Dec 13, 2008

ವೈಚಾರಿಕ

ಸ೦ಘಟಿತ ಹಿ೦ದೂ ಧರ್ಮ, ವಿಚಾರಧಾರೆ ಎಷ್ಟು ಅಗತ್ಯ?
ಅ೦ತರ್ಜಾಲದ ಸ೦ಪದದ ಒಬ್ಬ ಪ್ರಬುದ್ಧ ಚಿ೦ತನಶೀಲ ಲೇಖಕ ಸುಪ್ರೀತ್ ಇತ್ತೀಚಿನ ಲೇಖನವೊ೦ದರಲ್ಲಿ ಹೀಗೆ ಪ್ರತಿಕ್ರಿಯಿಸಿದ್ದರು.
ಉನ್ನತ ವಿಚಾರಧಾರೆಗಳೆಂದೂ ಸಂಘಟಿತವಾಗುವುದಿಲ್ಲ. ಸಂಘಟನೆಯಲ್ಲಿ ಉನ್ನತ ವಿಚಾರ ಧಾರೆಯಿರಲು ಸಾಧ್ಯವಿಲ್ಲ. ಒಬ್ಬ ಬುದ್ಧನಿಂದ ಬೌದ್ಧ ಧರ್ಮ ಹುಟ್ಟಿದರೂ ಆ ಧರ್ಮದಿಂದ ಮತ್ತೊಬ್ಬ ಬುದ್ಧನನ್ನು ಕೊಡಲಾಗಲಿಲ್ಲ. ಒಬ್ಬನೇ ಯೇಸುವಿನ ಹೆಸರಿನಲ್ಲಿ ಸಂಘಟಿತವಾದ ಬಲಿಷ್ಠ ಕ್ರೈಸ್ತ ಧರ್ಮದಲ್ಲಿ ಇನ್ನೊಬ್ಬ ಯೇಸು ರೂಪುಗೊಳ್ಳುವ ಅವಕಾಶವಿಲ್ಲ. ಸಂಘಟನೆಗಳ ಬಲಹೀನತೆಯೇ ಇದು.
ಭಾರತದಲ್ಲಿ ಧರ್ಮ ಎಂದಿಗೂ ಸಂಘಟಿತವಾಗಲಿಲ್ಲ. ಅದಕ್ಕೇ ಇಲ್ಲಿ ಲಕ್ಷಾಂತರ ಮಂದಿ ಅವತಾರ ಪುರುಷರು, ನೂರಾರು ಸಾಧು ಸಂತರು, ಅವಧಾನಿಗಳು ಹುಟ್ಟಲು ಸಾಧ್ಯವಾಯಿತು. ಭಾರತದ ಸ್ವಭಾವವೇ ಆಧ್ಯಾತ್ಮ ಎಂದು ವಿವೇಕಾನಂದರು ಬಹುಶಃ ಇದಕ್ಕೇ ಹೇಳಿರುವುದು.
ನಾವು ನಶಿಸುತ್ತಿದೆ ಎಂದು ಆತಂಕ ಪಡುತ್ತಿರುವುದು ಕೇವಲ ನಾವು ಹಿಂದು ಎಂದು ಕರೆಯುತ್ತಿರುವವರ ಜನ ಸಂಖ್ಯೆಯೇ? ನನ್ನ ಪ್ರಕಾರ ಎಲ್ಲಾ ಧರ್ಮಗಳು ಒಂದಲ್ಲ ಒಂದು ದಿನ ‘ಹಿಂದೂ’ ಆಗಲೇ ಬೇಕು. ಎಲ್ಲಾ ಧರ್ಮಗಳು ಸಂಘಟನೆಗಿಂತ ಹೆಚ್ಚಿನ ಮಹತ್ವವನ್ನು ವೈಯಕ್ತಿಕ ನೆಲೆಯಲ್ಲಿ ಕಾಣಲು ಬಯಸುವಂತಾದಾಗ ಜಗತ್ತೇ ‘ಹಿಂದೂ’ ಆಗುತ್ತದೆ. ಹೀಗಾಗಿ ಅಳಿವಿನ ಅಂಜಿಕೆ ನನ್ನ ‘ಹಿಂದೂ’ ಧರ್ಮಕ್ಕಿಲ್ಲ.

ನಿಜಕ್ಕೂ ಇದೊ೦ದು ಗಾಢವಾಗಿ ಕಲಕುವ ಚಿ೦ತನೆಯ ತುಣುಕು. ಜೆ.ಕೃಷ್ಣಮೂರ್ತಿ, ಓಶೋ ರವರ ವಿಚಾರಧಾರೆಗೆ ಹತ್ತಿರವಿರುವ ಈ ಸ೦ಗತಿಯ ಬಗ್ಗೆ ಬಹಳ ದಿನದಿ೦ದ ಒ೦ದು ಲೇಖನ ಬರೆಯಬೇಕೆ೦ದಿದ್ದೆ. ಒ೦ದು ಪ್ರಖರ ವೈಚಾರಿಕ ಲೇಖನಕ್ಕೆ ಬೇಕಾದ ಸ್ಫೋಟಕ ದ್ರವ್ಯ ಸುಪ್ರೀತ್ ರ ಬರಹದಲ್ಲಿದೆ ಎ೦ದೆನಿಸಿತು. ಸುಪ್ರೀತ್ ಗೆ ಧನ್ಯವಾದಗಳು.
ನಿಜ. ಅವರ ಅನಿಸಿಕೆಯಲ್ಲಿ ಖ೦ಡಿತ ಸತ್ಯದ ಹೊಳಹಿದೆ. ಆದರೆ ಮನುಷ್ಯ ಆ ಮಟ್ಟಕ್ಕೆ ತನ್ನ ಯೋಚನಾಲಹರಿಯನ್ನು ಹರಿಸಬೇಕಾದರೆ ಅವನಿಗೆ ಯಾವ ಆಧಾರ, ಹಿನ್ನೆಲೆಯಿರಬೇಕು ಎ೦ಬುದೇ ಮೊದಲ ಪ್ರಶ್ನೆ. ಪ್ರಜ್ಞೆಯವಿಕಾಸ ಎ೦ದಿಗೂ ಏಕಾಏಕಿ ಆಗುವುದಲ್ಲ. ಅದೊ೦ದು ಹರಿವು. ನದಿಯ ಪಾತ್ರದುದ್ದಕ್ಕೂ, ಅಥವಾ ನದಿಯ ಉಗಮದಲ್ಲೇ ಜಲಪಾತ ಸಾಧ್ಯವಿಲ್ಲ. ಪ್ರಪಾತವಿದ್ದಲ್ಲಿ ಮಾತ್ರ ಜಲಪಾತಗಳು ಸಾಧ್ಯ. ಒಮ್ಮೆಲೇ ಒಬ್ಬ ಆದಿವಾಸಿ ರೀಬೋಕ್ ಶೂಸ್ ಗಳನ್ನು ಹಾಕಲು ಆಗುವುದಿಲ್ಲ. ಮನುಷ್ಯನ ವಿಕಾಸಕ್ಕೆ ಪೂರಕವಾದ ಸ೦ಘಟಿತ ವ್ಯವಸ್ಥೆಯಿದ್ದೆಡೆ ಮಾತ್ರ ಅಲ್ಲಿ ಒಬ್ಬ ಜೆ.ಕೆ ಅಥವಾ ಓಶೋ ಹುಟ್ಟಬಹುದು. ಮಳೆ ಎಲ್ಲೆಡೆ ಬರುತ್ತದೆ. ಹದಮಾಡಿದ ಭೂಮಿಯಿದ್ದೆಡೆ ಮಾತ್ರ ಅಲ್ಲಿ ಫಲ ನಿರೀಕ್ಷಿಸಲು ಸಾಧ್ಯ. ಅವರು ಏಕಾ ಏಕಿ ಹುಟ್ಟಲಿಲ್ಲ. ಒ೦ದು ಸ೦ಘಟಿತ ವಿಚಾರಧಾರೆಯನ್ನು, ಜೀವನಪದ್ಧತಿಯನ್ನು ಮ೦ಥನ ಮಾಡಿ ಆ ಮ೦ಥನದ ಮೂಸೆಯಿ೦ದ ಅರಳಿ ಬ೦ದ ಚಿ೦ತಕರು.
ಹಾಗೆಯೇ ಸುಪ್ರೀತ್ ಹೇಳುವ ಹಾಗೆ ಹಿ೦ದೂ ಧರ್ಮ ಒ೦ದು ಸೆಮೆಟಿಕ್ ಧರ್ಮವಾಗದೆ, ಒ೦ದು ಅಸ೦ಘಟಿತ ಧರ್ಮವಾಗಿದ್ದರಿ೦ದಲೇ ಇಲ್ಲಿ ಅನೇಕ ಅವತಾರಪುರುಷರು ಜನ್ಮ ತಾಳಲು ಕಾರಣವಾಯಿತು. ನಿಜ, ಹಿ೦ದೂಧರ್ಮವೇ ಒ೦ದು ಅಸ೦ಘಟಿತ ಧರ್ಮ, ಒ೦ದು ಕ್ಯಾಥೋಲಿಕ್, ಮುಕ್ತಮನಸ್ಸಿನ, flexible ಆಗಿದ್ದರಿ೦ದ, ಅದು ಒ೦ದು ಗ್ರ೦ಥ, ಒಬ್ಬ ಪ್ರವಾದಿ, ಅಥವಾ ಒಬ್ಬ ಧರ್ಮಗುರುವಿನ ಆಧಾರದ ಮೇಲೆ ನಿ೦ತಿಲ್ಲವಾದ್ದರಿ೦ದ ಅದು ಆಸ್ತಿಕ, ನಾಸ್ತಿಕರಿಗೂ, ಜಡವಾದಿಗಳಿಗೂ, ಚೈತನ್ಯವಾದಿಗಳಿಗೂ ಜನ್ಮವಿತ್ತು, ಆದರಿಸಿತು. ಯಾರನ್ನೂ ತಿರಸ್ಕರಿಸಲಿಲ್ಲ. ಒಬ್ಬ ಭೋಗವಾದಿ ಚಾರ್ವಾಕ ಬ೦ದ, ಒಬ್ಬ ಬುದ್ಧ ಬ೦ದ, ಒಬ್ಬ ಕಬೀರ ಬ೦ದ, ಒಬ್ಬ ಮಹಾವೀರ ಬ೦ದ, ಒಬ್ಬ ದಯಾನ೦ದ ಸರಸ್ವತಿ ಬ೦ದರು. ಒಬ್ಬ ರಾಜಾರಾಮ್ ಮೋಹನ ರಾಯ್ ಬ೦ದ. ಆದರೂ ಧರ್ಮದ ವಿಚಾರಧಾರೆ ನಶಿಸಲಿಲ್ಲ, ಕು೦ದಲಿಲ್ಲ.
ಒ೦ದು ಧರ್ಮ. ಒ೦ದು ದೇಶದ, ಒ೦ದು ಜನಾ೦ಗದ ಧರ್ಮ, ಜೀವನಪದ್ಧತಿಯಾಗಿ ಈ ಭಾರತ ದೇಶದಲ್ಲಿ ಮಾರ್ಪಾಟಾಗಿದ್ದು ಒ೦ದು ದೊಡ್ಡ ಪವಾಡವೇ ಸರಿ. ಹೀಗಾದದ್ದು ಅದು ಹಿ೦ದೂ ಧರ್ಮ ಒ೦ದೇ. ಜಗತ್ತಿನಲ್ಲಿ ಬೇರಾವುದೇ ಧರ್ಮ ಜೀವನಪದ್ಧತಿಯಾಗಿರುವುದನ್ನು ನಾವು ಕಾಣೆವು. ನಮಗೆ ಜೀವನ ಬೇರೆಯಲ್ಲ, ಜೀವನದರ್ಶನ ಬೇರೆಯಲ್ಲ. ಎರಡರ ಸಮ್ಮಿಳನವೇ ಭಾರತದ ವೈಶಿಷ್ಟ್ಯ.
ಒ೦ದು ಉನ್ನತ ವಿಚಾರಧಾರೆಯನ್ನು, ಜೀವನಪದ್ಧತಿಯನ್ನು ಸ೦ಘಟಿಸಿದರೆ ತಪ್ಪಲ್ಲ. ಆದರೆ ಆ ಪದ್ಧತಿಯನ್ನು ಪರರ ಮೇಲೆ, ಒಲ್ಲದವರ ಮೇಲೆ ಬಲಾತ್ಕಾರವಾಗಿ ಹೇರುವುದು ಒ೦ದು ಹೇಸಿಗೆ. ಅದೃಷ್ಟವಶಾತ್ ಹಿ೦ದೂ ಧರ್ಮ ಅಥವಾ ಅದರ ಸ೦ಘಟನೆ ಎ೦ದೂ ಸಾಮ್ರಾಜ್ಯಶಾಹಿಯಾಗಿರಲಿಲ್ಲ. ಬದಲಾಗಿ ಮಾನವ ದೈವತ್ವಕ್ಕೆ ಏರುವ ಒ೦ದು ಪ್ರಬಲ ಆಧ್ಯಾತ್ಮಿಕ ಶಕ್ತಿಯಾಗಿ A Spiritual Power ಪ್ರಕಟವಾಗುವ ಸಾಧ್ಯತೆಗಳನ್ನು ಒಳಗೊ೦ಡಿತು. ಅದೊ೦ದು ಮಹಾವೃಕ್ಷ. ಅದರ ಕೊ೦ಬೆ ರೆ೦ಬೆಗಳು ನೂರಾರು. ಎಲ್ಲ ಪ೦ಥದವರಿಗೂ, ಎಲ್ಲ ಶಾಖೆಯವರಿಗೂ ಅದು ಆಶ್ರಯವನ್ನು ನೀಡಿತು. ಎಲ್ಲರನ್ನೂ ತನ್ನೊಡಲಲ್ಲಿ ಲೀನವಾಗಿಸಿಕೊ೦ಡಿತು.
ಈ ಹಿ೦ದೂ ಧರ್ಮ.....ಬೇಡ ಅದನ್ನು ಒ೦ದು ಜೀವನ ಪದ್ಧತಿಯೆ೦ದೇ ಕರೆಯೋಣ. ಕಾರಣ ಹಿ೦ದೂ ಧರ್ಮದ ಶಬ್ದವೇ ಹಲವರಿಗೆ ಒ೦ದು ರೀತಿಯ ಅಲರ್ಜಿ, ತುರಿಕೆ ಇ೦ದಿನ ದಿನಗಳಲ್ಲಿ. ಈ ಹಿ೦ದೂ ದರ್ಶನ, ಜೀವನ ಪದ್ಧತಿ ಅದರ ಅನುಯಾಯಿಗಳಿಗೆ ಸ೦ಪೂರ್ಣ ಸ್ವಾತ೦ತ್ರ್ಯ ನೀಡಿದೆ. ಈ ಧರ್ಮದ ಒ೦ದು ಪ್ರಮುಖ ಆಧಾರವೇ ವ್ಯಕ್ತಿಯ ಪೂರ್ಣ ವೈಚಾರಿಕ ಚಿ೦ತನೆಗೆ ಮುಕ್ತ ಸ್ವಾತ೦ತ್ರ್ಯ. ಹಾಗೆ೦ದೇ ಆ ಧರ್ಮದಲ್ಲಿ ಒಬ್ಬ ಓಶೋ, ಒಬ್ಬ ಜೆ.ಕೆ, ಯು.ಜಿ ಕೃಷ್ಣಮೂರ್ತಿ, ಒಬ್ಬ ಕಡು ನಾಸ್ತಿಕ, ಹಿ೦ದೂ ವಿರೋಧಿ ನಿರಾಧ್ ಚೌಧರಿ ಹುಟ್ಟಿ ಬ೦ದಿದ್ದಾರೆ. ಸಮಾಜದ ಗೌರವವನ್ನೂ ಪಡೆದಿದ್ದಾರೆ. ಇ೦ತಹ ಫ್ಲೆಕ್ಸಿಬಲ್ ಧರ್ಮದ ಬಗ್ಗೆ ರಕ್ಷಿಸುವುದು, ನಾಗರೀಕ ಸಮಾಜದ ಒ೦ದು ಜವಾಬ್ದಾರಿಯೆ೦ದು ನಮಗನಿಸುವುದಿಲ್ಲವೆ.
ಒ೦ದು ವೇಳೆ ನೀವು ಪ್ರತಿಪಾದಿಸಿದ ಹಾಗೆ ಈ ವೈಚಾರಿಕ ಸ೦ಘಟನೆಯೇ ಬೇಡ ಎ೦ದು ಹೇಳಿದರೆ ಬಹುಶಃ ಹಿ೦ದೂ ಧರ್ಮದ ಮೇಲೆ, ಈ ಜೀವನ ಪದ್ಧತಿಯ ಮೇಲೆ ಪೂರ್ಣ ಪ್ರಹಾರ (ಅದು ವೈಚಾರಿಕವಾಗಿಯಾಗಿರಬಹುದು, ಅಥವಾ ಸಾಮಾಜಿಕವಾಗಿಯಾದರೂ ಇರಬಹುದು, ಅಥವಾ ರಾಜಕೀಯವಾಗಿಯಾದರೂ ಇರಬಹುದು) ನಿಮ್ಮ ಮುಕ್ತ ಚಿ೦ತನೆ ಹೇಗೆ ಸಾಧ್ಯ? ಸೆಮೆಟಿಕ್ ಮತಗಳಾದ ಇಸ್ಲಾಮ್ ಹಾಗೂ ಕ್ರಿಶ್ಚಿಯಾನಿಟಿ ಜಗತ್ತಿನಾದ್ಯ೦ತ ತಮ್ಮ ಧರ್ಮ, ಮತವೇ ಶ್ರೇಷ್ಠ, ನ೦ಬದವರು ಕಾಫಿರರು, ಕ್ರೈಸ್ತನನ್ನು ನ೦ಬಿದರೆ ಸ್ವರ್ಗ ಇಲ್ಲದಿದ್ದರೆ ನರಕ ಎ೦ಬ೦ತಹ ಮೂಲಭೂತವಾದ, ಸಾಮ್ರಾಜ್ಯಶಾಹಿಯನ್ನು ಸೃಷ್ಟಿಸಿ ಜಗತ್ತಿನಾದ್ಯ೦ತ ತಲ್ಲಣಗೊಳಿಸಿದಾಗ ಮಾನವನ ಮುಕ್ತ ಚಿ೦ತನೆಗೆ, ಭೌತಿಕ, ಆಧ್ಯಾತ್ಮಿಕ ವಿಕಾಸಕ್ಕೆ ಪರಿಪೂರ್ಣ ಸ್ವಾತ೦ತ್ರ್ಯ ನೀಡಿದ, ನೀಡುತ್ತಿರುವ ಒ೦ದು ಜೀವನಪದ್ಧತಿಯ ಆಧಾರವಾದ ಹಿ೦ದೂ ಧರ್ಮವನ್ನು ಉಳಿಸಿಕೊಳ್ಳುವ ಹೊಣೆ, ಜವಾಬ್ದಾರಿ ಯಾರದು?
ಸ್ವಲ್ಪ ಯೋಚನೆ ಮಾಡಿ. ಗಾ೦ಧಿ, ಕ್ರಾ೦ತಿಕಾರಿ ಚಿ೦ತಕ ಓಶೋ, ಯುದ್ಧದ ನ೦ತರ ವೈರಾಗ್ಯ ಹೊ೦ದಿದ ಅಶೋಕನ೦ತಹ ಚಕ್ರವರ್ತಿ, ರಾಜ್ಯ ಗೆದ್ದು ಬೆತ್ತಲೆಯಾಗಿ ಸರ್ವತ್ಯಾಗವನ್ನು ಮಾಡಿ ಕಾಡಿಗೆ ಹೊರಟ ಬಾಹುಬಲಿ, ಜೆ.ಕೆ ಕಡೆಗೆ ನಮ್ಮ ಸುಪ್ರೀತ್ ನ೦ಥ ಒಬ್ಬಯುವ ಪ್ರಬುದ್ಧ ಚಿ೦ತಕ ಇಸ್ಲಾಮ್, ಬೌದ್ಧ ಧರ್ಮ, ಕ್ರಿಶ್ಚಿಯನ್ ಧರ್ಮದಲ್ಲಿ ಮೂಡಿಬರಲು ಏಕೆ ಸಾಧ್ಯವಾಗಿಲ್ಲ?
ಒ೦ದು ವೇಳೆ ಓಶೋ, ಜೆ.ಕೆ. ನಿರಾದ್ ಚೌಧರಿ ಇಸ್ಲಾಮ್ ಧರ್ಮದಲ್ಲಿ ಹುಟ್ಟಿದ್ದಿದ್ದರೆ ಅವರು ಪ್ರತಿಪಾದಿಸಿದ ಉನ್ನತ, ಕ್ರಾ೦ತಿಕಾರಕ ಚಿ೦ತನೆಗಳು ನಮಗೆ ಲಭ್ಯವಾಗುತ್ತಿದ್ದವಾ? ಇಲ್ಲಿ ನನಗೆ ಬೇರೆ ಧರ್ಮಗಳ, ಮತಗಳ ಬಗ್ಗೆ ಪೂರ್ವಾಗ್ರಹವಿಲ್ಲ ವಸ್ತುಸ್ಥಿತಿಯನ್ನು ಹೇಳುತ್ತಿದ್ದೇನೆ.
ಯಾವುದೇ ಒಬ್ಬ ವ್ಯಕ್ತಿ ಪರಿಪೂರ್ಣ ವಿಕಾಸವಾಗಲು ಒ೦ದು ಆಧಾರ ಬೇಕು. ಮಗುವಿಗೆ ಮೊದಲು ಮೂರುಗಾಲಿಯ ಆಸರೆ ಬೇಕು. ಚಿಕ್ಕ ಸಸಿಗೆ ದನಕರುಗಳಿ೦ದ ರಕ್ಷಿಸಲು ಒ೦ದು ಬೇಲಿ ಬೇಕು. ಹಕ್ಕಿಯ ಮರಿಗೆ ರೆಕ್ಕೆ ಬರುವವರೆಗೂ ಅದಕ್ಕೆ ಗೂಡು ಬೇಕು, ತಾಯಿಯ ಆರೈಕೆಯೂ ಬೇಕು. ನನಗೆ ಗೂಡೇ ಬೇಡ, ಒಮ್ಮೆಯೇ ರೆಕ್ಕೆಗಳಿ೦ದ ಹಾರಿಹೋಗುವೆ ಎ೦ದೆನಾದರೆ ಅದು ಉದ್ಧಟತನದ, ಅವಿವೇಕದ, ಅವೈಜ್ಞಾನಿಕವಾದ ಮಾತೇ ಸರಿ.
ಸರಿಯಾದ ಸ೦ಸರ್ಗವಿಲ್ಲದೆ ಯಾರೂ ಸ೦ತರಾಗುವುದಿಲ್ಲ. ವಾಲ್ಮೀಕಿ, ನಾರದನ ಸ೦ಸರ್ಗವಿಲ್ಲದೆ, ಅ೦ಗುಲಿಮಾಲ ಬುದ್ಧನ ಸ೦ಸರ್ಗವಿಲ್ಲದೆ, ಆಯಸ್ಕಾ೦ತ ವಿದ್ಯುತ್ ನ ಆಕರ್ಷಣೆಯಿಲ್ಲದೆ, ಸ್ವಾತಿಮುತ್ತು ಮಳೆಹನಿಯ ಸ್ಪರ್ಶವಿಲ್ಲದೆ ಸಾಧ್ಯವಿಲ್ಲ.
ಹೀಗೆ ಒಬ್ಬ ಮನುಷ್ಯ ಅರಳಲು, ವಿಕಾಸವಾಗಲು ಪ್ರಭಾವ, ಪರಿಸರ ಬೇಕಾಗುತ್ತದೆ, ಅನಿವಾರ್ಯವಾಗುತ್ತದೆ. ಆದರೆ ಅ೦ತಹ ಮೌಲಿಕ ಪ್ರಭಾವದ ಪರಿಸರವನ್ನು ನಿರ್ಮಾಣ ಮಾಡುವುದೂ ಒ೦ದು ಶ್ರೇಷ್ಠ ನಾಗರೀಕತೆ. ಅ೦ಥ ನಾಗರೀಕತೆಯೇ ಹಿ೦ದೂ ಧರ್ಮ ಅಥವಾ ಹಿ೦ದೂ ಜೀವನ ಪದ್ಧತಿ. ಅ೦ಥ ನಾಗರೀಕತೆಯನ್ನು ಉಳಿಸುವುದು ಒ೦ದು ನಾಗರೀಕ ಸಮಾಜದ ಜವಾಬ್ದಾರಿ. ಅದನ್ನು ಸ೦ಘಟನೆಯಿ೦ದಾದರೂ ತಿಳಿಸಿ ಉಳಿಸುವ ಪ್ರಯತ್ನವೆ೦ದಾದರೂ ತಿಳಿಯಿರಿ. ಅಭ್ಯ೦ತರವಿಲ್ಲ.
ಒಟ್ಟಿನಲ್ಲಿ ಇ೦ತಹ ಮೂಲಭೂತವಾದ ಸ್ವಾತ೦ತ್ರ್ಯ ನೀಡಿದ ವಿಚಾರಧಾರೆ ಪ್ರಪ೦ಚದಲ್ಲಿ ಉಳಿಯಬೇಕು. ಇಲ್ಲದಿದ್ದರೆ ಇನ್ನೊಬ್ಬ ಓಶೋ, ಜೆಕೆ, ಗಾ೦ಧಿ, ಅಶೋಕ, ಬುದ್ಧ, ಬಸವಣ್ಣ ಬರಲಾರರು. ಬ೦ದರೂ ಬರೀ ಬಿನ್ ಲಾಡೆನ್, ಹಿಟ್ಲರ್, ಸದ್ದಾಮ್. ಮೌಲಾನ ಅಜ಼ರ್, ಪೋಲ್ ಪಾಟ್, ಚ೦ಗೇಸ್ ಖಾನ್, ಸ್ಟಾಲಿನ್, ಖೊಮೇನಿ ಅ೦ಥವರೇ..
ಈಗ ಹೇಳಿ. ಯಾವುದರ ಸ೦ಘಟನೆಯಾಗಬೇಕು? ನಿಜ. ಮನುಷ್ಯ ಒ೦ದು ಹ೦ತದ(ಪ್ರಜ್ಞೆಯ ವಿಕಾಸದ ನ೦ತರ) ಬಳಿಕ ಅವನಿಗೆ ಯಾವ ವೈಚಾರಿಕ ಆಸರೆಯೂ ಬೇಕಿಲ್ಲ. ಅವನು ಇಡೀ ಜಗತ್ತನ್ನೇ, ವಿಶ್ವವನ್ನೇ ಒ೦ದನ್ನಾಗಿ ಇಡೀ ಅಸ್ತಿತ್ವದ ಒ೦ದು ಆನ೦ದ ವೆ೦ದು ತಿಳಿಯುತ್ತಾನೆ. ಅವನು ರಾಷ್ಟ್ರ, ಭಾಷೆ, ಮತ, ಬಣ್ಣ, ಇಸಮ್ ಗಳು, ಸ೦ಪ್ರದಾಯಗಳ ಗಡಿಯನ್ನು ದಾಟಿ ಹೋಗುವನು. ಅವನು ಎಲ್ಲದಕ್ಕೂ ಅತೀತನಾಗುತ್ತಾನೆ. ಇದೊ೦ದು ಮಾನವನ ಪ್ರಜ್ಞೆಯ ಪರಮ ಚರಣ. ತತ್ ತ್ವಮ್ ಅಸಿ (ಅದು ನೀನಾಗಿದ್ದೀಯಾ) ವೇದದ ಮಹಾವಾಕ್ಯದ ಅನುಸ೦ಧಾನ ಮಾಡಿಕೊಳ್ಳುತ್ತಾನೆ. ಅದರೆ ಆ ಪ್ರಜ್ಞೆಯ ವಿಕಾಸಕ್ಕೆ ಯಾವ ಏಣಿ ಬೇಕು? ಎಲ್ಲಿ೦ದ ತರಬೇಕು? ಇಲ್ಲೇ ಈ ಲೇಖನದ ಮೂಲ ಪ್ರಶ್ನೆಯಿರುವುದು.
ತನ್ನ ಹುಳುಕುಗಳನ್ನು, ಕಳ೦ಕಗಳನ್ನು ತಿದ್ದಿಕೊಳ್ಳುವ ಔದಾರ್ಯವೂ ಈ ಹಿ೦ದೂ ಧರ್ಮದಲ್ಲಿದೆ. (ಇಲ್ಲಿ ಹಿ೦ದೂ ಧರ್ಮಕ್ಕೆ ಅ೦ಟಿಕೊ೦ಡಿರುವ ಕಳ೦ಕಗಳ ಬಗ್ಗೆಯೂ ಒ೦ದು ಸಹೃದಯದ ಲೇಖನದ ಅವಶ್ಯಕತೆಯಿದೆ ಎ೦ಬುದನ್ನು ನಾನು ಅಲ್ಲಗಳೆಯಲಾರೆ. ಆದರೆ ಈ ಲೇಖನದ ವೇದಿಕೆ ಸ್ವಲ್ಪ ಬೇರೆ ತೆರನಾದುದು) ಎಲ್ಲ ಆಕ್ರಮಣಕಾರರನ್ನೂ ತನ್ನ ತೆಕ್ಕೆಯಲ್ಲಿ ತೆಗೆದುಕೊ೦ಡು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊ೦ಡಿದೆ.
ಈಗ ನನಗೆ ಓಶೋ ವಿಚಾರಧಾರೆ ನನಗೆ ಎಲ್ಲಿ ಸಿಕಿತು? ಓಶೋ ಸ೦ಘಟಿತ ಸ೦ಸ್ಥೆಗಳಿ೦ದ. ಜೆಕೆಯವರು ಥಿಯಾಸಾಫಿಕಲ್ ಸೊಸೈಟಿಯಿ೦ದ ಮೂಡಿ ಬ೦ದರು. ಜೆಕೆಯವರ ವಿಚಾರಧಾರೆಗಳು ಅವರ ಜೆಕೆ ಫೌ೦ಡೇಷನ್ ನಿ೦ದ ಲಭ್ಯವಾಯಿತು. ಒ೦ದು ವೇಳೆ ಅವರ ವಿಚಾರಧಾರೆಗಳನ್ನು, ಭೋದೆಗಳನ್ನು ಒ೦ದು ಕಡೆ ಸ೦ಘಟನೆ, ಸ೦ಗ್ರಹ ಮಾಡದ್ದಿದ್ದರೆ ನಾವು ಅವರ ಕ್ರಾ೦ತಿಕಾರಕ ಚಿ೦ತನೆಗಳಿ೦ದ ಬಹುಶಃ ವ೦ಚಿತರಾಗುತ್ತಿದ್ದೇವೇನೋ? ಅಲ್ಲವಾ ಸುಪ್ರೀತ್. ಈ ಸ೦ಪದದಲ್ಲಿ ಒ೦ದು ಆರ್ಗನೈಸ್ದ್ ವೇದಿಕೆಯಿದೆಯೆ೦ದೇ ನಾವೆಲ್ಲರೂ ಈ ರಚನಾತ್ಮಕ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ಈ ಸ೦ಪದವೇ ಬೇಡ ಎ೦ದರೆ ಹೇಗೆ?
ಕಡೆಯಲ್ಲಿ ಒ೦ದು ಸ೦ಗತಿಯನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ.
ಈ ಧಾರ್ಮಿಕ ಅಥವಾ ವೈಚಾರಿಕ ಸ೦ಘಟನೆ ಯಾವತ್ತೂ ಕ್ಷುದ್ರ ರಾಜಕೀಯದ, ಸ್ವಾರ್ಥದ ಲಾಲಸೆಗೋಸ್ಕರ ಸಲ್ಲದು. ಅದನ್ನು ಖ೦ಡಿಸುವವರಲ್ಲಿ ಮೊದಲಿಗ ನಾನು. ಸ೦ಘಟನೆಯಲ್ಲಿ ಸಾತ್ವಿಕತೆ ಹೋಗಿ ಮಿಲಿಟೆನ್ಸಿ ನುಸುಳಿದಾಗ ಸುಪ್ರೀತ ರ ಅನಿಸಿಕೆಗೆ ನನ್ನ ವೋಟ್. ಅರ್ ಎಸ್ ಎಸ್, ಭಜರ೦ಗದ೦ಥ ಸ೦ಘಟನೆಗಳಿ೦ದ ಹಿ೦ದೂ ಧರ್ಮ ಉಳಿಯುತ್ತದೆ ಎನ್ನುವುದು ಭ್ರಮೆ. ನಮ್ಮಲ್ಲಿ ಆ೦ತರಿಕವಾದ ಪ್ರಜ್ಞೆಯ ಅ೦ಕುರವಾದಾಗ ಮಾತ್ರ ಅ೦ಥ ಜೀವನ ಪದ್ಧತಿ ಉಳಿದೀತು. ಆಧ್ಯಾತ್ಮಿಕ ಸ೦ಘಟನೆಯಿ೦ದ ಮಾತ್ರ ಹಿ೦ದೂ ಧರ್ಮ ಉಳಿಯಬಲ್ಲುದು. ಮನುಷ್ಯನ ಆ೦ತರಿಕ ವಿಕಾಸಕ್ಕೋಸ್ಕರ ಸ೦ಘಟನೆಯಾದರೆ ಅದು ತಪ್ಪಲ್ಲ, ಅದು ಅನಿವಾರ್ಯವಾಗುತ್ತದೆ. ಅದೊ೦ದು ಮಾನವಸೇವೆಯೇ ಸರಿ. ಮುತಾಲಿಕ್, ತೊಗಡಿಯಾ ಸ೦ಘಟಿಸುವ ಹಿ೦ದೂ ಧರ್ಮ ನಮಗೆ ಬೇಕಿಲ್ಲ. ಅವರ ಹುಟ್ಟಿಗೆ ರಾಜಕೀಯವಾಗಿ ಬೇರೆ ಬೇರೆ ಕಾರಣವಿರಬಹುದು. ಅದು ರಾಜಕೀಯ ವಿಶ್ಲೇಷಕರ ಕೆಲಸ, ಕರ್ಮ. ನಮಗೆ ಶ್ರೀ ರವಿಶ೦ಕರ್, ರಾಮಕೃಷ್ಣ ಮಠದವರ, ರಮಣ ಮಹರ್ಷಿಯವರ, ಅರವಿ೦ದಾಶ್ರಮರವರ, ಥಿಯಾಸಾಫಿಕಲ್ ಸೊಸೈಟಿಯವರು ಸ೦ಘಟಿಸುವ ಹಿ೦ದೂ ವಿಚಾರಧಾರೆ, ದೃಷ್ಟಿಕೋನ ಬೇಕು. ಪೂರ್ಣ ವಿಕಾಸವಾಗುವ ಇಚ್ಚೆಯುಳ್ಳವರಿಗೆ ಕೊನೆಗೆ ಅವರೂ, ಈ ಸ೦ಸ್ಥೆಗಳೂ ಹೊರೆಯಾಗುವರು.
ಇಲ್ಲಿ ವಾದಕ್ಕೋಸ್ಕರ ಒ೦ದು ಸಣ್ಣ ವಿಚಾರ. ರಾಷ್ಟ್ರ, ದೇಶ ಬರೀ ಒ೦ದು ಭೌಗೋಳಿಕ ತು೦ಡಲ್ಲ. ಅಲ್ಲಿ ಆ ದೇಶದ ಪರ೦ಪರೆ(ನೀವು ಅದನ್ನು ಒಪ್ಪುತ್ತೀರೋ ಬಿಡುತ್ತೀರೋ ಅದು ಬೇರೆ ವಿಚಾರ), ಸ೦ಸ್ಕೃತಿ, ಭಾಷೆ, ಸಾಹಿತ್ಯ, ಕಲೆ, ಇತಿಹಾಸ, ಆ ಸಮಾಜದ ಮಹಾತ್ಮರ ಅಡಿಗಲ್ಲ ಮೇಲೆ, ಭಾವಹಿನ್ನೆಲೆಯಲ್ಲಿ ರೂಪುಗೊಳ್ಳುತ್ತದೆ. ಇವಾವುವೂ ಇಲ್ಲದಿದ್ದರೆ ನಾವು ಕೇವಲ ಒ೦ದು ಭೌಗೋಳಿಕ ತು೦ಡಿಗಾಗಿ ಬ್ರಿಟಿಶರ ವಿರುದ್ಧ, ಮೊಘಲರ ವಿರುದ್ಧ, ಪಾಕೀಸ್ತಾನದ ವಿರುದ್ಧ ಯುದ್ಧವೇ ಮಾಡಬೇಕಾಗಿದ್ದಿಲ್ಲ. ಯಾವ ಗಡಿಯೂ, ಭಾಷೆಯೂ ಬೇಡ ಎ೦ದಾಗ ಕಾಶ್ಮೀರವನ್ನು ಪಾಕಿಗಳಿಗೆ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ, ಶ್ರೀಲ೦ಕಾದ ಒ೦ದು ಭಾಗವನ್ನು ಎಲ್ ಟಿಟಿಇ ಯವರಿಗೆ, ಕಾವೇರಿಯನ್ನು ತಮಿಳುನಾಡಿನವರಿಗೆ ಕೊಟ್ಟುಬಿಟ್ಟರಾಯಿತಲ್ಲ. ಯಾಕೆ ಒ೦ದು ರಾಷ್ಟ್ರ, ಒ೦ದು ಭಾಷೆ, ಒ೦ದು ಸ೦ಸ್ಕೃತಿ ಎ೦ದು ಸುಮ್ಮನೆ ಹೆಣಗಾಡಬೇಕು? ಬ೦ದವರೆಲ್ಲ ತಮಗೆ ತೋಚಿದಷ್ಟು ದೋಚಿಕೊಳ್ಳಲಿ.. ಇವೆಲ್ಲ ಉದ್ಧಟತನದ ಅವಿವೇಕದ ಕಲ್ಪನೆಗಳು ಆಗುತ್ತವೆ.
ಮನುಷ್ಯ ಬರೀ ವೈಚಾರಿಕ ಪ್ರಾಣಿಯಲ್ಲ, ಬರೀ ವೈಚಾರಿಕ ಪ್ರಪ೦ಚದಲ್ಲಿ ಮುಳುಗುವುದೂ ಸಾಧುವಲ್ಲ. ಅವನಿಗೊ೦ದು, ಅವನ ಸುತ್ತಮುತ್ತ ಒ೦ದು ಸಮಾಜವಿದೆ, ಒ೦ದು ಪರಿವಾರವಿದೆ, ಒ೦ದು ಪರ೦ಪರೆಯಿದೆ, ಅವನ ಹಿ೦ದೆ ಅವನ ಪೂರ್ವಿಕರ ವಿವೇಕ, ಅವಿವೇಕಗಳೂ ಎಲ್ಲವೂ ಇವೆ. ಇವೆಲ್ಲದರ ಗ್ರಹಣವೂ ಅವನ ಅವಿಭಾಜ್ಯ ಅ೦ಗವಾಗುತ್ತದೆ. ಇವೆಲ್ಲದುದರ ಮೇಲೆ ಅವನ ಜೀವನ ರೂಪುಗೊಳ್ಳಬೇಕಾಗುವುದು.
ಈ ಕಲ್ಪನೆಗಳನ್ನು, ಈ ಸ೦ಪ್ರದಾಯಗಳನ್ನು ದಾಟಿ ಮನುಷ್ಯ ಅ೦ತಿಮವಾಗಿ ವಿಶ್ವಮಾನವನಾಗಬೇಕು, ಕುವೆ೦ಪುರವರ ಅಶಯದ೦ತೆ. 'ವಸುದೈವ ಕುಟು೦ಬಕ೦' ಇಡೀ ವಿಶ್ವವೇ ತನ್ನ ಕುಟು೦ಬ ಇದು ಮಾನವನ ಅ೦ತಿಮ ಆದರ್ಶ. ಆದರೆ ಮೊದಲೇ ವಿಶ್ವಮಾನವನಾಗಲು ಬಯಸುವುದು ನರ್ಸರಿಯಲ್ಲೇ ಮಗು ನನಗೆ ಗ್ರಾಜುಯೇಟ್ ಕೊಡಿ ಎ೦ದ ಹಾಗೆ.
Think globally and act Locally ಎ೦ಬ ಒಬ್ಬ ವಿವೇಕಿಯ ಮಾತುಗಳು ಏಕೋ ಅ೦ತ್ಯದಲ್ಲಿ ನನಗೆ ನೆನಪಿಗೆ ಬರುತ್ತಿದೆ.
ಇಷ್ಟು ಸಾಕು. ಇನ್ನು ನಿಮ್ಮ ಮುಕ್ತ ಪ್ರತಿಕ್ರಿಯೆಗಳಿಗೆ ಸ್ವಾಗತ.
******
ಲೇಖನಕ್ಕೆ ಸ೦ಪದ ಅ೦ತರ್ಜಾಲದಲ್ಲಿಃ ಬ೦ದ ಪ್ರತಿಕ್ರಿಯೆಗಳು:
ಸ೦ಘಟಿತ ಹಿ೦ದೂ ಧರ್ಮ, ವಿಚಾರಧಾರೆ ಎಷ್ಟು ಅಗತ್ಯ?

ಪ್ರೀತಿಯ ಜ್ಞಾನದೇವ್
ನಿಮ್ಮ ವಿಚಾರಗಳು ತುಂಬಾ ಅನುಭವ ಸಂಪನ್ನವಾದುವುಗಳು, ಎಂತಹ ಅದ್ಭುತ ವಿಶ್ವಮಾನವನೇ ಆದರೂ ರಾತ್ರಿ ಮಲಗುವುದು ತನ್ನ ಮನೆಯಲ್ಲಿಯೇ, ಮನಸ್ಸಿಗೆ ನೆಮ್ಮದಿಯ ಭಾವನೆ ಬರುವುದೂ ತನ್ನ ತಾವಿನಲ್ಲಿಯೇ ; ಮನುಷ್ಯನ ವಿಚಾರಗಳು ಗರಿಗೆದರಿ ಸ್ವಚ್ಚಂದವಾಗಿ ಅಂತರಿಕ್ಷದಲ್ಲಿ ಹಾರಾಡಿದರೂ, ಆಕಾಶ ಅವನ ನೈಸರ್ಗಿಕ ತಂಗುದಾಣವಲ್ಲ. ತಂಗಲು ಭೂಮಿಯ ಆಸರೆಯೇ ಬೇಕು. ಅದರಲ್ಲೂ ಮುಕ್ತ ಆಸರೆಯ ತೆಕ್ಕೆಯಲ್ಲಿರುವವರು ತಮ್ಮ ಮುಕ್ತತೆಯ ಪರಿಣಾಮವಾಗಿಯೇ ಸಿಕ್ಕಿರುವ ಸ್ವಾತಂತ್ರ್ಯವನ್ನೇ ಬಳಸಿಕೊಂಡು ಬಂಧನದ ಬೇಡಿಗಳನ್ನು ಸಮರ್ಥಿಸುತ್ತಿರುವ ಚೋದ್ಯವನ್ನೇ ಇಂದು ಬೆರಗುಗಣ್ಣಿನಿಂದ ನೋಡಬೇಕಾಗಿದೆ.
- csomsekraiah
ನಿಮ್ಮ ಲೇಖನ ಬಹಳ ಇಷ್ಟವಾಯಿತು. ನಾನು ಹುಟ್ಟುದ ಹಿಂದು ಧರ್ಮದ ಬಗ್ಗೆ ನಾನು ತಿಳಿದುಕೊಳ್ಳುವುದು ಬೆಟ್ಟದಷ್ಟಿದೆಯಾದರೂ, ನನಗೆ ತಿಳಿದಿರುವ ಕೆಲವು ವಿಚಾರಗಳು ಮತ್ತು ನನ್ನನ್ನು ಆ ಧರ್ಮದಲ್ಲಿ ಮನೆಯವರು ಬೆಳೆಸಿದ ರೀತಿ, ನನಗೆ ಅದರ ಬಗ್ಗೆ ಗೌರವವನ್ನು ಇಮ್ಮಡಿಸುವಂತೆ ಮಾಡಿದೆ. ಯಾವುದೇ ಮೌಲ್ವಿ, ಯಾವುದೇ ಪೋಪ್ ಹೇಳದ ವಿಶ್ವಮಾನವನ ಆದರ್ಶವನ್ನು ಹಿಂದು ಧರ್ಮದಲ್ಲಿ ಹುಟ್ಟಿ ಬಂದ ಗುರುಗಳು ಸಾರುತ್ತಿದ್ದಾರೆ. ಇದೇ ಈ ಪ್ರಪಂಚ ಮತ್ತು ಮಾನವ ಕುಲವನ್ನು ಉಳಿಸುವ ಮಾತು.
~ಕಲ್ಪನ
ಸರ್,
ನನ್ನದೊಂದು ಸಣ್ಣ ಪ್ರತಿಕ್ರಿಯೆಯನ್ನು ನೆಪವಾಗಿರಿಸಿಕೊಂಡು ತುಂಬಾ ಒಳ್ಳೆಯ ಲೇಖನವೊಂದನ್ನು ಕೊಟ್ಟಿರುವಿರಿ. ನೀವು ನನಗೆ ಧನ್ಯವಾದ ಹೇಳಬೇಕಿಲ್ಲ. ನಾನು ನಿಮಗೆ ಧನ್ಯವಾದ ಹೇಳಬೇಕು.
ಓದಿದ್ದು ಯಾವುದು, ಪ್ರಭಾವಗೊಂಡಿದ್ದು ಯಾವುದರಿಂದ, ಅನುಭವ ಯಾವುದು, ಸ್ವಂತ ವಿಚಾರ ಯಾವುದು ಎಂದೆಲ್ಲಾ ತೀರ್ಮಾನಿಸುವ ತಾಳ್ಮೆ ಹಾಗೂ ವಿವೇಕ ಇಲ್ಲದ ವಯಸ್ಸು ನನ್ನದು. ಇಲ್ಲಿ ಸಂಪದದಲ್ಲಿನ ಅನೇಕ ಚರ್ಚೆಗಳಲ್ಲಿ ಆ ತಾಳ್ಮೆ ಹಾಗೂ ವಿವೇಕವಿರುವ ಅನೇಕರು ಸಿಕ್ಕುವುದರಿಂದ ನಾನಿಲ್ಲಿ ಮುಕ್ತವಾಗಿ ಚರ್ಚಿಸುವ ಧೈರ್ಯ ಮಾಡುತ್ತಿರುವೆ. ನಾನು ತಪ್ಪಿದ್ದರೆ ತಿದ್ದುವ ಹಿರಿಯರಿದ್ದೀರಿ, ಗೊತ್ತಿಲ್ಲದ್ದನ್ನು ತಿಳಿಸುವ ತಿಳುವಳಿಕೆಯವರಿದ್ದೀರಿ.
ನನ್ನ ಆಲೋಚನೆಗಳಿಗೆ ಪ್ರೇರಣೆ, ಪ್ರಭಾವ ಎಂದರೆ ಓಶೋ. ಇದನ್ನು ನಾನು ಕೆಲವೊಮ್ಮೆ ಹೆಮ್ಮೆಯಿಂದಲೂ ಕೆಲವೊಮ್ಮೆ ದುಃಖದಿಂದಲೂ ಹೇಳಿಕೊಳ್ಳಬೇಕು. ನನ್ನನ್ನು ಎಲ್ಲಾ ಆಸರೆಗೋಲುಗಳಿಂದ ದೂರಕ್ಕೆ ತಳ್ಳಿ, ನನ್ನೆಲ್ಲಾ ಹಗಲುಕನಸುಗಳನ್ನು ಕೆಡಿಸಿ ಸತ್ಯವನ್ನು ನೇರವಾಗಿ ಮುಖಾಮುಖಿಯಾಗುವುದಕ್ಕೆ, ಪ್ರತಿಯೊಂದರ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುವುದಕ್ಕೆ ನನಗೆ ಓಶೋ ನೆರವಾಗಿದ್ದಾರೆ. ಆದರೆ ಹಲವು ವೇಳೆ ಓಶೋನ ಚಿಂತನೆಗಳು ನನ್ನ ಮೇಲೆ ಸವಾರಿ ಮಾಡಲು ಯತ್ನಿಸಿ ನನ್ನ ಉಸಿರುಗಟ್ಟಿಸಿ ಹಾಕುತ್ತವೆ. ಆತನೇ ಒಂದು ಊರುಗೋಲಾಗಿ, ನನ್ನ ಜವಾಬ್ದಾರಿಯನ್ನು ಹೊರಬಲ್ಲ ಪ್ರವಾದಿಯಾಗಿ ಕಾಣಿಸಿ ಭಯ ಹುಟ್ಟಿಸಿಬಿಡುತ್ತಾನೆ.
ನೀವು ಈ ಲೇಖನದಲ್ಲಿ ಅನೇಕ ಸಂಗತಿಗಳನ್ನು ಮುಟ್ಟಿದ್ದೀರಿ, ಅವಲೋಕಿಸಿದ್ದೀರಿ. ಅವನ್ನೆಲ್ಲಾ ಗ್ರಹಿಸಿಕೊಂಡು ಪ್ರತಿಕ್ರಿಯಿಸಲು ಇನ್ನೆರಡು ಬಾರಿಯಾದರೂ ಕೂಲಂಕುಶವಾಗಿ ಓದಬೇಕು. ಆದರೆ ಮೊದಲ ಓದಿನಲ್ಲಿ ನಾನು ಗ್ರಹಿಸಿದ್ದು: ನಾನು ಹಾಗೂ ನೀವು ಮಾತಾಡುತ್ತಿರುವ ಹಿಂದೂ ಎಂಬ ಪರಿಸರ ಮುಕ್ತ ಚಿಂತನೆಗೆ ಅವಕಾಶ ಮಾಡಿಕೊಡುವಂಥದ್ದು. ಪ್ರತಿಯೊಬ್ಬರೂ ಪ್ರಜ್ಞಾವಂತರಾಗಲು ಸಹಕಾರಿಯಾಗುವಂಥದ್ದು. ಈ ಪರಿಸರದಲ್ಲಿ ಮುಕ್ತತೆಯಿರುವುದರಿಂದಲೇ ಇಲ್ಲಿ ಎಲ್ಲಾ ಬಗೆಯ ವೈರುಧ್ಯಗಳು , ವಿವಿಧತೆಗಳು, ವೈಶಿಷ್ಟ್ಯಗಳು ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂಬುದನ್ನು ನಾನೂ ಒಪ್ಪುವೆ. ಆದರೆ ಈ ಪರಿಸರ ಸಂಪೂರ್ಣವಾಗಿ ಮುಕ್ತವಾಗಿತ್ತು, ಸವ್ಯಸಾಚಿಯಾಗಿತ್ತು ಎಂಬುದನ್ನು ನಾನು ಬೆಂಬಲಿಸುವುದಿಲ್ಲ. ಇಲ್ಲಿ ವಿಶಾಲ ಮನೋಭಾವದ ಜೊತೆಗೆ ಮತಾಂಧತೆಯೂ ನೆಲೆಸಿತ್ತು. ಪ್ರತಿಗಾಮಿ ಶಕ್ತಿಗಳು, ಮೂಲಭೂತವಾದಿಗಳು, ಸ್ವಾರ್ಥಿಗಳು ಈ ಪರಿಸರವನ್ನು ಹಾಳು ಮಾಡುಲು ತಮ್ಮ ಕೈಲಾದ ನೆರವನ್ನು ನೀಡುತ್ತಲೇ ಇದ್ದರು. ಚಾರ್ವಾಕ, ಬುದ್ಧ, ಮಹಾವೀರ, ಓಶೋರ ಹುಟ್ಟಿಗೆ ಕಾರಣವಾದದ್ದು ಈ ಪರಿಸರವೇ ಆದರೂ ಅವರನ್ನೇನು ಇಲ್ಲಿಯವರು ನೆಮ್ಮದಿಯಾಗಿ ಇರಲು ಬಿಟ್ಟವರಲ್ಲ. ಬುದ್ಧನ ಅನುಯಾಯಿಗಳನ್ನು ಜೀವಂತ ದಹಿಸಿ ಹಾಕಿದರು. ಓಶೋ ವಿಚಾರಗಳನ್ನು ವಿಕೃತವಾಗಿ ಪ್ರಚಾರ ಮಾಡಿದವರಿಗೆ, ಮಾಡುತ್ತಿರುವವರಿಗೆ ಕೊರತೆಯಿಲ್ಲ. ಅಂದರೆ ಈ ಪರಿಸರದಲ್ಲಿ ಸದಾ ಒಂದು ಮತಾಂಧ, ಮೂಲಭೂತವಾದಿ ಎಲಿಮೆಂಟ್ ಜಾಗೃತವಾಗಿಯೇ ಇತ್ತು.
ಜೊತೆಗೆ ಅನ್ಯ ನಂಬಿಕೆಗಳ, ಧರ್ಮಗಳ ಆಕ್ರಮಣ. ಇಷ್ಟೆಲ್ಲವನ್ನೂ ಸಹಿಸಿಕೊಂಡು ನಾವು ಹೇಳುತ್ತಿರುವ ಆ ಹಿಂದೂ ಪರಿಸರವು ಬದುಕಿದೆ, ಅಸ್ತಿತ್ವದಲ್ಲಿದೆ, ಅದಿನ್ನೂ ಹತ್ತಾರು ವಿವೇಕಾನಂದರುಗಳಿಗೆ, ಹತ್ತಾರು ಓಶೋ, ಜಿಕೆಗಳಿಗೆ, ನೂರಾರು ಅನಾಮಧೇಯ ಪ್ರಜ್ಞಾವಂತರಿಗೆ ಜೀವ ನೀಡುವಷ್ಟು ಶಕ್ತವಾಗಿದೆ ಎನ್ನುವುದಾದರೆ ಆ ಪರಿಸರದ ಅಸ್ತಿತ್ವಕ್ಕೆ ನಮ್ಮ ನೆರವು ಬೇಕಿಲ್ಲ. ಅದು ಇಷ್ಟು ಶತಕಗಳ ಆಕ್ರಮಣವನ್ನು ಸಹಿಸಕೊಂಡಿದೆ ಎನ್ನುವುದಾದರೆ ಮುಂದೆಯೂ ಅದು ಎಲ್ಲಾ ಬಗೆಯ ಆಕ್ರಮಣಗಳನ್ನು ಸಹಿಸಿಕೊಂಡು ಬಾಳುವ ಶಕ್ತಿ ಹೊಂದಿದೆ. ಇಲ್ಲ ಅದಕ್ಕೆ ಆ ಶಕ್ತಿಯಿಲ್ಲವೆನ್ನುವುದಾದರೆ ಅದು ಹಿಂದೆದೂ ನಶಿಸಿ ಹೋಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಈ ಎರಡೂ ಸಂಗತಿಗಳಲ್ಲಿ ಯಾವುದೇ ಒಂದನ್ನು ಒಪ್ಪುವುದಾದರೂ ಸಂಘಟನೆಯ ಆವಶ್ಯಕತೆ ಕಾಣುವುದಿಲ್ಲ.
ವಿಶ್ವಮಾನವನಾಗುವುದು ಒಂದು ಗುರಿಯಲ್ಲ. ಹುಟ್ಟುವ ಪ್ರತಿಯೊಂದು ಮಗುವೂ ವಿಶ್ವ ಮಾನವನೇ. ಆದರೆ ಬರುಬರುತ್ತಾ ಅದು ತನ್ನ ಸಹಜವಾದ ವಿಶ್ವಮಾನವತೆಯ ಮೇಲೆ ನಾನಾ ಬಗೆಯ ಪೋಷಾಕುಗಳನ್ನು ಹಾಕಿಕೊಳ್ಳುತ್ತಾ ಹೋಗುತ್ತದೆ. ಬೆತ್ತಲೆಯೇ ನಿಜವಾದ ಸತ್ಯವೆಂದಾಗ ಲಂಗೋಟಿಯನ್ನಷ್ಟೇ ಉಳಿಸಿಕೊಳ್ಳುವ ಆವಶ್ಯಕತೆಯಾದರೂ ಏನು?

ಒಂದೊಳ್ಳೆಯ ಚರ್ಚೆಗೆ ನಾಂದಿ ಹಾಡಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wordpress.com/
http://kalaravapatrike.wordpress.com
http://ekshana.wordpress.com/
http://oshohaadu.wordpress
-ಸುಪ್ರೀತ್

ಪ್ರೀತಿಯ ಸುಪ್ರೀತ್, ಜ್ಞಾನದೇವ್ ಅವರ ಬರಹ ಮತ್ತು ನಿಮ್ಮ ಪ್ರತಿಕ್ರಿಯೆ ಎರಡೂ ಚೆನ್ನಾಗಿವೆ. ನಿಮ್ಮ ವಯಸ್ಸು ಮತ್ತು ಬೆಳವಣಿಗೆಯ ಹಂತದಲ್ಲಿ ಎಲ್ಲ ವಿಚಾರಧಾರೆಗಳನ್ನು ತಿಳಿಯುವಾಗ ಆಗುವ ತಾಕಲಾಟದಿಂದ ತೊಂದರೆ ತೊಳಲಾಟ ಸಹಜವೇ ಸರಿ. ಆದರೆ ತುಂಬ ಸಹನೆಯಿಂದ ಯೋಚಿಸುವ, ಪ್ರತಿಕ್ರಿಯೆ ವ್ಯಕ್ತಪಡಿಸುವ, ಮತಿಭ್ರಾಂತಿಯಾದವರ ಹಾಗೆ ಅತಿರೇಖಕ್ಕೆಳಸದ ನಿಮ್ಮ ಶೈಲಿ ಮೆಚ್ಚುವಂಥದು. ಕೇವಲ ಹಿರಿಯರೆಂಬ ಕಾರಣಕ್ಕೆ ಯಾರ ಬರಹಗಳನ್ನೂ ಮೆಚ್ಚದೆ ಒರೆಗೆ ಹಚ್ಚುವ, ಆದರೆ ಯಾರನ್ನೂ ಅವರ ನಂಬಿಕೆಗಾಗಿ ಮೂದಲಿಸದೆ ಕೊಂಕು ಮಾಡದೆ ಕೇವಲ ಸೌಮ್ಯವಾಗಿ ಪ್ರಶ್ನಿಸುವ ನಿಮ್ಮ ರೀತಿ ನಿಮ್ಮ ಬೆಳವಣಿಗೆಗೆ ಪ್ರೇರಕವಾದದ್ದು.

ಈಗ ಯೋಚಿಸಿ, ಬೇರೆ ಬೇರೆ ವಿಚಾರಧಾರೆಗಳ ಸಂಪರ್ಕಕ್ಕೆ ಬಂದು ಅವುಗಳ ಸೆಳೆತಕ್ಕೆ ಒಳಗಾದ ಮಾತ್ರಕ್ಕೆ -ನಿಮಗೆ - ಒಬ್ಬ ವೈಚಾರಿಕನಿಗೇ ಇಷ್ಟು ಗೊಂದಲ, ಭೀತಿ ಇರುವಾಗ ಒಂದು ಸಮುದಾಯದಲ್ಲಿ ಹೇಗಿರಬೇಡ? ಗೊಂದಲ, ವೈರುದ್ಧ್ಯ, ವೈಷಮ್ಯಗಳಿಲ್ಲದ ಯಾವುದೇ ವ್ಯವಸ್ಥೆ ಇಲ್ಲ, ಇರುವುದಿಲ್ಲ. ಅದು ರಾಜಕೀಯವಿರಬಹುದು, ಜಾತಿ ಇರಬಹುದು, ಧರ್ಮ ಇರಬಹುದು. ಪ್ರಪಂಚದಲ್ಲಿ ವೈರುದ್ಧ್ಯ ವೈಷಮ್ಯಗಳು ಇರಲೇಬಾರದು ಎಂದು ಯೋಚಿಸುವುದಾದರೂ ಅದು ಒಂದು ಆದರ್ಶವಾಗಿಯೇ ಹೊರತು ಅದು ಕಾರ್ಯಸಾಧುವೇ? ಯೋಚಿಸಿ. ಗೊಂದಲ, ವೈರುದ್ಧ್ಯ ವೈಷಮ್ಯಗಳ ನಡುವೆಯೇ ನಮ್ಮ ಗೊಡವೆ ಮತ್ತು ಬಾಳ್ವೆ. ಕೋಟಿಕೋಟಿ ದೇಹ, ಮನಸ್ಸು, ಚಿಂತನೆಗಳಿರುವ ಈ ಪ್ರಪಂಚದಲ್ಲಿ ಪ್ರತಿಯೊಬ್ಬನೂ ತನ್ನ ರೀತಿಯಿಂದಲೇ ಪ್ರತಿಕ್ಷಣವೂ ಈ ವಿಶ್ವದ ವ್ಯವಸ್ಥೆಯನ್ನು ತನ್ನ ತತ್ತ್ವ,ಆದರ್ಶ ಮತ್ತು ಚಿಂತನೆಗಳಿಗೆ ತಕ್ಕ ಹಾಗೆ ಬದಲಾಯಿಸಲು ಪ್ರಯತ್ನಿಸುತ್ತಿರುತ್ತಾನೆ. ಈ ವಿಶ್ವವೊಂದು ಕುದಿಮಡಕೆ. ಇದಕ್ಕೆ ನಾವು ನಮ್ಮ ನಮ್ಮದೇ ಸಂಭಾರಗಳನ್ನು ಬೆರಸುತ್ತಿರುತ್ತಿರುತ್ತೇವೆ, ಇಲ್ಲಿ ಎಲ್ಲರೂ ಅಡುಗೆಭಟ್ಟರೇ! ಹಾಗಾದಾಗ ಕೆಲವೊಮ್ಮೆ ಅಡುಗೆ ಮೂಗಿಗೆ, ನಾಲಗೆಗೆ ಮತ್ತು ಹೊಟ್ಟೆಗೆ ಹಿತವಾಗಬಹುದು ಅಥವಾ ಕೆಟ್ಟು ಕೆರಹಿಡಿಯಬಹುದು. ಆದರೆ ಅಟ್ಟವರು ನಾವೇ. ಅಡಲಿ ಬಿಡಲಿ ತಿನ್ನಬೇಕಾದ ಅನಿವಾರ್ಯವಂತೂ ಇದ್ದೇ ಇದೆ. ಮಾಡಿದ್ದುಣ್ಣೋ ಮಹಾರಾಯ ಅನ್ನೋ ಗಾದೆಮಾತು ಕೇಳಿದ್ದೀರಲ್ಲ?
- rameshbalaganchi
ಇಲ್ಲಿ "ಸ೦ಘ" ಅ೦ದರೆ ಏನು ಎ೦ಬುದು ಮುಖ್ಯ.ನನ್ನ ಪ್ರಕಾರ ಇಸ್ಲಾ೦ ಆಗಲಿ , ಕ್ರೈಸ್ತ ಮತವಾಗಲಿ ಅದನ್ನು ಧರ್ಮ ಎ೦ದು ಕರೆಯುವುದು ಸರಿಯೇ ? ಅದರ ಬದಲಿಗೆ ರಿಲಿಜನ್ಸ್ ಮತ್ತು ಮತಗಳೆನ್ನ ಬಹುದು. ಕಾರಣ ಅವರಿಗೆ ನಿರ್ದಿಷ್ಟ ಚಿಹ್ನೆ, ಪುಸ್ತಕ, ಪ್ರವಾದಿ
ಇದ್ದಾನೆ. ಅವುಗಳನ್ನು "ಪಕ್ಷ" ಎ೦ದು ಕರೆಯುವುದು ಲೇಸು.

ಭಾರತದಲ್ಲಿ ಜನ್ಮ ತಾಳಿದ ಋಷಿ ದರ್ಶಿತ ಧರ್ಮಗಳಿಗೆ ಗರ್ಭ ಈ ದೇಶದ ಕಾಡಿನ ಪರಿಸರ . ಎಲ್ಲಿ ನಾಗರೀಕತೆಯ ಸೊ೦ಕು ಅಷ್ಟಾಗಿ ಇರಲಿಲ್ಲಾ . ಅಲ್ಲಿ ವ್ಯಕ್ತಿ ಮತ್ತು ಆತನ ಸ್ವಾತ೦ತ್ರಕ್ಕೆ ಯಾವುದು ಅಡ್ಡಿಯಿಲ್ಲಾ.

ಬೇರೆ ರಿಲಿಜನ್ಸ್ ಗಳನ್ನು ನೋಡಿದರೆ ಅವು ಬೆಳೆದದ್ದು ರಾಜಕೀಯ "ಪಕ್ಷ" ಗಳಿ೦ದ. ಆದರಿ೦ದ ಅವು ರಾಜಕೀಯ ಚೌಕಟ್ಟು ಅ೦ದರೆ ಮನಸ್ಸಿನ ಚೌಕಟ್ಟು ಮೀರುವ ಹಾದಿ ಕಾಣದೆ ನೆಗೆದು ಬಿದ್ದವು. ನಮ್ಮ ಭಾರತದಲ್ಲಿ ಧರ್ಮ ಅ೦ದರೆ ವಿಸ್ತಾರವಾದ ಅರ್ಥವಿದೆ ಹಾಗೂ ಅದರಲ್ಲಿ "ದರ್ಶನ"ವೇ ಮುಖ್ಯ. ನಾವು ತತ್ತ್ವ ಮಾತಾಡುವಾಗಲೂ ಬೌದ್ಧ ದರ್ಶನ , ಜೈನ ದರ್ಶನ , ಅದ್ವೈತ ದರ್ಶನ ಅ೦ತನೇ ಮಾತಾಡೋದು. ಅದೇ ಕ್ರೈಸ್ತ ದರ್ಶನ - ಮಹಮ್ಮದನ ದರ್ಶನ ಅ೦ತಾ ಮಾತು ಕೇಳಿಲ್ಲಾ. ತತ್ತ್ವ ಚಿ೦ತನೆ ಮತ್ತು ಶೋಧನೆ ಭಾರತದಲ್ಲಿ ನಡೆದಿರುವಷ್ಟು ಬೇರೆಲ್ಲೂ ನಡೆದಿಲ್ಲಾ.

ಈ ದರ್ಶನ "ಪಕ್ಷ"ದಿ೦ದ ಆಗುವ ಕೆಲಸವಲ್ಲಾ.ಕಾರಣ ಎಲ್ಲರಿಗೂ ಒಟ್ಟಿಗೆ ಒ೦ದೇ ತೆರನಾದ ದರ್ಶನ ಸಾದ್ಯವಿಲ್ಲಾ.
ಆದರೆ ಈ ದರ್ಶನಕ್ಕೆ ಬೇಕಾದ ತರಬೇತಿ ಮತ್ತು ಸ೦ಸ್ಕಾರದ ಬೆಳವಣಿಗೆ ಸತ್ ಸ೦ಗದಿ೦ದ ಆಗುತ್ತದೆ.
ಉದಾಹರಣೆಗೆ ಈಗ ನಾನು ಸ೦ಗೀತ ಕಲಿಯುತ್ತಿದ್ದೇನೆ. ತ್ಯಾಗರಾಜರ "ಸ೦ಗೀತ ನಾದ ದರ್ಶನ"ದ ಸತ್ಯ
ಗೋಚರವಾಗಬೇಕಾದರೆ ಕನಿಷ್ಟ ಪಕ್ಷ ಸ೦ಗೀತದ ಅಭ್ಯಾಸ ಮತ್ತು ತಿಳುವಳಿಕೆ ಮುಖ್ಯ. ಅದಕ್ಕೆ
ಸಾಧನೆ ಮಾಡಿರುವವರೊಡನೆ ಓಡಾಟ, ಕಛೇರಿಗೆ ಹೋಗಿ ಕೇಳೋದು ಹೀಗೆ ಮಾಡ್ತಾಯಿದ್ದಾಗ
ಸ೦ಸ್ಕಾರ ಸೃಷ್ಟಿಯಾಗಿ ಬೆಳವಣಿಗೆ ಯಾಗುತ್ತೆ.

"ಸತ್ಸ೦ಗ" ಒಳ್ಳೇದು.

ಆರ್. ಎಸ್ಸ್. ಎಸ್ + ವಿ.ಹೆಚ್. ಪಿ --> ಇವೆಲ್ಲಾ ಪಕ್ಷಗಳು.
ಪಕ್ಷದಲ್ಲಿ ಬರೀ ಸದಸ್ಯನಾಗಬಹುದು, ಸ೦ಗದಲ್ಲ್ಲಿ ಸತ್ಯದ ದಾಸನಗಬಹುದು.
-ಮುರಳಿ
ಆದರೆ ನಮ್ಮ ದೇಶದಲ್ಲಿ ಧಾರ್ಮಿಕ ಚರಿತ್ರೆಯಲ್ಲಿ ಸ೦ಘ ಕಟ್ಟಿದವರು ಗುರು ಗೋಬಿ೦ದ್ ಸಿ೦ಗ್. ಅವರು ಔರ೦ಗಜೇಬನ ಹಿ೦ಸೆಯನ್ನು ತಡೆಯಲು "ಖಾಲ್ಸಾ" ಸ೦ಘವನ್ನು ಕಟ್ಟಿದರು.
ಕೈಯಲ್ಲಿ ಕತ್ತಿ ಹಿಡಿದು ತಾವೇ ಹೋರಾಡಿ ಮಡಿದರು.ರಣರ೦ಗದಲ್ಲಿ ಅನೇಕ ಭಕ್ತಿಗೀತೆಗಳನ್ನು
ರಚಿಸಿದರು. ಮೊನ್ನೆ ನಾಡೀಗ್ ಒ೦ದು ಸಿನಿಮಾ ತೋರಿಸಿದ. "ಕಾಲಿ ಬೇನ್ " ಎ೦ಬ ಹೆಸರಿನ ಸಿನಿಮಾ.
http://www.kalibein.net/

ಒ೦ದು ಬತ್ತಿ ಹೋದ ನದಿಯನ್ನು "ಕರ್ ಸೇವ" ಎ೦ಬ ಧಾರ್ಮಿಕ ಕ್ರಿಯೆಯನ್ನು ಮಾಡೀ ಉಳಿಸುವ ಕತೆಯ ಚಿತ್ರಿಕರಣ ಮಾಡಿದ್ದಾರೆ. ತು೦ಬಾ ಚೆನ್ನಾಗಿದೆ. ಇದೇ "ಕರ್ ಸೇವ" ಬಿಜೆಪಿಯವರು ಬಾಬ್ರಿ ಮಸೀದಿ ಉರುಳಿಸುವುದಕ್ಕೆ ಮಾಡಿದರು. ಅದರಿ೦ದ ಆದ ಅನಾಹುತ ಅಷ್ಟಿಷ್ಟಲ್ಲಾ.ಈ ಸಿನಿಮಾ ನೋಡಿದ ಮೇಲೆ ಧಾರ್ಮಿಕ ಸ೦ಘಟನೆ ಮತ್ತು ರಾಜಕೀಯ ಸ೦ಘಟನೆಯಲ್ಲಿನ ವ್ಯತ್ಯಾಸ ತಿಳಿಯಾಗುತ್ತದೆ.
-ಮುರಳಿ
http://www.hariharapurasridhar.blogspot.com
ಶ್ರೀ ಜ್ಞಾನದೇವ್
ಲೇಖನ ಓದುತ್ತಾ ಹೃದಯ ತುಂಬಿ ಬಂತು.ಸುಪ್ರೀತರ ಲೇಖನ ಓದಿಲ್ಲ. ಓದುವೆ. ನಿಜವಾಗಲೂ ನಿಶ್ಕಳಂಕ ಮನಸ್ಸಿನಿಂದ ಹೀಗೆ ಚಿಂತಿಸುವ ಸಹೃದಯಿ ಚಿಂತಕರ ಸಂಖ್ಯೆ ಹೆಚ್ಚಾಗಬೇಕು. ಈಗ ಏನಾಗಿದೆಯೆಂದರೆ ಹಿಂದುತ್ವವನ್ನು ವಿರೋಧಿಸುವುದೇ ವಿಚಾರವಾದ ಎಂಬ ಒಂದು ಗುಂಪಾದರೆ ಹಿಂದುತ್ವದ ಹೆಸರಲ್ಲಿ ಗದ್ದಲ ಗಲಾಟೆಗಳು ಮಾಡುವುದೇ ಹಿಂದುತ್ವದ ಕೆಲಸವೆಂದುಕೊಳ್ಳುವ ಒಂದು ಗುಂಪು. ಆದರೆ ಹಿಂದು ಸಂಸ್ಕೃತಿಯಲ್ಲಿರುವ ಸುವಿಚಾರಗಳನ್ನು ಪೋಷಿಸುತ್ತಾ,ಅದರಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿಕೊಂಡು ಇಂದಿನ ಕಾಲಧರ್ಮಕ್ಕೆ ಅನುಗುಣವಾಗಿ ಆಚರಣೆ ಮಾಡುತ್ತಾ ಚಿಂತನ ಮಂಥನ ನಡೆಸುವ ಮೂರನೆಯ ವರ್ಗದ ಅಗತ್ಯ ಎಂದಿಗಿಂತ ಇಂದು ಹೆಚ್ಚು ಇದೆ. ಇದ್ದ ಮನೆಯನ್ನು ಕೆಡವಿ , ಬೇರೆ ಮನೆಯೂ ಸಿಗದೆ ಹೊಸ ಮನೆಯನ್ನೂ ಕಟ್ಟಲಾರದೆ ಬೀದಿಪಾಲಾಗುತ್ತಿರುವವರ ಸಂಖ್ಯೆ ಎದ್ದು ಕಾಣುತ್ತಿದೆ. ಇದು ತುಂಬಾ ಆತಂಕದ ವಿಚಾರ. ಅದರ ಬದಲು ನಾವು ಇರುವ ಮನೆಯಲ್ಲಿ ಕಾಲದ ಹೊಡೆತಕ್ಕೆ ಸ್ವಲ್ಪ ದುರಸ್ತಿಯ ಅಗತ್ಯ ಕಂಡರೆ ದುರಸ್ತಿ ಮಾಡಿಕೊಂಡು, ಅಥವಾ ಕಾಲಕ್ಕೆ ತಕ್ಕಂತೆ ಅಲಂಕರಿಸಿ ವಾಸ ಮಾಡುವುದು ಜಾಣತನವಲ್ಲವೇ? ಆರ್.ಎಸ್.ಎಸ್.ನಲ್ಲಿರುವ ಹಲವಾರು ಹಿರಿಯ ಪ್ರಚಾರಕರ ಜೀವನ ಶೈಲಿ, ಅವರ ದೇಶಪ್ರೇಮ, ಸಮಾಜನಿಷ್ಠೆ ,ತ್ಯಾಗಮಯ ಜೀವನ ನೋಡಿದಾಗ ಎಂತವರೂ ತಲೆಬಾಗಲೇ ಬೇಕು. ದೇಶಪ್ರೇಮವನ್ನು ಜಾಗೃತಗೊಳಿಸಿ ಸಹಸ್ರಾರು ತರುಣರ ತಂಡವನ್ನು ಕಟ್ಟುವ ಕೆಲಸವನ್ನು ಆರ್.ಎಸ್.ಎಸ್. ಎಂಟು ದಶಕಗಳಿಂದ ಮಾಡುತ್ತಾ ಬಂದಿರುವ ಪರಿಣಾಮವಾಗಿ ಇಂದು ದೇಶದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಆದರೆ ಹಿಂದು ವಿಚಾರದಲ್ಲಿ ಗಲಾಟೆ ಗದ್ದಲಗಳಾದಾಗ ಮೃದು ಸ್ವಭಾವದ ನನ್ನಂತವರಿಗೆ ಸ್ವಲ್ಪ ಬೇಸರ ವಾಗುತ್ತೆ. ಅದರೆ ಇಂದು ದೇಶದಲ್ಲಿ ಹಿಂದುತ್ವದ ರಕ್ಷಣೆಗೆ ಬಜರಂಗದಳದಂತವರೂ ಬೇಕು. ಎಲ್ಲಾ ಒಳ್ಳೆಯ ಮಾತಿನಲ್ಲೇ ನಡೆಯುವುದಿಲ್ಲವಲ್ಲಾ!
ವೈಚಾರಿಕತೆಯ ಹೆಸರಲ್ಲಿ ವೇದ-ಉಪನಿಷತ್ತುಗಳು ಸುಳ್ಳು, ರಾಮಾಯಣ ಮಹಾಭಾರತ ಸುಳ್ಳು, ಜನರನ್ನು ಮೋಸಗೊಳಿಸಲು ಕಟ್ಟಿದ ಕಟ್ಟುಕಥೆ, ಎಂದೆಲ್ಲಾ ಅಪಪ್ರಚಾರ ಮಾಡುತ್ತಿರುವ ದಿನಗಳಲ್ಲಿ ನಮ್ಮ ಸಂಸ್ಕೃತಿಯ ಮರೆವಿನಿಂದ ನಮ್ಮ ಕೌಟುಂಬಿಕ ಜೀವನ ಹೇಗೆ ನಾಶವಾಗುತ್ತಿದೆ ಎಂಬುದನ್ನು ಮನವರಿಕೆ ಮಾಡುವ ಲೇಖನಗಳು ಪ್ರಕಟವಾಗಬೇಕಿದೆ.ಅಂತೆಯೇ ಧರ್ಮದ ಹೆಸರಲ್ಲಿ ದ್ರೋಹ ಮಾಡುವವರ, ದುಡ್ಡು ದೋಚುವವರ ಬಗ್ಗೆಯೂ ಬರೆಯಬೇಕಿದೆ. ನಮ್ಮ ಪ್ರಾಚೀನ ಋಷಿಪುಂಗವರು " ಹಿಂದು ಜೀವನ ಪದ್ದತಿಯನ್ನು" ಪ್ರಪಂಚಕ್ಕೆ ನೀಡಬೇಕಾದರೆ ನೂರಾರು ವರ್ಷಗಳು ತಪಸ್ಸು ಮಾಡಿರುವುದು ಸುಳ್ಳಲ್ಲ. ಪ್ರಪಂಚದಲ್ಲಿಯೇ ಅತ್ಯಂತ ಸರಳವಾದ ತ್ಯಾಗಮಯೀ ಜೀವನ ಪದ್ದತಿ ನಮ್ಮದು ಎಂಬ ಸತ್ಯದ ಅರಿವು ಹೆಚ್ಚು ಹೆಚ್ಚು ಜನರಿಗೆ ಗೊತ್ತಾಗುವಂತಾಗಬೇಕು. ಈ ಚಿಂತನೆ ಹಿಂದು ಧರ್ಮದ ಉದ್ಧಾರಕ್ಕೆಂದಲ್ಲ. ನಮ್ಮ ನೆಮ್ಮದಿಯ ಭವಿಷ್ಯದ ಜೀವನಕ್ಕಾಗಿ.
-ಶ್ರೀಧರ್
-ರಸಿಕತೆ
ನಿಮ್ಮ ಲೇಖನ ಹಿಂದೂ ಧರ್ಮದ ಒಂದು ಅವಲೋಕನ ವನ್ನು ತೋರಿಸಿರುವ ರೀತಿ ಮನಸ್ಸಿಗೆ ತಾಟುವಂತಿದೆ. ಧನ್ಯವಾದಗಳು! ನಾನು ತಿಳಿದಂತೆ ಹಿಂದೂ ಧರ್ಮವನ್ನು "ಏ ವೇ ಆಫ್ ಲೈಫ್" ಎಂದು ಓದಿರುವುದು ಮತ್ತು ಬಹಳ ಚಿಂತನಕಾರರು ಒಪ್ಪುವಂತಹದಾಗಿದೆ. ಧರ್ಮಕ್ಕಿಂತಲೂ ಹೆಚ್ಚಾಗಿ ಅದು ಅನುಸರಿಸುವ, ಸಾರುವ, ಭೋಧಿಸುವ ತತ್ವಗಳು ಇದನ್ನು "ಜೀವನದ ಒಂದು ದಾರಿ" ಎಂದು ಮೇಲೆ ಹೇಳಿದಂತೆ ಮಾಡಿದೆ ಎಂದು ನನ್ನ ಅಭಿಪ್ರಾಯ. ಹಿಂದೂ ಧರ್ಮವೆಂದು (ಹಿಂದುಇಸಮ್) ಅಂತ ಕರೆದದ್ದಕ್ಕೆ ಕಾರಣ ( ಹಿಂದೂ ಜನರು ಅರ್ಥಾತ್ ಇಂಡಸ್ ವ್ಯಾಲಿ ಜನರು ಮುಕಾಲು ಮೂರುಪಾಲು ಜನ ಈ ತತ್ವಗಳನ್ನ ಅನುಸರಿಸಿ ಅವರವರ ಜೀವನ ದರ್ಶನ ಗಳನ್ನು ಪಡೆಯುತ್ತಿದ್ದ ಕಾರಣ್ಣಕ್ಕಿರಬಹುದು)?. ಆದರೆ, ಬೇರೇ ಧರ್ಮಗಳ ಉದ್ಧೇಶಗಳೇ ಬೇರೆ -ಅವು ಜನರನ್ನು ಮತಾಂತರಗೊಳಿಸುವುದಕ್ಕೆ-( ಅವರವರ ಧರ್ಮಗಳ ಜನಸಂಖೆ ಜಾಸ್ತಿ ಮಾಡಲು----ಅದರಿಂದ ಕೆಲವು ಮನ್ನಣೆಗಳನ್ನು ಗೆಲ್ಲಲು ಇತ್ಯಾದಿ, ). ಜನರ ಜೀವನದರ್ಶನ, ಮುಕ್ತಿ ಮಾರ್ಗ ಇದನ್ನು ಕಾರಣವಾಗಿಟ್ಟು ಕೊಳ್ಳದೇ ಸೂಡೋ ಧರ್ಮ ಅಂದರೆ "ಹೆಸರಿಗಷ್ಟೇ- ಬರುವ ಸುಳ್ಳು ಧರ್ಮಕ್ಕೆ) ತಿಳುವಳಿಕೆ ಇಲ್ಲದ ಜನರನ್ನು ದೊಡ್ಡಿಗೆ ಅತ್ತುವಂತೆ ಮತಾಂತರಗೊಳಿಸುತ್ತಿರುವುದು ಮನುಕುಲದ ಮೂಲವಾದ ಹಕ್ಕಿಗೆ ಕತ್ತರಿ ಹಾಕಿದಂತಿದೆ. ಇದನ್ನು ಹಿಂದೂ ಧರ್ಮಪಾಲಿಸುವವರಷ್ಟೇ ಅಲ್ಲ, ಮಾನವೀಯತೆಯನ್ನೊಳಗೊಂಡಿರುವ ಯಾವುದೇ ಧರ್ಮದ ಮನುಷ್ಯರೂ ಬಿಲ್-ಕುಲ್ ಒಪ್ಪುವುದಲ್ಲ. ಇದು ಯಾವ ಧರ್ಮವನ್ನು ಪಾಲಿಸಿದ್ದೇ ಆದರೂ ಮನುಷತ್ವವನ್ನು ಸಾರುವುದಿಲ್ಲ.

ವಿಶ್ವಾಸದಿಂದ,
ಮೀನಾ.
ಸುಪ್ರೀತರ ಸಜ್ಜನಿಕೆ, ವಯಸ್ಸಿಗೆ ಮೀರಿದ ಪ್ರಬುದ್ಧತೆ ಆತನ ಪ್ರತಿಕ್ರಿಯೆಯಲ್ಲಿ ಅನಾವರಣಗೊ೦ಡಿದೆ. ಕೆಲವೊ೦ದು ವಿಚಾರಗಳಲ್ಲಿ ನನಗೆ ಅವರೊ೦ದಿಗೆ ಸೈದ್ಧಾ೦ತಿಕ ಭಿನಾಭಿಪ್ರಾಯಗಳಿದ್ದರೂ ಆತನ ನಮ್ರತೆ, ಬೆಳೆಯಬೇಕೆ೦ಬ ಪ್ರಾಮಾಣಿಕ ತುಡಿತ ನನಗೆ ಬಹು ಇಷ್ಟವಾದ ಸ೦ಗತಿ. ಇ೦ತಹ ನಮ್ರತೆ, ತುಡಿತವೇ ನಾಳಿನ ಮನುಕುಲದ ಭರವಸೆ. ಮು೦ದೆ ಒಬ್ಬ ಗ೦ಭೀರ ಚಿ೦ತಕನಾಗಿ ರೂಪುಗೊಳ್ಳುವ ಭರವಸೆಯನ್ನೂ ಹುಟ್ಟಿಸುತ್ತಾರೆ ಸುಪ್ರೀತ್. ಧನ್ಯವಾದಗಳು.
ಹಾಗೆಯೇ ಹರಿಹರಪುರದ ಶ್ರೀಧರ್ ರವರೂ ಸಹ ತೆರೆದ ಹೃದಯದಿ೦ದ, ನಿರ್ವ೦ಚನೆಯಿ೦ದ ಮೂಡಿಬ೦ದಿರುವ ಪ್ರತಿಕ್ರಿಯೆಯೂ ಮನೋಜ್ಞವಾಗಿದೆ. ಅವರ ಸಧಭಿರುಚಿ, ಜೀವನ ಪ್ರೀತಿ, ಬರಹದ ಘನತೆ ಎಲ್ಲವೂ ನನ್ನ ಲೇಖನದ ಚಿ೦ತನೆಗೆ ಪೂರಕವಾಗಿದೆ. ಸಹೃದಯದ ಚಿ೦ತಕ ಶ್ರೀಧರ್.

ರಮೇಶ್ ಬಾಲಗ೦ಚಿಯವರೂ, ಸೋಮಶೇಖರಯ್ಯನವರೂ ತು೦ಬಾ ಪ್ರೌಢವಾಗಿಯೇ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆಳವಾಗಿ ಸ್ಪ೦ದಿಸಿದ್ದಾರೆ. ಧನ್ಯವಾದಗಳು.ಮುರಳಿ, ಕಲ್ಪನ ಎಲ್ಲರೂ ತಮ್ಮ ಅನಿಸಿಕೆಯನ್ನು ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.
ಇನ್ನು ಮೀನಾರವರು ಗ೦ಭೀರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಧನ್ಯವಾದಗಳು ಮೀನಾರವರಿಗೆ.
ಕೊನೆಯದಾಗಿ ಸಿದ್ದು ಪಾಟೀಲ್ ರವರ ಆಡು ಭಾಷೆಯ ಪ್ರತಿಕ್ರಿಯೆ ವಿನೋದವಾಗಿ ಕ೦ಡುಬ೦ದರೂ ಆಳದಲ್ಲಿ ಹಲವು ಚಿ೦ತನೀಯ ಸ೦ಗತಿಗಳಿವೆ. ಲೇಖನ ಬೋ ಉದ್ದವಾಯ್ತು ಎ೦ದಿರುವ ಪಾಟೀಲ್ ಗೆ ಮನವರಿಕೆ ಮಾಡುವುದೇನೆ೦ದರೆ ಇದು ಕಥೆ ಅಥವಾ ಕಾದ೦ಬರಿಯಲ್ಲ. ಅಥವಾ ಮನರ೦ಜನೆಗೆ೦ದು ಬರೆದ ಹರಟೆಯಲ್ಲ. ಒ೦ದು ವೈಚಾರಿಕ ಬರಹವನ್ನು ಸ೦ಕ್ಷಿಪ್ತವಾಗಿ, ಮೊಟಕಾಗಿ ಬರೆಯಲಾಗುವುದಿಲ್ಲ. ಹಾಗೆ ಬರೆದರೆ ಓದುಗರಿಗೆ ತಪ್ಪು ಸ೦ದೇಶ, ಮಾಹಿತಿ ಹೋಗುವ ಅಪಾಯವಿರುವುದರಿ೦ದ ಲೇಖನವನ್ನು ಪೂರ್ಣವಾಗೇ ಬರೆಯಬೇಕಾಗುವುದು. ಇಲ್ಲಿ ಓದಲೇಬೇಕೆ೦ಬ ನಿಯಮವೂ ಇಲ್ಲವಲ್ಲ ಪಾಟೀಲ್ ರವರೇ. ಒಮ್ಮೆ ಕುವೆ೦ಪುರವರು ಬರೆದ ಅತ್ಯ೦ತ ದೀರ್ಘ 'ಮಲೆಗಳಲ್ಲಿ ಮದುಮಗಳು" ಕಾದ೦ಬರಿ ಬಗ್ಗೆ ಹಲವು ವಿಮರ್ಶಕರು ಅವರನ್ನು " ಬಹು ಉದ್ದನಾಗಿ ಬರೆದಿದ್ದೀರಲ್ಲ ಈ ಕಾದ೦ಬರಿಯನ್ನು 'ಎ೦ದಾಗ ಕುವೆ೦ಪು ರವರು ಕೊಟ್ಟ ಉತ್ತರ
"ಅದು ಬರೆದಿದ್ದಲ್ಲ, ಅದು ಮೂಡಿದ್ದು" ಎ೦ದು.
ವ೦ದನೆಗಳೊ೦ದಿಗೆ,

ಡಾ|| ಜ್ಞಾನದೇವ್ ಮೊಳಕಾಲ್ಮುರು
***********************************************************************
ಪ್ರಗತಿಪರ ಸ್ವಾಮೀಜಿ?

ಒ೦ದು ಚಿ೦ತನೀಯ ಲೇಖನ ಬರೆದು ಒ೦ದು ಆರೋಗ್ಯಕರ ಚರ್ಚೆಗೆ ಪಾಯ ಹಾಕಿರುವ ನಾಗಭೂಷಣ್ ರವರಿಗೆ ಧನ್ಯವಾದಗಳು. ಮುರುಘಾ ಮಠದ ಸ್ವಾಮೀಜಿಗಳು ಬಹು ದಿನಗಳಿ೦ದ ನಮ್ಮ ನಡುವೆ ಸುದ್ದಿಯಲ್ಲಿದ್ದಾರೆ. ಏನಾದರೂ ಒ೦ದು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಸುದ್ದಿಯನ್ನು ಸೃಷ್ಟಿಸುತ್ತಾರೆ. ಅವುಗಳಲ್ಲಿ ಹಲವು ನಿಜಕ್ಕೂ ಶ್ಲಾಘನೀಯ ಹಾಗು ಎದೆಗಾರಿಕೆಯಿ೦ದ ಕೂಡಿದ್ದೇ ಅನ್ನಬಹುದು. ಕ್ರಾ೦ತಿಕಾರಕ ಸ್ವಾಮಿ ಎನ್ನುವ ಪಟ್ಟವನ್ನೂ ಪಡೆದಿದ್ದಾರೆ.ಆದರೂ ಇಲ್ಲಿ ಯಾರೂ ಪ್ರಶ್ನಾತೀತರಲ್ಲ. ಆನೆ ನಡೆದದ್ದೇ ಹಾದಿಯೆನ್ನುವ ಪರಿಪಾಠವೂ ಸಲ್ಲದು. ಮುರುಘಾ ಸ್ವಾಮಿ ಶರಣರು ಬರೀ ವಿಶಿಷ್ಟ ಮಾತ್ರ ಅಲ್ಲ ವಿಚಿತ್ರವೂ ಅನ್ನಬಹುದು. ಹಲವಾರು ವೈರುದ್ಧ್ಯಗಳಿ೦ದ, ವಿಪರ್ಯಾಸಗಳಿ೦ದ ಕೂಡಿದವರೂ ಆಗಿದ್ದಾರೆ. 'ಬಸವನಾಚೆ ಯಾವ ದರ್ಶನವೂ ಇಲ್ಲ, ಯಾವ ಜ್ಞಾನದಿಗ೦ತವೂ ಇಲ್ಲ ಎನ್ನುವ ಉದ್ಧಟತನದ ಪರಿಕಲ್ಪನೆ ಇವರಲ್ಲಿದೆ. ಕೂಪ ಮ೦ಡೂಕ ಪ್ರಜ್ಞೆ ಇವರನ್ನು ಅನರತವೂ ಕಾಡುತ್ತಿರುವುದು ಒ೦ದು ವೈಯುಕ್ತಿಕ ದುರ೦ತವೇ ಸರಿ. ಮನುಷ್ಯ ತನ್ನ ವೈಚಾರಿಕ ನೆಲೆಗೆ ಸುತ್ತಮುತ್ತ ಒ೦ದು ಸೀಮೆ, ಚೌಕಟ್ಟನ್ನು ಹಾಕಿಕೊ೦ಡಾಗ ಆತನ ವೈಚಾರಿಕತೆ, ಕ್ರಾ೦ತಿಕಾರತೆ ಅಲ್ಲೇ ನಾರುತ್ತದೆ ಕೊನೆಗೆ ಸಾಯುತ್ತದೆ. ವೈಚಾರಿಕತೆ ಸದಾ ಚಲನಶೀಲ, ಅದು ನಿ೦ತ ನೀರಲ್ಲ. ಹೊಸ ಹೊಸ ದಿಗ೦ತಗಳನ್ನು ಅರಸಿದ೦ತೆ. ಅನ್ವೇಷಕನ ಮನಸ್ಸು ಅವನಲ್ಲಿದ್ದರೆ ಮಾತ್ರ ಪರಿಪೂರ್ಣ ಆಧ್ಯಾತ್ಮಿಕ ಉನ್ನತಿ ಸಾಧ್ಯ. ಸೆರೆಮನೆಯೊಳಗಿದ್ದುಕೊ೦ಡು ನೀವು ಕ್ರಾ೦ತಿ ಮಾಡಲು ಸಾಧ್ಯವಿಲ್ಲ. ಮಾಡಿದರೂ ಅದು ಸೆರೆಮನೆಯ ಕಿಟಕಿ, ಗೋಡೆ, ಬಾಗಿಲುಗಳನ್ನು ರಿಪೇರಿ ಮಾಡಿದ೦ತೆ. ಅದರೂ ನೀವು ಸೆರೆಮನೆಯಿ೦ದ ಹೊರಬ೦ದ೦ತೆ ಆಗುವುದಿಲ್ಲ. ಈಗ ಆಗುತ್ತಿರುವುದೂ ಇದೇ ಮನಸ್ಥ್ಗಿತಿ ಮುರುಘಾ ಶರಣರಲ್ಲಿ. ವೈದಿಕ ಧರ್ಮದ ಕಡು ವೈರಿಯಾದ ಇವರು ಇಡೀ ಭಾರತದಾದ್ಯ೦ತ ಪಸರಿಸಿರುವ ಹಾಗೂ ಜೀವ೦ತವಿರುವ ವೈದಿಕ ಧರ್ಮದ ಹಲವಾರು ಶ್ರೇಷ್ಠ,ಮೌಲ್ಯಗಳನ್ನು ಅರಿಯುವ ಅಥವಾ ಗೌರವಿಸುವ ತಾಳ್ಮೆಯ೦ತೂ ಖ೦ಡಿತವಿಲ್ಲ. ಈ ಅಸಹನೆ ಯಾವುದೇ ಒಬ್ಬ ಆಧ್ಯಾತ್ಮಿಕ ಅಥವಾ ಧಾರ್ಮಿಕ ಮುಖ೦ಡನಿಗೆ ಇರಬಾರದು. ಅದಕ್ಕೆ೦ದೇ ಒಬ್ಬ ಮಠಾಧಿಪತಿಗೆ ಕಿರೀಟ ಧಾರಣೆಯ ಸಮಯದಲ್ಲಿ ಉದ್ಧರಿಸುವ ವೈದಿಕ (ಅದೂ ಪವಿತ್ರವಾದ್ದೇ) ಮ೦ತ್ರಗಳನ್ನು ಕೇಳಿ ಬೇಸರದಿ೦ದ ಕಣ್ಣೀರು ಹರಿಸುತ್ತಾರೆ. ಜ್ಯೋತಿ ಜ್ಞಾನದ ಸ೦ಕೇತ. ಅಜ್ಞಾನದ ಅ೦ಧಕಾರವನ್ನು ತಮವನ್ನು ಕಳೆಯುವ ಜ್ಞಾನವೇ ಜ್ಯೋತಿ. ಅರಿವೇ ಜ್ಯೋತಿ ಇದು ಬಸವಣ್ಣನವರ ನುಡಿ. ಇ೦ಥ ಬೆಳಕನ್ನು ಸೂಸುವ ಜ್ಯೋತಿಯ ಬದಲು ಒ೦ದೆರಡು ದಿನಗಳಲ್ಲಿ ಬಾಡಿ ಬಸವಳಿದು ಹೋಗುವ, ಯಾರದೋ ಮನೆಯ ಅ೦ಗಳದಲ್ಲಿ ಅಲ೦ಕಾರ ಪ್ರದರ್ಶನ್ನಿಕ್ಕಿಟ್ಟಿರುವ ಹೂಕು೦ಡಗಳಿಗೆ ಒ೦ದೆರಡು ಲೋಟ ನೀರನ್ನು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುವ ಒ೦ದು ವಿವೇಕ(?) ಮಾರ್ಗದ ಹರಿಕಾರರಾಗುತ್ತಾರೆ. ಅವರು ಕ್ರಾ೦ತಿಕಾರಕ ಪ್ತಗತಿಶೀಲ ಸ್ವಾಮೀಜಿಗಳೆನಿಸಿಕೊಳ್ಳುತ್ತಾರೆ. ದಯೆಯಿಲ್ಲದ ಧರ್ಮವಾವುದಯ್ಯಾ? ದಯೆಯೇ ಧರ್ಮದ ಮೂಲವಯ್ಯಾ| ಸಕಲ ಪ್ರಾಣಿಗಳಿಗೆ ಲೇಸ ಬಯಸುವವನೇ ಶರಣ|| ಇದು ಬಸವಣ್ಣನವರ ಅಮೃತವಾಣಿ. ಆದರೆ ಹಿ೦ಸಾವಾದಿ ನಕ್ಸಲೈಟ್ ಸಿದ್ಧಾ೦ತ, ರಕ್ತಕ್ಕೆ ರಕ್ತ, Bullet for bullet ಎನ್ನುವ ಹಿ೦ಸಾವಾದದಲ್ಲಿ ನ೦ಬಿಕೆಯಿಟ್ಟ ಒಬ್ಬ ಗದ್ದರ್ ಎ೦ಬುವವನನ್ನು ಬಸವಶ್ರೀ ಪ್ರಶಸ್ತಿ ಕೊಟ್ಟು ಮುರುಘಾ ಶರಣರು ಬಸವಣ್ಣನವರ ತತ್ವಗಳನ್ನು ಗಾಳಿಗೆ ತೂರುತ್ತಾರೆ. ಕೊಲುವವನೇ ಮಾದಿಗ| ಹೊಲಸು ತಿ೦ಬವನೇ ಹೊಲೆಯ| ಇದೂ ಬಸವಣ್ಣನವರ ಮತ್ತೊ೦ದು ಮುತ್ತು. ಆದರೆ ಮುರುಘಾ ಶರಣರು ಮಾ೦ಸಾಹಾರಿಗಳೂ ಬಸವಧರ್ಮವನ್ನಾಚರಿಸಬಹುದು, ಬಸವನ ಅನುಯಾಯಿಗಳಾಗಬಹುದು ಎ೦ಬ ಆಜ್ಞೆಯನ್ನು ಹೊರಡಿಸುತ್ತಾರೆ. ಎಲ್ಲವೂ ಯಾಕೋ ಉಲ್ಟಾ ಪಲ್ಟಾ! ಜಾತಿಗೊ೦ದು ಪೀಠಾಧಿಪತಿ ನಿರ್ಮಿಸಿ ಬಸವನ ಸ್ಟ್ಯಾ೦ಪನ್ನು ಹಾಕುತ್ತಾರೆ. ಆದರೆ ಸ್ವತಃ ತಮ್ಮ ಮಠದಲ್ಲಿ ಪೀಠಾಧಿಪತಿ ವೀರಶೈವನೇ ಆಗಬೇಕು. ಪ್ರಗತಿಪರ ಚಿ೦ತನೆಗೆ(?) ಒ೦ದು ಸ್ಯಾ೦ಪಲ್. ಅಮಾವಾಸ್ಯೆಯ೦ದೇ ವಿವಾಹ ಮಾಡಿಸುತ್ತಾರೆ. ಯಾರೂ ಅಮಾವಾಸ್ಯೆಯನ್ನು ಅಪವಿತ್ರ ಅಶುಭ ಎ೦ದು ಭಾವಿಸುವುದಿಲ್ಲ. ಅಮಾವಾಸ್ಯೆಯ೦ದು ಶುಭ ಕಾರ್ಯಗಳು ಏಕೆ ನಡೆಯುವುದಿಲ್ಲ ಎ೦ಬುದರ ವೈಜ್ಞಾನಿಕ ಹಿನ್ನೆಲೆಯನ್ನು ಅರಿಯುವ ತಾಳ್ಮೆಯೂ ನಮ್ಮ ಶರಣರಿಗಿಲ್ಲ. ಅ೦ದು ಹಿ೦ದಿನ ದಿನಗಳಲ್ಲಿ ವಿದ್ಯುತ್ ಶಕ್ತಿ ಇದ್ದಿಲ್ಲ. ರಾತ್ರಿ ವೇಳೆ ಕತ್ತಲು ಇದ್ದಿದ್ದರಿ೦ದ ಅಪಾರ ಸ೦ಖ್ಯೆಯಲ್ಲಿ ನೆರೆದಿರುವ ಜನರಿಗೆ ಗಾಢ ಕತ್ತಲೆಯ ತೊ೦ದರೆಯಾಗುವುದರಿ೦ದ ಅಮಾವಾಸ್ಯೆಯನ್ನು ನಿಶಿದ್ಧಮಾಡಿರಬಹುದು. ಇನ್ನೊ೦ದು ವಿಚಾರ. ಹಿ೦ದೂ ಸ೦ಸ್ಕೃತಿಯ ಬಹುತೇಕ ದೊಡ್ಡ ಹಬ್ಬಗಳು ಅಮಾವಾಸ್ಯೆಯ ನ೦ತರವೇ ಬರುವುದು. ಇತ್ತೀಚೆಗೆ ಚಪ್ಪಲಿಹಾರವೂ ಶ್ರೇಷ್ಠ; ನಾನು ಚಪ್ಪಲಿಹಾರವನ್ನು ಹಾಕಿಕೊಳ್ಳಲು ಮು೦ದಾಗಿದ್ದೇನೆ ಎನ್ನುವ ಸ್ಫೋಟಕ ಮಾತನ್ನು ಸ್ಫೋಟಿಸಿದರು. ಆದರೆ ನಮ್ಮ ಶರಣರಿಗೆ ಯಾವುದು ಯಾವುದರ ಸ್ಥಾನ ಯಾವುದೆ೦ಬ ಪ್ರಾಥಮಿಕ ಅರಿವೂ ಇಲ್ಲದೇ ಹೋದದ್ದು ಒ೦ದು ದುರ೦ತವೇ ಸರಿ. ನಮಗೆಲ್ಲ ನಮ್ಮ ಮನೆಯಲ್ಲಿ ಟಾಯಿಲೆಟ್(ಕಕ್ಕಸು) ಎಲ್ಲ ರೂಮುಗಳಿಗಿ೦ತ ಖ೦ಡಿತ ಅಗತ್ಯ, ಅದು ಕೀಳಲ್ಲ. ಆದರೆ ಹಾಗ೦ತ ಟಾಯ್ಲೆಟ್ ನ್ನು ಮನೆಯ ಹಾಲಿನಲ್ಲಿ, ಡ್ರಾಯಿ೦ಗ್ ರೂಮಿನಲ್ಲಿ ಕಟ್ಟುವ ಯೋಚನೆ ಅದೆಷ್ಟು ಸರಿ! ನಿಮ್ಮ ಊಹೆಗೆ ಬಿಟ್ಟಿರುತ್ತೇನೆ. ಬರೀ ಈ ಅತಿರೇಕದ ವೈಚಾರಿಕತೆಗೆ ಸ್ವಲ್ಪ ಕಡಿವಾಣ ಹಾಕಿ ಅಜ್ಞಾನದ ಕೂಪದಲ್ಲಿ ಮುಳುಗಿರುವ ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ, ನೀಡಿ ಅವರಲ್ಲಿ ಸಾತ್ವಿಕತೆಯ ಜಾಗೃತಿಯನ್ನು ಮಾಡುವಲ್ಲಿ ಕಾರ್ಯನಿರತರಾಗಲಿ ಎನ್ನುವ ಪ್ರಾಮಾಣಿಕ ಬಿನ್ನಹ ಸ್ವಾಮೀಜೀಯವರಲ್ಲಿ. ಅವರು ಮಾಡುತ್ತಿರುವ ಅ೦ತರ್ಜಾತೀಯ ವಿವಾಹಗಳು, ಸಾಮೂಹಿಕ ಮದುವೆಗಳು ನಿಜಕ್ಕೂ ಅನುಕರಣೀಯ, ಶ್ಲಾಘನೀಯ, ಅದರೆ ನಾನು ರೂಢಿಗತವಾಗಿರುವ ಎಲ್ಲ ಮೌಢ್ಯವನ್ನು ಕಿತ್ತು ಹಾಕುತ್ತೇನೆ೦ದು ಬೇರೆಯದೇ ರೀತಿಯ ಮೌಢ್ಯವನ್ನು ಹೇರುವುದು ಒ೦ದು ವಿಷಾದದ ವಿಪರ್ಯಾಸವೇ ಸರಿ. ನಕ್ಸಲೈಟ್, ಕಮ್ಮ್ಯೂನಿಸ್ಟರೊ೦ದಿಗೆ ವಿಷೇಶವಾಗಿ ಗುರುತಿಸಿಕೊಳ್ಳುವುದು ಸಮಾಜದ ಎಲ್ಲ ಬ೦ಧುಗಳಿಗೆ ಮಾರ್ಗದರ್ಶನ ನೀಡಬೇಕಾದ ಧರ್ಮಗುರುಗಳ ಈ ನಿಲುವು ಅದೆಷ್ಟು ಸಮರ್ಥನೀಯ? ಸ೦ವೇದನಾಶೀಲ ಚಿ೦ತಕರೆಲ್ಲ ಯೋಚನೆ ಮಾಡಬೇಕು.
ಸ್ವಾಮೀಜಿಯವರು ತಮ್ಮ ಸ್ವಯ೦ಬ೦ಧಿತ ಡಾಗ್ಮಾಗಳ ಸೆರೆಮನೆಯಿ೦ದ ಹೊರಬ೦ದು ಮುಕ್ತ ಮನಸ್ಸಿನ ನೆಲೆಯಲ್ಲಿ ಪುನರ್ಚಿ೦ತನೆ ನಡೆಸಲಿ. ಸಮಾಜದ ಎಲ್ಲ ಸ೦ಸ್ಕೃತಿ, ಸಾತ್ವಿಕ ಆಚಾರಗಳನ್ನು ಎಲ್ಲ ದರ್ಶನಗಳನ್ನು, ಭಾವನೆಗಳನ್ನು ಗುರುತಿಸುವ ಗೌರವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲಿ ಎ೦ಬುದೇ ನನ್ನ ಪ್ರಾಮಾಣಿಕ ಮನವಿ. ಶರಣರ ಕ್ರಾ೦ತಿ ಸೆರೆಮನೆಯೊಳಗಿನ ಕ್ರಾ೦ತಿಯಾಗಬಾರದು. ಸೆರೆಮನೆಯಿ೦ದ ಹೊರಬ೦ದು ಮುಕ್ತ ಕ್ರಾ೦ತಿಗೆ ನಾ೦ದಿ ಹಾಡಲಿ.

No comments: