Jun 8, 2009

ಪ್ರೇಮಕಡಲು...ಮೊರೆಯುತಿದೆ

ಪ್ರೇಮಕಡಲು...ಮೊರೆಯುತಿದೆ

ಗುಲ್ಲು ಸೊಲ್ಲುಗಳೇನೇ ಇರಲಿ
ಕಲ್ಲೆದೆಗಳ ಕಟುನುಡಿಯ ಭರ್ಚಿಗಳು ತಿವಿಯಲಿ
ದಿಟ ಕಾಣದ ಕದಗಳು ಮುಚ್ಚಿರಲಿ
ಸ೦ಪ್ರದಾಯ ತ೦ತ್ರಗಳೆಲ್ಲ ಅತ೦ತ್ರ
ನಮ್ಮ ಮು೦ದೆ
ಹಾಕೋಣ ಬಾ ಗೆಳತಿ ಹೊಸ
ಸ೦ಪ್ರದಾಯದ ಅಡಿಗಲ್ಲ
ತುಳಿಯೋಣ ಹೊಸ ಜಾಡಿನ
ಹೊಸ ನಾಡಿನ ಸಪ್ತಪದಿ
ಬರೆಯೋಣ ನವ್ಯ ಕಾವ್ಯ
ಮೀಟೋಣ ಹೊಸ ಶ್ರುತಿ
ಸ೦ಪ್ರದಾಯದ ಉರುಳಿನ
ದುರುಳ ಕಟ್ಟುಪಾಡಿನ ಎಲ್ಲ ಎಲ್ಲೆಯ
ಗೆಲ್ಲುವ ಕನಸ ಕಟ್ಟೋಣ ಬಾ ಗೆಳತೀ
ಅದಕೆ೦ದೇ ಹೋಗೋಣ, ಹೋಗೋಣ ದೂರ
ಬಲು ದೂರ ಯಾರಿಗೂ ಎಟುಕದ ದೂರಕೆ
ಈಸಲಾಗದ ತೀರಕೆ
ಸ್ವಚ್ಚ ಹೃದಯಗಳ, ಮುಕ್ತ ಮನಸುಗಳ
ಬ೦ಗಾರ ಬದುಕಿನ ಮಹಲನ್ನು ಕಟ್ಟಿ
ನಮ್ಮ ಪ್ರೇಮದುಸಿರಲ್ಲಿ ಎಲ್ಲ ನಿಟ್ಟುಸಿರ
ಮರೆವ ಪರಿ ಸರಿಯಾದಲ್ಲಿ ಅರಿವಾದಲ್ಲಿ ಬಾ ಗೆಳತೀ
ಉಛೃ೦ಖಲ ಪ್ರೇಮಿಗಳ
ಶೃ೦ಖಲೆಗೆ ದಾಖಲಾಗೋಣ ಬಾ
ಸಮಾಜದಲಿ ನವೋನ್ಮೇಶವಾಗುವವರೆಗೂ
ಮೀನ ಮೇಷ ಎಣಿಸದೇ ಗುಣಿಸದೇ
ಜೊತೆ ಬಾ ಗೆಳತೀ.
ಎಲ್ಲ ತೊಡಕನ್ನು ಕೊಡವಿ ಬಾ
ಒಡವೆಯನೆಲ್ಲ ಕೆಡವಿ ಬಾ
ಒಲವಿನಾ ಸೊಡರ ಒಡಲ ತು೦ಬಿಕೊ೦ಡು
ನನ್ನೊಡನೆ ಬಾ ಗೆಳತೀ ಬಾ.....
ಪ್ರೇಮ ಕಡಲು ಕರೆಯುತಿದೆ..
ಮೊರೆಯುತಿದೆ....

No comments: