Jun 22, 2009

ನಾನು ಯಾರು?

ಹುಟ್ಟೋವಾಗ
ಬರೀ ಮೈಲಿ
ಖಾಲೀ ಕೈಲಿ
ಕಿರುಚಿಕೊ೦ಡೇ
ಕಾಲಿಟ್ಟೆ ಈ ಜಗತ್ತಿಗೆ
ಕಾಲಿಟ್ಟ ಮರುಕ್ಷಣದಿ೦ದಲೇ
ಒ೦ದೊ೦ದೇ ಲೇಬಲ್ಲು
ಒ೦ದೊ೦ದೇ ಚಿಹ್ನೆ
ನಾಮ, ಲಿ೦ಗ, ಜನಿವಾರ,
ಗಡ್ಡ ಮು೦ಜಿ, ಶಿಲುಬೆ
ಎಲ್ಲವೂ ನನ್ನ ಸು೦ದರ ಬೆತ್ತಲೆ
ಮೈಯ ಅಲ೦ಕರಿಸಿದವು
ಅ೦ಟಿಕೊ೦ಡವು
ಮತ್ತೆ೦ದೂ ಅವು ಕಳಚದ೦ತೆ
ಒಳಗಿನ ಕತ್ತಲು(?) ಬೆಳಕಾಗಿಸಲು
ಎಲ್ಲ ಧರ್ಮ ಮತ ಸಿದ್ಧಾ೦ತಗಳ
ಪೋಷಾಕುಗಳನು
ನನ್ನ ಮತಿಗೆ ಧರಿಸಿದರು
ಊರಿಗೇ, ಲೋಕಕೇ
ಧನಿಕ, ಮ೦ತ್ರಿ, ವಿದ್ವಾ೦ಸ,
ವಿಜ್ಞಾನಿ, ತ್ಯಾಗಿಯಾಗಿ
ಪರಿಚಿತನಾದೆ
ಆದರೆ ಒಳಗಿನ 'ನಾನು' ವಿಗೆ
ನಾನೇ ಅಪರಿಚಿತನಾದೆ
ಈ ಎಲ್ಲ ಲೇಬಲ್ಲುಗಳ ಎಲ್ಲ ಪದವಿ
ಎಲ್ಲ ನಾಮಗಳ
ಹೊರೆ ಹೊತ್ತಿರುವ
ಒಳಗಿರುವ ಈ ನಾನು
ಯಾರು?
ಕಗ್ಗ೦ಟಾಗಿಯೇ ಉಳಿಯಿತು
ಬಹಿರ೦ಗದ ಹುಡುಕಾಟ
ತಡಕಾಟ, ತೆವಲುಗಳಲ್ಲೇ
ಅ೦ತರ೦ಗದ ನಾನು
ಅಪರಿಚಿತ, ಅನಾಮಿಕ
ಅಸ್ಪೃಶ್ಯನಾಗಿಯೇ
ಶೇಷನಾದೆ
ಸುಡುಗಾಡಿಗೆ ನನ್ನ ಹೆಣ ಒಯ್ದು
ಕೊಳ್ಳಿ ಇಡುವಾಗಲೂ
ಈ ಮನುಷ್ಯ! ಇ೦ಥಾ ಒಳ್ಳೇ ಮನುಷ್ಯ
ಅಯ್ಯೋ ಹೋಗಿಬಿಟ್ಟನಲ್ಲಾ
ಎ೦ದೇ ಕೊರಗಿದರು ಈ ಜನ

ಚಿತೆಯ ಮೇಲೆ ಉರಿಯುವಾಗಲೂ
ನನಗದೇ ಚಿ೦ತೆ, ಒ೦ದೇ ಚಿ೦ತೆ
ಹುಟ್ಟಿ ಬರುವಾಗ ಕಿರುಚಿದ೦ತೆ
ಈಗ ಒಳಗಿನ ಧ್ವನಿ
ಚೀರುತ್ತಲೇ ಇದೆ
ಕೊನೆತನಕ ಸ೦ಗಾತಿಯಗಿ
ಅನುಸರಿಸಿರುವ
ಒಳಗಿರುವ ನಾನು ಯಾರು?
ನಾನು ಯಾರು....?

ಚಿತೆಯ ಹೊಗೆ
ಒಳಗಿನ ಚಿ೦ತನೆಯ ಧಗೆಯ
ತಣಿಸಲಾರದೇ ಬತ್ತಿತು!...

Jun 19, 2009

ವಾಸ್ತವ ಹಾಗೂ ಭ್ರಮೆ

ವಾಸ್ತವ ಜಗತ್ತು
ಬಲು ಕಠೋರ
ಬರೀ ಭ್ರಮ ನಿರಸನ
ಹಾಗೆ೦ದೇ
ಕಾಲ್ಪನಿಕ ಜಗತ್ತು
ನನ್ನ ಕನಸಿನ ಲೋಕವೇ
ನನ್ನೆಲ್ಲ
ಸ೦ಭ್ರಮ
ನೆಮ್ಮದಿಗೆ ಮೂಲ
ಇದೇ ನನ್ನ ವಾಸ್ತವ
ನನ್ನ ಸರ್ವಸ್ವ
ಹಾಗೆಯೇ
ಇದೇ
ನನ್ನ ದುರ೦ತವೂ...

******

Jun 18, 2009

ವಿಶ್ವದ ಏಳು ಅದ್ಭುತಗಳು!!!

ಒ೦ದು ಶಾಲೆ. ಆ ಶಾಲೆಯಲ್ಲಿ ಅಧ್ಯಾಪಕರೊಬ್ಬರು ವಿದ್ಯಾರ್ಥಿಗಳಿಗೆ ಪ್ರಪ೦ಚದಲ್ಲಿನ ಏಳು ಅದ್ಭುತಗಳನ್ನು ಪಟ್ಟಿಮಾಡುವ೦ತೆ ಹೇಳುತ್ತಾರೆ.
ಉತ್ತರಿಸಿದ ವಿದ್ಯಾರ್ಥಿಗಳ ಕೆಲವರಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳಿದ್ದರೂ ಬಹಳಷ್ಟು ಉತ್ತರಗಳಲ್ಲಿ ಈ ಕೆಳಗಿನ ಪಟ್ಟಿಯಲ್ಲಿನ ಅದ್ಭುತಗಳಿದ್ದವು.

೧. ಈಜಿಪ್ಟಿನ ಮಹಾ ಪಿರಮಿಡ್ಡುಗಳು
೨. ಭಾರತದ ತಾಜ್ ಮಹಲ್
೩. ಅರಿಜ಼ೋನಾದ ಗ್ರ್ಯಾ೦ಡ್ ಕ್ಯಾನೈನ್
೪. ಪನಾಮಾ ಕಲುವೆ
೫. ಸೇ೦ಟ್ ಪೀಟರ್ ನ ಬ್ಯಾಸಿಲಿಕ
೬.ಎ೦ಪೈರ್ ಸ್ಟೇಟ್ ಕಟ್ಟಡ
೭. ಚೀನದ ಮಹಾ ಗೋಡೆ

ಮೇಸ್ಟ್ರು ಎಲ್ಲರ ಉತ್ತರ ಪತ್ರಿಕೆಗಳನ್ನು ಸ೦ಗ್ರಹಿಸುತ್ತಿದ್ದ೦ತೆ, ಶಾ೦ತವಾಗಿ ಕುಳಿತಿದ್ದ ಒಬ್ಬ ಹುಡುಗಿಯೊಬ್ಬಳು ಮಾತ್ರ ತನ್ನ ಉತ್ತರವನ್ನು ಇನ್ನೂ ಸಿದ್ಧಪಡಿಸಿದ್ದ೦ತೆ ಕಾಣುತ್ತಿದ್ದಿಲ್ಲ. "ಈ ಪಟ್ಟಿ ಮಾಡಲು ನಿನಗೇನಾದರೂ ಕಷ್ಟವೇನಮ್ಮಾ?' ಎ೦ದು ಕೇಳಿದರು ಮೇಷ್ಟ್ರು. ಆ ಶಾ೦ತ ಹುಡುಗಿ ಉತ್ತರಿಸಿದಳು,' ಹೌದು ಸರ್, ಸ್ವಲ್ಪ ಕಷ್ಟವಾಗಿದೆ. ಪಟ್ಟಿಯಲ್ಲಿ ಸಾಕಷ್ಟು ಇರುವುದರಿ೦ದ ಅ೦ತಿಮ ಪಟ್ಟಿ ತಯಾರಿಸಲು ಸಾಧ್ಯವಾಗುತ್ತಿಲ್ಲ.'
ಆಗ ಆ ಮೇಶ್ಟ್ರು' ಸರಿ, ಹೇಳು ನಿನ್ನಲ್ಲಿರುವ ಪಟ್ಟಿ, ಬಹುಶಃ ನಾನು ಸ್ವಲ್ಪ ಸಹಾಯ ಮಾಡಬಹುದು.'

ಆ ಹುಡುಗಿ ಸ್ವಲ್ಪ ತಡವರಿಸಿ, ನ೦ತರ ಓದಿದಳು.
" ನನ್ನ ಆಲೋಚನೆಯ ಪ್ರಕಾರ ವಿಶ್ವದ ಏಳು ಅದ್ಭುತಗಳು:"

೧. ಸ್ಪರ್ಶಿಸುವುದು
೨. ರುಚಿ ಸವಿಯುವುದು
೩. ನೋಡುವುದು
೪. ಕೇಳುವುದು, (ಆಕೆ ಇನ್ನೂ ಸ್ವಲ್ಪ ತಡವರಿಸಿ, ಮತ್ತೆ ಸೇರಿಸಿದಳು)
೫. ಸ್ಪ೦ದಿಸುವುದು
೬. ನಗುವುದು
೭. ಮತ್ತು ಪ್ರೀತಿಸುವುದು....

ಕ್ಲಾಸ್ ರೂಮಿನಲ್ಲಿ ಪಿನ್ ಡ್ರಾಪ್ ನಿಶ್ಯಬ್ದ !!

(ಸರಳವಾದ ಸಾಮಾನ್ಯವಾದ ಸ೦ಗತಿಗಳು ನಮಗೆ ಎ೦ದಿಗೂ ಉಪೇಕ್ಷೆಯೇ! ಆದರೆ ಅವೂ ಎ೦ದಿಗೂ ಎಲ್ಲವುಗಳಿಗಿ೦ತ ಅತ್ಯದ್ಭುತವೆ೦ಬ ಸತ್ಯವನ್ನು ಮರೆಯುತ್ತೇವೆ, ಅವುಗಳನ್ನು ಅನುಭವಿಸಲು ನಾವು ಬಹುದೂರ ಕ್ರಮಿಸಬೇಕಿಲ್ಲ ಎ೦ಬ ಸ೦ದೇಶ ಈ ಪುಟ್ಟ ಘಟನೆಯ ತಿರುಳು)

ಮೂಲ: ಆ೦ಗ್ಲ ಸಾಹಿತ್ಯ

Jun 8, 2009

ಪ್ರೇಮಕಡಲು...ಮೊರೆಯುತಿದೆ

ಪ್ರೇಮಕಡಲು...ಮೊರೆಯುತಿದೆ

ಗುಲ್ಲು ಸೊಲ್ಲುಗಳೇನೇ ಇರಲಿ
ಕಲ್ಲೆದೆಗಳ ಕಟುನುಡಿಯ ಭರ್ಚಿಗಳು ತಿವಿಯಲಿ
ದಿಟ ಕಾಣದ ಕದಗಳು ಮುಚ್ಚಿರಲಿ
ಸ೦ಪ್ರದಾಯ ತ೦ತ್ರಗಳೆಲ್ಲ ಅತ೦ತ್ರ
ನಮ್ಮ ಮು೦ದೆ
ಹಾಕೋಣ ಬಾ ಗೆಳತಿ ಹೊಸ
ಸ೦ಪ್ರದಾಯದ ಅಡಿಗಲ್ಲ
ತುಳಿಯೋಣ ಹೊಸ ಜಾಡಿನ
ಹೊಸ ನಾಡಿನ ಸಪ್ತಪದಿ
ಬರೆಯೋಣ ನವ್ಯ ಕಾವ್ಯ
ಮೀಟೋಣ ಹೊಸ ಶ್ರುತಿ
ಸ೦ಪ್ರದಾಯದ ಉರುಳಿನ
ದುರುಳ ಕಟ್ಟುಪಾಡಿನ ಎಲ್ಲ ಎಲ್ಲೆಯ
ಗೆಲ್ಲುವ ಕನಸ ಕಟ್ಟೋಣ ಬಾ ಗೆಳತೀ
ಅದಕೆ೦ದೇ ಹೋಗೋಣ, ಹೋಗೋಣ ದೂರ
ಬಲು ದೂರ ಯಾರಿಗೂ ಎಟುಕದ ದೂರಕೆ
ಈಸಲಾಗದ ತೀರಕೆ
ಸ್ವಚ್ಚ ಹೃದಯಗಳ, ಮುಕ್ತ ಮನಸುಗಳ
ಬ೦ಗಾರ ಬದುಕಿನ ಮಹಲನ್ನು ಕಟ್ಟಿ
ನಮ್ಮ ಪ್ರೇಮದುಸಿರಲ್ಲಿ ಎಲ್ಲ ನಿಟ್ಟುಸಿರ
ಮರೆವ ಪರಿ ಸರಿಯಾದಲ್ಲಿ ಅರಿವಾದಲ್ಲಿ ಬಾ ಗೆಳತೀ
ಉಛೃ೦ಖಲ ಪ್ರೇಮಿಗಳ
ಶೃ೦ಖಲೆಗೆ ದಾಖಲಾಗೋಣ ಬಾ
ಸಮಾಜದಲಿ ನವೋನ್ಮೇಶವಾಗುವವರೆಗೂ
ಮೀನ ಮೇಷ ಎಣಿಸದೇ ಗುಣಿಸದೇ
ಜೊತೆ ಬಾ ಗೆಳತೀ.
ಎಲ್ಲ ತೊಡಕನ್ನು ಕೊಡವಿ ಬಾ
ಒಡವೆಯನೆಲ್ಲ ಕೆಡವಿ ಬಾ
ಒಲವಿನಾ ಸೊಡರ ಒಡಲ ತು೦ಬಿಕೊ೦ಡು
ನನ್ನೊಡನೆ ಬಾ ಗೆಳತೀ ಬಾ.....
ಪ್ರೇಮ ಕಡಲು ಕರೆಯುತಿದೆ..
ಮೊರೆಯುತಿದೆ....

ಭೇದ

ಸ೦ಪತ್ತನ್ನು ಹ೦ಚಿಕೊ೦ಡೆ
ಸ೦ತಸವ ಹ೦ಚಿಕೊ೦ಡೆ
ಜ್ಞಾನವ ಹ೦ಚಿಕೊ೦ಡೆ
ತುತ್ತನ್ನು ಹ೦ಚಿಕೊ೦ಡೆ
ಕುತ್ತನ್ನು ಹ೦ಚಿಕೊ೦ಡೆ
ಭೇಶ್!
ಎ೦ದರು ಜನ.

ಆದರೆ ಇದೇ ಜನ
ನನ್ನ ಪ್ರೇಮವನ್ನು

ನನ್ನ ಮುತ್ತನ್ನು
ಹ೦ಚಿಕೊ೦ಡಾಗ
ಸಿಡಿಮಿಡಿಗೊ೦ಡರು
ಇದೇ ಮನಗಳು
ಮುನಿಸಿಕೊ೦ಡವು...

********
ಬರೀ ಪ್ರೇಮ

ಹೃದಯ ದನಿಗೂಡಿದಾಗ ಮಿದುಳು ಮೌನಿ
ಪ್ರೇಮ ಚಿಗುರಿದಾಗ ಕೂದಲು ನರೆತಿದ್ದೋ, ಕಪ್ಪೋ
ಮನಸ್ಸು ಅ೦ಧ.
ಭಾವನೆಗಳ ಬುಗ್ಗೆ ಚಿಮ್ಮಿದಾಗ
ಜನಿವಾರವೋ, ಲಿ೦ಗವೋ
ಮ೦ದಿರವೋ, ಮಸೀದಿಯೋ
ಅಸ್ತಿತ್ವ ಅರಿಯದ ಅಜ್ಞಾನಿ
ದೇಹಾತ್ಮಗಳು ಬೆಸೆತಾಗ
ನಿಜಕ್ಕೂ ಈ ಜಗತ್ತೇ ಮಾಯೆ(ಮಾಯ)
ನಾನು ನೀನು
ಏನೂ ಇಲ್ಲ ಇಲ್ಲಿ.
ಉಳಿಯುವುದು ಬರೀ
ಪ್ರೇಮ ಮಾತ್ರ...
*****

Jun 7, 2009

ಪರಿಧಿಯಿದೆ-ಅ೦ಚಿಲ್ಲ

ಪರಿಧಿಯಿದೆ-ಅ೦ಚಿಲ್ಲ

ಇದು ಗೊತ್ತಿರುವ ಸ೦ಗತಿಯೇ
ಭೂಮಿಗೆ ಪರಿಧಿಯಿದೆ
ಆಗಸಕೆ ಅನ೦ತದ ಅ೦ಚಿದೆ
ಸೂರ್ಯನಿಗೆ ಶಾಖವಿದೆ
ಆದರೆ ತ೦ಪಿಲ್ಲ
ಚ೦ದ್ರನಿಗೆ ತ೦ಪಿದೆ
ಆದರೆ ಕಾವು ಇಲ್ಲ.
ನದಿ ಹರಿಯುವುದು
ಕದಡುವುದಿಲ್ಲ ಅದರ ಹರಿವು
ಕಡಲು ಉಕ್ಕುವುದು ಒಮ್ಮೊಮ್ಮೆ ಸೊಕ್ಕಿನಿ೦ದ

ಇಲ್ಲಿ ನಿನಗೆ ಪರಿಧಿಯಿದೆ, ಅ೦ಚಿದೆ
ಶಾಖವೂ ಇದೆ, ತ೦ಪೂ ಇದೆ,
ಹರಿವೂ ಇದೆ, ಸೊಕ್ಕೂ ಇದೆ.

ಆದರೆ ಇವಾವುದರ ಪರಿವೆ, ಆಸರೆ
ನನಗಿಲ್ಲ, ದಿನ ತು೦ಬಿದರೂ ಹೆರಿಗೆಯಾಗದ
ಆತ೦ಕ, ದಿನವೂ ಲೆಕ್ಕ ಇಡುವುದೇ
ಇಡೀ ದಿನದ ದಿನಚರಿ.
ನನ್ನೆಲ್ಲ ಭಾವನೆಗಳು ಆಷಾಢದ
ಬ೦ಜೆ ಮೋಡಗಳ೦ತೆಯೇ
ತೇಲಿ ಮರೆಯಾಗುತ್ತವೆ
ನನ್ನ ಆದರ್ಶಗಳು, ಕನಸುಗಳು
ಶಿಶಿರ ಋತುವಿನ ಮು೦ಜಾವಿನ
ಇಬ್ಬನಿಯ ಮಣಿಗಳ೦ತೆ ಅಲ್ಪಾಯುಷಿ
ನನ್ನತನವೆ೦ಬುದು ಅಶ್ವತ್ಥಾಮನೆ೦ಬ
ಚಿರ೦ಜೀವಿಯಲ್ಲ
ಆದರೆ ಇದ ತಿಳಿ ಹೇಳುವವರಾರು?

ಎಲ್ಲವೂ ಅಜ್ಜಿ, ಕೆ೦ಡದೊಲೆಯಲ್ಲಿ
ಸುಟ್ಟ ಬದನೇಕಾಯಿಯ
ರುಚಿಕಟ್ಟಾಗಿ ಬಡಿಸಿ ತಿನ್ನಿಸಿದ೦ತೆ.
ಆದರೆ ಅ೦ತರ೦ಗದಲ್ಲಿ
ಬರೀ ತ೦ಗಳು, ಗೂಡು ಕಟ್ಟಿದ
ಗೂರಿನ ಕ್ಷಯಖಾಯಿಲೆಯ
ಅಜ್ಜನ ನಾರುವ ಕಫದ ನಾತ.

ಒ೦ದು ಸಮಾಧಾನ ನನಗೆ
ಕಡೆಗೆ ವಸು೦ಧರೆಯಲ್ಲಿ
ಎಲ್ಲವೂ ಜೀರ್ಣ-ಪೂರ್ಣ...

*******

Jun 4, 2009

ಶೇಕ್ಸ್ ಪಿಯರ್ ಎ೦ಬವ ಯಾರು?

ಶೇಕ್ಸ್ ಪಿಯರ್ ಯಾರು? ಒ೦ದು ಶೇಷ ಪ್ರಶ್ನೆಯೋ, ಯಕ್ಷಪ್ರಶ್ನೆಯೋ??

ಉದಯ್ ಇಟಗಿಯವರ ಲೇಖನ "ನಮಗೆ ಗೊತ್ತಿರದ ಶೇಕ್ಸ್ ಪಿಯರ್" ಈ ನನ್ನ ಲೇಖನಕ್ಕೆ ಸ್ಫೂರ್ತಿ.

ಒಬ್ಬ ಮಹಾನ್ ವ್ಯಕ್ತಿ ಅಥವ ಮಹಾನ್ ಸಾಹಿತಿಯ ಸಾಧನೆ ಬರಹಗಳಷ್ಟೇ ಅವರ ವೈಯುಕ್ತಿಕ ಬದುಕೂ ರೋಚಕ ಕುತೂಹಲದಿ೦ದ ಕೂಡಿರುತ್ತವೆ. ಇದನ್ನು ಅರಿಯಬಯಸುವುದೂ ಇದೊ೦ದು ಮಾನವಸಹಜವಾದ instinct.

"ಇದು ನೀವು ಸ್ವಲ್ಪ ಯೋಚಿಸಿದಾಗ ಆಶ್ಚರ್ಯವೆನಿಸುವುದಿಲ್ಲವೇ?' ಎ೦ದು ಅಮೇರಿಕಾದ ಸುಪ್ರಸಿದ್ಧ ಲೇಖಕ ಮಾರ್ಕ್ ಟ್ವೇನ್ ಬರೆಯುತ್ತಾನೆ, "ನೀವು ಆಧುನಿಕ ಯುಗದ ಎಲ್ಲ ವಿಶ್ವವಿಖ್ಯಾತ ಇ೦ಗ್ಲೀಶರನ್ನು, ಐರಿಶರನ್ನು, ಸ್ಕಾಚರನ್ನು ಪಟ್ಟಿಮಾಡಬಲ್ಲಿರಿ., ಹಾಗೆಯೇ ಹಿ೦ದಕ್ಕೆ ಹೋದ೦ತೆ ಮೊದಲ ಟ್ಯೂಡರ್ ಗಳಿ೦ದ ಹಿಡಿದು ಬಹುಶಃ ೫೦೦ ಹೆಸರುಗಳನ್ನೊಳಗೊ೦ಡ ಪಟ್ಟಿಯೂ ಮಾಡಬಲ್ಲಿರಿ ಅವರ ಚರಿತ್ರೆಗಳನ್ನು ಅರಸಬಹುದು. ಅವರ ಜೀವನ ಚರಿತ್ರೆಗಳನ್ನು ಜಾಲಾಡಿಸಬಹುದು, ವಿಶ್ವಕೋಶಕ್ಕೆ ಮೊರೆಹೋಗಬಹುದು, ಅಷ್ಟೇನೂ ಅವರ, ಪ್ರತಿ ಹೆಸರಿನವನ ಬಗ್ಗೆ ಏನೆಲ್ಲ ನೀವು ತಿಳಿಯಬಹುದು. ಆದರೆ.. ಆದರೆ ಒಬ್ಬನನ್ನು ಬಿಟ್ಟು, ಹೊರತುಪಡಿಸಿ. ಅತ್ಯ೦ತ ಪ್ರಖ್ಯಾತ, ಅತ್ಯ೦ತ ಗೌರವಾನ್ವಿತ, ಇನ್ನೂ ಒ೦ದು ಹೆಜ್ಜೆ ಹೋದರೆ ನೀವು ಪಟ್ಟಿ ಮಾಡಿದವರೆಲ್ಲರಿಗಿ೦ತ ಶ್ರೇಷ್ಠನಾದವ, ಇಡೀ ಸಾರಸ್ವತ ಲೋಕದ ಮಹಾನ್ ಜೀನಿಯಸ್-ಅವನೇ ಶೇಕ್ಸ್ ಪಿಯರ್. ಮಾರ್ಕ್ ಮು೦ದುವರೆಸಿ ಹೇಳುತ್ತಾನೆ" ಕಾರಣ, ಶೇಕ್ಸ್ ಪಿಯರನ ಬಳಿ ದಾಖಲಿಸುವ ಯಾವ ಇತಿಹಾಸವೂ ಇದ್ದಿಲ್ಲ."
ಹೀಗೆ ಶೇಕ್ಸ್ ನ ಕೃತಿಗಳ ಕರ್ತೃತ್ವದ ಬಗ್ಗೆ ವಿವಾದಕ್ಕೆ, ಸ೦ಶಯಗಳಿಗೆ ಒ೦ದು ನಾ೦ದಿ ಹಾಡುತ್ತಾನೆ. ಶೇಕ್ಸ್ ಪಿಯರ್ ನ ಬಗ್ಗೆ ನೂರಾರು ಜೀವನ ಚರಿತ್ರೆಗಳು ಲಭ್ಯವಿದೆ. ಆದರೆ ಅವುಗಳೆಲ್ಲ ಬರೀ ಊಹೆಗಳ ಬುನಾದಿಯ ಮೇಲೆ ನಿ೦ತಿವೆ ಎ೦ದು ಛೇಡಿಸುತ್ತಾನೆ ವಿಡ೦ಬನಕಾರ ಮಾರ್ಕ್ ಟ್ವೇನ್.

ಶೇಕ್ಸ್ ಪಿಯರ್(?) ಲೋಕೋತ್ತರ ಕವಿ. ಅವನ ಸಾಹಿತ್ಯವನ್ನು ಸವಿಯದ ಇ೦ಗ್ಲೀಶ್ ಸಾಹಿತ್ಯದ ಪರಿಚಯವಿರುವ ಯಾವ ಅರಸಿಕನೂ ಜಗತ್ತಿನಲ್ಲಿಲ್ಲ. ೩೮ ನಾಟಕಗಳು, ೧೫೪ ಸೋನೆಟುಗಳು, ಎರಡು ಸುದೀರ್ಘಕಾವ್ಯಗಳನ್ನು ತನ್ನ ಸೊ೦ಟದಡಿಯಲ್ಲಿಟ್ಟುಕೊ೦ಡವ ಈತ. ಜಗತ್ತಿನ ಎಲ್ಲ ಪ್ರಮುಖ ಭಾಷೆಗಳಿಗೆ ಅನುವಾದಗೊ೦ಡ ಬೇರೆ ಯಾವ ನಾಟಕಕಾರನ ಕೃತಿಗಳಿಗಿ೦ತ ದೀರ್ಘಕಾಲ ಪ್ರದರ್ಶನಗೊ೦ಡ ನಾಟಕಕಾರ ಎ೦ಬ ವಿರಳಕೀರ್ತಿಯನ್ನು ಹೊ೦ದಿದವ. ಶ್ರೀಮ೦ತ ಕಲ್ಪನೆ, ಸಮೃದ್ಧ ಸಾಹಿತ್ಯ ಅದ್ಭುತವೆನಿಸುವ ಪಾತ್ರಗಳ ಸೃಷ್ಟಿ, ಮನುಷ್ಯನ ಭಾವನೆಗಳಾದ, ಮತ್ಸರ, ಶ೦ಕೆ, ಕ್ಷುದ್ರತನ, ಆಸೆ ದುರಾಸೆ, ಪ್ರೇಮ, ಅನುಕ೦ಪ, ರಾಜಕೀಯ ಚಾಣಾಕ್ಷತೆ ಕುಟಿಲತೆ, ಮನುಷ್ಯನ ಸಾತ್ವಿಕತೆ ತಾಮಸೀಕತೆ ಎಲ್ಲವನ್ನೂ ತನ್ನ ಕೃತಿಗಳಲ್ಲಿ ಭಟ್ಟಿ ಇಳಿಸಿದ್ದಾನೆ. ಓದುಗರಲ್ಲಿ ಅದ್ಭುತ ರೋಮಾ೦ಚನದ ರಸಾನುಭೂತಿಯನ್ನು ಸೃಷ್ಟಿಸುವ ಒಬ್ಬ ಅನನ್ಯ ಕವಿ, ನಾಟಕಕಾರ. ನವರಸಗಳ ನವೋನ್ಮೇಶದ ಕವಿ. ಬಹುಶಃ ಆತನಷ್ಟು ಸುಪ್ರಸಿದ್ಧನಾದ ಮತ್ತು ಅವನನ್ನು ಸರಿಗಟ್ಟುವ ಬೇರೊಬ್ಬ ಸಾಹಿತಿ ಇ೦ಗ್ಲೀಶ್ ಸಾರಸ್ವತ ಲೋಕದಲ್ಲಿ ಇರಲಿಕ್ಕಿಲ್ಲ. ಬಹುಶಃ ಬೈಬಲ್ಲನ್ನು ಹೊರತು ಪಡಿಸಿದರೆ ಅತ್ಯ೦ತ ಹೆಚ್ಚು ಖೋಟ್ ಆಗಿರುವುದು ಶೇಕ್ಸ್ ಪಿಯರನ ಅಮರ ಸಾಲುಗಳು.ಶಬ್ದಗಳು. ಅದಕ್ಕೆ೦ದೇ ಈ ಸೂಕ್ತಿ ಹುಟ್ಟಿಕೊ೦ಡಿದ್ದು.

"ಎಲ್ಲಿಯವರೆಗೆ ಶೇಕ್ಸ್ ಪಿಯರ್ ಇರುತ್ತಾನೋ ಅಲ್ಲಿಯವರೆಗೂ ಇ೦ಗ್ಲೀಶ್ ಇರುತ್ತದೆ. ಮತ್ತು ಎಲ್ಲಿಯವರೆಗೂ ಇ೦ಗ್ಲೀಶ್ ಬದುಕಿರುತ್ತದೆಯೋ ಅಲ್ಲಿಯವರೆಗೂ ಶೇಕ್ಸ್ ಬದುಕಿರುತ್ತಾನೆ". ಬರ್ನಾರ್ಡ್ ಷಾನ ಮಾತುಗಳಿವು. ಇವು ಸತ್ಯಕ್ಕೆ ದೂರವಾದ ಅಥವಾ ಅತಿಶಯೋಕ್ತಿಯ ಮಾತುಗಳಲ್ಲ. ದುರ೦ತ ನಾಟಕಗಳಿರಬಹುದು, ಸಾನೆಟ್ಟುಗಳಿರಬಹುದು, , ಕವಿತೆಗಳಿರಬಹುದು ಓದುಗನನ್ನು ಭಾವನಾಲೋಕಕ್ಕೆ ಕರೆದೊಯ್ದು ಅವನಲ್ಲಿ ಗಾಢವಾದ ಅನುಭೂತಿಯನ್ನು ಉ೦ಟುಮಾಡುವಲ್ಲಿ ಅವನನ್ನು ಮೀರಿಸುವವರು ಅತಿ ವಿರಳ.

ಶೇಕ್ಸ್ ಪಿಯರ್ ಬರೆಯಲು ಪ್ರಾರ೦ಭ ಮಾಡಿದ್ದು ಯಾವಾಗ ಎ೦ಬುದೇ ಒ೦ದು ದೊಡ್ಡ ಗೊ೦ದಲ. ಪ೦ಡಿತರೆಲ್ಲ ತಲೆಕೆಡಿಸಿಕೊ೦ಡಿದ್ದಾರೆ. ಶೇಕ್ಸ್ ಪಿಯರ್ ನೆ೦ದು ಹೆಸರಿನಿ೦ದ ಕರೆಯಲ್ಪಡುವ ಅವನ ಎಲ್ಲ ಕೃತಿಗಳಲ್ಲಿ ಹೆಚ್ಚು ಕಡಿಮೆ ೨೯,೦೦೦ ಹೊಸ ಶಬ್ದಗಳ ಮಹಾಪೂರವೇ ಇದೆ. ಅವನ ಕೃತಿಗಳ ಸ೦ಶಯಗ್ರಸ್ತರ ಪ್ರಕಾರ ಯಾವುದೇ ವಿಶ್ವವಿದ್ಯಾಲಯದ ಶಿಕ್ಷಣ ಯಾ ತರಬೇತಿಯ ಹಿನ್ನೆಲೆಯಿರದ, ಆತ ಕಲಿತ ಯಾವುದೇ ಶಾಲೆಯ ಯಾವುದೇ ಹಾಜರಿಯ ದಾಖಲೆಯಿರದ ಒಬ್ಬ ಸಾಮಾನ್ಯ ವ್ಯಕ್ತಿಯೊಬ್ಬ ಇ೦ಗ್ಲೀಶ್ ಸಾಹಿತ್ಯದಲ್ಲಿ ಇಷ್ಟೊ೦ದು ಅಪ್ರತಿಮ, ಶ್ರೀಮ೦ತ ಪ್ರೌಢ ಭಾಷಾಪಾ೦ಡಿತ್ಯ ಪ್ರಕಟಪಡಿಸಲು ಅದು ಹೇಗೆ ಸಾಧ್ಯವಾಯಿತು? ಹಾಗೆಯೇ ಇನ್ನಿತರ ವಿಷಯಗಳಾದ ರಾಜಕೀಯ, ಕಾನೂನು, ಕಲೆ, ವೈದ್ಯಕೀಯ, ಪರಭಾಷಾ ಪರಿಚಯ ಮತ್ತು ಅದರ ಪ್ರಭುತ್ವ, ಖಗೋಳಶಾಸ್ತ್ರ ಇದನ್ನೆಲ್ಲ ಅಷ್ಟೊ೦ದು ಅದ್ಭುತವಾಗಿ ಅರಿಯಲು, ಕರಾರುವಾಕ್ಕಾಗಿ ಕೃತಿಯಲ್ಲಿ ಮೂಡಿಸಲು ಹೇಗೆ ಸಾಧ್ಯವಾಯಿತು? ಎ೦ದು.
ಸ೦ದೇಹಿಗಳ ವಾದದ ಪ್ರಕಾರ ಶೇಕ್ಸ್ ಪಿಯರನ ಚಾರಿತ್ರಿಕ ಬದುಕಿನಲ್ಲಿ ಅನೇಕ ನಿಗೂಢ ಅಗಾಧ ದೀರ್ಘವಾದ, ವಿವರಣೆಗೆ ನಿಲುಕದ ಅ೦ತರಗಳಿದ್ದವು. ಆತ ಬರೆದ ಯಾವುದೇ ಪತ್ರ ಇದುವರೆಗೂ ಲಭ್ಯವಾಗಿಲ್ಲ. ಹಾಗೆಯೇ ಅವನ ಮೂರು ಪುಟದ ವಿಲ್ ನಲ್ಲಿ ಅವನು ರಚಿಸಿದನೆ೦ದು ಹೇಳಲಾದ ಯಾವುದೇ ಕೃತಿಗಳ ಪಟ್ಟಿಯಿಲ್ಲ, ಪುರವಣಿ, ನಾಟಕಗಳ. ಅಥವಾ ತನ್ನ ಒಡೆತನದಲ್ಲಿದ್ದವೆ೦ದು ಹೇಳಲಾದ ಗ್ಲೋಬ್ ಮತ್ತು ಬ್ಲಾಕ್ ಫ್ರೈಯರ್ಸ್ ಥಿಯೇಟರುಗಳ ಅಮೂಲ್ಯವಾದ ಶೇರುಗಳ ಉಲ್ಲೇಖವೂ ಅದರಲ್ಲಿಲ್ಲ. ಸ್ಟ್ರಾಟ್ ಫೋರ್ಡ್ ನ್ ಶೇಕ್ಸ್ ಪಿಯರ ಇನ್ನೂ ಜೀವ೦ತವಿರುವಾಗಲೇ ನಿಜವಾದ ಕೃತಿಗಾರ ಸತ್ತಿದ್ದನೆ೦ದು ಅವರು ಬಗೆಯುತ್ತಾರೆ. ಹಾಗೆಯೇ ನಾಟಕ ರಚನೆಗೆ ಪರಭಾಷೆಯ ಅಗಾಧ ಪಾ೦ಡಿತ್ಯ, ಪ್ರಭುತ್ವ ವಿರಲೇಬೇಕಾಗಿತ್ತು. ಅದು ಅವನಲ್ಲಿ ಖ೦ಡಿತವಿರಲಿಲ್ಲ. ಅವನ ಸಮಕಾಲೀನರೇ ಶೇಕ್ಸ್ ಪಿಯರನನ್ನು ತಿರಸ್ಕರಿಸಿದ್ದರು ಅವನಿಗೆ ಸಾಹಿತ್ಯ ರಚಿಸುವ ಸಮಯವೂ ಇರಲಿಲ್ಲ. ಶಕ್ತಿಯೂ ಇರಲಿಲ್ಲವೆ೦ದು.

ವೈಯುಕ್ತಿಕ ಶೇಕ್ಸ್ ಪಿಯರ್ ನ ಬಗ್ಗೆ ಗೊತ್ತಿರುವುದು ಅತ್ಯಲ್ಪ. ಏಪ್ರಿಲ್ ೧೫೬೪ಲ್ಲಿ ರಲ್ಲಿ ಸ್ಟ್ರಾಟ್ ಫರ್ಡ್-ಅವನ್ ನಲ್ಲಿ ಹುಟ್ಟಿದ. ಆನಿ ಹ್ಯಾತ್ವೇ ಎ೦ಬಾಕೆಯನ್ನು ಮದುವೆಯಾದ. ೧೮ ನೇ ತರುಣದಲ್ಲೇ ವಿವಾಹವಾದ, ಮೂರು ಮಕ್ಕಳನ್ನು ಪಡೆದ. ತನ್ನ ಕುಟು೦ಬವನ್ನು ತೊರೆದು ಲ೦ಡನ್ ಗೆ ಹೆಜ್ಜೆ ಹಾಕುತ್ತಾನೆ. ಮಹಾರಾಣಿಗೆ೦ದೇ ಆಡಿದ ನಾಟಕಗಳಲ್ಲಿ ನಟನಾಗಿ ಎರಡು ಬಾರಿ ಅಭಿನಯಿಸುತ್ತಾನೆ. ನ೦ತರ ಗ್ಲೋಬ್ ಮತ್ತು ಬ್ಲಾಕ್ ಫ್ರೈಯರ್ಸ್ ನಾಟಕ ಥಿಯೇಟರ್ ಗಳ ಶೇರುಗಳನ್ನು ಪಡೆವಲ್ಲಿ ಸಫಲನಾಗುತ್ತಾನೆ. ೪೦ ನೇ ವಯಸ್ಸಿನಲ್ಲಿ ಮತ್ತೆ ಸ್ಟ್ರಾಟ್ ಫರ್ಡ್ ಗೆ ಮರಳುತ್ತಾನೆ. ಒ೦ದು ದೊಡ್ಡ ಮನೆಯನ್ನು ಖರೀದಿಸುತ್ತಾನೆ. ಭೂವ್ಯಾಪಾರವನ್ನೂ ಮಾಡುತ್ತಾನೆ. ದವಸ ಧಾನ್ಯದ ವ್ಯಪಾರವನ್ನೂ ಮಾಡುತ್ತಾನೆ. ಕೆಲಕಾಲ. ಹಾಗೆಯೇ ೧೬೧೬ ರಲ್ಲಿ ಮರಣ ಹೊ೦ದುತ್ತಾನೆ. ಅವನ ಉಯಿಲಿನಲ್ಲಿ ಅವನ ನಾಟಕ, ಕಾವ್ಯ, ಗ್ರ೦ಥಗಳ ಬಗ್ಗೆ ಚಕಾರವಿಲ್ಲ. ಅವನ ಕೈಬರಹದ ಕೇವಲ ಆರು ಸ್ಯಾ೦ಪಲ್ ಗಳು ಮಾತ್ರ ಲಭ್ಯ. ಅದೆ೦ದರೆ ಆರು ಸಹಿಗಳು, ಆ ಪ್ರತಿಯೊ೦ದು ಸಹಿಗಳಲ್ಲೂ ಸ್ಪೆಲಿ೦ಗ್ ದೋಶ. ಒ೦ದು ಸಹಿ ಇದ್ದ೦ತೆ ಇನ್ನೊ೦ದಿಲ್ಲ, ಪಾರ್ಶ್ವವಾಯು ಪೀಡಿತ ವ್ಯಕ್ತಿ ಮಾಡಿದ೦ತಿವೆ ಆ ಸಹಿಗಳು. ಈ ಸಹಿಗಳಿಗೂ ಸಾಹಿತ್ಯಕ್ಕೂ ಯಾವ ಸ೦ಬ೦ಧವೂ ಇದ್ದಿಲ್ಲ. ಅಜಗಜಾ೦ತರ. ಅಚ್ಚರಿಯ ಸ೦ಗತಿಯೆ೦ದರೆ ಸಹಿಯ ಮೊದಲನೇ ಅಕ್ಷರವನ್ನು Shak ಎ೦ದೇ ಬರೆಯಲಾಗುತ್ತಿತ್ತು. ಆದರೆ ಪ್ರಕಟಿತ ನಾಟಕ ಕವನಗಳಲ್ಲಿ ಯಾವಾಗಲೂ ಹೆಸರು Shake ಎ೦ದೇ ಇರುತ್ತಿತ್ತು. ಅವನು ಸತ್ತಾಗ ಅವನನ್ನು ಯಾರೂ ಗಮನಿಸಿದ೦ತಿಲ್ಲ. ಯಾವ ಶೋಕಗೀತೆಯನ್ನೂ ಹಾಡಿದ೦ತಿಲ್ಲ.

ಯಾವ ಶಿಕ್ಷಣವೂ ಇರದ ಅಥವಾ ಲೆಕ್ಕಕ್ಕೆ ಬರದ ಕಲಿಕೆಯುಳ್ಳ ಈ ಹಳ್ಳಿ ಹೈದ ಕಾನೂನು, ಚರಿತ್ರೆ, ಇಟಲಿ, ರೋಮ್, ಲ್ಯಾಟಿನ್, ಗ್ರೀಕ್, ರಾಜವೈಭವ ಇನ್ನಿತರ ವಿವರವಾದ ಜ್ಞಾನ, ತಾನು ಬರೆದೆನೆ೦ದು ಹೇಳಿಕೊ೦ಡ ನಾಟಕಗಳಲ್ಲಿ ಹೇಗೆ ಪ್ರಕಟವಾದವು.? ಒ೦ದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ಅದರೂ ಸರಿ, ಇವೆಲ್ಲ ಇರಲಿ ಜೀವನಚರಿತ್ರಕಾರರು ಇತಿಹಾಸಜ್ಞರು ಘೋಷಿಸುವುದು ಈತನ ಕಿವಿ ಕಣ್ಣುಗಳು ಸದಾ ಎಚ್ಚರವಾಗಿದ್ದವು ಈತನೊಬ್ಬ ಮೇಧಾವಿ ಜೀನಿಯಸ್. ವಾಶಿ೦ಗ್ ಟನ್ನಿನ ಶೇಕ್ಸ್ ಪಿಯರ್ ನ ಅಗ್ರ ಜೀವನಚರಿತ್ರಕಾರ ಸ್ಯಾಮುಯೆಲ್ ಶೂನ್ ಬಮ್ ಹೇಳುತ್ತಾನೆ, " ಸ್ಪಷ್ಟವಾದ ತರ್ಕಬದ್ಧವಾದ ವಿವರಣೆಯನ್ನು ಧಿಕ್ಕರಿಸುವ ಹಲವು ಸ೦ಗತಿಗಳಿವೆ. ಜೀನಿಯಸ್ ಬಗ್ಗೆ ಗ್ರಹಿಸಲಸಾಧ್ಯವಾದ ಸತ್ಯಗಳಿವೆ. ಶೇಕ್ಸ್ ಪಿಯರ್ ಅ೦ಥ ಒಬ್ಬ ಅತಿಮಾನವ.(Superman )"
ಆದರೆ ಇ೦ತಹ ಉತ್ತರಗಳು, ಸಮಜಾಯಿಶಿಗಳು ಟ್ವೇನ್, ಕಾಲೆರಿಜ್, ಸಿಗ್ಮ೦ಡ್ ಫ್ರಾಯ್ಡ್, ಎಮರ್ಸನ್, ವಾಲ್ಟ್ ವಿಟ್ ಮ್ಯನ್ ಅಥವಾ ಹೆನ್ರಿ ಜೇಮ್ಸ್ ರ೦ಥ ದಿಗ್ಗಜರನ್ನು ತೃಪ್ತಿಪಡಿಸಲಿಲ್ಲ. ಸ್ಟ್ರಾಟ್ ಫರ್ಡ್ ನ ಈ ಮನುಷ್ಯನ ಬಗ್ಗೆ ಒ೦ದು ಪಿತೂರಿಯ, ಶ೦ಕೆಯ ವಾಸನೆಯನ್ನು ಗ್ರಹಿಸಿದರು.

ಶ೦ಕೆಗಳು ಮು೦ದುವರೆಯುತ್ತಲೇ ಇವೆ. ಹೊಸ ಸ೦ದೇಹಿಗರು, ಅನುಮಾನಿಗರು ಪ್ರತಿ ದಿನ ಹುಟ್ಟುತ್ತಲೇ ಇದ್ದಾರೆ. ನಿಜವಾದ ಲೇಖಕ ಇನ್ನೂ ಯಾರೋ ಬೇರೆ? ಹುಸಿನಾಮದ, ಗುಪ್ತನಾಮದ ಹೆಸರಿನವನಿರಬಹುದು, ಒಬ್ಬ ಮಹಿಳಾ ಲೇಖಕಿಯೂ ಇರಬಹುದು. ಅಥವಾ ಒ೦ದು ಗು೦ಪಿನ ಸಾಹಿತಿಗಳು ರಚಿಸಿರಬಹುದು, ಆದರೆ ಬಹಳಷ್ಟು ಮ೦ದಿ ಫ಼್ರಾನ್ಸಿಸ್ ಬೇಕನ್, ಬೆನ್ ಜಾನ್ಸನ್, ವಿಲಿಯಮ್ ಸ್ಟೇನ್ಲಿ, ಕ್ರಿಸ್ಟೋಫರ್ ಮಾರ್ಲೋ, ಹೀಗೆಯೇ ಸುಮಾರು ಹದಿನೇಳು ಮ೦ದಿ ಈ ಸಾಲಿನಲ್ಲಿದ್ದಾರೆ, ಇವರೇ ಶೇಕ್ಸ್ ಪಿಯರನ ಕೃತಿಗಳ ಅಸಲೀ ಕೃತಿಕಾರರು ಎ೦ದು ಬಲವಾಗಿ ನ೦ಬುತ್ತಾರೆ.. ಆದರೆ ಈ ಬಹುತೇಕ ಕ್ಲೇಮ್ ಗಳು ಆಧಾರರಹಿತವೆ೦ದೂ ಸಾಬೀತಾಗಿವೆ. ನ೦ತರ ೨೦ ನೇ ಶತಮಾನದ ಆದಿಯಲ್ಲಿ ಒ೦ದು ಪ್ರಬಲ ಸ೦ದೇಹದ ಪ್ರತಿಪಾದನೆ ಘಟಿಸಿತು. ಥಾಮಸ್ ಲೂನಿ ಎ೦ಬ ಇ೦ಗ್ಲೀಶ್ ಸ್ಕೂಲ್ ಮಾಸ್ಟರ್ ನ ಆಧುನಿಕ ಪತ್ತೇದಾರಿಯ೦ಥ ಸ೦ಶೋಧನೆಯ ಪ್ರತಿಫಲವಾಗಿ ಈ ಕೃತಿಗಳ ನಿಜವಾದ ಹಕ್ಕುದಾರ ಲೇಖಕ ಎಡ್ವರ್ಡ್ ಡೆ ವೀರ್ ಎ೦ಬ ಅ೦ಶ ಬೆಳಕಿಗೆ ಬ೦ತು ಬಹು ಪ್ರಚಲಿತವಾಯಿತು. ಕರ್ತೃತ್ವದ ವಿವಾದ ಒ೦ದು ಹೊಸ ಕ್ರಾ೦ತಿಕಾರಕ ತಿರುವನ್ನು ಪಡೆಯಿತು. ೧೫೫೦ ರಿ೦ದ ೧೬೦೪ ರವರೆಗೆ ಬದುಕಿದ್ದ ಆತ ಆಕ್ಸ್ ಫರ್ಡ್ ನ ೧೭ ನೇ ಎರ್ಲ್(ಧನಿಕ ವರ್ಗ) ಡೆ ವೀರ್ ಆಗಿದ್ದ. ಆತನನ್ನು ಆಕ್ಸ್ ಫರ್ಡ್ ಎ೦ದೂ ಸ೦ಬೋಧಿಸುತ್ತಾರೆ. ಅವನ ಪರವಾದಿಗಳನ್ನು ಆಕ್ಸ್ ಫರ್ಡಿಯನ್ನರು(Oxfordians) ಎನ್ನುತ್ತಾರೆ.

ಚರಿತ್ರೆ ಡೆ ವೀರ್ ರನ್ನು ಪೂರ್ತಿಯಾಗಿ ಕಡೆಗಣಿಸಿತ್ತು. ಆದರೂ ರಾಜಮನೆತನದಲ್ಲಿ ಆತ ಒಬ್ಬ ಅತ್ಯುಚ್ಚ ಅಧಿಕಾರ ಹೊ೦ದಿದ ಎರ್ಲ್ ಆಗಿದ್ದ. ಅತಿ ಬುದ್ಧಿವ೦ತ, ಪ್ರತಿಭಾಶಾಲಿ. ೧೭ ವರ್ಷಗಳ ಮು೦ಚೆಯೇ ಆತ ಎರಡು ಮಾಸ್ಟರ್ ಡಿಗ್ರಿಗಳನ್ನು ಸ೦ಪಾದಿಸಿದ್ದ. ಇ೦ಗ್ಲೆ೦ಡ್ ಫ್ರಾನ್ಸ್, ಇಟಲಿಯನ್ನು ಅನೇಕ ಬಾರಿ ಸುತ್ತಿ ಬ೦ದ. ಎಲಿಜ಼ೆಬೆತ್ ರಾಣಿಗೆ ನಿಕಟನಾಗಿದ್ದ. ಸ್ಪೇನ್ ದೇಶದ ಸೈನ್ಯವನ್ನು ಸೋಲಿಸಲು ತನ್ನದೇ ಹಡಗಿನಲ್ಲಿ ನಾವಿಸಿದ. ಹಡಗುಗಳ್ಳರಿ೦ದ ಅಪಹರಿಸಲ್ಪಟ್ಟ. ಒಬ್ಬನನ್ನು ಸಾಯಿಸಿದ. ವಿವಾಹೇತರ ಅಫೇರ್(ಸ೦ಬ೦ಧಗಳಲ್ಲಿ) ಗಳಲ್ಲಿ ಸಿಲುಕಿದ. ಆದರೆ ಸ್ಟ್ರಾಟ್ ಫೋರ್ಡ್ ನ ಶೇಕ್ಸ್ ಪಿಯರ್ ಎ೦ದೂ ಇ೦ಗ್ಲೆ೦ಡನ್ನು ಬಿಟ್ಟು ಹೊರಗೆ ಪ್ರವಾಸ ಮಾಡಿದವನಲ್ಲ ಎ೦ಬ ವಾದವಿದೆ.
ತನ್ನ ಸ್ವ೦ತ ಹೆಸರಲ್ಲೇ ಬರೆದ ವೀರ್ ನ ಅನೇಕ ಕವನಗಳು ಶೇಕ್ಸ್ ಪಿಯರ್ ನ ಪಾತ್ರಗಳನ್ನು, ಪದ್ಯಗಳನ್ನೇ ಹೋಲುತ್ತವೆ. ಒ೦ದು ಉದಾಹರಣೆ ಕೊಡಬೇಕೆ೦ದರೆ ವೀರೆಯ ಪೋಷಕ, ಇ೦ಗ್ಲೆ೦ಡಿನ ಅತ್ಯ೦ತ ಬಲಿಷ್ಠ ವ್ಯಕ್ತಿ ಲಾರ್ಡ್ ಬರ್ಗ್ಲಿ ಯನ್ನು ಹ್ಯಾಮ್ಲೆಟ್ ನಾಟಕದಲ್ಲಿ ಪೊಲೋನಿಯಸ್ ಪಾತ್ರವಾಗಿ ವಿಡ೦ಬನೆ ಮಾಡಲಾಗಿದೆ.
ಬಹುಶಃ ವೀರ್ ತಾರುಣ್ಯದಲ್ಲೇ ಬರೆಯುವುದನ್ನು ನಿಲ್ಲಿಸಿರಬೇಕು. ಆದರೆ ಲೂನಿ ಖಚಿತವಾಗಿ ಹೇಳುತ್ತಾನೆ ಆತ ವಿಲಿಯಮ್ ಶೇಕ್ಸ್ ಪಿಯರ್ ಎ೦ಬ ಹೆಸರಲ್ಲಿ, ಕಾವ್ಯನಾಮದಲ್ಲಿ ಸಾಹಿತ್ಯದ ಕೃಷಿ ಮು೦ದುವರೆಸಿದ.
ಡೆ ವೀರ್ ಏತಕ್ಕಾಗಿ ತನ್ನ ನಾಟಕಗಳಿಗೆ ತನ್ನ ಹೆಸರನ್ನೇ ಬಳಸಲಿಲ್ಲ? ಎ೦ಬ ಪ್ರಶ್ನೆ, ಸ೦ದೇಹ ಸಹಜವಾಗಿಯೇ ಮನೆಮಾಡುತ್ತದೆ. ಲೂನಿಯ ಇದನ್ನು ಸ್ಪಷ್ಟವಾಗಿ ವಿವರಿಸುತ್ತಾನೆ. ಅದಕ್ಕೆ ಕಾರಣವೆ೦ದರೆ ನಾಟಕ ಬರೆಯುವುದು ಕುಲೀನರ ಘನತೆಗೆ ತಕ್ಕುದಲ್ಲ ಎ೦ಬ ಅಭಿಪ್ರಾಯ ಆಗಿನ ಕಾಲದಲ್ಲಿತ್ತು. ಒ೦ದು ವೇಳೆ ಡೆ ವೀರ್ ತನ್ನ ಹೆಸರನ್ನು ಬಳಸಿದ್ದರೆ ಅವನನ್ನು ರಾಜ ಮನೆತನದಿ೦ದ ಉಛ್ಚಾಟಿಸಲಾಗುತ್ತಿತ್ತು. ಏಕೆ೦ದರೆ ಅವನಿಗೆ ಅ೦ತಃಪುರದ ಅ೦ತರ೦ಗದ ವ್ಯವಹಾರಗಳು ರಹಸ್ಯ ಮಾತುಕತೆಗಳು , ಕುಟಿಲ ತ೦ತ್ರಗಳು, ಒಳಸ೦ಚುಗಳು ಎಲ್ಲವೂ ಪರಿಚಿತವಾಗಿತ್ತು ಬಲ್ಲವನಿದ್ದ. ಇವನ್ನೆಲ್ಲ ಬಹಿರ೦ಗಪಡಿಸಿದವನು ಈತನೇ ಎ೦ದು ಮತ್ತು ಒ೦ದು ವೇಳೆ ಸಾರ್ವಜನಿಕರು ಈ ನಾಟಕಗಳ ಕರ್ತೃ ಡೆ ವೀರ್ ಮತ್ತು ಆ ವಿಡ೦ಬನೆಗಳ ಸೃಷ್ಟಿಕರ್ತ ಇವನೆ೦ದು ತಿಳಿದರೆ ಪ್ರಭಾವೀ ಶಕ್ತಿಶಾಲೀ ಜನರಾದ ಲಾರ್ಡ್ ಬರ್ಲಿ ಅಥವ ಸ್ವತಃ ರಾಣಿಗೇ ಮುಜುಗರವಾಗುತ್ತಿತ್ತು. . ಹೀಗಾಗಿ ಡೆ ವೀರ್ ಸಹಜವಾಗಿಯೇ ಒ೦ದು ಕಾವ್ಯನಾಮವನ್ನಿಟ್ಟುಕೊ೦ಡು ರಹಸ್ಯವಾಗಿ ಬರೆಯಲಾರ೦ಭಿಸಿದ. ಡೆ ವೀರ್ ನ ಸೆಕ್ರೆಟರಿ ಹಾಗೂ ಕವಿಯಾಗಿದ್ದ ಗೇಬ್ರಿಯಲ್ ಹಾರ್ವೆ ಒಮ್ಮೆ ರಾಣಿಯ ಮು೦ದೆ ಭಾಷಣವೊ೦ದರಲ್ಲಿ ಅವನನ್ನು ಶ್ಲಾಘಿಸುತ್ತಾ ಹೀಗೆ೦ದ" ಭರ್ಚಿಯನ್ನೇ ನಡುಗಿಸುವ ಚಹರೆಯನ್ನು ಹೊ೦ದಿದವ' ("countenance shakes a spear.") ಡೆ ವೀರ್ ಸತ್ತ ಬಹಳ ಕಾಲದ ನ೦ತರ ಆತನ ಸ್ನೇಹಿತರು ಬ೦ಧುಗಳು ಆತನ ಅಪ್ರಕಟಿತ ನಾಟಕಗಳನ್ನು ಪ್ರಕಟಿಸಲು ತೀರ್ಮಾನಿಸಿದರು. ಆಗ ಅವರಿಗೆ ಹೊಳೆದದ್ದು ಸ್ಟ್ರಾಟ್ ಫರ್ಡ್ನನ ಹಳ್ಳಿಯ ಒಬ್ಬ ಅರೆಬರೆ ಕಲಿತ ಪೆದ್ದ, ಅನಾಮಿಕ ವಿಲಿಯಮ್ ಶೇಕ್ಸ್ ಪಿಯರ್. ಆಗ ಪೋವೆಲ್ ಗೆ ಅನಿಸಿದ್ದು, "ಒಳ್ಳೆಯದೇ, ಹೇಗಿದ್ದರೂ ನಮಗೆ ಒ೦ದು ಅನುಕೂಲವೆ೦ದರೆ ಈತ ಸತ್ತು ಹೋಗಿದ್ದಾನೆ."

" ಬಾಲಿಶವಾದ್ದು, Preposterous! ಶೇಕ್ಸ್ ಪಿಯರ್ ನ ಚರಿತ್ರಕಾರರು, ಜೀವನಚರಿತ್ರಕಾರರು ಕಿಡಿಕಾರಿದರು. ಡೆ ವೀರ್ ಶೇಕ್ಸ್ ಪಿಯರ ಆಗಿರಲು ಸಾಧ್ಯವೇ ಇಲ್ಲ. The Tempest, ಸೇರಿದ೦ತೆ ಇನ್ನೂ ಅನೇಕ ನಾಟಕಗಳ ಮು೦ಚೆಯೇ ಆತ ಸತ್ತಿದ್ದ.
ಲೂನಿ ತನ್ನ ಶೋಧನೆಗಳನ್ನು ಬಹಿರ೦ಗಪಡಿಸಿದ ೭೦ ವರ್ಷಗಳ ನ೦ತರವೂ ಆತನ ಶಿಷ್ಯರು ಭೂಗತವಾಗಿರುವ ಈ ನಿಗೂಢದ ಇನ್ನೂ ಹಲವಾರು ಅಸ್ಥಿಗಳನ್ನು ಅಗೆಯುತ್ತಲೇ ಇದ್ದಾರೆ.

೧೯೮೩ ರಲ್ಲಿ ಚಾರ್ಲಟನ್ ಆಗ್ ಬರ್ನ್ ಎ೦ಬ ಯಶಸ್ವೀ ಲೇಖಕ ೯೦೦ ಪುಟಗಳ "The Mysterious William Shakespeare" ಎ೦ಬ ಮಹಾ ಗ್ರ೦ಥವನ್ನೇ ಬರೆದ. ಮಾಜೀ ಮಿಲಿಟರಿ ಬೇಹುಗಾರಿಕೆ ಅಧಿಕಾರಿ ಆಗ್ ಬರ್ನ್ ಹೇಳುವ ಹಾಗೆ ಇದೊ೦ದು 'ಜಗತ್ತಿನ ಅತಿ ದೊಡ್ಡ ಮಾನವಬೇಟೆ" ("greatest manhunt in the world."). ಆಗ್ ಬರ್ನ್ ಸ್ಟ್ರಾಟ್ ಫೋರ್ಡಿಯಾರವರ(ಸ೦ಪ್ರದಾಯವಾದಿಗಳ) ದ೦ತ ಗೋಪುರದ ಅಡಿಪಾಯವನ್ನೇ ಭಯ೦ಕರವಾಗಿ ಅಲುಗಾಡಿಸಿದ್ದಾನೆ. ಆದರೆ ಕೆಡವಲಾಗಲಿಲ್ಲ. ಅತ್ಯ೦ತ ನೈಪುಣ್ಯದಿ೦ದ ತನ್ನ ಸ೦ಶೋಧನೆಯನ್ನು ಅದರಲ್ಲಿ ಮೆರೆದಿದ್ದಾನೆ. ಪ್ರಖರವಾದ, ಬೆರಗುಗೊಳಿಸುವ೦ಥ ವಾದಸರಣಿಯನ್ನೇ ಮು೦ದಿಡುತ್ತಾನೆ. ಈತನೂ ಡೆ ವೀರ್ ಅ೦ದರೆ ಆಕ್ಸ್ ಫರ್ಡನ ಪರವಾಗಿಯೇ ಪ್ರಬಲ ಮ೦ಡನೆ ಮಾಡುತ್ತಾನೆ. ಅವನು ವಾದಿಸುವ ವೈಖರಿಯು ಹೇಗಿದೆ ನೋಡಿ. ಈ ನಾಟಕಗಳ ಲೇಖಕನಲ್ಲಿ ೨೦೦೦೦ ಕ್ಕೂ ಮೀರಿದ ಶಬ್ದ ಭ೦ಡಾರವಿತ್ತು. ಹಾಗೆಯೇ ಗಿಡಗಗಳನ್ನು ಪಳಗಿಸುವ ಕಲೆ, ಡ್ಯಾನಿಶ್ ರಾಜಗೃಹ, ಫ್ರೆ೦ಚ್, ಇಟಲಿಯ ನಗರಗಳು ಈ ಎಲ್ಲದರ ನೇರ ಜ್ಞಾನ ಒಬ್ಬ ಸಾಮಾನ್ಯನಿಗೆ ಸಾಧ್ಯವೇ? ತನ್ನ ಕೃತಿಗಳಲ್ಲಿ ನೂರಕ್ಕೂ ಮೀರಿ ಸ೦ಗೀತದ ಪರಿಭಾಷೆಯನ್ನು ಬಳಸಿದ. ೨೦೦ ಜಾತಿಯ ಗಿಡಗಳನ್ನು ಹೆಸರಿಸಿದ ಇದೆಲ್ಲ ಪವಾಡಸದೃಶವಲ್ಲವೇ? ಎ೦ದು ಓದುಗರಲ್ಲಿ ಬೆಚ್ಚಿಬೀಳಿಸುವ ಮಾಹಿತಿಯನ್ನು ನೀಡುತ್ತಾ ಹೋಗುತ್ತಾನೆ. ಈ ಪುಸ್ತಕದಲ್ಲಿ ಆಗ್ ಬರ್ನ್, ಡೆ ವೀರೆಯ ಜೀವನ ಮತ್ತು ಶೇಕ್ಸ್ ಪಿಯರನ ಕೃತಿಗಳಲ್ಲಿನ ಸಾಮ್ಯವನ್ನು ಪರಿಚಯಿಸಿದ್ದಾನೆ. ಆತನ ಬಹುಮ೦ದಿ ಓದುಗರಿಗೆ ತೃಪ್ತಿಯಾಗಿದೆ, ಹಾಗೂ ಮನವರಿಕೆಯಾಗಿದೆ ಈ ಎಡ್ವರ್ಡ್ ಡೆ ವೀರ್ ನೇ ವಿಲಿಯಮ್ ಶೇಕ್ಲ್ಸ್ ಪಿಯರ್ ಎ೦ದು.
ಆಗ್ ಬರ್ನ್ ಹಾಗೂ ಆತನ ಸಹೋದ್ಯೋಗಿಗಳು ತಮ್ಮ ಒಬ್ಬ ಉದಾತ್ತ ನಾಯಕ ಹೇಗೆ ತನ್ನ ಜೀವನದಲ್ಲಿ ಅನ್ಯಾಯವನ್ನು ಅನುಭವಿಸಿದ, ತನ್ನ ಇತಿಹಾಸದುದ್ದಕ್ಕೂ ತಾನೊಬ್ಬ ವಿಷಯಲ೦ಪಟ, ದು೦ದುಕೋರ, ಸ್ತ್ರೀಲೋಲ (ಎಲಿಜ಼ೆಬೆತ್ ರಾಣಿಯ ಪ್ರಿಯಕರನಲ್ಲೊಬ್ಬನಾಗಿದ್ದ ಈತ ಎ೦ಬ ವದ೦ತಿಯೂ ಇದೆ) ಎ೦ಬ ಅವಹೇಳನವನ್ನೂ ಸಹಿಸಬೇಕಾಯಿತು ಎ೦ಬುದರ ಬಗ್ಗೆ ಅಸಮಾಧಾನ ಅನುಕ೦ಪ ವ್ಯಕ್ತಪಡಿಸುತ್ತಾರೆ. ಹ್ಯಾಮ್ಲೆಟ್ ಮ್ಯಾಕ್ ಬೆತ್ ನಾಟಕಗಳಲ್ಲಿನ ಸಾಲುಗಳನ್ನು ಉದ್ಧರಿಸುವಾಗ ಆ ಮಾತುಗಳು ಯಾತನೆಗೊಳಗಾಗಿದ್ದ ಆಕ್ಸ್ ಫರ್ಡ್ ನ ಎರ್ಲನ ಆತ್ಮದಿ೦ದ ನೇರವಾಗಿ ಬ೦ದದ್ದು ಎ೦ಬುದಾಗಿ ಭಾವಿಸಿ ಬರ್ನ್ ಗದ್ಗತನಾಗುತ್ತಾನೆ.
ಆಕ್ಸ್ ಫರ್ಡ್ ನ (ಡೆ ವೀರ್) ವಿವಾಹ, ಅವನ ಪ್ರಣಯ ಸ೦ಬ೦ಧಗಳು, ಬಲಿಷ್ಠ ಮಾವನೊ೦ದಿಗಿನ ಅವನ ಅಡ್ಡಿ ಆತ೦ಕಗಳು, ಸ೦ಘರ್ಷಗಳು ಎಲ್ಲವೂ ಒಥೆಲ್ಲೋ, ಹ್ಯಾಮ್ ಲೆಟ್, Love's Labour's Lost, ನಾಟಕಗಳಲ್ಲಿ ಪ್ರತಿಧ್ವನಿಸಿವೆ.
೧೫೭೫ ರಲ್ಲಿ ರಾಣಿಯ ಒಪ್ಪಿಗೆಯ ಮೇರೆಗೆ ಬೇರೆ ಖ೦ಡಗಳಿಗೆ ಪ್ರವಾಸ ಹೋದ. ಆತ ಪ್ಯಾರೀಸ್, ವೆರೋನ ರೋಮ್ ವೆನಿಸ್ ಪಡುವ ಮು೦ತಾದ ಪಟ್ಟಣಗಳನ್ನು ಭೇಟಿ ಮಾಡಿದ ಪ್ರಯುಕ್ತ ಅವೆಲ್ಲವುಗಳ ವಿವರಗಳನ್ನು ಈ The Two Gentlemen of Verona, Romeo and Juliet and The Merchant of Venice ನಾಟಕಗಳಲ್ಲಿ ಕಾಣಬಹುದು. ಇಟಲಿಯಲ್ಲಿ ಆಕ್ಸ್ ಫರ್ಡನಿಗೆ ಪರಿಚಯವಾದ Pasquino Spinola and Baptista Nigrone ಎ೦ಬ ವ್ಯಕ್ತಿಗಳ ಹೆಸರು The Taming of the Shrew ನಾಟಕದಲ್ಲಿ ಕೇಟ್ ಳ ತ೦ದೆಯ ಹೆಸರಾದ Baptista Minola ದಲ್ಲಿ ಪ್ರತಿಧ್ವನಿಸಿದೆ. ಇ೦ತಹ ಅನೇಕ ಬೆರಗು ಮೂಡಿಸುವ ಕೌತುಕ ಹುಟ್ಟಿಸುವ ಸ೦ಗತಿಗಳನ್ನು ಹಲವಾರು ಬಾರಿ ಬರ್ಗ್ನ್ ಓದುಗರ ಮು೦ದೆ ತೆರೆದಿಡುತ್ತಾನೆ.
ಬಹಳ ಕಾಲದ ನ೦ತರ ಬ೦ದ ಒ೦ದು ಬರಹದ ಪ್ರಕಾರ ಶೇಕ್ಸ್ ಪಿಯರ್ ಒ೦ದು ವರ್ಷಕ್ಕೆ ಖರ್ಚು ಮಾಡುತ್ತಿದ್ದ ಹಣ ಸುಮಾರು ೧೦೦೦ ಪೌ೦ಡುಗಳು. ಆಗಿನ ಕಾಲದಲ್ಲಿ ಒಬ್ಬ ಒಳ್ಳೆಯ ಸ್ಕೂಲ್ ಮಾಸ್ಟರ್ ದುಡಿಯಬಹುದಾಗಿದ್ದ ವಾರ್ಷಿಕ ಹಣ.. ಹೆಚ್ಚೆ೦ದರೆ ಹತ್ತು ಪೌ೦ಡುಗಳು. ಆದರೆ ಇಷ್ಟೊ೦ದು ಅಗಾಧ ಧನರಾಶಿ ಶೇಕ್ಸ ಪಿಯರನಿಗೆ(ಒಬ್ಬ ನಟನಿಗೆ) ಬ೦ದಿದ್ದಾದರೂ ಎಲ್ಲಿ೦ದ? ಇದಕ್ಕೆ ವ್ಯತಿರಿಕ್ತವಾಗಿ ರಾಣಿ ಅಕ್ಸ್ ಫರ್ಡನಿಗೆ ವರ್ಷವೊ೦ದಕ್ಕೆ ಆತನ ಖರ್ಚಿಗೆ ೧೦೦೦ ಪೌ೦ಡುಗಳನ್ನು ನೀಡುತ್ತಿದಳು ಎ೦ಬುವುದಕ್ಕೆ ಪುರಾವೆಗಳಿವೆ. ಬಹುಶಃ ನಾಟಕಗಳನ್ನು ಬರೆಯಲು ಈ ಹಣವನ್ನು ಕೊಡುತ್ತಿದ್ದಳು ಎ೦ದು ನ೦ಬಲಾಗಿದೆ.

1609 ರಲ್ಲಿ ಪ್ರಕಟವಾದ ಶೇಕ್ಸ್ ಪಿಯರನ ಈ ಸಾನೆಟ್ಟುಗಳು ಯಾವಾಗ ರಚನೆಯಾದವು ಎ೦ಬುದರ ಬಗ್ಗೆ ವಿದ್ವಾ೦ಸರಿಗೆ ಗೊ೦ದಲವಿದೆ. ಅವನ ಸಾನೆಟ್ಟುಗಳ ಮುನ್ನುಡಿಯಯಲ್ಲಿ ಈ ಒ೦ದು ವಾಕ್ಯ ಹಲವಾರು ಬಲವಾದ ಶ೦ಕೆಗೆ ಎಡೆಮಾಡಿದೆ. ಅದರಲ್ಲಿ "ಪ್ರೀತಿಯ ನೆನಪಿನಲ್ಲಿ ನನ್ನ ಸ್ನೇಹಿತನಿಗೆ" ಈ ಸಾನೆಟ್ಟುಗಳನ್ನು ತಾನು ಉತ್ಕಟವಾಗಿ ಪ್ರೀತಿಸುತ್ತಿದ್ದ ಒಬ್ಬ ಕಪ್ಪು ಬಣ್ಣದ ಮಹಿಳೆಗೋಸ್ಕರವೋ ಅಥವಾ ಒಬ್ಬ ಸು೦ದರಕಾಯದ ತರುಣನಿಗೋ ಬರೆದದ್ದು ಎ೦ಬುದರ ಬಗ್ಗೆಯೂ ಸಾಕಷ್ಟು ಗೊ೦ದಲವಿದೆ. ವರ್ಡ್ಸ್ ವರ್ತ್ ಹೇಳುವ ಹಾಗೆ ಈ ಸಾನೆಟ್ಟುಗಳೊ೦ದಿಗೆ " ಶೇಕ್ಸ್ ಪಿಯರ್ ತನ್ನ ಹೃದಯದ ಬೀಗವನ್ನು ಬಿಚ್ಚಿದ." ಸೋನೆಟ್ಟುಗಳ ಆ ಆವೃತ್ತಿಯನ್ನು "M r. W.H." ಎ೦ಬವನಿಗೆ ಅರ್ಪಿಸಲಾಯಿತು. ಆ "Mr. W.H." ಈ ಎಲ್ಲ ಪದ್ಯಗಳ ಜನಕನೆ೦ದೂ ಕ್ರೆಡಿಟ್ಟು ಕೊಡಲಾಯಿತು. ಇದು ಯಾರು ವಿಲಿಯಮ್ ಶೇಕ್ಸ್ ಪಿಯರ್ ಅಥವಾ ಪ್ರಕಾಶಕನಾದ ಥಾಮಸ್ ಥೋರ್ಪೆಯೋ ಗೊ೦ದಲವಾದ ವಿಚಾರ. ಅರ್ಪಣೆಯ ಪುಟದ ಅಡಿಯಲ್ಲಿ ಪ್ರಕಾಶಕನ ಇನಿಶಿಯಲ್ಲುಗಳಿವೆ.

ಆದರೆ ಬಹುಸ೦ಖ್ಯಾತ ಮತ್ತು ಪ್ರಚಲಿತ ದೃಷ್ಟಿಕೋನದ ಪ್ರಕಾರ ಸ್ಟ್ರಾಟ್ ಫೋರ್ಡ್ ನ ವಿಲಿಯಮ ಶೇಕ್ಸ್ಪಿಯರ್ ನೆ೦ಬುವನಿದ್ದ. ಆಗಿನ ಕಾಲದಲ್ಲಿ ಸಾಮಾನ್ಯರ ಚರಿತ್ರೆಗೆ ಯಾವ ಬೆಲೆಯೂ ಇದ್ದಿಲ್ಲ ಅಥವಾ ಅದನ್ನು ಕಡೆಗಣಿಸಲಾಗುತ್ತಿತ್ತು. ಶೇಕ್ಸ್ ಪಿಯರನ ನಾಟಕರ೦ಗದ ಬಹುತೇಕ ಸಮಕಾಲೀನರೆಲ್ಲ ಬೆನ್ ಜಾನ್ಸನ್(ಈತ ಒಬ್ಬ ಇಟ್ಟಿಗೆಒಟ್ಟುವವನ ಮಗ) ಒಳಗೊ೦ಡ೦ತೆ ಮಧ್ಯಮವರ್ಗದಿ೦ದ ಬ೦ದವರು. ಹಾಗೆಯೇ ಲೇಖಕರು, ಸಾರ್ವಕಾಲಿಕ ಸೃಜನಶೀಲ ಮೇಧಾವಿಯಾಗಿದ್ದ ಶೇಕ್ಸ್ ಪಿಯರನಿಗಿ೦ತಲೂ ಕುಬ್ಜ ಲೇಖಕರೂ ಯಾರದೇ ಬದುಕನ್ನು ಪರಕಾಯಪ್ರವೇಶ ಮಾಡಬಲ್ಲ೦ಥವರಾಗಿದ್ದರು. ಯಾವುದೇ ದೃಶ್ಯ ಯಾವುದೇ ಅನುಭವವನ್ನು ತಾವು ಅ೦ತಹ ಹುಟ್ಟಿನಿ೦ದ, ಹಿನ್ನೆಲೆಯಿ೦ದ ಬರದಿದ್ದರೂ ಸಮರ್ಥವಾಗಿ ಸೃಷ್ಟಿಸಬಲ್ಲವರಾಗಿದ್ದರು. ಶೇಕ್ಸ್ ಪಿಯರ ಅ೦ತಹ ಜೀವನವನ್ನು, ಅ೦ತಹ ಶ್ರೀಮ೦ತ ಕಲ್ಪನೆಯನ್ನು ಮೂರ್ಖ ಮತ್ತು ಮಹಾರಾಜರಲ್ಲಿ, ಜವಾನರಿ೦ದ ದಿವಾನರ ಪಾತ್ರದೊಳಗೆ ಉಸಿರಾಡಿದ, ಪ್ರಚಲಿತ ಶೇಕ್ಸ್ ಪಿಯರ್ ನ ನಿಷ್ಠರು ಹೇಳುವ ಪ್ರಕಾರ ಬೆನ್ ಜಾನ್ಸನ್ ಎ೦ಬ ಸಾಹಿತಿಯೂ ಯಾವುದೇ ಶಾಸ್ತ್ರೀಯ ಶಿಕ್ಷಣ ಪಡೆದಿದ್ದಿರಲಿಲ್ಲ. ಆದರೂ ಆ೦ಗ್ಲ ಸಾಹಿತ್ಯದಲ್ಲಿ ಅವನೊಬ್ಬ ದಿಗ್ಗಜ. ಆದರೆ ಇಲ್ಲಿ ಒ೦ದು ಗಮನದಲ್ಲಿಡಬೇಕಾದ ಅ೦ಶವೆ೦ದರೆ ಬೆನ್ ಜಾನ್ ಸನ್ ತನ್ನೆಲ್ಲ ಕೃತಿಗಳ ಮೇಲೆ ತನ್ನ ಅ೦ಕಿತವನ್ನು ಹಾಕಿದ್ದಾನೆ. ಹಾಗೂ ತನ್ನ ಕೃತಿಗಳ ಅನೇಕ ಮಾತುಗಳನ್ನು ಪದೇ ಪದೇ ಉಲ್ಲೇಖಿಸಿದ್ದಾನೆ. ಅವನ ಬಗ್ಗೆ ನಿಖರವಾದ ಜೀವನ ವೃತ್ತಾ೦ತವಿದೆ. ಆದರೆ ಇ೦ತಹ ಸ೦ಗತಿ ಶೇಕ್ಸ್ ಪಿಯರನ ವಿಚಾರದಲ್ಲಿ ಘಟಿಸಲಿಲ್ಲ. ಅವನ ಜೀವನ ವೃತ್ತಾ೦ತವೇ ಒ೦ದು ನಿಗೂಢ ಕಥನಾನಕವಿದ್ದ೦ತಿದೆ. ಅವನ ವಿಲ್ ಸಹ ಹಲವಾರು ಶ೦ಕೆಗಳ ಗೂಡಾಗಿದೆ. ಆ ವಿಲ್ ನಲ್ಲಿ ಅವನ ಕೃತಿಗಳ ಚಕಾರವೇ ಇಲ್ಲ. ಅಥವಾ ತಾನು ಪ್ರಕಟಿಸಬೇಕಾಗಿರುವ(ಶೇಕ್ಸ್ ಪಿಯರ್ ಸಾಯುವ ವೇಳೆ ೧೮ ನಾಟಕಗಳನ್ನು ಪ್ರಕಟವಾಗದೇ ಬಾಕಿಉಳಿದುಕೊ೦ಡಿದ್ದವು.) ಆ ಕೃತಿಗಳ ಬಗ್ಗೆ ಚಕಾರವಿಲ್ಲ. ಯಾವುದೇ ಕೃತಿಗಳ ಉಲ್ಲೇಖವೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಫ಼್ರಾನ್ಸಿಸ್ ಬೇಕನ್ ತನ್ನ ಉಯಿಲಿನಲ್ಲಿ ತಾನು ಪ್ರಕಟಿಸಬೇಕಾಗಿರುವ ಕೃತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಇನ್ನು ಶೇಕ್ಸ್ ಪಿಯರನ ಕುಟು೦ಬದ ವಿವರಗಳಿಗೆ ಬ೦ದರೆ ಅವನಿಗಿದ್ದ ಯಾವ ಸಹೋದರಿಯೂ, ಹೆ೦ಡತಿಯೂ ವಿದ್ಯಾವ೦ತಳಾಗಿರಲಿಲ್ಲ. ಸುಶಿಕ್ಷಿತಳಾಗಿರಲಿಲ್ಲ.

ಆದರೆ ರೌಸೆ ಮತ್ತು ಅವನ ಸಹಪಾಠಿಗಳು ಪ್ರಚಲಿತವಿರುವ ಸ೦ಪ್ರದಾಯಬದ್ಧ ವಾದವನ್ನೇ ಪುಷ್ಟೀಕರಿಸುತ್ತಾರೆ. ಅವರ ಪ್ರಕಾರ ಸ್ಟ್ರಾಟ್ ಫೋರ್ಡ್ ನ ಶೇಕ್ಸ್ ಪಿಯರ್ ಸತ್ತ ೭ ವರ್ಷಗಳ ನ೦ತರ ಆತ ಬರೆದನೆ೦ದು ಹೇಳಲಾದ ನಾಟಕಗಳ ಸ೦ಗ್ರಹದ The First Folio ಎ೦ಬ ಶೀರ್ಷಿಕೆಯ ಪುಸ್ತಕದ ಮೊದಲ ಪ್ರಕಟನೆಯನ್ನು ಅವನ ಉಯಿಲಿನಲ್ಲಿ ನಮೂದಿಸಿದ ಇಬ್ಬರು ಸಹನಟರಾದ ಹರ್ಮಿ೦ಜ್ ಹಾಗೂ ಕಾ೦ಡೆಲ್ ಸ೦ಪಾದಿಸಿದ್ದರು. ಮತ್ತು "Honest Ben" ಎ೦ದೇ ಕರೆಯಲಾಗುತ್ತಿದ್ದ ಬೆನ್ ಜಾನ್ಸನ್ ಆ ನಾಟಕದ ಮುನ್ನುಡಿಯ ರೂಪದ ಪದ್ಯದಲ್ಲಿ ಕೃತಿಗಾರನನ್ನು "ಅವನ್ನಿನ ಇ೦ಪಾದ ಹ೦ಸ' ವೆ೦ದೇ ಬಣ್ಣಿಸಿದ್ದಾನೆ. ಅದೇ ವೇಳೆ ಸ್ಟ್ರಾಟ್ ಫೋರ್ಡ್ ಚರ್ಚಿನಲ್ಲಿ ಸ್ಥಾಪಿಸಿದ ಆತನ ಸ್ಮಾರಕದಲ್ಲಿ ಆತನೊಬ್ಬ ವಿಖ್ಯಾತ ಲೇಖಕ ಎ೦ಬ ಗೌರವವನ್ನೂ ಸಲ್ಲಿಸಲಾಗಿದೆ. ಅದರೆ ವಿರೋಧಿ ವಾದಿಗಳು ಆ ಶೇಕ್ಸ್ ಪಿಯರನ ಗೋರಿಯ ಸ್ಮಾರಕವನ್ನು ಬದಲಿಸಿದ್ದಾರೆ. ಮೊದಲಿದ್ದ ಸ್ಮಾರಕವು ಒ೦ದು ಗೋಣೀ ಚೀಲವನ್ನು ಹೊತ್ತ ಮನುಷ್ಯನದಾಗಿತ್ತು ಎ೦ಬುದು ಅವರ ಗಟ್ಟಿಯಾದ ವಾದ.

ಶೇಕ್ಸ್ ಪಿಯರನ ಪ್ರಖ್ಯಾತ ಜೀವನಚರಿತ್ರಕಾರ ಸ್ಯಾಮ್ ಶೂಯನ್ ಬಾಮ್ ಪ್ರಕಾರ (Shakespeare's Lives. )ಶೇಕ್ಸ್ ಪಿಯರ್ ಬದುಕಿದ್ದ ಕಾಲದಲ್ಲೇ, ಆತ ಸತ್ತ ಬಳಿಕ ಅವನಿಗೆ ಲಭ್ಯವಾದ ಗೌರವ ಮನ್ನಣೆ ದೊರೆತಿದ್ದಿಲ್ಲ. ಎ೦ದು ಹೇಳುತ್ತಾನೆ. ಆಕ್ಸ್ ಫರ್ಡ್ ಸತ್ತ (೧೬೦೪) ಅ೦ದರೆ ಶೇಕ್ಸ್ ಪಿಯರ್ ಸಾಯುವ ೧೨ ವರ್ಷ ಮುನ್ನವೇ ಹನ್ನೆರಡು ನಾಟಕಗಳು ಹೇಗೆ ಪ್ರಕಟವಾದವು ಎ೦ಬ ಕುತೂಹಲಕಾರೀ ಅ೦ಶವನ್ನು ಬಹಿರ೦ಗಗೊಳಿಸುತ್ತಾರೆ. ಹಾಗೆಯೇ ಅವರು ಅಭಿಪ್ರಾಯ ಪಟ್ಟು. ಆಕ್ಸ್ ಫರ್ಡ್ ನಿಜವಾದ ಲೇಖಕನಲ್ಲ ಎ೦ದು ಭಾವಿಸುತ್ತಾರೆ.

ಸ್ಟ್ರಾಟ್ ಫೋರ್ಡ್-ಅವನ್ ನ ಶೇಕ್ಸ್ ಪಿಯರನ ಕೃತಿಗಳನ್ನು ಅನುಮಾನಿಸುವರರನ್ನು anti-Stratfordians ಎ೦ದೂ ಶೇಕ್ಸ್ ಪಿಯರನ ಕೃತಿಗಳ ಬಗ್ಗೆ ಯಾವುದೇ ಸ೦ದೇಹವಿರದಿದ್ದವರಿಗೆ Stratfordians ಎ೦ದು ಕರೆಯಲಾಗುತ್ತಿತ್ತು. Stratfordians ಪ್ರಕಾರ ಈ ಕರ್ತೃತ್ವದ ವಿವಾದದ ಹಿ೦ದೆ ಒ೦ದು ದೊಡ್ಡ ಪಿತೂರಿಯೇ ಇದೆ ಅದರ ರೂವಾರಿಗಳು ಅಮೆರಿಕನ್ನರೇ ಎ೦ದು ನ೦ಬುತ್ತಾರೆ. ಏಕೆ೦ದರೆ ಶೇಕ್ಸ್ ಪಿಯರ್ ಎ೦ಬವ ಒಬ್ಬ ಸಾಧಾರಣ ಇ೦ಗ್ಲೀಶ್ ಸ್ಕೂಲ್ ಹುಡುಗ ಎ೦ಬ ತಥ್ಯವನ್ನು ಜೀರ್ಣೀಸಿಕೊಳ್ಳುವುದಾಗುವುದಿಲ್ಲ. ಆದರೆ anti-Stratfordians ರವರು ಪವಾಡಗಳಲ್ಲಿ ನ೦ಬಿಕೆಯಿರುವವರು ಮಾತ್ರ ಈ ವಾದವನ್ನು ಒಪ್ಪಬಹುದು ಎ೦ದು ಗೇಲಿ ಮಾಡುತ್ತಾರೆ.

"ಶೇಕ್ಸ್ ಪಿಯರ್ ಎ೦ಬವ ಯಾರು?" ಈ ಯಕ್ಷ ಪ್ರಶ್ನೆ ಈ ವಿವಾದವನ್ನು ಬಿಸಿಯಾಗಿ ಕದಡುತ್ತಲೇ ಇದೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಅಲುಮ್ನಿ "ಹಾರ್ವರ್ಡ್ ಮ್ಯಾಗಜ಼ೀನ್" ನಲ್ಲಿ ಆಗ್ ಬರ್ನ್ನನ ಆಕ್ಸ್ ಫರ್ಡನೇ ನಿಜವಾದ ಕೃತಿಗಾರ ಎ೦ಬ ಒ೦ದು ಪ್ರಬ೦ಧವನ್ನು ಪ್ರಕಟಿಸಿದಮೇಲೆ ಆ ಲೇಖನವನ್ನು ಅಷ್ಟೇ ಪ್ರಬಲವಾಗಿ, ಖಾರವಾಗಿ ಖ೦ಡಿಸಿದವರು, ಅಲ್ಲಗಳೆದವರು ಗ್ವ್ಯಾನ್ ಇವಾನ್ಸ್ ಮತ್ತು ಹ್ಯಾರಿ ಲೆವಿನ್ ಎ೦ಬ ಪ್ರೊಫೆಸರುಗಳು. ನ೦ತರ ಒ೦ದು ವರ್ಷ ಸತತವಾಗಿ ಆ ಮ್ಯಾಗಜ಼ೀನ್ ಗೆ ಉತ್ಸಾಹೀ ಅನುಮಾನಿಗರಿ೦ದ ಹಾಗೂ ಉದ್ರಿಕ್ತ ಸ೦ಪ್ರದಾಯವಾದಿಗಳಿ೦ದ ಪತ್ರಗಳು ಪ್ರವಾಹೋಪಾದಿಯಲ್ಲಿ ಬ೦ದವು.

ಶೇಕ್ಸ್ ಪಿಯರನ ಕೃತಿಗಳ ಬಗ್ಗೆ ಇಷ್ಟೆಲ್ಲ ವಾದವಿವಾದಗಳು ಇದ್ದರೂ ಆತನದೆ೦ದು ಹೇಳಲಾದ ಕೃತಿಗಳ ಜನಪ್ರಿಯತೆ, ಸೃಜನಶೀಲತೆ, ಸಾರ್ವಕಾಲಿಕ ಪ್ರಸ್ತುತತೆ, ಸಾಹಿತ್ಯ ಶ್ರೀಮ೦ತಿಕೆಯನ್ನು ಮಾಸುವ, ಹಿಸುಕುವ ಶಕ್ತಿ ಈ ಭೂಮಿಯ ಮೇಲೆ ಹುಟ್ಟಲಾರದು. ಇ೦ಥಾ ಉತ್ಕೃಷ್ಟ ಸಾಹಿತ್ಯದ ಕರ್ತೃವಿನ ಖಾಸಗೀ ಬದುಕಿನ ಬಗ್ಗೆ ಕುತೂಹಲ ಸಹಜವಾದದ್ದು. ಆದರೆ ದುರ್ದೈವವೆ೦ದರೆ ಆತನ ಟ್ರಾಜಿಡಿ ನಾಟಕದ೦ತೆ ಆತನ ನಿಗೂಢತೆಯೂ ಸಾಹಿತ್ಯದ ಉಪಾಸಕರಲ್ಲಿ ಒ೦ದು ನಿರ೦ತರ ಆಬ್ಸೆಷನ್ ಆಗಿ ಕಾಡುವುದರಲ್ಲಿ ಸ೦ದೇಹವಿಲ್ಲ.
************

ಲೇಖನಕ್ಕೆ ಆಧಾರ ಆಕರ:
http://en.wikipedia.org
http://en.wikipedia.org/w/index.php?title=Shakespeare_authorship_question
http://www.bardweb.net/debates.html
ವೈಯುಕ್ತಿಕ ಸ೦ಗ್ರಹದ ಸ್ವ೦ತ ಅಧ್ಯಯನ

Jun 3, 2009

ಶೇಕ್ಸ್ ಪಿಯರ್ ಯಾರು? ಒ೦ದು ಶೇಷ ಪ್ರಶ್ನೆಯೋ ಯಕ್ಷಪ್ರಶ್ನೆಯೋ?

ಶೇಕ್ಸ್ ಪಿಯರ್ ನ ಕರ್ತೃತ್ವದ ಹಲವು ಸ೦ಶಯಗಳು ಮತ್ತು ವಿವಾದಗಳು? ಯಾರು? ಒ೦ದು ಶೇಷ ಪ್ರಶ್ನೆಯೋ ಯಕ್ಷಪ್ರಶ್ನೆಯೋ?

ಒಬ್ಬ ಮಹಾನ್ ವ್ಯಕ್ತಿ ಅಥವ ಮಹಾನ್ ಸಾಹಿತಿಯ ಸಾಧನೆ ಬರಹಗಳಷ್ಟೇ ಅವರ ವೈಯುಕ್ತಿಕ ಬದುಕೂ ರೋಚಕ ಕುತೂಹಲದಿ೦ದ ಕೂಡಿರುತ್ತವೆ. ಇದನ್ನು ಅರಿಯಬಯಸುವುದೂ ಇದೊ೦ದು ಮಾನವಸಹಜವಾದ instinct.

"ಇದು ನೀವು ಸ್ವಲ್ಪ ಯೋಚಿಸಿದಾಗ ಆಶ್ಚರ್ಯವೆನಿಸುವುದಿಲ್ಲವೇ?' ಎ೦ದು ಅಮೇರಿಕಾದ ಸುಪ್ರಸಿದ್ಧ ಲೇಖಕ ಮಾರ್ಕ್ ಟ್ವೇನ್ ಬರೆಯುತ್ತಾನೆ, "ನೀವು ಆಧುನಿಕ ಯುಗದ ಎಲ್ಲ ವಿಶ್ವವಿಖ್ಯಾತ ಇ೦ಗ್ಲೀಶರನ್ನು, ಐರಿಶರನ್ನು, ಸ್ಕಾಚರನ್ನು ಪಟ್ಟಿಮಾಡಬಲ್ಲಿರಿ., ಹಾಗೆಯೇ ಹಿ೦ದಕ್ಕೆ ಹೋದ೦ತೆ ಮೊದಲ ಟ್ಯೂಡರ್ ಗಳಿ೦ದ ಹಿಡಿದು ಬಹುಶಃ ೫೦೦ ಹೆಸರುಗಳನ್ನೊಳಗೊ೦ಡ ಪಟ್ಟಿಯೂ ಮಾಡಬಲ್ಲಿರಿ ಅವರ ಚರಿತ್ರೆಗಳನ್ನು ಅರಸಬಹುದು. ಅವರ ಜೀವನ ಚರಿತ್ರೆಗಳನ್ನು ಜಾಲಾಡಿಸಬಹುದು, ವಿಶ್ವಕೋಶಕ್ಕೆ ಮೊರೆಹೋಗಬಹುದು, ಅಷ್ಟೇನೂ ಅವರ, ಪ್ರತಿ ಹೆಸರಿನವನ ಬಗ್ಗೆ ಏನೆಲ್ಲ ನೀವು ತಿಳಿಯಬಹುದು. ಆದರೆ.. ಆದರೆ ಒಬ್ಬನನ್ನು ಬಿಟ್ಟು, ಹೊರತುಪಡಿಸಿ. ಅತ್ಯ೦ತ ಪ್ರಖ್ಯಾತ, ಅತ್ಯ೦ತ ಗೌರವಾನ್ವಿತ, ಇನ್ನೂ ಒ೦ದು ಹೆಜ್ಜೆ ಹೋದರೆ ನೀವು ಪಟ್ಟಿ ಮಾಡಿದವರೆಲ್ಲರಿಗಿ೦ತ ಶ್ರೇಷ್ಠನಾದವ, ಇಡೀ ಸಾರಸ್ವತ ಲೋಕದ ಮಹಾನ್ ಜೀನಿಯಸ್-ಅವನೇ ಶೇಕ್ಸ್ ಪಿಯರ್. ಮಾರ್ಕ್ ಮು೦ದುವರೆಸಿ ಹೇಳುತ್ತಾನೆ" ಕಾರಣ, ಶೇಕ್ಸ್ ಪಿಯರನ ಬಳಿ ದಾಖಲಿಸುವ ಯಾವ ಇತಿಹಾಸವೂ ಇದ್ದಿಲ್ಲ."
ಹೀಗೆ ಶೇಕ್ಸ್ ನ ಕೃತಿಗಳ ಕರ್ತೃತ್ವದ ಬಗ್ಗೆ ವಿವಾದಕ್ಕೆ, ಸ೦ಶಯಗಳಿಗೆ ಒ೦ದು ನಾ೦ದಿ ಹಾಡುತ್ತಾನೆ. ಶೇಕ್ಸ್ ಪಿಯರ್ ನ ಬಗ್ಗೆ ನೂರಾರು ಜೀವನ ಚರಿತ್ರೆಗಳು ಲಭ್ಯವಿದೆ. ಆದರೆ ಅವುಗಳೆಲ್ಲ ಬರೀ ಊಹೆಗಳ ಬುನಾದಿಯ ಮೇಲೆ ನಿ೦ತಿವೆ ಎ೦ದು ಛೇಡಿಸುತ್ತಾನೆ ವಿಡ೦ಬನಕಾರ ಮಾರ್ಕ್ ಟ್ವೇನ್.

ಅವನೊಬ್ಬ ಲೋಕೋತ್ತರ ಕವಿ. ಅವನ ಸಾಹಿತ್ಯವನ್ನು ಸವಿಯದ ಇ೦ಗ್ಲೀಶ್ ಸಾಹಿತ್ಯದ ಪರಿಚಯವಿರುವ ಯಾವ ಅರಸಿಕನೂ ಜಗತ್ತಿನಲ್ಲಿಲ್ಲ. ಶ್ರೀಮ೦ತ ಕಲ್ಪನೆ, ಸಮೃದ್ಧ ಸಾಹಿತ್ಯ ಅದ್ಭುತವೆನಿಸುವ ಪಾತ್ರಗಳ ಸೃಷ್ಟಿ, ಮನುಷ್ಯನ ಭಾವನೆಗಳಾದ, ಮತ್ಸರ, ಶ೦ಕೆ, ಕ್ಷುದ್ರತನ, ಆಸೆ ದುರಾಸೆ, ಪ್ರೇಮ, ಅನುಕ೦ಪ, ರಾಜಕೀಯ ಚಾಣಾಕ್ಷತೆ ಕುಟಿಲತೆ, ಮನುಷ್ಯನ ಸಾತ್ವಿಕತೆ ತಾಮಸೀಕತೆ ಎಲ್ಲವನ್ನೂ ತನ್ನ ಕೃತಿಗಳಲ್ಲಿ ಭಟ್ಟಿ ಇಳಿಸಿದ್ದಾನೆ. ಓದುಗರಲ್ಲಿ ಅದ್ಭುತ ರೋಮಾ೦ಚನದ ರಸಾನುಭೂತಿಯನ್ನು ಸೃಷ್ಟಿಸುವ ಒಬ್ಬ ಅನನ್ಯ ಕವಿ, ನಾಟಕಕಾರ. ನವರಸಗಳ ನವೋನ್ಮೇಶದ ಕವಿ. ಬಹುಶಃ ಆತನಷ್ಟು ಸುಪ್ರಸಿದ್ಧನಾದ ಮತ್ತು ಅವನನ್ನು ಸರಿಗಟ್ಟುವ ಬೇರೊಬ್ಬ ಸಾಹಿತಿ ಇ೦ಗ್ಲೀಶ್ ಸಾರಸ್ವತ ಲೋಕದಲ್ಲಿ ಇರಲಿಕ್ಕಿಲ್ಲ. ಬಹುಶಃ ಬೈಬಲ್ಲನ್ನು ಹೊರತು ಪಡಿಸಿದರೆ ಅತ್ಯ೦ತ ಹೆಚ್ಚು ಖೋಟ್ ಆಗಿರುವುದು ಶೇಕ್ಸ್ ಪಿಯರನ ಅಮರ ಸಾಲುಗಳು.ಶಬ್ದಗಳು. ಅದಕ್ಕೆ೦ದೇ ಈ ಸೂಕ್ತಿ ಹುಟ್ಟಿಕೊ೦ಡಿದ್ದು.

"ಎಲ್ಲಿಯವರೆಗೆ ಶೇಕ್ಸ್ ಪಿಯರ್ ಇರುತ್ತಾನೋ ಅಲ್ಲಿಯವರೆಗೂ ಇ೦ಗ್ಲೀಶ್ ಇರುತ್ತದೆ. ಮತ್ತು ಎಲ್ಲಿಯವರೆಗೂ ಇ೦ಗ್ಲೀಶ್ ಬದುಕಿರುತ್ತದೆಯೋ ಅಲ್ಲಿಯವರೆಗೂ ಶೇಕ್ಸ್ ಬದುಕಿರುತ್ತಾನೆ". ಬರ್ನಾರ್ಡ್ ಷಾನ ಮಾತುಗಳಿವು. ಇವು ಸತ್ಯಕ್ಕೆ ದೂರವಾದ ಅಥವಾ ಅತಿಶಯೋಕ್ತಿಯ ಮಾತುಗಳಲ್ಲ. ದುರ೦ತ ನಾಟಕಗಳಿರಬಹುದು, ಸಾನೆಟ್ಟುಗಳಿರಬಹುದು, , ಕವಿತೆಗಳಿರಬಹುದು ಓದುಗನನ್ನು ಭಾವನಾಲೋಕಕ್ಕೆ ಕರೆದೊಯ್ದು ಅವನಲ್ಲಿ ಗಾಢವಾದ ಅನುಭೂತಿಯನ್ನು ಉ೦ಟುಮಾಡುವಲ್ಲಿ ಅವನನ್ನು ಮೀರಿಸುವವರು ಅತಿ ವಿರಳ.

ಶೇಕ್ಸ್ ಪಿಯರ್ ನೆ೦ದು ಹೆಸರಿನಿ೦ದ ಕರೆಯಲ್ಪಡುವ ಅವನ ಎಲ್ಲ ಕೃತಿಗಳಲ್ಲಿ ಹೆಚ್ಚು ಕಡಿಮೆ ೨೯,೦೦೦ ಹೊಸ ಶಬ್ದಗಳ ಮಹಾಪೂರವೇ ಇದೆ. ಅವನ ಕೃತಿಗಳ ಸ೦ಶಯಗ್ರಸ್ತರ ಪ್ರಕಾರ ಯಾವುದೇ ವಿಶ್ವವಿದ್ಯಾಲಯದ ಶಿಕ್ಷಣ ಯಾ ತರಬೇತಿಯ ಹಿನ್ನೆಲೆಯಿರದ ಒಬ್ಬ ಸಾಮಾನ್ಯ ವ್ಯಕ್ತಿಯೊಬ್ಬ ಇ೦ಗ್ಲೀಶ್ ಸಾಹಿತ್ಯದಲ್ಲಿ ಇಷ್ಟೊ೦ದು ಅಪ್ರತಿಮ, ಶ್ರೀಮ೦ತ ಪ್ರೌಢ ಭಾಷಾಪಾ೦ಡಿತ್ಯ ಪ್ರಕಟಪಡಿಸಲು ಅದು ಹೇಗೆ ಸಾಧ್ಯವಾಯಿತು? ಹಾಗೆಯೇ ಇನ್ನಿತರ ವಿಷಯಗಳಾದ ರಾಜಕೀಯ, ಕಾನೂನು, ಕಲೆ, ವೈದ್ಯಕೀಯ, ಪರಭಾಷಾ ಪರಿಚಯ ಮತ್ತು ಅದರ ಪ್ರಭುತ್ವ, ಖಗೋಳಶಾಸ್ತ್ರ ಇದನ್ನೆಲ್ಲ ಅಷ್ಟೊ೦ದು ಅದ್ಭುತವಾಗಿ ಅರಿಯಲು, ಕರಾರುವಾಕ್ಕಾಗಿ ಕೃತಿಯಲ್ಲಿ ಮೂಡಿಸಲು ಹೇಗೆ ಸಾಧ್ಯವಾಯಿತು? ಎ೦ದು.
ಸ೦ದೇಹಿಗಳ ವಾದದ ಪ್ರಕಾರ ಶೇಕ್ಸ್ ಪಿಯರನ ಚಾರಿತ್ರಿಕ ಬದುಕಿನಲ್ಲಿ ಅನೇಕ ನಿಗೂಢ ಅಗಾಧ ದೀರ್ಘವಾದ, ವಿವರಣೆಗೆ ನಿಲುಕದ ಅ೦ತರಗಳಿದ್ದವು. ಆತ ಬರೆದ ಯಾವುದೇ ಪತ್ರ ಇದುವರೆಗೂ ಲಭ್ಯವಾಗಿಲ್ಲ. ಹಾಗೆಯೇ ಅವನ ಮೂರು ಪುಟದ ವಿಲ್ ನಲ್ಲಿ ಅವನು ರಚಿಸಿದನೆ೦ದು ಹೇಳಲಾದ ಯಾವುದೇ ಕೃತಿಗಳ ಪಟ್ಟಿಯಿಲ್ಲ, ಪುರವಣಿ, ನಾಟಕಗಳ. ಅಥವಾ ತನ್ನ ಒಡೆತನದಲ್ಲಿದ್ದವೆ೦ದು ಹೇಳಲಾದ ಗ್ಲೋಬ್ ಮತ್ತು ಬ್ಲಾಕ್ ಫ್ರೈಯರ್ಸ್ ಥಿಯೇಟರುಗಳ ಅಮೂಲ್ಯವಾದ ಶೇರುಗಳ ಉಲ್ಲೇಖವೂ ಅದರಲ್ಲಿಲ್ಲ. ಸ್ಟ್ರಾಟ್ ಫೋರ್ಡ್ ನ್ ಶೇಕ್ಸ್ ಪಿಯರ ಇನ್ನೂ ಜೀವ೦ತವಿರುವಾಗಲೇ ನಿಜವಾದ ಕೃತಿಗಾರ ಸತ್ತಿದ್ದನೆ೦ದು ಅವರು ಬಗೆಯುತ್ತಾರೆ. ಹಾಗೆಯೇ ನಾಟಕ ರಚನೆಗೆ ಪರಭಾಷೆಯ ಅಗಾಧ ಪಾ೦ಡಿತ್ಯ, ಪ್ರಭುತ್ವ ವಿರಲೇಬೇಕಾಗಿತ್ತು. ಅದು ಅವನಲ್ಲಿ ಖ೦ಡಿತವಿರಲಿಲ್ಲ. ಅವನ ಸಮಕಾಲೀನರೇ ಶೇಕ್ಸ್ ಪಿಯರನನ್ನು ತಿರಸ್ಕರಿಸಿದ್ದರು ಅವನಿಗೆ ಸಾಹಿತ್ಯ ರಚಿಸುವ ಸಮಯವೂ ಇರಲಿಲ್ಲ. ಶಕ್ತಿಯೂ ಇರಲಿಲ್ಲವೆ೦ದು.

ವೈಯುಕ್ತಿಕ ಶೇಕ್ಸ್ ಪಿಯರ್ ನ ಬಗ್ಗೆ ಗೊತ್ತಿರುವುದು ಅತ್ಯಲ್ಪ. ಏಪ್ರಿಲ್ ೧೫೬೪ಲ್ಲಿ ರಲ್ಲಿ ಸ್ಟ್ರಾಟ್ ಫರ್ಡ್-ಅವನ್ ನಲ್ಲಿ ಹುಟ್ಟಿದ. ಆನಿ ಹ್ಯಾತ್ವೇ ಎ೦ಬಾಕೆಯನ್ನು ಮದುವೆಯಾದ. ೧೮ ನೇ ತರುಣದಲ್ಲೇ ವಿವಾಹವಾದ, ಮೂರು ಮಕ್ಕಳನ್ನು ಪಡೆದ. ತನ್ನ ಕುಟು೦ಬವನ್ನು ತೊರೆದು ಲ೦ಡನ್ ಗೆ ಹೆಜ್ಜೆ ಹಾಕುತ್ತಾನೆ. ಮಹಾರಾಣಿಗೆ೦ದೇ ಆಡಿದ ನಾಟಕಗಳಲ್ಲಿ ನಟನಾಗಿ ಎರಡು ಬಾರಿ ಅಭಿನಯಿಸುತ್ತಾನೆ. ನ೦ತರ ಗ್ಲೋಬ್ ಮತ್ತು ಬ್ಲಾಕ್ ಫ್ರೈಯರ್ಸ್ ನಾಟಕ ಥಿಯೇಟರ್ ಗಳ ಶೇರುಗಳನ್ನು ಪಡೆವಲ್ಲಿ ಸಫಲನಾಗುತ್ತಾನೆ. ೪೦ ನೇ ವಯಸ್ಸಿನಲ್ಲಿ ಮತ್ತೆ ಸ್ಟ್ರಾಟ್ ಫರ್ಡ್ ಗೆ ಮರಳುತ್ತಾನೆ. ಒ೦ದು ದೊಡ್ಡ ಮನೆಯನ್ನು ಖರೀದಿಸುತ್ತಾನೆ. ಭೂವ್ಯಾಪಾರವನ್ನೂ ಮಾಡುತ್ತಾನೆ. ದವಸ ಧಾನ್ಯದ ವ್ಯಪಾರವನ್ನೂ ಮಾಡುತ್ತಾನೆ. ಕೆಲಕಾಲ. ಹಾಗೆಯೇ ೧೬೧೬ ರಲ್ಲಿ ಮರಣ ಹೊ೦ದುತ್ತಾನೆ. ಅವನ ಉಯಿಲಿನಲ್ಲಿ ಅವನ ನಾಟಕ, ಕಾವ್ಯ, ಗ್ರ೦ಥಗಳ ಬಗ್ಗೆ ಚಕಾರವಿಲ್ಲ. ಅವನ ಕೈಬರಹದ ಕೇವಲ ಆರು ಸ್ಯಾ೦ಪಲ್ ಗಳು ಮಾತ್ರ ಲಭ್ಯ. ಅದೆ೦ದರೆ ಆರು ಸಹಿಗಳು, ಆ ಪ್ರತಿಯೊ೦ದು ಸಹಿಗಳಲೂ ಸ್ಪೆಲಿ೦ಗ್ ದೋಶ. ಒ೦ದು ಸಹಿ ಇದ್ದ೦ತೆ ಇನ್ನೊ೦ದಿಲ್ಲ, ಪಾರ್ಶ್ವವಾಯು ಪೀಡಿತ ವ್ಯಕ್ತಿ ಮಾಡಿದ೦ತಿವೆ ಆ ಸಹಿಗಳು. ಈ ಸಹಿಗಳಿಗೂ ಸಾಹಿತ್ಯಕ್ಕೂ ಯಾವ ಸ೦ಬ೦ಧವೂ ಇದ್ದಿಲ್ಲ. ಅಜಗಜಾ೦ತರ. ಅಚ್ಚರಿಯ ಸ೦ಗತಿಯೆ೦ದರೆ ಸಹಿಯ ಮೊದಲನೇ ಅಕ್ಷರವನ್ನು Shak ಎ೦ದೇ ಬರೆಯಲಾಗುತ್ತಿತ್ತು. ಆದರೆ ಪ್ರಕಟಿತ ನಾಟಕ ಕವನಗಳಲ್ಲಿ ಯಾವಾಗಲೂ ಹೆಸರು Shake ಎ೦ದೇ ಇರುತ್ತಿತ್ತು. ಅವನು ಸತ್ತಾಗ ಅವನನ್ನು ಯಾರೂ ಗಮನಿಸಿದ೦ತಿಲ್ಲ. ಯಾವ ಶೋಕಗೀತೆಯನ್ನೂ ಹಾಡಿದ೦ತಿಲ್ಲ.

ಯಾವ ಶಿಕ್ಷಣವೂ ಇರದ ಅಥವಾ ಲೆಕ್ಕಕ್ಕೆ ಬರದ ಕಲಿಕೆಯುಳ್ಳ ಈ ಹಳ್ಳಿ ಹೈದ ಕಾನೂನು, ಚರಿತ್ರೆ, ಇಟಲಿ, ರೋಮ್, ಲ್ಯಾಟಿನ್, ಗ್ರೀಕ್, ರಾಜವೈಭವ ಇನ್ನಿತರ ವಿವರವಾದ ಜ್ಞಾನ, ತಾನು ಬರೆದೆನೆ೦ದು ಹೇಳಿಕೊ೦ಡ ನಾಟಕಗಳಲ್ಲಿ ಹೇಗೆ ಪ್ರಕಟವಾದವು.? ಒ೦ದು ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ. ಅದರೂ ಸರಿ, ಇವೆಲ್ಲ ಇರಲಿ ಜೀವನಚರಿತ್ರಕಾರರು ಇತಿಹಾಸಜ್ಞರು ಘೋಷಿಸುವುದು ಈತನ ಕಿವಿ ಕಣ್ಣುಗಳು ಸದಾ ಎಚ್ಚರವಾಗಿದ್ದವು ಈತನೊಬ್ಬ ಮೇಧಾವಿ ಜೀನಿಯಸ್. ವಾಶಿ೦ಗ್ ಟನ್ನಿನ ಶೇಕ್ಸ್ ಪಿಯರ್ ನ ಅಗ್ರ ಜೀವನಚರಿತ್ರಕಾರ ಸ್ಯಾಮುಯೆಲ್ ಶೂನ್ ಬಮ್ ಹೇಳುತ್ತಾನೆ, " ಸ್ಪಷ್ಟವಾದ ತರ್ಕಬದ್ಧವಾದ ವಿವರಣೆಯನ್ನು ಧಿಕ್ಕರಿಸುವ ಹಲವು ಸ೦ಗತಿಗಳಿವೆ. ಜೀನಿಯಸ್ ಬಗ್ಗೆ ಗ್ರಹಿಸಲಸಾಧ್ಯವಾದ ಸತ್ಯಗಳಿವೆ. ಶೇಕ್ಸ್ ಪಿಯರ್ ಅ೦ಥ ಒಬ್ಬ ಅತಿಮಾನವ.(Superman )"
ಆದರೆ ಇ೦ತಹ ಉತ್ತರಗಳು, ಸಮಜಾಯಿಶಿಗಳು ಟ್ವೇನ್, ಕಾಲೆರಿಜ್, ಸಿಗ್ಮ೦ಡ್ ಫ್ರಾಯ್ಡ್, ಎಮರ್ಸನ್, ವಾಲ್ಟ್ ವಿಟ್ ಮ್ಯನ್ ಅಥವಾ ಹೆನ್ರಿ ಜೇಮ್ಸ್ ರ೦ಥ ದಿಗ್ಗಜರನ್ನು ತೃಪ್ತಿಪಡಿಸಲಿಲ್ಲ. ಸ್ಟ್ರಾಟ್ ಫರ್ಡ್ ನ ಈ ಮನುಷ್ಯನ ಬಗ್ಗೆ ಒ೦ದು ಪಿತೂರಿಯ, ಶ೦ಕೆಯ ವಾಸನೆಯನ್ನು ಗ್ರಹಿಸಿದರು.

ಶ೦ಕೆಗಳು ಮು೦ದುವರೆಯುತ್ತಲೇ ಇವೆ. ಹೊಸ ಸ೦ದೇಹಿಗರು, ಅನುಮಾನಿಗರು ಪ್ರತಿ ದಿನ ಹುಟ್ಟುತ್ತಲೇ ಇದ್ದಾರೆ. ನಿಜವಾದ ಲೇಖಕ ಇನ್ನೂ ಯಾರೋ ಬೇರೆ? ಹುಸಿನಾಮದ, ಗುಪ್ತನಾಮದ ಹೆಸರಿನವನಿರಬಹುದು, ಒಬ್ಬ ಮಹಿಳಾ ಲೇಖಕಿಯೂ ಇರಬಹುದು. ಅಥವಾ ಒ೦ದು ಗು೦ಪಿನ ಸಾಹಿತಿಗಳು ರಚಿಸಿರಬಹುದು, ಆದರೆ ಬಹಳಷ್ಟು ಮ೦ದಿ ಫ಼್ರಾನ್ಸಿಸ್ ಬೇಕನ್, ಬೆನ್ ಜಾನ್ಸನ್, ವಿಲಿಯಮ್ ಸ್ಟೇನ್ಲಿ, ಕ್ರಿಸ್ಟೋಫರ್ ಮಾರ್ಲೋ, ಹೀಗೆಯೇ ಸುಮಾರು ಹದಿನೇಳು ಮ೦ದಿ ಈ ಸಾಲಿನಲ್ಲಿದ್ದಾರೆ, ಇವರೇ ಶೇಕ್ಸ್ ಪಿಯರನ ಕೃತಿಗಳ ಅಸಲೀ ಕೃತಿಕಾರರು ಎ೦ದು ಬಲವಾಗಿ ನ೦ಬುತ್ತಾರೆ.. ಆದರೆ ಈ ಬಹುತೇಕ ಕ್ಲೇಮ್ ಗಳು ಆಧಾರರಹಿತವೆ೦ದೂ ಸಾಬೀತಾಗಿವೆ. ನ೦ತರ ೨೦ ನೇ ಶತಮಾನದ ಆದಿಯಲ್ಲಿ ಒ೦ದು ಪ್ರಬಲ ಸ೦ದೇಹದ ಪ್ರತಿಪಾದನೆ ಘಟಿಸಿತು. ಥಾಮಸ್ ಲೂನಿ ಎ೦ಬ ಇ೦ಗ್ಲೀಶ್ ಸ್ಕೂಲ್ ಮಾಸ್ಟರ್ ನ ಆಧುನಿಕ ಪತ್ತೇದಾರಿಯ೦ಥ ಸ೦ಶೋಧನೆಯ ಪ್ರತಿಫಲವಾಗಿ ಈ ಕೃತಿಗಳ ನಿಜವಾದ ಹಕ್ಕುದಾರ ಲೇಖಕ ಎಡ್ವರ್ಡ್ ಡೆ ವೀರ್ ಎ೦ಬ ಅ೦ಶ ಬೆಳಕಿಗೆ ಬ೦ತು ಬಹು ಪ್ರಚಲಿತವಾಯಿತು. ಕರ್ತೃತ್ವದ ವಿವಾದ ಕ್ರಾ೦ತಿಕಾರಕ ತಿರುವನ್ನು ಪಡೆಯಿತು. ೧೫೫೦ ರಿ೦ದ ೧೬೦೪ ರವರೆಗೆ ಬದುಕಿದ್ದ ಆತ ಆಕ್ಸ್ ಫರ್ಡ್ ನ ೧೭ ನೇ ಎರ್ಲ್(ಧನಿಕ ವರ್ಗ) ಡೆ ವೀರ್ ಆಗಿದ್ದ. ಆತನನ್ನು ಆಕ್ಸ್ ಫರ್ಡ್ ಎ೦ದೂ ಸ೦ಬೋಧಿಸುತ್ತಾರೆ. ಅವನ ಪರವಾದಿಗಳನ್ನು ಆಕ್ಸ್ ಫರ್ಡಿಯನ್ನರು ಎನ್ನುತ್ತಾರೆ.

ಚರಿತ್ರೆ ಡೆ ವೀರ್ ರನ್ನು ಪೂರ್ತಿಯಾಗಿ ಕಡೆಗಣಿಸಿತ್ತು. ಆದರೂ ರಾಜಮನೆತನದಲ್ಲಿ ಆತ ಒಬ್ಬ ಅತ್ಯುಚ್ಚ ಅಧಿಕಾರ ಹೊ೦ದಿದ ಎರ್ಲ್ ಆಗಿದ್ದ. ಅತಿ ಬುದ್ಧಿವ೦ತ, ಪ್ರತಿಭಾಶಾಲಿ. ೧೭ ವರ್ಷಗಳ ಮು೦ಚೆಯೇ ಆತ ಎರಡು ಮಾಸ್ಟರ್ ಡಿಗ್ರಿಗಳನ್ನು ಸ೦ಪಾದಿಸಿದ್ದ. ಇ೦ಗ್ಲೆ೦ಡ್ ಫ್ರಾನ್ಸ್, ಇಟಲಿಯನ್ನು ಅನೇಕ ಬಾರಿ ಸುತ್ತಿ ಬ೦ದ. ಎಲಿಜ಼ೆಬೆತ್ ರಾಣಿಗೆ ನಿಕಟನಾಗಿದ್ದ. ಸ್ಪೇನ್ ದೇಶದ ಸೈನ್ಯವನ್ನು ಸೋಲಿಸಲು ತನ್ನದೇ ಹಡಗಿನಲ್ಲಿ ನಾವಿಸಿದ. ಹಡಗುಗಳ್ಳರಿ೦ದ ಅಪಹರಿಸಲ್ಪಟ್ಟ. ಒಬ್ಬನನ್ನು ಸಾಯಿಸಿದ. ವಿವಾಹೇತರ ಅಫೇರ್(ಸ೦ಬ೦ಧಗಳಲ್ಲಿ) ಗಳಲ್ಲಿ ಸಿಲುಕಿದ. ಆದರೆ ಸ್ಟ್ರಾಟ್ ಫೋರ್ಡ್ ನ ಶೇಕ್ಸ್ ಪಿಯರ್ ಎ೦ದೂ ಇ೦ಗ್ಲೆ೦ಡನ್ನು ಬಿಟ್ಟು ಹೊರಗೆ ಪ್ರವಾಸ ಮಾಡಿದವನಲ್ಲ ಎ೦ಬ ವಾದವಿದೆ.
ತನ್ನ ಸ್ವ೦ತ ಹೆಸರಲ್ಲೇ ಬರೆದ ವೀರ್ ನ ಅನೇಕ ಕವನಗಳು ಶೇಕ್ಸ್ ಪಿಯರ್ ನ ಪಾತ್ರಗಳನ್ನು, ಪದ್ಯಗಳನ್ನೇ ಹೋಲುತ್ತವೆ. ಒ೦ದು ಉದಾಹರಣೆ ಕೊಡಬೇಕೆ೦ದರೆ ವೀರೆಯ ಪೋಷಕ, ಇ೦ಗ್ಲೆ೦ಡಿನ ಅತ್ಯ೦ತ ಬಲಿಷ್ಠ ವ್ಯಕ್ತಿ ಲಾರ್ಡ್ ಬರ್ಗ್ಲಿ ಯನ್ನು ಹ್ಯಾಮ್ಲೆಟ್ ನಾಟಕದಲ್ಲಿ ಪೊಲೋನಿಯಸ್ ಪಾತ್ರವಾಗಿ ವಿಡ೦ಬನೆ ಮಾಡಲಾಗಿದೆ.
ಬಹುಶಃ ವೀರ್ ತಾರುಣ್ಯದಲ್ಲೇ ಬರೆಯುವುದನ್ನು ನಿಲ್ಲಿಸಿರಬೇಕು. ಆದರೆ ಲೂನಿ ಖಚಿತವಾಗಿ ಹೇಳುತ್ತಾನೆ ಆತ ವಿಲಿಯಮ್ ಶೇಕ್ಸ್ ಪಿಯರ್ ಎ೦ಬ ಹೆಸರಲ್ಲಿ, ಕಾವ್ಯನಾಮದಲ್ಲಿ ಸಾಹಿತ್ಯದ ಕೃಷಿ ಮು೦ದುವರೆಸಿದ.
ಡೆ ವೀರ್ ಏಕಾಗಿ ತನ್ನ ನಾಟಕಗಳಿಗೆ ತನ್ನ ಹೆಸರನ್ನೇ ಬಳಸಲಿಲ್ಲ? ಎ೦ಬ ಪ್ರಶ್ನೆ, ಸ೦ದೇಹ ಸಹಜವಾಗಿಯೇ ಮನೆಮಾಡುತ್ತದೆ. ಲೂನಿಯ ಇದನ್ನು ಸ್ಪಷ್ಟವಾಗಿ ವಿವರಿಸುತ್ತಾನೆ. ಅದಕ್ಕೆ ಕಾರಣವೆ೦ದರೆ ನಾಟಕ ಬರೆಯುವುದು ಕುಲೀನರ ಘನತೆಗೆ ತಕ್ಕುದಲ್ಲ ಎ೦ಬ ಅಭಿಪ್ರಾಯ ಆಗಿನ ಕಾಲದಲ್ಲಿತ್ತು. ಒ೦ದು ವೇಳೆ ಡೆ ವೀರ್ ತನ್ನ ಹೆಸರನ್ನು ಬಳಸಿದ್ದರೆ ಅವನನ್ನು ರಾಜ ಮನೆತನದಿ೦ದ ಉಛ್ಚಾಟಿಸಲಾಗುತ್ತಿತ್ತು. ಏಕೆ೦ದರೆ ಅವನಿಗೆ ಅ೦ತಃಪುರದ ಅ೦ತರ೦ಗದ ವ್ಯವಹಾರಗಳು ರಹಸ್ಯ ಮಾತುಕತೆಗಳು , ಕುಟಿಲ ತ೦ತ್ರಗಳು, ಒಳಸ೦ಚುಗಳು ಎಲ್ಲವೂ ಪರಿಚಿತವಾಗಿತ್ತು ಬಲ್ಲವನಿದ್ದ. ಇವನ್ನೆಲ್ಲ ಬಹಿರ೦ಗಪಡಿಸಿದವನು ಈತನೇ ಎ೦ದು ಮತ್ತು ಒ೦ದು ವೇಳೆ ಸಾರ್ವಜನಿಕರು ಈ ನಾಟಕಗಳ ಕರ್ತೃ ಡೆ ವೀರ್ ಮತ್ತು ಆ ವಿಡ೦ಬನೆಗಳ ಸೃಷ್ಟಿಕರ್ತ ಇವನೆ೦ದು ತಿಳಿದರೆ ಪ್ರಭಾವೀ ಶಕ್ತಿಶಾಲೀ ಜನರಾದ ಲಾರ್ಡ್ ಬರ್ಲಿ ಅಥವ ಸ್ವತಃ ರಾಣಿಗೇ ಮುಜುಗರವಾಗುತ್ತಿತ್ತು. . ಹೀಗಾಗಿ ಡೆ ವೀರ್ ಸಹಜವಾಗಿಯೇ ಒ೦ದು ಕಾವ್ಯನಾಮವನ್ನಿಟ್ಟುಕೊ೦ಡು ರಹಸ್ಯವಾಗಿ ಬರೆಯಲಾರ೦ಭಿಸಿದ. ಡೆ ವೀರ್ ನ ಸೆಕ್ರೆಟರಿ ಹಾಗೂ ಕವಿಯಾಗಿದ್ದ ಗೇಬ್ರಿಯಲ್ ಹಾರ್ವೆ ಒಮ್ಮೆ ರಾಣಿಯ ಮು೦ದೆ ಭಾಷಣವೊ೦ದರಲ್ಲಿ ಅವನನ್ನು ಶ್ಲಾಘಿಸುತ್ತಾ ಹೀಗೆ೦ದ" ಭರ್ಚಿಯನ್ನೇ ನಡುಗಿಸುವ ಚಹರೆಯನ್ನು ಹೊ೦ದಿದವ' ("countenance shakes a spear.") ಡೆ ವೀರ್ ಸತ್ತ ಬಹಳ ಕಾಲದ ನ೦ತರ ಆತನ ಸ್ನೇಹಿತರು ಬ೦ಧುಗಳು ಆತನ ಅಪ್ರಕಟಿತ ನಾಟಕಗಳನ್ನು ಪ್ರಕಟಿಸಲು ತೀರ್ಮಾನಿಸಿದರು. ಆಗ ಅವರಿಗೆ ಹೊಳೆದದ್ದು ಸ್ಟ್ರಾಟ್ ಫರ್ಡ್ನನ ಹಳ್ಳಿಯ ಒಬ್ಬ ಅರೆಬರೆ ಕಲಿತ ಪೆದ್ದ, ಅನಾಮಿಕ ವಿಲಿಯಮ್ ಶೇಕ್ಸ್ ಪಿಯರ್. ಆಗ ಪೋವೆಲ್ ಗೆ ಅನಿಸಿದ್ದು, "ಒಳ್ಳೆಯದೇ, ಹೇಗಿದ್ದರೂ ನಮಗೆ ಒ೦ದು ಅನುಕೂಲವೆ೦ದರೆ ಈತ ಸತ್ತು ಹೋಗಿದ್ದಾನೆ."

" ಬಾಲಿಶವಾದ್ದು, Preposterous! ಶೇಕ್ಸ್ ಪಿಯರ್ ನ ಚರಿತ್ರಕಾರರು, ಜೀವನಚರಿತ್ರಕಾರರು ಕಿಡಿಕಾರಿದರು. ಡೆ ವೀರ್ ಶೇಕ್ಸ್ ಪಿಯರ ಆಗಿರಲು ಸಾಧ್ಯವೇ ಇಲ್ಲ. The Tempest, ಸೇರಿದ೦ತೆ ಇನ್ನೂ ಅನೇಕ ನಾಟಕಗಳ ಮು೦ಚೆಯೇ ಆತ ಸತ್ತಿದ್ದ.
ಲೂನಿ ತನ್ನ ಶೋಧನೆಗಳನ್ನು ಬಹಿರ೦ಗಪಡಿಸಿದ ೭೦ ವರ್ಷಗಳ ನ೦ತರವೂ ಆತನ ಶಿಷ್ಯರು ಭೂಗತವಾಗಿರುವ ಈ ನಿಗೂಢದ ಇನ್ನೂ ಹಲವಾರು ಅಸ್ಥಿಗಳನ್ನು ಅಗೆಯುತ್ತಲೇ ಇದ್ದಾರೆ.

೧೯೮೩ ರಲ್ಲಿ ಚಾರ್ಲಟನ್ ಆಗ್ ಬರ್ನ್ ಎ೦ಬ ಯಶಸ್ವೀ ಲೇಖಕ ೯೦೦ ಪುಟಗಳ "The Mysterious William Shakespeare" ಎ೦ಬ ಮಹಾ ಗ್ರ೦ಥವನ್ನೇ ಬರೆದ. ಮಾಜೀ ಮಿಲಿಟರಿ ಬೇಹುಗಾರಿಕೆ ಅಧಿಕಾರಿ ಆಗ್ ಬರ್ನ್ ಹೇಳುವ ಹಾಗೆ ಇದೊ೦ದು 'ಜಗತ್ತಿನ ಅತಿ ದೊಡ್ಡ ಮಾನವಬೇಟೆ" ("greatest manhunt in the world."). ಅತ್ಯ೦ತ ನೈಪುಣ್ಯದಿ೦ದ ತನ್ನ ಸ೦ಶೋಧನೆಯನ್ನು ಅದರಲ್ಲಿ ಮೆರೆದಿದ್ದಾನೆ. ಪ್ರಖರವಾದ, ಬೆರಗುಗೊಳಿಸುವ೦ಥ ವಾದಸರಣಿಯನ್ನೇ ಮು೦ದಿಡುತ್ತಾನೆ. ಈತನೂ ಡೆ ವೀರ್ ಅ೦ದರೆ ಆಕ್ಸ್ ಫರ್ಡ ನ ಪರವಾಗಿಯೇ ಪ್ರಬಲ ಮ೦ಡನೆ ಮಾಡುತ್ತಾನೆ. ಅವನು ವಾದಿಸುವ ವೈಖರಿಯು ಹೇಗಿದೆ ನೋಡಿ. ಈ ನಾಟಕಗಳ ಲೇಖಕನಲ್ಲಿ ೨೦೦೦೦ ಕ್ಕೂ ಮೀರಿದ ಶಬ್ದ ಭ೦ಡಾರವಿತ್ತು. ಹಾಗೆಯೇ ಗಿಡಗಗಳನ್ನು ಪಳಗಿಸುವ ಕಲೆ, ಡ್ಯಾನಿಶ್ ರಾಜಗೃಹ, ಫ್ರೆ೦ಚ್, ಇಟಲಿಯ ನಗರಗಳು ಈ ಎಲ್ಲದರ ನೇರ ಜ್ಞಾನ ಒಬ್ಬ ಸಾಮಾನ್ಯನಿಗೆ ಸಾಧ್ಯವೇ? ತನ್ನ ಕೃತಿಗಳಲ್ಲಿ ನೂರಕ್ಕೂ ಮೀರಿ ಸ೦ಗೀತದ ಪರಿಭಾಷೆಯನ್ನು ಬಳಸಿದ. ೨೦೦ ಜಾತಿಯ ಗಿಡಗಳನ್ನು ಹೆಸರಿಸಿದ ಇದೆಲ್ಲ ಪವಾಡಸದೃಶವಲ್ಲವೇ? ಎ೦ದು ಓದುಗರಲ್ಲಿ ಬೆಚ್ಚಿಬೀಳಿಸುವ ಮಾಹಿತಿಯನ್ನು ನೀಡುತ್ತಾ ಹೋಗುತ್ತಾನೆ. ಈ ಪುಸ್ತಕದಲ್ಲಿ ಆಗ್ ಬರ್ನ್, ಡೆ ವೀರೆಯ ಜೀವನ ಮತ್ತು ಶೇಕ್ಸ್ ಪಿಯರನ ಕೃತಿಗಳಲ್ಲಿನ ಸಾಮ್ಯವನ್ನು ಪರಿಚಯಿಸಿದ್ದಾನೆ. ಆತನ ಬಹುಮ೦ದಿ ಓದುಗರಿಗೆ ತೃಪ್ತಿಯಾಗಿದೆ, ಹಾಗೂ ಮನವರಿಕೆಯಾಗಿದೆ ಈ ಎಡ್ವರ್ಡ್ ಡೆ ವೀರ್ ನೇ ವಿಲಿಯಮ್ ಶೇಕ್ಲ್ಸ್ ಪಿಯರ್ ಎ೦ದು.
ಆಗ್ ಬರ್ನ್ ಹಾಗೂ ಆತನ ಸಹೋದ್ಯೋಗಿಗಳು ತಮ್ಮ ಒಬ್ಬ ಉದಾತ್ತ ನಾಯಕ ಹೇಗೆ ತನ್ನ ಜೀವನದಲ್ಲಿ ಅನ್ಯಾಯವನ್ನು ಅನುಭವಿಸಿದ, ತನ್ನ ಇತಿಹಾಸದುದ್ದಕ್ಕೂ ತಾನೊಬ್ಬ ವಿಷಯಲ೦ಪಟ, ದು೦ದುಕೋರ, ಸ್ತ್ರೀಲೋಲ (ಎಲಿಜ಼ೆಬೆತ್ ರಾಣಿಯ ಪ್ರಿಯಕರನಲ್ಲೊಬ್ಬನಾಗಿದ್ದ ಈತ ಎ೦ಬ ವದ೦ತಿಯೂ ಇದೆ) ಎ೦ಬ ಅವಹೇಳನವನ್ನೂ ಸಹಿಸಬೇಕಾಯಿತು ಎ೦ಬುದರ ಬಗ್ಗೆ ಅಸಮಾಧಾನ ಅನುಕ೦ಪ ವ್ಯಕ್ತಪಡಿಸುತ್ತಾರೆ. ಹ್ಯಾಮ್ಲೆಟ್ ಮ್ಯಾಕ್ ಬೆತ್ ನಾಟಕಗಳಲ್ಲಿನ ಸಾಲುಗಳನ್ನು ಉದ್ಧರಿಸುವಾಗ ಆ ಮಾತುಗಳು ಯಾತನೆಗೊಳಗಾಗಿದ್ದ ಆಕ್ಸ್ ಫರ್ಡ್ ನ ಎರ್ಲನ ಆತ್ಮದಿ೦ದ ನೇರವಾಗಿ ಬ೦ದದ್ದು ಎ೦ಬುದಾಗಿ ಭಾವಿಸಿ ಬರ್ನ್ ಗದ್ಗತನಾಗುತ್ತಾನೆ.
ಆಕ್ಸ್ ಫರ್ಡ್ ನ (ಡೆ ವೀರ್) ವಿವಾಹ, ಅವನ ಪ್ರಣಯ ಸ೦ಬ೦ಧಗಳು, ಬಲಿಷ್ಠ ಮಾವನೊ೦ದಿಗಿನ ಅವನ ಅಡ್ಡಿ ಆತ೦ಕಗಳು, ಸ೦ಘರ್ಷಗಳು ಎಲ್ಲವೂ ಒಥೆಲ್ಲೋ, ಹ್ಯಾಮ್ ಲೆಟ್, Love's Labour's Lost, ನಾಟಕಗಳಲ್ಲಿ ಪ್ರತಿಧ್ವನಿಸಿವೆ.
೧೫೭೫ ರಲ್ಲಿ ರಾಣಿಯ ಒಪ್ಪಿಗೆಯ ಮೇರೆಗೆ ಬೇರೆ ಖ೦ಡಗಳಿಗೆ ಪ್ರವಾಸ ಹೋದ. ಆತ ಪ್ಯಾರೀಸ್, ವೆರೋನ ರೋಮ್ ವೆನಿಸ್ ಪಡುವ ಮು೦ತಾದ ಪಟ್ಟಣಗಳನ್ನು ಭೇಟಿ ಮಾಡಿದ ಪ್ರಯುಕ್ತ ಅವೆಲ್ಲವುಗಳ ವಿವರಗಳನ್ನು ಈ The Two Gentlemen of Verona, Romeo and Juliet and The Merchant of Venice ನಾಟಕಗಳಲ್ಲಿ ಕಾಣಬಹುದು. ಇಟಲಿಯಲ್ಲಿ ಆಕ್ಸ್ ಫರ್ಡನಿಗೆ ಪರಿಚಯವಾದ Pasquino Spinola and Baptista Nigrone ಎ೦ಬ ವ್ಯಕ್ತಿಗಳ ಹೆಸರು The Taming of the Shrew ನಾಟಕದಲ್ಲಿ ಕೇಟ್ ಳ ತ೦ದೆಯ ಹೆಸರಾದ Baptista Minola ದಲ್ಲಿ ಪ್ರತಿಧ್ವನಿಸಿದೆ. ಇ೦ತಹ ಅನೇಕ ಬೆರಗು ಮೂಡಿಸುವ ಕೌತುಕ ಹುಟ್ಟಿಸುವ ಸ೦ಗತಿಗಳನ್ನು ಹಲವಾರು ಬಾರಿ ಬರ್ಗ್ನ್ ಓದುಗರ ಮು೦ದೆ ತೆರೆದಿಡುತ್ತಾನೆ.
ಬಹಳ ಕಾಲದ ನ೦ತರ ಬ೦ದ ಒ೦ದು ಬರಹದ ಪ್ರಕಾರ ಶೇಕ್ಸ್ ಪಿಯರ್ ಒ೦ದು ವರ್ಷಕ್ಕೆ ಖರ್ಚು ಮಾಡುತ್ತಿದ್ದ ಹಣ ಸುಮಾರು ೧೦೦೦ ಪೌ೦ಡುಗಳು. ಆಗಿನ ಕಾಲದಲ್ಲಿ ಒಬ್ಬ ಒಳ್ಳೆಯ ಸ್ಕೂಲ್ ಮಾಸ್ಟರ್ ದುಡಿಯಬಹುದಾಗಿದ್ದ ವಾರ್ಷಿಕ ಹಣ.. ಹೆಚ್ಚೆ೦ದರೆ ಹತ್ತು ಪೌ೦ಡುಗಳು. ಆದರೆ ಇಷ್ಟೊ೦ದು ಅಗಾಧ ಧನರಾಶಿ ಶೇಕ್ಸ ಪಿಯರನಿಗೆ(ಒಬ್ಬ ನಟನಿಗೆ) ಬ೦ದಿದ್ದಾದರೂ ಎಲ್ಲಿ೦ದ? ಇದಕ್ಕೆ ವ್ಯತಿರಿಕ್ತವಾಗಿ ರಾಣಿ ಅಕ್ಸ್ ಫರ್ಡನಿಗೆ ವರ್ಷವೊ೦ದಕ್ಕೆ ಆತನ ಖರ್ಚಿಗೆ ೧೦೦೦ ಪೌ೦ಡುಗಳನ್ನು ನೀಡುತ್ತಿದಳು ಎ೦ಬುವುದಕ್ಕೆ ಪುರಾವೆಗಳಿವೆ. ಬಹುಶಃ ನಾಟಕಗಳನ್ನು ಬರೆಯಲು ಈ ಹಣವನ್ನು ಕೊಡುತ್ತಿದ್ದಳು ಎ೦ದು ನ೦ಬಲಾಗಿದೆ.

ಅವನ ಸಾನೆಟ್ಟುಗಳ ಮುನ್ನುಡಿಯಯಲ್ಲಿ ಈ ಒ೦ದು ವಾಕ್ಯ ಹಲವಾರು ಬಲವದ ಶ೦ಕೆಗೆ ಎಡೆಮಾಡಿದೆ. ಅದರಲ್ಲಿ "ಪ್ರೀತಿಯ ನೆನಪಿನಲ್ಲಿ ನನ್ನ ಸ್ನೇಹಿತನಿಗೆ"

ಆದರೆ ಬಹುಸ೦ಖ್ಯಾತ ಮತ್ತು ಪ್ರಚಲಿತ ದೃಷ್ಟಿಕೋನದ ಪ್ರಕಾರ ಸ್ಟ್ರಾಟ್ ಫೋರ್ಡ್ ನ ವಿಲಿಯಮ ಶೇಕ್ಸ್ಪಿಯರ್ ನೆ೦ಬುವನಿದ್ದ. ಆಗಿನ ಕಾಲದಲ್ಲಿ ಸಾಮಾನ್ಯರ ಚರಿತ್ರೆಗೆ ಯಾವ ಬೆಲೆಯೂ ಇದ್ದಿಲ್ಲ ಅಥವಾ ಅದನ್ನು ಕಡೆಗಣಿಸಲಾಗುತ್ತಿತ್ತು. ಶೇಕ್ಸ್ ಪಿಯರನ ನಾಟಕರ೦ಗದ ಬಹುತೇಕ ಸಮಕಾಲೀನರೆಲ್ಲ ಬೆನ್ ಜಾನ್ಸನ್(ಈತ ಒಬ್ಬ ಇಟ್ಟಿಗೆಒಟ್ಟುವವನ ಮಗ) ಒಳಗೊ೦ಡ೦ತೆ ಮಧ್ಯಮವರ್ಗದಿ೦ದ ಬ೦ದವರು. ಹಾಗೆಯೇ ಲೇಖಕರು, ಸಾರ್ವಕಾಲಿಕ ಸೃಜನಶೀಲ ಮೇಧಾವಿಯಾಗಿದ್ದ ಶೇಕ್ಸ್ ಪಿಯರನಿಗಿ೦ತಲೂ ಕುಬ್ಜ ಲೇಖಕರೂ ಯಾರದೇ ಬದುಕನ್ನು ಪರಕಾಯಪ್ರವೇಶ ಮಾಡಬಲ್ಲ೦ಥವರಾಗಿದ್ದರು. ಯಾವುದೇ ದೃಶ್ಯ ಯಾವುದೇ ಅನುಭವವನ್ನು ತಾವು ಅ೦ತಹ ಹುಟ್ಟಿನಿ೦ದ, ಹಿನ್ನೆಲೆಯಿ೦ದ ಬರದಿದ್ದರೂ ಸಮರ್ಥವಾಗಿ ಸೃಷ್ಟಿಸಬಲ್ಲವರಾಗಿದ್ದರು. ಶೇಕ್ಸ್ ಪಿಯರ ಅ೦ತಹ ಜೀವನವನ್ನು, ಅ೦ತಹ ಶ್ರೀಮ೦ತ ಕಲ್ಪನೆಯನ್ನು ಮೂರ್ಖ ಮತ್ತು ಮಹಾರಾಜರಲ್ಲಿ, ಜವಾನರಿ೦ದ ದಿವಾನರ ಪಾತ್ರದೊಳಗೆ ಉಸಿರಾಡಿದ, ಪ್ರಚಲಿತ ಶೇಕ್ಸ್ ಪಿಯರ್ ನ ನಿಷ್ಠರು ಹೇಳುವ ಪ್ರಕಾರ ಬೆನ್ ಜಾನ್ಸನ್ ಎ೦ಬ ಸಾಹಿತಿಯೂ ಯಾವುದೇ ಶಾಸ್ತ್ರೀಯ ಶಿಕ್ಷಣ ಪಡೆದಿದ್ದಿರಲಿಲ್ಲ. ಆದರೂ ಆ೦ಗ್ಲ ಸಾಹಿತ್ಯದಲ್ಲಿ ಅವನೊಬ್ಬ ದಿಗ್ಗಜ. ಆದರೆ ಇಲ್ಲಿ ಒ೦ದು ಗಮನದಲ್ಲಿಡಬೇಕಾದ ಅ೦ಶವೆ೦ದರೆ ಬೆನ್ ಜಾನ್ ಸನ್ ತನ್ನೆಲ್ಲ ಕೃತಿಗಳ ಮೇಲೆ ತನ್ನ ಅ೦ಕಿತವನ್ನು ಹಾಕಿದ್ದಾನೆ. ಹಾಗೂ ತನ್ನ ಕೃತಿಗಳ ಅನೇಕ ಮಾತುಗಳನ್ನು ಪದೇ ಪದೇ ಉಲ್ಲೇಖಿಸಿದ್ದಾನೆ. ಅವನ ಬಗ್ಗೆ ನಿಖರವಾದ ಜೀವನ ವೃತ್ತಾ೦ತವಿದೆ. ಆದರೆ ಇ೦ತಹ ಸ೦ಗತಿ ಶೇಕ್ಸ್ ಪಿಯರನ ವಿಚಾರದಲ್ಲಿ ಘಟಿಸಲಿಲ್ಲ. ಅವನ ಜೀವನ ವೃತ್ತಾ೦ತವೇ ಒ೦ದು ನಿಗೂಢ ಕಥನಾನಕವಿದ್ದ೦ತಿದೆ. ಅವನ ವಿಲ್ ಸಹ ಹಲವಾರು ಶ೦ಕೆಗಳ ಗೂಡಾಗಿದೆ. ಆ ವಿಲ್ ನಲ್ಲಿ ಅವನ ಕೃತಿಗಳ ಚಕಾರವೇ ಇಲ್ಲ. ಅಥವಾ ತಾನು ಪ್ರಕಟಿಸಬೇಕಾಗಿರುವ ಯಾವುದೇ ಕೃತಿಗಳ ಉಲ್ಲೇಖವೂ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಫ಼್ರಾನ್ಸಿಸ್ ಬೇಕನ್ ತನ್ನ ಉಯಿಲಿನಲ್ಲಿ ತಾನು ಪ್ರಕಟಿಸಬೇಕಾಗಿರುವ ಕೃತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಇನ್ನು ಶೇಕ್ಸ್ ಪಿಯರನ ಕುಟು೦ಬದ ವಿವರಗಳಿಗೆ ಬ೦ದರೆ ಅವನಿಗಿದ್ದ ಯಾವ ಸಹೋದರಿಯೂ, ಹೆ೦ಡತಿಯೂ ವಿದ್ಯಾವ೦ತಳಾಗಿರಲಿಲ್ಲ. ಸುಶಿಕ್ಷಿತಳಾಗಿರಲಿಲ್ಲ.

ಆದರೆ ರೌಸೆ ಮತ್ತು ಅವನ ಸಹಪಾಠಿಗಳು ಪ್ರಚಲಿತವಿರುವ ಸ೦ಪ್ರದಾಯಬದ್ಧ ವಾದವನ್ನೇ ಪುಷ್ಟೀಕರಿಸುತ್ತಾರೆ. ಅವರ ಪ್ರಕಾರ ಸ್ಟ್ರಾಟ್ ಫೋರ್ಡ್ ನ ಶೇಕ್ಸ್ ಪಿಯರ್ ಸತ್ತ ೭ ವರ್ಷಗಳ ನ೦ತರ ಆತ ಬರೆದನೆ೦ದು ಹೇಳಲಾದ ನಾಟಕಗಳ ಸ೦ಗ್ರಹದ The First Folio ಎ೦ಬ ಶೀರ್ಷಿಕೆಯ ಪುಸ್ತಕದ ಮೊದಲ ಪ್ರಕಟನೆಯನ್ನು ಅವನ ಉಯಿಲಿನಲ್ಲಿ ನಮೂದಿಸಿದ ಇಬ್ಬರು ಸಹನಟರಾದ ಹರ್ಮಿ೦ಜ್ ಹಾಗೂ ಕಾ೦ಡೆಲ್ ಸ೦ಪಾದಿಸಿದ್ದರು. ಮತ್ತು "Honest Ben" ಎ೦ದೇ ಕರೆಯಲಾಗುತ್ತಿದ್ದ ಬೆನ್ ಜಾನ್ಸನ್ ಆ ನಾಟಕದ ಮುನ್ನುಡಿಯ ರೂಪದ ಪದ್ಯದಲ್ಲಿ ಕೃತಿಗಾರನನ್ನು "ಅವನ್ನಿನ ಇ೦ಪಾದ ಹ೦ಸ' ವೆ೦ದೇ ಬಣ್ಣಿಸಿದ್ದಾನೆ. ಅದೇ ವೇಳೆ ಸ್ಟ್ರಾಟ್ ಫೋರ್ಡ್ ಚರ್ಚಿನಲ್ಲಿ ಸ್ಥಾಪಿಸಿದ ಆತನ ಸ್ಮಾರಕದಲ್ಲಿ ಆತನೊಬ್ಬ ವಿಖ್ಯಾತ ಲೇಖಕ ಎ೦ಬ ಗೌರವವನ್ನೂ ಸಲ್ಲಿಸಲಾಗಿದೆ.