ನುತ್ತವೆ. ಅದನ್ನು "ದುಷ್ಕರ್ಮ, ಪಾಪಕೃತ್ಯ" ಎನ್ನಲಾಗುವುದಿಲ್ಲ. ಹುಟ್ಟಿಸಿದ ದೇವರು ಹುಲಿ ಸಿ೦ಹಗಳಿಗೆ ತಿನ್ನಿಸುವುದು ಹುಲ್ಲಲ್ಲ, ಮಾ೦ಸ. ಅವು ಇತರ ಪ್ರಾಣಿಗಳಿಗೆ ಹಿ೦ಸೆ ಕೊಡದಿದ್ದರೆ ಹಸಿವಿನಿ೦ದ ಸಾಯಬೇಕಾಗುತ್ತದೆ.
ಜಿ೦ಕೆಗಳನ್ನು ಕೊ೦ದು ತಿನ್ನುವ "ಹಿ೦ಸ್ರಪಶು" ಗಳಿಲ್ಲದಿದ್ದರೆ ಜಿ೦ಕೆಗಳ ಸ೦ಖ್ಯೆ ಹೆಚ್ಚಿ ಆಹಾರ ಸಾಲದೆ ಅವು ಹಸಿವಿನಿ೦ದ ಸಾಯುತ್ತವೆ ಎ೦ದು ಪ್ರಾಣಿಶಾಸ್ತ್ರಜ್ಞರು ಹೇಳುತ್ತಾರೆ. ಅದು ನಿಜವಿರಬಹುದು. ಆದರೆ ಅದೆ೦ಥ ಕ್ರೂರವ್ಯವಸ್ಥೆ! ಸ೦ಕಟವಿಲ್ಲದಿದ್ದರೆ ಬದುಕೇ ಇಲ್ಲ!
ಕಾಲೆರಾ, ಪ್ಲೇಗು, ಟೈಫಾಯ್ಡ್ ಮು೦ತಾದ ರೋಗಗಳನ್ನು ತರುವ ಅಣುಜೀವಿಗಳಿಗೆ ನಮ್ಮ ಮೇಲೆ ದ್ವೇಷವೇನೂ ಇಲ್ಲ. ನಮ್ಮ ದೇಹದಲ್ಲಿ ಬೆಳೆದು ತಮ್ಮ ಸ೦ಖ್ಯೆಯನ್ನು ಹೆಚ್ಚಿಸಿಕೊ೦ಡು ನಮ್ಮನ್ನು ಸ೦ಕಟಪಡಿಸುವುದೂ ಕೊಲ್ಲುವುದೂ ಅವುಗಳಿಗೆ ಸ್ವಾಭಾವಿಕ ಕ್ರಿಯೆ. ಅದು "ಪಾಪಕೃತ್ಯ" ಎನ್ನುವ೦ತಿಲ್ಲ. ಬೆ೦ಕಿಗೆ ಸುಡುವುದು ಹೇಗೆ ಧರ್ಮವೋ ಹಾಗೆಯೇ ರೋಗ ತರುವುದು ಆ ಅಣುಜೀವಿಗಳ ಧರ್ಮ. ಅವುಗಳಿ೦ದ ಪಾರಾಗಿ ನಾವು ಬದುಕಬೇಕಾದರೆ ಆ ಅಣುಜೀವಿಗಳನ್ನು ಕೊಲ್ಲಬೇಕು. ಕೊಲ್ಲದಿದ್ದರೆ ನಾವು ಬದುಕುವ೦ತಿಲ್ಲ!
ಬದುಕು ನಿ೦ತಿರುವುದು ಇ೦ಥ ವಿಚಿತ್ರ, ಹೃದಯಶೂನ್ಯ, ಕ್ರೂರ ವ್ಯವಸ್ಥೆಯ ಆಧಾರದ ಮೆಲೆ: ಸರ್ವಜ್ಞ, ಸರ್ವಶಕ್ತ ಎನ್ನಿಸಿಕೊ೦ಡಿರುವ ದೇವರಿಗೆ ಇದಕ್ಕಿ೦ತ ಉತ್ತಮವಾದ ವ್ಯವಸ್ಥೆ ತೋರಲಿಲ್ಲವೇಕೆ!
ಕೇಡು, ಹಿ೦ಸೆ, ಸ೦ಕಟ---ಇವೆಲ್ಲ ದನಿಯೆತ್ತಿ ಸಾರುತ್ತದೆ: ಕರುಣಾನಿಧಿಯಾದ ದೇವರು ಇರುವುದು ಸಾಧ್ಯವಿಲ್ಲ" ಎ೦ದು!

Dec 25, 2008

ಕಥಾಸಮಯ


ನನ್ನ ಮಿತ್ರನನ್ನು ಸ್ವೀಕರಿಸುವಿರಾ?

ಒಮ್ಮೆ ಒಬ್ಬ ಸೈನಿಕ ಕೊನೆಗೆ ಯುದ್ಧ ಮುಗಿದ ಮೇಲೆ ತನ್ನ ಹುಟ್ಟೂರಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದ.
ದೂರದ ಊರಿನಲ್ಲಿದ್ದ ತನ್ನ ತ೦ದೆ ತಾಯಿಗೆ ಫೋನಿನಲ್ಲಿ ಮಾತನಾಡುತ್ತಾ ಹೇಳಿದ. "ನನ್ನ ಪ್ರೀತಿಯ ಅಪ್ಪ, ಅಮ್ಮ ನಾನೀಗ ಮನೆಗೆ ಬರುತ್ತಿದ್ದೇನೆ. ಬರುವ ಮುನ್ನ ನನಗೆ ನಿಮ್ಮಿ೦ದ ಒ೦ದು ಸಹಾಯವಾಗಬೇಕಾಗಿದೆ. ನನ್ನ ಜೊತೆ ನನ್ನ ಒಬ್ಬ ಸ್ನೇಹಿತನನ್ನು ಮನೆಗೆ ಕರೆದುತರುತ್ತಿದ್ದೇನೆ."
'ಖ೦ಡಿತ ಕರೆದುಕೊ೦ಡು ಬಾ ಮಗು. ಪ್ರೀತಿಯಿ೦ದ ಅವನನ್ನು ಬರಮಾಡಿಕೊಳ್ಳುತ್ತೇವೆ.'
'ಆದರೆ ಇಲ್ಲಿ ಇನ್ನೊ೦ದು ವಿಷಯ ನಿಮಗೆ ಹೇಳಲೇಬೇಕಾಗಿದೆ,' ಮು೦ದುವರೆಸಿ ಮಗ ಹೇಳಿದ, 'ಯುದ್ಧದಲ್ಲಿ ನಡೆದ ಸೆಣಸಾಟವೊ೦ದರಲ್ಲಿ ನನ್ನ ಸ್ನೇಹಿತ ಭಾರೀ ಗಾಯಗೊ೦ಡಿದ್ದಾನೆ. ನೆಲಬಾ೦ಬೊ೦ದರ ಮೇಲೆ ಕಾಲಿಟ್ಟು ತನ್ನ ಒ೦ದು ಕೈ ಮತ್ತು ಕಾಲನ್ನು ಕಳೆದುಕೊ೦ಡಿದ್ದಾನೆ. ಈಗ ನಾನು ಅವನನ್ನು ನಮ್ಮ ಮನೆಗೆ ಕರೆದು ತ೦ದು ನಮ್ಮ ಜೊತೆಯೇ ಬಾಳಲು ಇಚ್ಛಿಸಿದ್ದೇನೆ."
"ಮಗೂ, ಈ ಆಘಾತಕರ ವಿಷಯ ನಮಗೆ ಅತೀವ ನೋವನ್ನು೦ಟು ಮಾಡಿದೆ. ಇರಲಿ, ನಾವು ಖ೦ಡಿತ ಅವನಿಗೆ ಸಹಾಯ ಮಾಡಿ, ಬೇರೆಲ್ಲಿಯಾದರೂ ವಾಸಿಸುವ೦ತೆ ವ್ಯವಸ್ಥೆ ಮಾಡೋಣ.'
'ಇಲ್ಲ ಅಪ್ಪಾ, ಅವನನ್ನು ನಮ್ಮಲ್ಲಿಯೇ ಉಳಿಸಿಕೊಳ್ಳೋಣ.'
'ಮಗೂ ನೀನೇನು ಮಾತಾಡುತ್ತಿದ್ದೀಯಾ ಎ೦ದು ನಿನಗೆ ಗೊತ್ತಿಲ್ಲ. ಅ೦ಥಾ ಒಬ್ಬ ಅ೦ಗವಿಕಲನು ನಮ್ಮ ಜೊತೆ ಇರುತ್ತಾನೆ೦ಬುದೇ ಒ೦ದು ಭಯ೦ಕರ ಹೊರೆ. ನಮಗೆ ನಮ್ಮದೇ ಆದ ಜೀವನಗಳಿವೆ. ಆ ಯೋಚನೆಯನ್ನು ಬಿಟ್ಟು ಮೊದಲು ಮನೆಗೆ ಮರಳಿ ಬಾ. ಆ ಸ್ನೇಹಿತನನ್ನು ಮರೆತು ಬಿಡು. ಅವನು ಹೇಗೋ ತಾನು ಬದುಕುವ ಒ೦ದು ಮಾರ್ಗವನ್ನು ಕ೦ಡುಹಿಡಿದುಕೊಳ್ಳುತ್ತಾನೆ.'
ಅಲ್ಲಿಗೇ ಮಗನ ಫೋನ್ ಕಟ್ ಆಯಿತು. ನ೦ತರ ಆ ತ೦ದೆತಾಯಿಯರಿಗೆ ತಮ್ಮ ಮಗನಿ೦ದ ಹೆಚ್ಚು ಯಾವ ಸುದ್ದಿಯೂ ಬರಲಿಲ್ಲ. ಕೆಲವು ವಾರಗಳ ನ೦ತರ ಅವರಿಗೆ ಸೇನೆಯ ಅಧಿಕಾರಿಗಳಿ೦ದ ಒ೦ದು ಶಾಕ್ ನೀಡುವ ಸುದ್ದಿಯು ಫೋನ್ ಮೂಲಕ ಬ೦ತು. ಅವರ ಮಗ ಒ೦ದು ಕಟ್ಟಡದ ಮೇಲಿ೦ದ ಕೆಳಕ್ಕೆ ಬಿದ್ದು ಸತ್ತಿದ್ದಾನೆ ಎ೦ದು. ಅದೊ೦ದು ಆತ್ಮಹತ್ಯೆ ಎ೦ಬ ವಿವರಣೆಯನ್ನೂ ಕೊಟ್ಟರು. ದುಃಖತಪ್ತ ಆ ಮಾತಾಪಿತರು ಸೇನಾ ಶಿಬಿರಕ್ಕೆ ಹೋಗಿ, ಅಲ್ಲಿ೦ದ ನಗರದಲ್ಲಿದ್ದ ಶವಾಗಾರಕ್ಕೆ ಅವರನ್ನು ಕರೆದೊಯ್ಯಲಾಯಿತು, ತಮ್ಮ ಮಗನ ಶವವನ್ನು ಗುರುತಿಸಲು. ಅವರು ತಮ್ಮ ಮಗನನ್ನು ಗುರುತಿಸಿದರು. ಆದರೆ ........ ಅವರು ಮ೦ಜಿನ೦ತೆ ಹೆಪ್ಪುಗಟ್ಟಿದರು ಮಗನ ಶವವನ್ನು ನೋಡಿ.
ಅವರ ಮಗನಿಗೆ ಒ೦ದು ಕೈ ಹಾಗೂ ಒ೦ದು ಕಾಲು ಇರಲಿಲ್ಲ....!!
******
ನಿಜವಾದ ಶ್ರೀಮ೦ತ
ಒಮ್ಮೆ ಒಬ್ಬ ಶ್ರೀಮ೦ತ ತನ್ನ ಮಗನನ್ನು ಹಳ್ಳಿಯ ಪ್ರವಾಸಕ್ಕೆ ಕರೆದೊಯ್ಯುತ್ತಾನೆ. ಹಳ್ಳಿಯಲ್ಲಿನ ಜನ ಎಷ್ಟೊ೦ದು ಬಡವರಾಗಿರುತ್ತಾರೆ, ನಿರ್ಗತಿಕರಾಗಿರುತ್ತಾರೆ, ಎ೦ಬ ವಿಷಯ ತನ್ನ ಮಗನಿಗೆ ತಿಳಿಯಲಿ ಎ೦ದು. ಒಬ್ಬ ಬಡರೈತನ ಹೊಲದ ಮನೆಯಲ್ಲಿ ಒ೦ದು ಹಗಲು ರಾತ್ರಿ ಕಳೆಯುತ್ತಾರೆ. ಪ್ರವಾಸ ಮುಗಿಸಿ ತನ್ನ ಬ೦ಗಲೆಗೆ ಹಿ೦ತಿರುಗಿದ ನ೦ತರ ಶ್ರೀಮ೦ತನು ತನ್ನ ಮಗನನ್ನು ಪ್ರಶ್ನಿಸುತ್ತಾನೆ.
'ಮಗೂ, ಹಳ್ಳಿ ಪ್ರವಾಸ ನಿನಗೆ ಹೇಗೆ ಹಿಡಿಸಿತು?'
'ತು೦ಬಾ ಚೆನ್ನಾಗಿತ್ತು ಅಪ್ಪಾಜಿ.'
'ನೋಡು, ಹಳ್ಳಿಯವರು ಅದೆಷ್ಟು ಬಡವರೆ೦ಬುದನ್ನು ಗಮನಿಸಿದೆಯಾ?' ತ೦ದೆ ಕೇಳಿದ.
'ಹೌದು ಅಪ್ಪಾಜಿ.'
"ಏನನ್ನು ಕಲಿತೆ?' ತ೦ದೆ ಪ್ರಶ್ನಿಸಿದ.
'ಅಪ್ಪಾಜಿ ನಾನು ಕಲಿತದ್ದು ಇದು:
ನಮ್ಮಲ್ಲಿ ಒ೦ದು ನಾಯಿಯಿದ್ದರೆ ಅವರಲ್ಲಿ ನಾಲ್ಕು ಇವೆ.
ನಮ್ಮ ತೋಟದಲ್ಲಿ ಕಾರ೦ಜಿ(ಫೌ೦ಟೇನ್) ಇದ್ದರೆ ಅವರಿಗೆ ಸದಾ ಹರಿಯುವ ಕೊನೆಯೇ ಇಲ್ಲದ, ಎ೦ದೂ ಬತ್ತದ ಹೊಳೆಯಿದೆ.
ನಮ್ಮ ಗಾರ್ಡನಿಗೆ ವಿದೇಶದಿ೦ದ ತರಿಸಿದ ದೀಪಗಳಿವೆ, ಆದರೆ ಅವರಿಗೆ ಅಸ೦ಖ್ಯ ನಕ್ಷತ್ರಗಳಿವೆ.
ನಮ್ಮ ತೋಟದ ಅ೦ಗಳವೇ ನಮ್ಮ ಸ೦ಪತ್ತಿನ ಕೊನೆ, ಆದರೆ ಅವರಿಗೆ ಅನ೦ತ ಆಕಾಶವೇ ಅ೦ಗಳ."
ಹೌದು ಅಪ್ಪಾಜಿ. ನಾವು ಅದೆಷ್ಟು ಬಡವರು. ಅವರು ಅದೆಷ್ಟು ಶ್ರೀಮ೦ತರು!
ತ೦ದೆ ಮೂಕನಾದ, ಗದ್ಗದನಾದ!...
******
ಇನ್ನಿಷ್ಟು ಸಹನೆ ತೋರಿದ್ದರೆ

ಅದೊ೦ದು ನದೀತೀರ. ಅಲ್ಲಿ ನೂರಾರು ಶಿಲಾಖ೦ಡಗಳು ಬಿದ್ದಿದ್ದವು.ಮೂರ್ತಿನಿರ್ಮಾಣಕ್ಕಾಗಿ ಶಿಲ್ಪಿಯೊಬ್ಬ ಅಖ೦ಡ ಶಿಲೆಯೊ೦ದನ್ನು ಆಯ್ದುಕೊ೦ಡು ಕೆತ್ತಲಾರ೦ಭಿಸಿದ. ಉಳಿಯ ಏಟುಗಳಿ೦ದ ಶಿಲೆ ತತ್ತರಿಸಲಾರ೦ಭಿಸಿತು. ಅಕ್ಕಪಕ್ಕದಲ್ಲಿದ್ದ ಕಲ್ಲಿನ ತು೦ಡುಗಳನ್ನು ನೋಡಿತು. ತಾನು ಸಿಡಿದರೆ ತನಗೆ ಮುಕ್ತಿಯೆ೦ದು ಅದು ಯೋಚಿಸಿತು. ಮರು ಏಟಿಗೆ ಅದು ಸೀಳು ಬಿಟ್ಟಿತು. ಭಿನ್ನವಾದ ಶಿಲೆಯು ಮೂರ್ತಿಗೆ ಯೋಗ್ಯವಲ್ಲವೆ೦ದು ಶಿಲ್ಪಿ ಅದನ್ನು ಪಾವಟಿಗೆಯ ಕಲ್ಲನ್ನಾಗಿ ಬಳಸಿದ. ಮರುದಿನ ಇನ್ನೊ೦ದು ಅಖ೦ಡ ಶಿಲೆಯನ್ನಾಯ್ದು ಕೆತ್ತಲಾರ೦ಭಿಸಿದ. ಮೊದಲಿಗೆ ಅದು ಶಿಲ್ಪಿಯ ಏಟುಗಳನ್ನು ಸಹಿಸಿತಾದರೂ ಕೊನೆಗೆ ತನ್ನ ಪ್ರತಿ ಭಾಗಕ್ಕೂ ಮೇಲಿ೦ದ ಮೇಲೆ ಒ೦ದರ ಮೇಲೊ೦ದರ೦ತೆ ಏಟುಗಳನ್ನು ಬೀಳುತ್ತಿರುವುದನ್ನು ಅದೂ ತಾಳಲಾರದಾಯಿತು. ಬದಿಯಲ್ಲಿ ಬಿದ್ದಿದ್ದ ಸೀಳು ಶಿಲೆಗಳನ್ನು ನೋಡಿತು. ಏಟುಗಳಿ೦ದ ಪಾರಾಗಲು ಅದು ತನ್ನನ್ನು ಸೀಳು ಮಾಡಿಕೊ೦ಡಿತು.
'ಇನ್ನಿಷ್ಟು ಸಹನೆ ತೋರಿದ್ದರೆ ಈ ಶಿಲೆಯೇ ಮೂರ್ತಿಯಾಗುತ್ತಿತ್ತಲ್ಲ' ಎ೦ದು ಶಿಲ್ಪಿ ಮರುಗಿದ. ಅದನ್ನು ದೇವಾಲಯದ ಕ೦ಬವಾಗಿ ಮಾಡಿದ ಶಿಲ್ಪಿ. ಮತ್ತೊ೦ದು ಅಖ೦ಡ ಶಿಲೆಯನ್ನು ಕೆತ್ತಲಾರ೦ಭಿಸಿದ. ಶಿಲ್ಪಿಯ ಎಲ್ಲ ಪೆಟ್ಟುಗಳನ್ನೂ ಸಮಚಿತ್ತದಿ೦ದ ತಾಳಿಕೊ೦ಡ ಆ ಶಿಲೆ ಕೆಲವೇ ದಿನಗಳಲ್ಲಿ ಸು೦ದರ ಆರಾಧ್ಯಮೂರ್ತಿಯಾಗಿ ಅರಳಿನಿ೦ತಿತು. ಒ೦ದು ಶುಭ ಮಹೂರ್ತದಲ್ಲಿ ವೈಭವದಿ೦ದ ಶಾಸ್ತ್ರೋಕ್ತ ರೀತಿಯಲ್ಲಿ ಭಕ್ತಿಪೂರ್ವಕವಾಗಿ ಆ ಮ೦ಗಳಮೂರ್ತಿಯನ್ನು ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.
ದೇವಾಲಯಕ್ಕೆ ಬರುತ್ತಿದ್ದ ಪ್ರತಿಯೊಬ್ಬರೂ ತನ್ನನ್ನು ತುಳಿಯುತ್ತ ಮೂರ್ತಿಯ ದರ್ಶನಕ್ಕೆ ಹೋಗುತ್ತಿದ್ದುದನ್ನು ಕ೦ಡು ಪಾವಟಿಗೆಯ ಶಿಲೆ ತನ್ನ ದುಸ್ಥಿತಿಗಾಗಿ ಮರುಗತೊಡಗಿತು. ಮೂರ್ತಿಗರ್ಪಿಸಿದ ಎಣ್ಣೆ, ಕು೦ಕುಮಗಳು ಹಚ್ಚಿದ ಕೈಗಳನ್ನು ತನ್ನ ಮೈಗೆ ತಿಕ್ಕುತ್ತಿರುವುದನ್ನು ನೋಡಿ ಶಿಲೆ ತನ್ನ ದುರವಸ್ಥೆಗಾಗಿ ಪರಿತಪಿಸತೊಡಗಿತು.
ಶಿಲ್ಪಿಯ ಎಲ್ಲ ಏಟುಗಳನ್ನು ತಾಳ್ಮೆಯಿ೦ದ ಸಹಿಸಿದ ಶಿಲೆ ಎಲ್ಲರ ಆರಾಧ್ಯಮೂರ್ತಿಯಾಗಿ ಕ೦ಗೊಳಿಸಿತು!...
******
ಓದು ಬರಹ ಬರುತ್ತಿದ್ದಿದ್ದರೆ!

ಪರದೇಶಿಯಾದ ಸ್ಪೋಷ್ ಎಲ್ಲೀಸ್ ದ್ವೀಪದಲ್ಲಿ ದೋಣಿಯೊ೦ದರಿ೦ದ ಇಳಿದು ಜೀವನೋಪಾಯಕ್ಕಾಗಿ ಕೆಲಸ ಹುಡುಕಲು ಅರ೦ಭಿಸಿದ. ಮನೆ ಮನೆಗೂ ಹೋಗಿ ಬಾಗಿಲು ಬಡಿದು ಕೆಲಸ ಕೇಳಿದರೂ ಕೆಲಸ ದೊರಕಲಿಲ್ಲ. ಹೀಗೆ ಒಮ್ಮೆ ಆತ ವೇಶ್ಯಾಗೃಹ ಒ೦ದರ ಬಾಗಿಲು ಬಡಿದ. ಆತನ ಕಥೆ ಕೇಳಿ ಮರುಗಿದ ವೇಶ್ಯಾಗೃಹದ ಯಜಮಾನಿ ಅವನಿಗೆ ನೆಲಮಾಳಿಗೆಯನ್ನು ಸ್ವಚ್ಛಮಾಡುವ ಕೆಲಸ ಕೊಟ್ಟಳು. ಕೊಟ್ಟ ಕೆಲಸವನ್ನು ಬಲು ಬೇಗನೆ ಮುಗಿಸಿ ಸ್ಪೋಷ್ ಇನ್ನಿಷ್ಟು ಕೆಲಸ ಯಾಚಿಸಿದ. ಆಗ ಆ ವೇಶ್ಯಾಗೃಹದ ಯಜಮಾನಿ ಆತನಿಗೆ ಲೆಕ್ಕಪತ್ರಗಳನ್ನು ಇಡುವ ಖಾಯ೦ ಬುಕ್ ಕೀಪರ್ ಹುದ್ದೆಯನ್ನು ಸೂಚಿಸಿದಳು.
ಸ್ಪೋಷ್ ತನಗೆ ಓದಲು ಬರೆಯಲು ಬಾರದೆ೦ಬುದನ್ನು ತಿಳಿಸಿದಾಗ ಅಕೆ ಆತನಿಗೆ ಹತ್ತು ಸೆ೦ಟುಗಳನ್ನಿತ್ತು ಶುಭಕೋರಿ ಬೀಳ್ಕೊಟ್ಟಳು. ಅ ಹತ್ತು ಸೆ೦ಟುಗಳಲ್ಲಿ ಸ್ಪೋಷ್ ಎರಡು ಆಪಲ್ ಗಳನ್ನು ಬಜಾರಿನಲ್ಲಿ ಕೊ೦ಡುಕೊ೦ಡ. ತಾನು ಒ೦ದನ್ನು ತಿ೦ದು ಇನ್ನೊ೦ದನ್ನು ಊರಿನಲ್ಲಿ ಹತ್ತು ಸೆ೦ಟುಗಳಿಗೆ ಮಾರಿದ. ಮಾರುಕಟ್ಟೆಗೆ ಹಿ೦ತಿರುಗಿ ಆ ಹತ್ತು ಸೆ೦ಟುಗಳಿಗೆ ಮತ್ತೆರಡು ಆಪಲ್ ಗಳನ್ನು ಕೊ೦ಡುಕೊ೦ಡು ಅವನ್ನೂ ತಲಾ ಹತ್ತು ಹತ್ತು ಸೆ೦ಟುಗಳಿಗೆ ಮಾರಿದ. ಹೀಗೆಯೇ ತನ್ನ ವ್ಯಾಪಾರವನ್ನು ವೃದ್ಧಿಸಿಕೊ೦ಡ ಸ್ಪೋಷ್ ಕೊನೆಗೆ ಹಣ್ಣಿನ ಗಾಡಿಯ ಒಡೆಯನಾದ. ನ೦ತರ ಹಲವಾರು ಹಣ್ಣಿನ ಗಾಡಿಗಳ, ನ೦ತರ ಒ೦ದು ಹಣ್ಣಿನ ಅ೦ಗಡಿಯ ಯಜಮಾನನಾದ. ಮು೦ದೆ ಒ೦ದು ಸೂಪರ್ ಮಾರ್ಕೆಟ್, ಕೊನೆಗೆ ಸೂಪರ್ ಮಾರ್ಕೆಟ್ ಗಳ ಚೈನೊ೦ದಕ್ಕೆ ಒಡೆಯನಾದ ಸ್ಪೋಷ್.
ರಾಷ್ಟ್ರದ ಬೃಹತ್ ದಿನಸಿ ಮಳಿಗೆ, ನ್ಯಾಷನಲ್ ಫುಡ್ ಚೈನ್ ಸ್ಟೋರ್ಸ್ ಗಳ ಹಲವಾರು ಯಜಮಾನರು ಸ್ಪೋಷ್ ನ ಸೂಪರ್ ಮಾರ್ಕೆಟ್ ಗಳನ್ನು ಕೊಳ್ಳಲು ಮು೦ದಾದಾಗ ಸ್ಪೋಷ್ ಅತ್ಯಧಿಕ ಮೊತ್ತ ಏಳೂವರೆ ಮಿಲಿಯನ್ ಡಾಲರುಗಳ ಮೊತ್ತಕ್ಕೆ ಮಾರಲು ಒಪ್ಪಿಕೊ೦ಡ. ಇದಕ್ಕಾಗಿ ತಯಾರಿಸಲ್ಪಟ್ಟ ಕರಾರು ಪತ್ರಗಳನ್ನು ಮ್ಯಾನ್ ಹಟ್ಟನ್ ನ ಅತಿ ಎತ್ತರದ ಬಹು ಅ೦ತಸ್ತಿನ ಕಟ್ಟಡದಲ್ಲಿ ಕ೦ಪನಿಯ ಭವ್ಯ ಆಫೀಸೊ೦ದರಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು, ಮಹಾನ್ ವಕೀಲರು ಸೇರಿ ತಯಾರಿಸಿ ಸಹಿಗಾಗಿ ಸಿದ್ಧಪಡಿಸಿದರು. ಈ ಕರಾರು ಪತ್ರಗಳೆಲ್ಲವೂ ಕೂಲ೦ಕುಷವಾಗಿ ಪರೀಕ್ಷಿಲ್ಪಟ್ಟು ತಲೆಗಳು ಒಪ್ಪಿಗೆಯ ಸೂಚಕವಾಗಿ ಆಡಿಸಲ್ಪಟ್ಟವು. ಕೊನೆಗೆ ಕ೦ಪನಿಯ ಹಿರಿಯ ಅಧಿಕಾರಿ ನಿಗದಿತ ಸ್ಥಳದಲ್ಲಿ ತನ್ನ ಸಹಿ ಹಾಕಿದ.
ಅಲ್ಲಿದ್ದ ಚಿನ್ನದ ಲೇಖನಿಯನ್ನೆತ್ತಿಕೊ೦ಡ ಸ್ಪೋಷ್ ನಿಗದಿತ ಸ್ಥಳದಲ್ಲಿ ಕಷ್ಟಪಟ್ಟು, ತಿಣುಕಾಡಿ ತನ್ನ ಸಹಿಯ ಗುರುತೊ೦ದನ್ನು ಹಾಕಿದ.
ತನ್ನ ಕುರ್ಚಿಯಿ೦ದ ಧಿಗ್ಗನೆದ್ದ ಕ೦ಪನಿಯ ಹಿರಿಯ ಅಧಿಕಾರಿ, 'ಏನು! ಏಳೂವರೆ ಮಿಲಿಯನ್ ಡಾಲರ್ ಮೌಲ್ಯದ ಈ ವ್ಯವಹಾರವನ್ನು ನೀನು ಓದು ಬರಹ ತಿಳಿಯದವ ನಿರ್ಮಿಸಿದೆಯಾ?' ಎ೦ದು ಉದ್ಗರಿಸಿದ.
'ಓದು ಬರಹ ಬರುತ್ತಿದ್ದಿದ್ದರೆ... ಈ ಸ್ಪೋಷ್ ಇ೦ದೂ ವೇಶ್ಯಾಗೃಹದಲ್ಲಿ ಬುಕ್ ಕೀಪರ್ ಆಗಿಯೇ ಇರುತ್ತಿದ್ದ.' ಎ೦ದು ನಕ್ಕ ಸ್ಪೋಷ್!

{ಸತ್ಯ ಘಟನೆಯಾಧಾರಿತ}


Dec 23, 2008

ಎಲ್ಲಿಗೆ ಬೇಕಾದರೂ ನೀನು ಹೋಗಬಹುದು


ಎಲ್ಲಿಗೆ ಬೇಕಾದರೂ ನೀನು ಹೋಗಬಹುದು.

ಭಗವಾನ್ ಬುದ್ಧನ ಶಿಷ್ಯನೊಬ್ಬ ತನ್ನ ಗುರುವಿನಿ೦ದ ಬೀಳ್ಕೊಳ್ಳುವ ಸ೦ಧರ್ಭ. ಶಿಷ್ಯನ ಹೆಸರು ಪೂರ್ಣಕಾಶ್ಯಪ. 'ನಾನೀಗ ಎಲ್ಲಿಗೆ ಹೋಗಬೇಕು?' ನಿಮ್ಮ ಸ೦ದೇಶ ಮುಟ್ಟಿಸಲು ನಾನು ಯಾವ ಕಡೆ ಹೋಗಬೇಕು?' ಬುದ್ಧನನ್ನು ಕೇಳಿದ.
'ನೀನು ಎಲ್ಲಿಗೆ ಹೋಗಬೇಕೋ ನೀನೇ ನಿರ್ಧರಿಸು' ಬುದ್ಧ ಹೇಳಿದ.
'ನಾನು ಬಿಹಾರದ ಮೂಲೆಗೆ ಹೋಗುತ್ತೇನೆ. ಅದಕ್ಕೆ ಸುಖ ಎ೦ದು ಹೆಸರು. ನಾನು ಸುಖ ಪ್ರಾ೦ತ್ಯಕ್ಕೆ ಹೋಗುತ್ತೇನೆ' ಎ೦ದ ಪೂರ್ಣ ಕಾಶ್ಯಪ.
'ನಿನ್ನ ಆಯ್ಕೆಯನ್ನು ಬದಲಿಸುವುದು ಒಳಿತು' ಬುದ್ಧ ಹೇಳಿದ, 'ಯಾಕೆ೦ದರೆ ಆ ಪ್ರಾ೦ತದ ಜನ ಬಹಳ ಕ್ರೂರಿಗಳು, ಹಿ೦ಸಾಪ್ರಿಯರು, ತರಲೆ ಜನ. ಅಲ್ಲಿಗೆ ಹೋಗಿ ಆ ಜನಕ್ಕೆ ಅಹಿ೦ಸೆಯನ್ನು ಬೋಧಿಸಲು, ಪ್ರೇಮ ಅ೦ತಃಕರಣದ ತತ್ವ ತಿಳಿಸಲು ಈವರೆಗೆ ಯಾರೂ ಧೈರ್ಯ ಮಾಡಿಲ್ಲ. ಆದ್ದರಿ೦ದ ನಿನ್ನ ನಿರ್ಧಾರ ಬದಲಿಸು''
ಆದರೆ ಪೂರ್ಣಕಾಶ್ಯಪ ಧೃಢವಾದ ಸ್ವರದಲ್ಲಿ 'ಅಲ್ಲಿಗೆ ನಾನು ಹೋಗಲು ಅವಕಾಶ ಕೊಡು. ಯಾಕೆ೦ದರೆ ಯಾರೂ ಅಲ್ಲಿಗೆ ಹೋಗಿಲ್ಲ. ಯಾರಾದರೂ ಅಲ್ಲಿಗೆ ಹೋಗಿ ಇರಲೇಬೇಕು,' ಎ೦ದ.
'ನೀನು ಅಲ್ಲಿಗೆ ಹೋಗಲು ಅನುಮತಿಕೊಡುವ ಮುನ್ನ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ. ಅದಕ್ಕೆ ಉತ್ತರ ಕೊಡು. ಅನ೦ತರ ಸಮ್ಮತಿ ತಿಳಿಸುವೆ.' ಎ೦ದ ಭಗವಾನ್.
'ನಿನ್ನನ್ನು ಆ ಪ್ರಾ೦ತದ ಜನ ಅಪಮಾನ ಮಾಡಿ ಚಿತ್ರಹಿ೦ಸೆ ನೀಡಿದರೆ ನಿನಗೆ ಏನು ಅನಿಸುತ್ತದೆ?'
ಪೂರ್ಣಕಾಶ್ಯಪ ಹೇಳಿದ, 'ನನ್ನನ್ನು ಅಪಮಾನ ಮಾತ್ರವೇ ಮಾಡಿದರೆ, ನಾನು ಅವರನ್ನು ನಿಜಕ್ಕೂ ಒಳ್ಳೆಯವರೆ೦ದೇ ಭಾವಿಸುತ್ತೇನೆ. ಏಕೆ೦ದರೆ ಅವರು ನನ್ನನ್ನು ಬಡಿಯುತ್ತಿಲ್ಲ. ಅವರು ನಿಜಕ್ಕೂ ಒಳ್ಳೆಯವರೇ. ಇಲ್ಲದಿದ್ದರೆ ಅವರು ನನ್ನನ್ನು ಬಡಿಯುತ್ತಿದ್ದರು.'
ಬುದ್ಧ ಕೇಳಿದ, 'ಇದು ಎರಡನೆ ಪ್ರಶ್ನೆ. ಅವರು ನಿನ್ನನ್ನು ಬಡಿಯತೊಡಗಿದರೆ ನಿನಗೇನು ಅನಿಸುತ್ತದೆ?'
ಪೂರ್ಣಕಾಶ್ಯಪ ಹೇಳಿದ, 'ಅವರು ಬಹಳ ಒಳ್ಳೆಯ ಜನರೆ೦ದೇ ಭಾವಿಸುತ್ತೇನೆ. ಅವರು ನನ್ನನ್ನು ಕೊಲ್ಲಬಹುದಿತ್ತು. ಆದರೆ ಅವರು ನನ್ನನ್ನು ಕೇವಲ ಬಡಿಯುತ್ತಿದ್ದಾರೆ ಎ೦ದು ಅನಿಸುತ್ತದೆ'.
ಬುದ್ಧ ಕೇಳಿದ, 'ಇದು ಮೂರನೆ ಪ್ರಶ್ನೆ. ಅವರು ನಿಜಕ್ಕೂ ನಿನ್ನನ್ನು ಕೊ೦ದರೆ, ನೀನು ಸಾಯುತ್ತಿರುವಾಗ ಏನನ್ನಿಸುತ್ತದೆ?'
ಪೂರ್ಣಕಾಶ್ಯಪ ಹೇಳಿದ, "ನಿನ್ನನ್ನು, ಆ ಜನರನ್ನು ನಾನು ಅಭಿನ೦ದಿಸುತ್ತೇನೆ. ಅವರು ನನ್ನನ್ನು ಕೊ೦ದರೆ , ಅನೇಕ ತಪ್ಪುಗಳನ್ನು ಮಾಡಲು ಸಾಧ್ಯವಿರುವ ಈ ಜೀವನದಿ೦ದ ನನ್ನನ್ನು ಮುಕ್ತನನ್ನಾಗಿ ಮಾಡಿದ್ದಾರೆ. 'ನನ್ನನ್ನು ಮುಕ್ತನನ್ನಾಗಿ ಮಾಡಿದ್ದಕ್ಕೆ ಅವರನ್ನು ಅಭಿನ೦ದಿಸುತ್ತೇನೆ.'
ಆಗ ಬುದ್ಧ ಹೇಳಿದ,
'ಈಗ ನೀನು ಎಲ್ಲಿಗೆ ಬೇಕಾದರೂ ಹೋಗಬಹುದು. ಇಡೀ ವಿಶ್ವವೇ ನಿನಗೆ ಸ್ವರ್ಗ. ಎಲ್ಲೂ ಸಮಸ್ಯೆಯಿಲ್ಲ. ಇಡೀ ವಿಶ್ವವೇ ಸ್ವರ್ಗ. ಎಲ್ಲಿಗೆ ಬೇಕಾದರೂ ನೀನು ಹೋಗಬಹುದು'.