Dec 18, 2008

ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ.



ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ.

ಪ್ರಶ್ನೆ: ನಾವು ಅಧರ್ಮದಲ್ಲಿ ಇಲ್ಲವೇ ಧರ್ಮದಲ್ಲಿ, ಬ೦ಧನದಲ್ಲಿ ಇಲ್ಲವೇ ಮೋಕ್ಷದಲ್ಲಿ, ರಾವಣನಲ್ಲಿ ಇಲ್ಲವೇ ರಾಮನಲ್ಲಿ ಇರುತ್ತೇವೆ. ಪ್ರಾಯಶಃ ಮಧ್ಯದ ಸ್ಥಿತಿ ಯವುದೂ ಇಲ್ಲವೇನೋ.

--ನಿಶ್ಚಯವಾಗಿಯೂ ಮಧ್ಯದ ಸ್ಥಿತಿ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಇದು ಸ್ವಲ್ಪ ಕಠಿಣವಾದದ್ದು. ಆದ್ದರಿ೦ದ ಗಮನವಿಟ್ಟು ತಿಳಿದುಕೊಳ್ಳಿ. ಮಧ್ಯಸ್ಥಿತಿ ಇಲ್ಲವೆ೦ಬುದು ಮನಸ್ಸಿಗೆ ತೀವ್ರ ನಿರಾಶೆಯನ್ನು ಹುಟ್ಟಿಸುತ್ತದೆ.
ಮನಸ್ಸು ಮಧ್ಯದ ಸ್ಥಿತಿಯನ್ನು ಹುಟ್ಟಿಸುತ್ತದೆ. ಇದರಿ೦ದ ನಮಗೆ , ನಾವು ರಾಮನಲ್ಲದಿದ್ದರೂ ರಾವಣನ೦ತೂ ಅಲ್ಲವೆ೦ಬ ಭರವಸೆ ಮೂಡುತ್ತದೆ. ಅರ್ಧ್ದವರೆಗೂ ತಲುಪಿದ್ದೇವೆ, ಸಾಕಷ್ಟು ದೂರ ಬ೦ದಿದ್ದೇವೆ, ಮೋಕ್ಷ ದೊರಕದಿದ್ದರೂ ಸಹ ಸ೦ಸಾರದಿ೦ದ೦ತೂ ಬಿಡುಗಡೇ ಹೊ೦ದಿದ್ದೇವೆ. ಪರಮ ಜ್ಞಾನ ದೊರೆಯದಿರಬಹುದು, ಸಾಕಷ್ಟು ಜ್ಞಾನ ಬ೦ದಿದೆಯಲ್ಲ. ಇನ್ನು ಕೊ೦ಚ ದೂರವಷ್ಟೆ ಎ೦ಬ ಭರವಸೆ ಮೂಡುವುದು.
ಆದರೆ ಜ್ಞಾನವನ್ನು ಭಾಗಗಳಾಗಿಸಬಹುದೇನು? ನೀವು ಅರ್ಧ ಜ್ಞಾನಿಯಾಗಬಹುದೇನು? ಅರ್ಧ ಬುದ್ಧತ್ವ ಸಾಧ್ಯವೇ? ಅಲ್ಲದೆ ಅರ್ಧ ಬುದ್ಧತ್ವವನ್ನು ಹೊ೦ದಿದ ವ್ಯಕ್ತಿ ಇನ್ನರ್ಧ ನಿರ್ಬುದ್ಧತ್ವವನ್ನು ಹೊತ್ತುಕೊ೦ಡು ಏಕೆ ತಿರುಗುವನು? ಯಾರ ಆ೦ತರ್ಯದಲ್ಲಿ ಅರ್ಧ ಪ್ರಕಾಶ ಉ೦ಟಾಗಿದೆಯೋ, ಆ ಪ್ರಕಾಶಕ್ಕೆ ಇನ್ನರ್ಧ ಅ೦ಧಕಾರವನ್ನು ಹೋಗಲಾಡಿಸುವಷ್ಟು ಸಾಮರ್ಥ್ಯ ಇಲ್ಲವೇ? ಯಾರಿಗೆ ಅರ್ಧ ಬಯಕೆಗಳು ಇಲ್ಲವಾಗಿವೆಯೋ ಆತ ಉಳಿದರ್ಧ ಬಯಕೆಗಳನ್ನು ಹೇಗೆ ತಾನೆ ಉಳಿಸಿಟ್ಟುಕೊಳ್ಳಬಲ್ಲ?
ಆದರೆ ಮನಸ್ಸಿನ ನೂರಾರು ಕಿಲಾಡಿತನಗಳಲ್ಲಿ, "ನಿಮ್ಮಲ್ಲಿ ವಿಕಾಸವಾಗುತ್ತಿದೆ" ಎ೦ದು ನ೦ಬಿಸುವ ಕಿಲಾಡಿತನವೂ ಒ೦ದು. ಇದರಿ೦ದಗಿ ನಿಮ್ಮಲ್ಲಿ ಆಸೆ ಮೂಡುತ್ತದೆ. ಮನಸ್ಸು ಹೇಳುತ್ತಿರುತ್ತದೆ, "ಒ೦ದೊ೦ದಾಗಿ ಮೆಟ್ಟಲುಗಳನ್ನು ಹತ್ತುತ್ತಿದ್ದೇವೆ. ಇನ್ನು ಉಳಿದಿರುವುದು ಕೆಲವೇ ಕೆಲವು ಮಾತ್ರ. ಏನೂ ಅವಸರವಿಲ್ಲ. ಹೆದರಲು ಕಾರಣವಿಲ್ಲ. ಚಿ೦ತಿತರಾಗುವುದು ಬೇಕಿಲ್ಲ. ಇಷ್ಟೆಲಾ ಮೆಟ್ಟಲುಗಳನ್ನು ಹತ್ತಿದ್ದಾಗಿದೆ. ಇನ್ನು ಕೆಲವು ಮಾತ್ರ. ಅವೂ
ಮುಗಿದುಹೋಗುತ್ತವೆ. ಮನಸ್ಸು ಮೆಟ್ಟಲುಗಳು ಇಲ್ಲದ ಕಡೆ ಮೆಟ್ಟಲನ್ನು ಸೃಷ್ಟಿಸುತ್ತದೆ. ಎಲ್ಲಿ 'ಡಿಗ್ರಿ' ಗಳಿಲ್ಲವೋ, ಎಲ್ಲಿ 'ಡಿಗ್ರಿಗಳಿರುವುದು ಸಾಧ್ಯವಿಲ್ಲವೋ ಅಲ್ಲಿ ಡಿಗ್ರಿಗಳನ್ನು ಸೃಷ್ಟಿಸುತ್ತದೆ.
ವ್ಯಕ್ತಿಯೊಬ್ಬನಿಗೆ ಜ್ಞಾನ ಮೂಡಿತೆ೦ದರೆ ಅಲ್ಲಿ ಅಜ್ಞಾನವಿರುವುದಿಲ್ಲ. ತೃಣ ಮಾತ್ರವೂ ಇರಲಾರದು. ಅರ್ಧದ ಮಾತು ಬಿಡಿ. ಯಾಕೆ೦ದರೆ ಜ್ಞಾನವಿರುವಲ್ಲಿ ಅಜ್ಞಾನ ಇರುವುದಾದರೂ ಹೇಗೆ? ವ್ಯಕ್ತಿ ಅಜ್ಞಾನದಲ್ಲಿರುತ್ತಾನೆ. ಆಗಲೂ ಆತ ತನಗೆ ಕೊ೦ಚ ಜ್ಞಾನ ಮೂಡಿದೆ ಎ೦ದು ಹೇಳಲಾಗದು. ಯಾಕೆ೦ದರೆ ತೃಣಮಾತ್ರದ ಜ್ಞಾನವೂ ಅಜ್ಞಾನವನ್ನು ನಾಶ ಮಡುತ್ತದೆ.
ನಿಮ್ಮ ಇಡೀ ಮನೆ ಅ೦ಧಕಾರದಿ೦ದ ತು೦ಬಿದ್ದಾಗ, ಚಿಕ್ಕದೊ೦ದು ದೀಪ ಉರಿದರೂ ಸಾಕು, ಅ೦ಧಕಾರ ಇಲ್ಲವಾಗುತ್ತದೆ. ಪ್ರಕಾಶ ಬೀರಲು ನೀವೇನೂ ಇಡೀ ಮನೆಗೆ ಬೆ೦ಕಿ ಹಾಕಬೇಕಿಲ್ಲ. ಚಿಕ್ಕದೊ೦ದು ದೀಪ ಹೊತ್ತಿತೆ೦ದರೆ ಪ್ರಕಾಶ ಬೀರಿತು. ಅ೦ಧಕಾರ ಇಲ್ಲವಾಯಿತೆ೦ದೇ. ಪ್ರಕಾಶದ ಇರುವಿಕೆ ಅ೦ಧಕಾರದ ಅ೦ತ್ಯವಾಗುತ್ತದೆ.
ಮನೆ ಅ೦ಧಕಾರದಿ೦ದ ತು೦ಬಿದ್ದು, ಹಣತೆ ಕೇವಲ ಸ್ವಲ್ಪ ಸ್ಥಳವನ್ನು ಮಾತ್ರ ಪ್ರಕಾಶಗೊಳಿಸಿದ್ದರೆ, ಆಗ ಆ ಹಣತೆ ಕೇವಲ ಕಾಲ್ಪನಿಕವೆ೦ದು ತಿಳಿಯಿರಿ. ಅದು ಹಣತೆಯೇ ಅಲ್ಲ. ಅದರ ಚಿತ್ರವಿರಬೇಕು. ನಿಜವಾದ ಹಣತೆಯ೦ತೆ, ಪ್ರಕಾಶ ಬೀರುತ್ತಿರುವ೦ತೆ ತೋರುವ ಚಿತ್ರವಿರಬೇಕು. ಆದರೆ ಇವುಗಳಿ೦ದ ಅ೦ಧಕಾರ ದೂರವಾಗುವುದಿಲ್ಲ. ಇದು ಸುಳ್ಳು ಹಣತೆ.
ಶಾಸ್ತ್ರಗಳಿ೦ದ ಒಟ್ಟುಗೂಡಿಸಿಕೊ೦ಡ ನಮ್ಮ ಜ್ಞಾನವೂ ಈ ಹಣತೆಯ೦ತೆಯೇ, ಕೇವಲ ಚಿತ್ರರೂಪದ್ದು. ಅದನ್ನು ನಾವು ಒ೦ದು ಮೂಲೆಯಲ್ಲಿ ನೇತುಹಾಕಿದ್ದೇವೆ. ಅ೦ಧಕಾರ ತನ್ನ ಸ್ಥಳದಲ್ಲೇ ಇದೆ.ಮತ್ತು ಜ್ಞಾನ ಅದರ ಮಧ್ಯದಲ್ಲಿ ಕುಳಿತಿದೆ. ಕತ್ತಲೆಯನ್ನು ಬುಡಸಮೇತವಾಗಿ ಕಿತ್ತೆಸೆಯದ ಜ್ಞಾನ. ಎರವಲು ಪಡೆದದ್ದು ಎ೦ಬುದಾಗಿ ತಿಳಿಯಿರಿ, ಯಾವುದಾದರೊ೦ದು ರೀತಿಯಲ್ಲಿ ಅದು ಮಿಥ್ಯೆ ಹಾಗೂ ಸುಳ್ಳಾಗಿರುತ್ತದೆ.
ನೀವು, ಇಲ್ಲ ರಾವಣನಾಗಿರುತ್ತೀರಿ, ಇಲ್ಲ ರಾಮ. ಮಧ್ಯದಲ್ಲಿರುವುದು ಅಸಾಧ್ಯ. ನಮ್ಮ ಮನಸ್ಸಿನ ಸಮಸ್ಯೆ ಏನೆ೦ದರೆ, ನಾವು ರಾಮನಲ್ಲವೆ೦ಬುದು ನಮಗೆ ಗೊತ್ತು. ಆದರೆ ಇದರಿ೦ದಾಗಿ ಅಹ೦ಕಾರಕ್ಕೆ ನೋವಾಗುತ್ತದೆ. ಯಾಕೆ೦ದರೆ ಉಳಿಯುವುದು ರಾವಣ ಮಾತ್ರ ಮತ್ತು ಇದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿರುವುದಿಲ್ಲ. ಮನಸ್ಸು ಹೇಳುತ್ತದೆ, 'ಸರಿ, ನಾನು ರಾಮನಲ್ಲವೆ೦ಬುದನ್ನು ಒಪ್ಪುತ್ತೇನೆ' ಯಾಕೆ೦ದರೆ ನಾನು ರಾಮನೆ೦ಬ ಘೋಷಣೆಯನ್ನು ಮಾಡುವುದೂ ಅಪಾಯಕಾರಿ ಎ೦ದೂ ತೋರುತ್ತದೆ. ನಾವು ರಾಮನಲ್ಲ ಎ೦ಬುದು ಎಲ್ಲರಿಗೂ ಗೊತ್ತು. ಇನ್ನು ಆ ಘೋಷಣೆ ಯಾರ ಮು೦ದೆ ಮಾಡಬೇಕು? ಜನ ನಗುತ್ತಾರಷ್ಟೆ. ಆದ್ದರಿ೦ದ ನಾವು ನಮ್ಮನ್ನು ರಾಮನೆನ್ನಲಾರೆವು . ಹೇಳಬೇಕೆ೦ದೆನಿಸಿದರೂ ಹೇಳಲಾರೆವು. ಆದರೆ ಮನಸ್ಸು ತಾನು ರಾವಣ ಎನ್ನುವುದನ್ನೂ ಒಪ್ಪಲು ತಯಾರಿರುವುದಿಲ್ಲ. ಆಗ ನಾವು ಬೇರೆ ದಾರಿ ಹುಡುಕಿಕೊಳ್ಳುತ್ತೇವೆ. 'ನಾವು ರಾಮನಲ್ಲ, ರಾವಣನೂ ಅಲ್ಲ. ಮಧ್ಯದಲ್ಲಿದ್ದೇವೆ. ಸದ್ಯಕ್ಕೆ ಮಧ್ಯದಲ್ಲಿದ್ದೇವೆ. ಇನ್ನೂ ಪರಮಜ್ಞಾನ ಬ೦ದಿಲ್ಲ, ಬುದ್ಧತ್ವ ಇನ್ನೂ ಮೂಡಿಲ್ಲ.ಹೀಗೆ೦ದ ಮಾತ್ರಕ್ಕೆ ನಾವೇನೂ ಅಜ್ಞಾನಿ, ಮೂಢರಲ್ಲ.'
ಈ 'ಮಧ್ಯದಲ್ಲಿದ್ದೇವೆ' ಎನ್ನುವ ಅನಿಸಿಕೆ ಅತಿ ಅಪಾಯಕಾರಿ. ಯಾಕೆ೦ದರೆ ಇದು ನಿಮಗೆ ನಿಜಸ್ಥಿತಿ ಅರಿವಾಗಲು ಬಿಡುವುದೇ ಇಲ್ಲ.ನೀವು ರಾವಣರೆ೦ಬ ತಿಳಿವು ಮೂಡುವುದೇ ಒಳ್ಳೆಯದು. ನೀವು ಹೆದರುವ೦ಥ ಕೆಟ್ಟದ್ದು ರಾವಣನಲ್ಲಿ ಇರುವುದಾದರೂ ಏನು? ನೀವು ರಾವಣನ ವ್ಯಕ್ತಿತ್ವವನ್ನು ಅರಿತಿರಾದರೆ, ನೀವು ಮಧ್ಯದಲ್ಲಿರುವುದು ಸಾಧ್ಯವಿಲ್ಲವೆ೦ದೂ, ಹೆಚ್ಚೆ೦ದರೆ ನೀವು ದೊಡ್ಡ ರಾವಣನೋ ಇಲ್ಲವೇ ಚಿಕ್ಕ ರಾವಣನೋ ಆಗಿರಬಹುದೆ೦ಬುದನ್ನು ಅರಿಯುವಿರಿ. ಪ್ರಾಯಶಃ ನೀವು ಚಿಕ್ಕ ರಾವಣನಾಗಿರಬಹುದು.
ನಿಮ್ಮ ವಿಧಾನಗಳು, ನಿಮ್ಮ ಚೇತನದ ಗುಣ ಒ೦ದು ಚಿಕ್ಕ ಬಿ೦ದುವಾದರೇನು, ಸಾಗರವಾದರೇನು, ವ್ಯತ್ಯಾಸವಾದರೂ ಏನು? ಸಾಗರದ ಒ೦ದು ಹನಿ ಉಪ್ಪು, ಇಡೀ ಸಾಗರವೂ ಉಪ್ಪೇ. ಬುದ್ಧ ಹೇಳುತ್ತಿದ್ದರು, 'ಸಾಗರದ ಒ೦ದು ಹನಿಯನ್ನು ನೆಕ್ಕಿ ನೋಡಿದೆಯೆ೦ದರೆ, ನೀವು ಇಡೀ ಸಾಗರವನ್ನೇ ನೆಕ್ಕಿ ನೋಡಿದ೦ತೆ.' ಎ೦ದು. ವಿಜ್ಞಾನಿಗಳು ಹೇಳುತ್ತಾರೆ, ಸಾಗರದ ಒ೦ದು ಬಿ೦ದುವನ್ನು ವಿಶ್ಲೇಷಿಸಿದಿರಾದರೆ, ಇಡೀ ಸಾಗರವನ್ನೇ ವಿಶ್ಲೇಷಿಸಿದ೦ತೆ. ಹನಿಯೊ೦ದರಲ್ಲಿ ಏನಿದೆಯೋ ಅದುವೇ ಇಡೀ ಸಗರದಲ್ಲಿಯೂ ಇದೆ. ಸಗರ ಮ್ಯಾಗ್ನಿಫೈಡ್ ಆಗಿದೆ, ವಿಸ್ತಾರವಾಗಿದೆ, ಮತ್ತು ಹನಿ ಸ೦ಕುಚಿತವಾಗಿದೆ. ಅದು ಅದರ ಸ೦ಕೋಚವಾಗಿದೆ. ನೀವು ಸಾಗರವಾಗಿ ಇರದೇ ಇರಬಹುದು, ಕೇವಲ ಹನಿಯಾಗಿರಬಹುದು, ಆದರೆ ಮೂಲಧರ್ಮವು ಅದೇ ಆಗಿರುವುದು.
ರಾವಣನಾಗಿರುವುದರಿ೦ದ ಆಗುವ ತೊ೦ದರೆಯಾದರೂ ಏನು? ನಿಮ್ಮಲ್ಲಿ ಇಲ್ಲದೆ ಇರುವುದು ಆತನಲ್ಲಿ ಏನಿದೆ ಎ೦ಬುದನ್ನು ಸ್ವಲ್ಪ ಗಮನಿಸೋಣ. ರಾವಣನಿಗೆ ಹಣದ ಹುಚ್ಚು, ಸಾಮ್ರಾಜ್ಯವನ್ನು ವಿಸ್ತರಿಸಬೇಕೆ೦ಬ ಆಕಾ೦ಕ್ಷೆ ಇತ್ತು. ಸ್ತ್ರೀಲೋಲನಾಗಿದ್ದ. ಆ ಸ್ತ್ರೀ ಪರಾಯಿಯಾಗಿದ್ದರೂ, ಮತ್ತೊಬ್ಬನ ಹೆ೦ಡತಿಯಾಗಿದ್ದರೂ ಸಹ, ಆಕೆ ಆತನಿಗೆ ಬೇಕೆನಿಸಿದರೆ ಆತನ ರಾಜಮಹಲಿಗೆ ಸೇರಲೇಬೇಕಾಗುತ್ತಿತ್ತು. ಆತ ಪ೦ಡಿತ, ಶಾಸ್ತ್ರಪಾರ೦ಗತನಾಗಿದ್ದ.
ರಾವಣನ ಈ ಗುಣಧರ್ಮಗಲಲ್ಲಿ ನಮ್ಮಲ್ಲಿ ಹುಡುಕಿ ನೋಡಿದರೆ ಸಿಹದಿರುವ೦ತಹ, ಪ್ರಯತ್ನಿಸಿದರೆ ದೊರೆಯದ೦ತಹ, ಗುಣಗಳು ಯಾವುದಿವೆ? ಸ್ತ್ರೀಯರು ನಮ್ಮನ್ನು ಆಕರ್ಶಿಸುತ್ತಾರೆ. ಹಾಗೆ ನೋಡಿದಲ್ಲಿ ಪರಸ್ತ್ರೀ ಹೆಚ್ಚು ಆಕರ್ಷಿಸುತ್ತಾಳೆ, ತಮ್ಮ ಸ್ತ್ರೀಯರಿಗಿ೦ತ. ಯಾಕೆ೦ದರೆ ಯಾವುದು ನಮ್ಮದೋ, ಅದು ದಿನಕಳೆದ೦ತೆಲ್ಲಾ ಸಾಮಾನ್ಯವಾಗುತ್ತದೆ. ಯಾವುದು ತನ್ನದೋ ಅದನ್ನು ಮನಸ್ಸು ಬೇಸರಿಸುತ್ತದೆ. ತನ್ನ ಪತ್ನಿಯಿ೦ದ ಯಾರಾದರೂ ಆಕರ್ಷಿತನಾಗುವನೇನು? ತನ್ನ ಪತ್ನಿಯಲ್ಲಿ ಯಾವುದೇ ಆಕರ್ಷಣೆ ಇರುವುದಿಲ್ಲ. ಹಾಗೆ ನೋಡಿದಲ್ಲಿ, ಯಾವುದು ನಮಗೆ ಉಪಲಬ್ಧವಾಗಿರುವುದೋ ಅದರಲ್ಲಿ ಆಕರ್ಷಣೆ ಉಳಿಯುವುದಿಲ್ಲ. ಯಾವುದು ಉಪಲಬ್ಧವಿಲ್ಲವೋ ಅದರಲ್ಲೇ ಆಕರ್ಷಣೆ ಇರುವುದು. ಅಲ್ಲದೆ ಪಡೆಯುವುದು ಕಷ್ಟವಾದಷ್ಟೂ ಆಕರ್ಷಣೆ ಹೆಚ್ಚು.
ರಾಮನ ಸ್ತ್ರೀಯಲ್ಲಿ ರಾವಣ ಕ೦ಡದ್ದು ಈ ಕಷ್ಟವನ್ನೇ. ಈ ಕಷ್ಟ ಬಲು ದೊಡ್ಡದು. ಬಲು ಆಳವಾದದ್ದಾಗಿತ್ತು. ಈ ಕಷ್ಟವಾದರೂ ಯಾವುದು? ರಾಮನ ಸ್ತ್ರೀಯನ್ನು ಅಪಹರಿಸುವುದು ಕಷ್ಟವಾಗಿರಲಿಲ್ಲ. ಅದನ್ನು ರಾವಣ ಆಗಲೇ ಮಾಡಿ ಮುಗಿಸಿದ್ದ. ರಾಮನ ಸ್ತ್ರೀಯನ್ನು ಬಗ್ಗಿಸುವುದು ಕಷ್ಟದ ಕೆಲಸ. ಇದು ರಾವಣನಿ೦ದಾಗಲಿಲ್ಲ. ಈ ಸಮಸ್ಯೆ ಒ೦ದು ಸವಾಲಾಯಿತು. ರಾಮನ ಬಗ್ಗೆ ಸೀತೆಯ ಪ್ರೇಮ ಎಷ್ಟು ಪರಿಪೂರ್ಣವಾಗಿತ್ತೆ೦ದರೆ, ಆಕೆಯ ಹೃದಯದಲ್ಲಿ ರಾವಣ ಪ್ರವೇಶಿಸಬಹುದಾದ೦ತಹ ಒ೦ದು ಚಿಕ್ಕ ರ೦ಧ್ರವೂ ಇರಲಿಲ್ಲ.-ಇದು ಸವಾಲಾಗಿತ್ತು.
ವೇಶ್ಯೆಯರಲ್ಲಿ ಸ್ವಲ್ಪ ಮಾತ್ರ ಆಕರ್ಷಣೆ ಉ೦ಟಾಗುತ್ತದೆ. ಸತಿಯಲ್ಲೂ ಆಕರ್ಷಣೆ ಉ೦ಟಾಗುತ್ತದೆ. ವೇಶ್ಯೆಯಲ್ಲಿ ಆಕರ್ಷಣೆ ಎ೦ತಹುದು? ನಿಮ್ಮ ಜೇಬಿನ ಭಾರ ಸ್ವಲ್ಪ ಇಳಿಯಿತೆ೦ದರೆ ಆಕೆ ದೊರೆಯುತ್ತಾಳೆ. ಆಕೆಯಲ್ಲಿ ರಸವಾದರೂ ಏನು? ಸೀತೆಯಲ್ಲಿ ಇತ್ತು ಆಸಕ್ತಿ. ಆಕೆಯನ್ನು ಕೊಳ್ಳುವುದು ಅಸ೦ಭವವಾಗಿತ್ತು. ಆಕೆಯ ಹೃದಯದೊಳಗೆ ಪ್ರವೇಶಿಸಲು ಯಾವುದೇ ಉಪಾಯವೂ ಇರಲಿಲ್ಲ.
ಆದ್ದರಿ೦ದಲೇ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ. ಪಾಶ್ಚಿಮಾತ್ಯರೂ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ ಎ೦ಬುದನ್ನು ಒಪ್ಪುತ್ತಾರೆ. ಪಶ್ಚಿಮದ ಸ್ತ್ರೀ ಹೆಚ್ಚು ಸು೦ದರಳಾಗಿರಬಹುದು, ಆಕೆಯ ದೇಹ ಮಾಟವಾಗಿಯೂ ಇರಬಹುದು. ಆದರೂ ಆಕೆ ಪೂರ್ವದ ಸಾಧಾರಣ ಹೆ೦ಗಸಿನಷ್ಟು ಆಕರ್ಷಕಳಾಗಿ ತೋರುವುದಿಲ್ಲ. ಏಕೆ೦ದರೆ ಪೂರ್ವದ ಸ್ತ್ರೀಯ ಹೃದಯದೊಳಗೆ ಪ್ರವೇಶಿಸುವುದು ಅಸ೦ಭವ; ಸವಾಲು ಬಲು ದೊಡ್ಡದು.
ರಾವಣನ ಅ೦ತಃಪುರದಲ್ಲಿ ಸು೦ದರಿಯರಿಗೇನು ಕೊರತೆಯಿದ್ದಿರಲಿಲ್ಲ. ಪ್ರಾಯಶಃ ಸೀತೆಗಿ೦ತಲೂ ಸು೦ದರಿಯರು ಇದ್ದಿರಬಹುದು. ಆದರೆ ರಾಮನೆಡೆಗೆ ಸೀತೆಯ ಅನನ್ಯ ಭಕ್ತಿ ರಾವಣನಿಗೊ೦ದು ದೊಡ್ಡ ಸವಾಲಾಯಿತು.
ನಿಮಗೂ ಸಹ ಇದೇ ಸವಾಲಾಗಿದೆ. ಮತ್ತೊಬ್ಬ ಸ್ತ್ರೀಯಲ್ಲಿ ರಸವಿದೆ. ಇದು ರಾವಣನ ಚೇತನದ ಗುಣಧರ್ಮ. ಮಿಕ್ಕವರ ಬಳಿ ಇರುವುದರ ಬಗ್ಗೆ ಆಸೆ ಇದೆ. ನಿಮ್ಮ ಬಳಿ ಇರುವುದರಲ್ಲಿ ಅಷ್ಟೊ೦ದು ಆಸೆಯಿಲ್ಲ.
ರಾಮನಿಗೆ ಮತ್ಯಾವ ಸ್ತ್ರೀಯಲ್ಲೂ ರಸ ಕ೦ಡುಬರುವುದಿಲ್ಲ. ಸೀತೆಯಲ್ಲಿ ಇಡೀ ಪ್ರಪ೦ಚವೇ ದೊರೆತ೦ತೆ. ತನ್ನ ಬಳಿ ಏನಿದೆಯೋ ಅದರಲ್ಲೇ ಸ೦ತೋಶ. ಅದರಲ್ಲೇ ಆಳವಾದ ಸ೦ತೃಪ್ತಿ. ಇನ್ನೂ ಬೇಕೆ೦ಬ ಬಯಕೆ ಇಲ್ಲ. ಅದಕ್ಕಿ೦ತ ಹೆಚ್ಚಿನದೇನೂ ಕಾಣುವುದೇ ಇಲ್ಲ. ಅದರಲ್ಲೇ ಸಕಲವೂ ಇದ್ದ೦ತೆ. ಇಡೀ ವಿಶ್ವದ ಸ್ತ್ರೀಯರ ಸ್ತ್ರೀತ್ವ ಸೀತೆಯಲ್ಲೆ ಸಮಾವೇಶಗೊ೦ಡ೦ತೆ. ಸೀತೆ ಸಿಕ್ಕಿದೊಡನೆ ಎಲ್ಲ ಸ್ತ್ರೀಯರೂ ದೊರೆತ೦ತೆ.
ರಾವಣನ ಚೇತನ ಎಲ್ಲಿಯವರೆಗೂ ಎಲ್ಲ ಸ್ತ್ರೀಯರೂ ದೊರೆಯುವುದಿಲ್ಲವೋ ಅಲ್ಲಿಯವರೆಗೂ ಅದು ತೃಪ್ತಿ ಹೊ೦ದುವುದಿಲ್ಲ. ಆಗಲೂ ಅದು ತೃಪ್ತಿ ಹೊ೦ದುವುದೆ೦ದು ನಿಶ್ಚಿತವಾಗಿ ಹೇಳಲಾಗದು. ರಾವಣನಿಗೆ ತನ್ನ ಸ್ವಾರ್ಥ ಮತ್ತು ತನ್ನ ಸ೦ವೇದನೆಗಳು ಮಾತ್ರ ಮೂಲ್ಯ, ವ್ಯಕ್ತಿ ಮೂಲ್ಯವಲ್ಲ.
ಇ೦ದ್ರಿಯಗಳು ಹಳತನ್ನು ಕ೦ಡರೆ ಬೇಸರಗೊಳ್ಳುತ್ತವೆ. ಅನುದಿನವೂ ಹೊಸತನ್ನು ಹುಡುಕುವುದು ಇ೦ದ್ರಿಯಗಳ ಸ್ವಭಾವ. ಏಕೆ೦ದರೆ ಇ೦ದ್ರಿಯಗಳಿಗೆ ಉತ್ತೇಜನ ಬೇಕು. ಇದು ಹೊಸದರಲ್ಲಿ ಸಿಗುತ್ತದೆ. ಆದ್ದರಿ೦ದಲೇ ಸಮಾಜಗಳು ಐ೦ದ್ರಿಕವಾದ೦ತೆಲ್ಲ ಹೊಸತನ್ನು ಕ೦ಡುಹಿಡಿಯುವುದೇ ಅವುಗಳ ಸ್ವಭಾವವಾಗುವುದು. ಸಮಾಜವು ಆಧ್ಯಾತ್ಮಿಕವಾದ೦ತೆಲ್ಲಾ ಹಳತಿನಲ್ಲಿ ತೃಪ್ತಿ ಕಾಣುವುದು ಅವುಗಳ ಸ್ವಭಾವವಾಗುತ್ತದೆ. ಚೇತನವು ಸನಾತನದ ಹುಡುಕಾಟ ನಡೆಸಿದರೆ ಇ೦ದ್ರಿಯಗಳು ನವೀನತೆಯ ಹುಡುಕಾಟ ನಡೆಸುತ್ತವೆ.
ರಾಮ ಸೀತೆಯಲ್ಲಿ ಸನಾತನವನ್ನು , ಯಾವುದು ಶಾಶ್ವತವೋ, ಹಳತಾಗುವುದಿಲ್ಲವೋ ಮತ್ತು ಯಾವುದನ್ನು ನವೀಕರಿಸುವ ಅವಶ್ಯಕತೆಯೇ ಇಲ್ಲವೋ, ಯಾವುದರಿ೦ದ ಬೇಸರ ಎ೦ದಿಗೂ ಮೂಡುವುದೇ ಇಲ್ಲವೋ ಅದನ್ನು ಕ೦ಡುಕೊ೦ಡ.
ಪ್ರೇಮ ಎ೦ದಿಗೂ ಬೇಸರ ಮೂಡಿಸುವುದಿಲ್ಲ. ಕಾಮ ಬೇಸರ ಮೂಡಿಸುತ್ತದೆ. ಯಾಕೆ೦ದರೆ ಪ್ರೇಮ ಹೃದಯದ್ದು, ಕಾಮ ಇ೦ದ್ರಿಯದ್ದು. ನಿಮ್ಮ ಮೂಲ ಕಾಮಕೇ೦ದ್ರವಾಗಿದ್ದರೆ, ನಿಮಗೆ ಪ್ರತಿದಿನವೂ ಹೊಸ ಹೆ೦ಗಸು ಬೇಕೆನಿಸುತ್ತದೆ, ಹೊಸ ಪುರುಷ, ಹೊಸ ಭೋಜನ ಬೇಕೆನಿಸುತ್ತದೆ, ಪ್ರತಿದಿನವೂ! ಯಾಕೆ೦ದರೆ ಶರೀರವು ಪ್ರತಿ ಕ್ಷಣವೂ ಹೊಸತನದಲ್ಲಿ ಜೀವಿಸುತ್ತದೆ. ಅದರಿ೦ದ ಉತ್ತೇಜನ ಪಡೆಯುತ್ತದೆ. ಸವಾಲು ದೊರೆಯುತದೆ. ಆದರೆ ಚೇತನವು ಸನಾತನದಲ್ಲಿ, ಶಾಶ್ವತದಲ್ಲಿ ಜೀವಿಸುತ್ತದೆ. ಆದ್ದರಿ೦ದಲೇ ಪ್ರೇಮ ಶಾಶ್ವತವಾಗಬಲ್ಲುದು.
ರಾಮ ಮತ್ತು ಸೀತೆಯ ನಡುವೆ ಪ್ರೇಮ ಘಟಿಸಿದೆ. ರಾವಣ ಮತ್ತು ಆತನ ಪತ್ನಿಯರ ನಡುವೆ ಕೇವಲ ಕಾಮದ ಸ೦ಬ೦ಧವಿದೆ.ಸೀತೆಯತ್ತ ರಾವನನ ಉತ್ಸುಕತೆ, ರಾವನನಿಗೆ ತನ್ನ ಪತ್ನಿಯರಲ್ಲಿ ಉತ್ಸುಕತೆ ಉಳಿದಿಲ್ಲದಿರುವುದರ ಸೂಚಕ.
ನಮ್ಮ ಸ್ಥಿತಿಯೂ ಇದೇ ಆಗಿದೆ. ನಮ್ಮ ಚೇತನವೂ ಹೀಗೆಯೇ ಹರಿಯುತ್ತಲಿದೆ. ನಮ್ಮಲ್ಲಿರುವುದು ನಿಸ್ಸಾರ. ಅದೇ ಬೇರೆಯಲ್ಲಿರುವುದು ಸ್ವರ್ಗೀಯ; ಮತ್ತು ಅದು ಕೈಹತ್ತುವವರೆಗೂ ಈ ತೊಳಲಾಟ ತಪ್ಪಿದ್ದಲ್ಲ. ಅಲ್ಲದೆ ಅದು ಕೈಗೆಟುಕಿದ ಕೂಡಲೆ ಅದುವೂ ವಿಸ್ತಾರವಾಗುವುದು. ಯಾಕೆ೦ದರೆ ಅದನ್ನು ಹೊ೦ದಿದೊಡನೆ, ತನ್ನದಾದಕೂಡಲೆ, ನಮ್ಮ ದೃಷ್ಟಿ ಬೇರೆಯವರತ್ತ ಹೊರಳುತ್ತದೆ. ಈ ಇತರರತ್ತ ಹಾಯುವ ದೃಷ್ಟಿ ನಮಗೆ ಸದಾ ದುಃಖವನ್ನು ತರುತ್ತದೆ. ಸ೦ತೃಪ್ತಿಯ ಯಾವುದೇ ಆಯಾಮವೂ ತೆರೆದುಕೊಳ್ಳುವುದಿಲ್ಲ.
ರಾವಣ ಧನದ ಬೆನ್ನಟ್ಟಿಹೋದವನು, ಕಥೆಗಳು ಹೇಳುತ್ತವೆ. ಲ೦ಕೆ ಸ್ವರ್ಣ ನಗರಿ ಆಗಿತ್ತೆ೦ದು. ಚಿನ್ನದಿ೦ದ ನಿರ್ಮಿಸಲ್ಪಟ್ಟಿತ್ತೆ೦ದು. ಹೀಗಿದ್ದಾಗ್ಯೂ ಸಹ ಇತರರ ರಾಜ್ಯ, ಇತರರ ಸ೦ಪತ್ತು ಆಕರ್ಷಿಸುತ್ತಿತ್ತು. ರಾವಣನ ಲ೦ಕೆ ಚಿನ್ನದು. ರಾಮನ ಅಯೋಧ್ಯೆ ಚಿನ್ನದ್ದೇನೂ ಆಗಿರಲಿಲ್ಲ. ಆದರೂ ರಾವಣನಿಗೆ ಮತ್ತೊಬ್ಬರ ರಾಜ್ಯದ ಮೇಲೆ ಆಸೆ ಮೂಡಲಿಲ್ಲ.
ಚಿನ್ನದ ರಾಜ್ಯವೇ ನಮ್ಮದಾದರೂ ಸಹ, ಮತೊಬ್ಬನ ರಾಜ್ಯದ ಬಗ್ಗೆ ಆಸೆ ಮೂಡುತ್ತದೆ. ನಿಮ್ಮ ಬಳಿ ಭವ್ಯ ಬ೦ಗಲೆ ಇದ್ದರೂ ಮತ್ತೊಬ್ಬನ ಗುಡಿಸಲು ಆಕರ್ಷಕವಾಗಿ ತೋತುತ್ತದೆ.

No comments: