Aug 17, 2009

ನನ್ನೂರು






ನಮ್ಮೂರಿನ ಪ್ರಮುಖ ಆಕರ್ಷಣೆಯೆ೦ದರೆ ಅಲ್ಲಿನ ಕಲ್ಲು ಬ೦ಡೆಗಳು, ಗುಡ್ಡ ಬೆಟ್ಟಗಳು, ರಾಶಿ ರಾಶಿಯಾಗಿ ಚೆಲ್ಲಿಕೊ೦ಡು ಚಿತ್ತಾಕರ್ಷಕವಾಗಿ ಊರ ಸುತ್ತ ಹರಡಿಕೊ೦ಡಿರುವ ಇದನ್ನು ನೋಡಿ ಸವಿಯುವುದೇ ಒ೦ದು ಅಪೂರ್ವ ಅನನ್ಯ ಅನುಭವ. ಊರಿನಿ೦ದ ಮೂರು ಮೈಲಿ ದೂರ ಹಾಗೂ ಎತ್ತರದಲ್ಲಿರುವ ಬೆಟ್ಟವೆ೦ದರೆ ನು೦ಕಪ್ಪನ ಬೆಟ್ಟ. ಇಲ್ಲಿ ಪ್ರಖ್ಯಾತವಾದ ನು೦ಕೇಮಲೆ ಸಿದೇಶ್ವರನ ಪುರಾತನ ದೇವಸ್ಥಾನವಿದೆ. ಹಾಗೆಯೇ ಅದಕ್ಕೆ ಹೊ೦ದಿಕೊ೦ಡ೦ತೆ ಭೈರವನ ದೇವಸ್ಥಾನ, ತುಪ್ಪದಮ್ಮನ ಗುಡಿ ಸ್ವಲ್ಪ ಮು೦ದೆ ಹೋದರೆ ಮಲ್ಲಿಕಾರ್ಜುನನ ದೇವಸ್ಥಾನ, ಹರಳಯ್ಯನ ಗುಡಿ, ಆ೦ಜನೇಯನ ಗುಡಿ, ವಿಶಾಲವಾದ ಪುಷ್ಕರಣಿ ಮೋಹಕ ಕಲ್ಲಿನ ಸಾಲು ಮ೦ಟಪಗಳು, ನೋಡುಗರ ಕಣ್ಮನ ಸೆಳೆಯುತ್ತವೆ.ಪ್ರಕೃತಿಯ ರಮ್ಯ ಸಿರಿಯಲ್ಲಿ ಹುದುಗಿರುವ ಈ ನು೦ಕಪ್ಪನ ದೇವಸ್ಥಾನ ಅತ್ಯ೦ತ ಪ್ರಶಾ೦ತವದ ಸ್ಥಳ. ಯೋಗ ಧ್ಯಾನಕ್ಕೆ ಹೇಳಿಮಾಡಿಸಿದ೦ಥ ಸ್ಥಳ. ವರ್ಷಕ್ಕೊಮ್ಮೆ ವೈಶಾಖದಲ್ಲಿ ದೊಡ್ಡ ಪ್ರಮಾಣದ ಜಾತ್ರೆ ನಡೆಯುತ್ತದೆ. ಸಾವಿರಾರು ಜನ ದೂರದಿ೦ದಲೂ ನೆರೆಯುತ್ತಾರೆ. ಊರಿನ ಜನ ಗುಡಾರಗಲನ್ನು ಹಾಕಿ ಮೂರು ದಿವಸವೂ ವಾಸ್ತವ್ಯವನ್ನು ಹೂಡುತ್ತಾರೆ. ನಾನು ಇತ್ತೀಚಿಗೆ ಹೋದಾಗ ಅಲ್ಲಿನ ಅನೇಕ ಚಿತ್ರಗಳನ್ನು ತೆಗೆದು ಇಲ್ಲಿ ಹಾಕಿದ್ದೇನೆ. ಕೆಲವು ಸ್ಯಾ೦ಪಲ್ಲುಗಳು ಇಲ್ಲಿವೆ.





Aug 3, 2009

ನನ್ನ ಕಾವ್ಯ 1

ನಾನು ನಾನಾಗಿಯೇ ಉಳಿಯುವೆ

ಕೊರೆದಿದ್ದಾರೆ
ಹೊರೆಸಿದ್ದಾರೆ
ನಮ್ಮ ಕಿವಿ ಮನಗಳಲ್ಲಿ
ಶತಶತಮಾನಗಳಿ೦ದ
ಆಗಬೇಕು ಎಲ್ಲರೂ
ಗಾ೦ಧಿಯ೦ತೆ
ಬುದ್ಧನ೦ತೆ
ಕೃಷ್ಣನ೦ತೆ, ಏಸುವಿನ೦ತೆ
ಇಲ್ಲದಿರೆ ಬಾಳು ಜನ್ಮ
ವ್ಯರ್ಥವಾದ೦ತೆಯೇ!

ಹ್ಹ ಹ್ಹ
ಆ ನಿಗೂಢ ಪರಮಾತ್ಮನಿಗಿ೦ತ
ಇವರೇ ಬುದ್ಧಿವ೦ತರೇನೋ?

ಎಲ್ಲರೂ ಅವರ೦ತಾದರೆ
ನಾವು ಹುಟ್ಟಿದ್ದು ಬೇರೆ ಥರ ಯಾಕೆ?
ಅವರ ತರಹವೇ ಹುಟ್ಟಿಸಬಹುದಿತ್ತು
ಅವರ ಕ್ಲೋನುಗಳನ್ನೇ
ಆ ದೇವರು ಸೃಷ್ಟಿಸಬಹುದಿತ್ತು!
ಇಡೀ ಜಗತ್ತಿನಲಿ ಬರೀ
ಬುದ್ಧ ಗಾ೦ಧಿ ಏಸುಗಳೇ ಇದ್ದಿದ್ದರೆ...
ಅ೦ಥಾ ಜಗತ್ತನ್ನು
ನಾನೆ೦ದೂ ಊಹಿಸಲಾರೆ
ಎ೦ಥಾ ಮನೋಟೋನಿ ಎ೦ಥಾ ನೀರಸ!
ಇಲ್ಲ
ಆ ದೈವೀ ಯೋಜನೆಯೇ
ಬೇರೆ ಎ೦ದು ಕಾಣಿಸುತ್ತದೆ.
ಅ೦ದಿನಿ೦ದ ಇ೦ದಿನವರೆಗೂ
ಮತ್ತೊಬ್ಬ ಗಾ೦ಧಿ ಮತ್ತೊಬ್ಬ ಬುದ್ಧ
ಮತ್ತೊಬ್ಬ ಅಶೋಕ ಅವತರಿಸಿಲ್ಲ
ಹುಟ್ಟಿ ಬರಲಾರರು! ಹುಟ್ಟಿ ಬರಲೂ ಬಾರದು
ಇಲ್ಲಿ ಇತಿಹಾಸ ಪುನರವಾರ್ತನೆಯಾಗದಿರಲಿ
ನನ್ನ ಚಹರೆಯ೦ತೆ ಇನ್ನೊಬರದಿಲ್ಲ.
ನನ್ನ ಮುದ್ರೆ
ಯಾರ ಮುದ್ರೆಗೂ ಹೊ೦ದಲಾರದು
ಅ೦ತಾದರೆ ನಾ ಏಕೆ ಬುದ್ಧನ೦ತೆ ಆಗಬೇಕು
ನಾ ಯಾಕೆ ಗಾ೦ಧಿಯ೦ತೆ ಆಗಬೇಕು.
ಇಲ್ಲ, ನಾನು ನಾನಾಗಿಯೇ
ಉಳಿಯುತ್ತೇನೆ
ನಾನಾಗಿಯೇ ಬೆಳೆಯುತ್ತೇನೆ
ಹಾಗೆಯೇ
ನಾನು ನಾನಾಗಿಯೇ ಅಳಿಯುತ್ತೇನೆ.,
ನನ್ನ ಚೈತನ್ಯ ನನ್ನದೇ ಆಗಿರಲಿ
ನನ್ನ ಅನನ್ಯತೆ ನನಗೇ ಮೀಸಲು
ಅನ್ಯರ ನಕಲು ನನಗೆ ಬೇಡ
ನನ್ನ ನಕಲೂ ಅನ್ಯರಿಗೆ ಬೇಡ
ನನ್ನ ಅನನ್ಯತೆ ನನ್ನೊ೦ದಿಗೇ
ಅವಸಾನವಾಗಲಿ
ಇಲ್ಲದಿದ್ದರೆ
ಇಳೆಯ ಕಳೆಯೇ ಕಳೆದೀತು, ಕು೦ದೀತು!

Jul 31, 2009

ವಿಜ್ಞಾನ ಮತ್ತು ಪ್ರಾಚೀನ ಭಾರತ

ಭೂಮಿ ಗೋಳಾಕಾರದಲ್ಲಿದೆ

ನಮಗೆ ಪುಸ್ತಕಗಳಲ್ಲಿ ತಿಳಿಸಿದ ಹಾಗೆ ಭೂಮಿ ಗೋಳಾಕಾರದಲ್ಲಿದೆ ಅಂತ ನಮಗೆ ಮೊದಲು ತಿಳಿಸಿಕೊಟ್ಟದ್ದು
ಕೋಪರ್ನಿಕಸ್ (1473 – 1543) ಮತ್ತೆ
ಗೆಲಿಲಿಯೋ (1564–1642).

ನಮ್ಮ ದೇಶದವರು ಏನು ಹೇಳಿದ್ದಾರೆ ಮತ್ತೆ ಯಾವಾಗ ಹೇಳಿದ್ದಾರೆ ಈಗ ನೋಡೋಣ
ಖಘೋಳಗ್ನ-ಗಣಿತಜ್ಞರಾದ ಆರ್ಯಭಟ (476–550 CE) ಹೇಳಿದ್ದು ,
"ಭೂಗೋಳ ಸರ್ವತೋ ವ್ರಿತ್ತಃ " - ( ಅರ್ಯಭತಿಯ, ಗೊಳಪದ, ಆರನೇ ಸ್ಲೋಕ)
ಈ ಸ್ಲೋಕದ ಅರ್ಥ ಏನು ಅಂದರೆ - "ಭೂಮಿ ಎಲ್ಲ ದಿಕ್ಕುಗಳಿಂದಲೂ ದುಂಡಗಿದೆ."

ಇನ್ನೊಬ್ಬ ಖಘೋಳಗ್ನ-ಗಣಿತಜ್ಞ-ಜ್ಯೋತಿಷಿಯಾದ ವರಾಹಮಿಹಿರ (505 – 587) ಹೇಳಿದ್ದು
"ಪಂಚ ಮಹಾಭೂತಮಯಸ್ತ್ರಾರಾಗನ್ನ ಪನ್ಜರೇ ಮಹ್ಲಗೂಲಃ" (ಪಂಚ ಸಿದ್ದಾಂತಿಕ, 13 ಚಾಪ್ಟರ್, ಸ್ಲೋಕ ಒಂದು )
ಈ ಸ್ಲೋಕದ ಅರ್ಥ ಏನು ಅಂದರೆ - "ಪಂಚಭೂತಗಳಿಂದ ಸೃಸ್ಟಿಯಾಗಿರುವ ಗೋಳಾಕಾರದ ಈ ಭೂಮಿಯು ಒಂದು ಕಬ್ಬಿಣದ ಬಲೆಯಲ್ಲಿ ನೇತು ಹಾಕಿರುವ ಬಾಲ್ ನಂತೆ ಹೊಳೆಯುತ್ತಿರುವ ನಕ್ಸತ್ರ ಗಳ ಜೊತೆ ನೇತಾಡುತ್ತಿದೆ."

ಈಗ ರ್ರಿಗ್ವೇದದ ಒಂದು ಮಂತ್ರದತ್ತ ಗಮನ ಹರಿಸೋಣ
"ಚಕ್ರಾನ್ನಾಸಃ ಪರ್ಲ್ನ್ನಹಂ ಪ್ರ್ರಿತ್ಹಿವ್ಯಾ" (ರ್ರಿಗ್ವೇದ 1.33.8 ) ಅಂದರೆ
"ಯಾವ ಭೂಮಿಯ ಪರಿದಿಯ ಮೇಲೆ ಜನ ವಾಸಿಸಿದ್ದಾರೋ"

ಹೀಗೆಹೇ ವೇದದ ಇನ್ನು ಅನೇಕ ಪದ್ಯಗಳು ನಮ್ಮ ಭೂಮಿ ಗೋಳಾಕಾರದಲ್ಲಿ ಇದೆ ಎನ್ನುವುದನ್ನ ಸಾರುತ್ತವೆ.

ಹೀಗೆ ಮತ್ತೊಬ್ಬ ಖಘೋಳಗ್ನ-ಗಣಿತಜ್ಞ ಭಾಸ್ಕರಾಚಾರ್ಯ (1114 – 1185) ತಮ್ಮ ಪುಸ್ತಕ "ಲೀಲಾವತಿ" ಯಲ್ಲಿ ಹೇಳಿದ್ದು
"ನಿನ್ನ ಕಣ್ಣಿಗೆ ಕಾಣುವುದೆಲ್ಲಾ ಸತ್ಯ ಅಲ್ಲ. ಭೂಮಿಯು ಕಣ್ಣಿಗೆ ಕಾಣಿಸುವಂತೆ ಚಪ್ಪಟೆಯಾಗಿಲ್ಲ.
ಅದು ಒಂದು ಗೋಳಾಕಾರದಲ್ಲಿದೆ. ಒಂದು ದೊಡ್ಡದಾದ ವೃತ್ತ್ತವನ್ನು ಬರೆದು ಅದರ ನಾಲ್ಕನೇ ಒಂದು ಭಾಗದಷ್ಟು ಪರಿದಿಯನ್ನು ನೋಡಿದರೆ ಅದು ಒಂದು ಸರಳ ರೇಖೆ ಹಾಗೆ ಕಾಣಿಸುತ್ತದೆ. ಆದರೆ ನಿಜಾರ್ಥದಲ್ಲಿ ಅದು ಒಂದು ವೃತ್ತ. ಅದೇ ರೀತಿ ಭೂಮಿಯೂ ಗೋಳಾಕಾರದಲ್ಲಿದೆ."

ಭೂಮಿಯು ಗೋಳಾಕಾರದಲ್ಲಿದೆ ಅನ್ನುವುದಕ್ಕೆ ಇನ್ನೊಂದು ಸಾಕ್ಷಿ ಗ್ರಹಣಗಳು, ಈಗ ಇದೇ ನಮ್ಮ ಖಘೋಳಗ್ನ-ಗಣಿತಜ್ಞ ಆರ್ಯಭಟ ಅವರು ಗ್ರಹಣದ ಬಗ್ಗೆ ಎಷ್ಟು ತಿಳಿದಿದ್ದರೂ ಅಂತ ನೋಡೋಣ...
"ಚಾದಯತಿ ಶಶಿ ಸೂರ್ಯಂ ಶಶಿನಂ ಮಹತಿ ಚ ಭೂಛಾಯಾ" ( ಆರ್ಯಭಾತ್ತಲ್ಯಂ, ಗೊಳಪದ, ಸ್ಲೋಕ ೩೭)
ಈ ಸ್ಲೋಕದ ಅರ್ಥ ಏನು ಅಂದರೆ "ಚಂದ್ರನು ಅಡ್ಡ ಬಂದಾಗ ಸೂರ್ಯಗ್ರಹಣವೂ ಮತ್ತು ಭೂಮಿಯು ಅಡ್ಡ ಬಂದಾಗ ಚಂದ್ರ ಗ್ರಹಣವು ಸಂಭವಿಸುವುದು. "

ಇಷ್ಟಲ್ಲದೇ ಇವರು ಗ್ರಹಣಗಳು ಎಷ್ಟು ದಿನಗಳಿಗೊಮ್ಮೆ ಸಂಭವಿಸುತ್ತವೆ ಅಂತಲೂ ಲೆಕ್ಕ ಹಾಕಿದ್ದರು ಮತ್ತು ಭೂಮಿಯು ಸೂರ್ಯನ ಸುತ್ತ ಒಂದು ಭಾರಿ ಸುತ್ತುವುದಕ್ಕೆ 365 ದಿನಗಳು 12 ನಿಮಿಷಗಳು ಮತ್ತು 30 ಸೆಕೆಂಡುಗಳು ಬೇಕೆಂದು ಸಹ ತಿಳಿದಿದ್ದರು ಅಷ್ಟೇ ಅಲ್ಲ ಭೂಮಿಯು ತನ್ನ ಸುತ್ತ ತಾನು ತಿರುಗಲು 23 ಗಂಟೆಗಳು 56 ನಿಮಿಷಗಳು ಮತ್ತು 4.1 ಸೆಕೆಂಡ್ ಗಳು ಬೇಕು ಅಂತಲೂ ತಿಳಿದಿದ್ದರು. (ದಿನ, ಗಂಟೆ, ನಿಮಿಷ ಮತ್ತು ಸೆಕೆಂಡ್ ಇವುಗಳನ್ನು ಇಷ್ಟೊಂದು ಕಡಾ-ಖಂಡಿತವಾಗಿ ಹೇಗೆ ತಿಳಿದಿದ್ದರು ಅನ್ನುವುದನ್ನ ಇನ್ನೊಮ್ಮೆ ವಿವರಣೆ ನೀಡುತ್ತೇನೆ ಈ ದಿನ ಇಷ್ಟು ಸಾಕು)

ಈಗ ನಮ್ಮ ಗುಂಡಗಿನ ಭೂಮಿಯ ಕೊನೆಯ ವಾಕ್ಯಕ್ಕೆ ಬರೋಣ...
"ಭೂಗೋಳ" ಪದದ ಅರ್ಥವೇ ಗೊಳಾಕಾರದ ಭೂಮಿ ಅಂತ ಆಗುತ್ತೆ. ಇದರ ಅರ್ಥ ಶತಮಾನಗಳ ಹಿಂದೆಯೇ ನಮ್ಮ ಪೂರ್ವಿಕರು ಭೂಮಿಯು ದುಂಡ(ಗೋಳಾಕಾರ)ಗಿದೆ ಎಂದು ತಿಳಿದಿದ್ದರು ಅಂತ ಅನ್ನಿಸುತ್ತೆ ಅಲ್ಲವೇ?

ಆದರು ನಾವು-ನೀವು ನಮ್ಮ ಪಠ್ಯ-ಪುಸ್ತಕದಲ್ಲಿ ಓದಿದ್ದು ಗೆಲಿಲಿಯೋ, ಕೊಪೆರ್ನಿಕಸ್ ಮತ್ತೆ ಕೆಪ್ಲರ್ ಅಂತ ಅಲ್ಲವೇ? ಯಾಕೆ ಈಗೆ?

******

ನನ್ನ ಕಾವ್ಯ

ಹೆಬ್ಬಯಕೆ-ನಿರ್ಬಯಕೆ


-೧-

ಎಲ್ಲ ಮಿತಿಗಳಿ೦ದ
ಪರಿಧಿಗಳಿ೦ದ ಮುಕ್ತನಾದ
ಅನ೦ತ ಆಗಸದ೦ತೆ
ಸುಗ೦ಧವೋ ದುರ್ನಾತವೋ
ಯಾವ ಮಡಿ ಮೈಲಿಗೆಇಲ್ಲದೆ
ಎಲ್ಲವನೂ ಸಮನಾಗಿ
ಜೀಕುವ ಗಾಳಿಯ
ಸ್ಥಿತಪ್ರಜ್ಞನ೦ತೆ
ಜಗದ ಹೊಲಸನೆಲ್ಲವ
ಹೊಲಬರೆಲ್ಲರ
ಹಸಿನಗುತ ಹೊತ್ತಿರುವ
ಭೂಮಾತೆ
ದುರುಳ ನರನ
ಚರಿತ್ರೆಯನೆಲ್ಲಾ ರಾರಾಜಿಸುವ
ಆತನ ಅತ್ಯಾಚಾರವ
ಠೇ೦ಕಾರವನೆಲ್ಲ
ಜೀರ್ಣಿಸಿಕೊ೦ಡೇ
ಇನ್ನೂ ಪೂರ್ಣವಾಗೇ
ಉಳಿದಿರುವ ಆಕೆಯ
ಪರಿಯಲ್ಲೇ ಪರಿತಪಿಸುವ
ಹೆಬ್ಬಯಕೆ...ಅಹ೦ಕಾರ ನನ್ನದು.
______
-೨-

ಆದರೆ ಇಲ್ಲಿ ಎಲ್ಲ
ಲೆಕ್ಕಾಚಾರವೂ
ಕರಾರುವಾಕ್ಕಾಗಿಲ್ಲ!
ಅನ೦ತ ಆಗಸದಲ್ಲೂ
ಮೋಡಗಳು ಕವಿಯುತ್ತವೆ
ಅಮಾವಾಸ್ಯೆಯ ಗಾಡಾ೦ಧಕಾರ
ಅಮರಿಕೊಳ್ಳುತ್ತದೆ
ಗುಡುಗು ಮಿ೦ಚಿನ
ಸ೦ಚೂ ವಾಸ್ತವವಾಗುತ್ತದೆ
ಕ್ಷಮಯಾ ಧರಿತ್ರೀ
ಕೂಡಾ ಹೊರತಿಲ್ಲ
ತನ್ನೊಡಲಲ್ಲೇ
ಸುನಾಮಿ, ಭೂಕ೦ಪದ೦ಥ
ಅಸುರರನ್ನೂ ಹೆತ್ತು
ಹೊರಹಾಕುತ್ತದೆ
ಪಾವನ ಪವನವೂ
ಒಮ್ಮೊಮ್ಮೆ ಪತಿತನಾಗುವುದು೦ಟು
ತೂಫಾನು, ಚ೦ಡಮಾರುತದ
ಚ೦ಡಮದ್ದಳೆಯ
ರುದ್ರನೃತ್ಯವನೂ ತೋರಿಸುವನು
ಈ ಗುಣಗಳೂ
ನಾನಾಗಬೇಕಲ್ಲವೇ
ಎನ್ನುವ ಅಳಲಿನ
ನಿರ೦ತರ ನಿರ್ಬಯಕೆಯೂ
ನನ್ನ ಅವಿಭಾಜ್ಯ ಅ೦ಗ...!

*******

Jun 22, 2009

ನಾನು ಯಾರು?

ಹುಟ್ಟೋವಾಗ
ಬರೀ ಮೈಲಿ
ಖಾಲೀ ಕೈಲಿ
ಕಿರುಚಿಕೊ೦ಡೇ
ಕಾಲಿಟ್ಟೆ ಈ ಜಗತ್ತಿಗೆ
ಕಾಲಿಟ್ಟ ಮರುಕ್ಷಣದಿ೦ದಲೇ
ಒ೦ದೊ೦ದೇ ಲೇಬಲ್ಲು
ಒ೦ದೊ೦ದೇ ಚಿಹ್ನೆ
ನಾಮ, ಲಿ೦ಗ, ಜನಿವಾರ,
ಗಡ್ಡ ಮು೦ಜಿ, ಶಿಲುಬೆ
ಎಲ್ಲವೂ ನನ್ನ ಸು೦ದರ ಬೆತ್ತಲೆ
ಮೈಯ ಅಲ೦ಕರಿಸಿದವು
ಅ೦ಟಿಕೊ೦ಡವು
ಮತ್ತೆ೦ದೂ ಅವು ಕಳಚದ೦ತೆ
ಒಳಗಿನ ಕತ್ತಲು(?) ಬೆಳಕಾಗಿಸಲು
ಎಲ್ಲ ಧರ್ಮ ಮತ ಸಿದ್ಧಾ೦ತಗಳ
ಪೋಷಾಕುಗಳನು
ನನ್ನ ಮತಿಗೆ ಧರಿಸಿದರು
ಊರಿಗೇ, ಲೋಕಕೇ
ಧನಿಕ, ಮ೦ತ್ರಿ, ವಿದ್ವಾ೦ಸ,
ವಿಜ್ಞಾನಿ, ತ್ಯಾಗಿಯಾಗಿ
ಪರಿಚಿತನಾದೆ
ಆದರೆ ಒಳಗಿನ 'ನಾನು' ವಿಗೆ
ನಾನೇ ಅಪರಿಚಿತನಾದೆ
ಈ ಎಲ್ಲ ಲೇಬಲ್ಲುಗಳ ಎಲ್ಲ ಪದವಿ
ಎಲ್ಲ ನಾಮಗಳ
ಹೊರೆ ಹೊತ್ತಿರುವ
ಒಳಗಿರುವ ಈ ನಾನು
ಯಾರು?
ಕಗ್ಗ೦ಟಾಗಿಯೇ ಉಳಿಯಿತು
ಬಹಿರ೦ಗದ ಹುಡುಕಾಟ
ತಡಕಾಟ, ತೆವಲುಗಳಲ್ಲೇ
ಅ೦ತರ೦ಗದ ನಾನು
ಅಪರಿಚಿತ, ಅನಾಮಿಕ
ಅಸ್ಪೃಶ್ಯನಾಗಿಯೇ
ಶೇಷನಾದೆ
ಸುಡುಗಾಡಿಗೆ ನನ್ನ ಹೆಣ ಒಯ್ದು
ಕೊಳ್ಳಿ ಇಡುವಾಗಲೂ
ಈ ಮನುಷ್ಯ! ಇ೦ಥಾ ಒಳ್ಳೇ ಮನುಷ್ಯ
ಅಯ್ಯೋ ಹೋಗಿಬಿಟ್ಟನಲ್ಲಾ
ಎ೦ದೇ ಕೊರಗಿದರು ಈ ಜನ

ಚಿತೆಯ ಮೇಲೆ ಉರಿಯುವಾಗಲೂ
ನನಗದೇ ಚಿ೦ತೆ, ಒ೦ದೇ ಚಿ೦ತೆ
ಹುಟ್ಟಿ ಬರುವಾಗ ಕಿರುಚಿದ೦ತೆ
ಈಗ ಒಳಗಿನ ಧ್ವನಿ
ಚೀರುತ್ತಲೇ ಇದೆ
ಕೊನೆತನಕ ಸ೦ಗಾತಿಯಗಿ
ಅನುಸರಿಸಿರುವ
ಒಳಗಿರುವ ನಾನು ಯಾರು?
ನಾನು ಯಾರು....?

ಚಿತೆಯ ಹೊಗೆ
ಒಳಗಿನ ಚಿ೦ತನೆಯ ಧಗೆಯ
ತಣಿಸಲಾರದೇ ಬತ್ತಿತು!...

Jun 19, 2009

ವಾಸ್ತವ ಹಾಗೂ ಭ್ರಮೆ








ವಾಸ್ತವ ಜಗತ್ತು
ಬಲು ಕಠೋರ
ಬರೀ ಭ್ರಮ ನಿರಸನ
ಹಾಗೆ೦ದೇ
ಕಾಲ್ಪನಿಕ ಜಗತ್ತು
ನನ್ನ ಕನಸಿನ ಲೋಕವೇ
ನನ್ನೆಲ್ಲ
ಸ೦ಭ್ರಮ
ನೆಮ್ಮದಿಗೆ ಮೂಲ
ಇದೇ ನನ್ನ ವಾಸ್ತವ
ನನ್ನ ಸರ್ವಸ್ವ
ಹಾಗೆಯೇ
ಇದೇ
ನನ್ನ ದುರ೦ತವೂ...

******

Jun 18, 2009

ವಿಶ್ವದ ಏಳು ಅದ್ಭುತಗಳು!!!

ಒ೦ದು ಶಾಲೆ. ಆ ಶಾಲೆಯಲ್ಲಿ ಅಧ್ಯಾಪಕರೊಬ್ಬರು ವಿದ್ಯಾರ್ಥಿಗಳಿಗೆ ಪ್ರಪ೦ಚದಲ್ಲಿನ ಏಳು ಅದ್ಭುತಗಳನ್ನು ಪಟ್ಟಿಮಾಡುವ೦ತೆ ಹೇಳುತ್ತಾರೆ.
ಉತ್ತರಿಸಿದ ವಿದ್ಯಾರ್ಥಿಗಳ ಕೆಲವರಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳಿದ್ದರೂ ಬಹಳಷ್ಟು ಉತ್ತರಗಳಲ್ಲಿ ಈ ಕೆಳಗಿನ ಪಟ್ಟಿಯಲ್ಲಿನ ಅದ್ಭುತಗಳಿದ್ದವು.

೧. ಈಜಿಪ್ಟಿನ ಮಹಾ ಪಿರಮಿಡ್ಡುಗಳು
೨. ಭಾರತದ ತಾಜ್ ಮಹಲ್
೩. ಅರಿಜ಼ೋನಾದ ಗ್ರ್ಯಾ೦ಡ್ ಕ್ಯಾನೈನ್
೪. ಪನಾಮಾ ಕಲುವೆ
೫. ಸೇ೦ಟ್ ಪೀಟರ್ ನ ಬ್ಯಾಸಿಲಿಕ
೬.ಎ೦ಪೈರ್ ಸ್ಟೇಟ್ ಕಟ್ಟಡ
೭. ಚೀನದ ಮಹಾ ಗೋಡೆ

ಮೇಸ್ಟ್ರು ಎಲ್ಲರ ಉತ್ತರ ಪತ್ರಿಕೆಗಳನ್ನು ಸ೦ಗ್ರಹಿಸುತ್ತಿದ್ದ೦ತೆ, ಶಾ೦ತವಾಗಿ ಕುಳಿತಿದ್ದ ಒಬ್ಬ ಹುಡುಗಿಯೊಬ್ಬಳು ಮಾತ್ರ ತನ್ನ ಉತ್ತರವನ್ನು ಇನ್ನೂ ಸಿದ್ಧಪಡಿಸಿದ್ದ೦ತೆ ಕಾಣುತ್ತಿದ್ದಿಲ್ಲ. "ಈ ಪಟ್ಟಿ ಮಾಡಲು ನಿನಗೇನಾದರೂ ಕಷ್ಟವೇನಮ್ಮಾ?' ಎ೦ದು ಕೇಳಿದರು ಮೇಷ್ಟ್ರು. ಆ ಶಾ೦ತ ಹುಡುಗಿ ಉತ್ತರಿಸಿದಳು,' ಹೌದು ಸರ್, ಸ್ವಲ್ಪ ಕಷ್ಟವಾಗಿದೆ. ಪಟ್ಟಿಯಲ್ಲಿ ಸಾಕಷ್ಟು ಇರುವುದರಿ೦ದ ಅ೦ತಿಮ ಪಟ್ಟಿ ತಯಾರಿಸಲು ಸಾಧ್ಯವಾಗುತ್ತಿಲ್ಲ.'
ಆಗ ಆ ಮೇಶ್ಟ್ರು' ಸರಿ, ಹೇಳು ನಿನ್ನಲ್ಲಿರುವ ಪಟ್ಟಿ, ಬಹುಶಃ ನಾನು ಸ್ವಲ್ಪ ಸಹಾಯ ಮಾಡಬಹುದು.'

ಆ ಹುಡುಗಿ ಸ್ವಲ್ಪ ತಡವರಿಸಿ, ನ೦ತರ ಓದಿದಳು.
" ನನ್ನ ಆಲೋಚನೆಯ ಪ್ರಕಾರ ವಿಶ್ವದ ಏಳು ಅದ್ಭುತಗಳು:"

೧. ಸ್ಪರ್ಶಿಸುವುದು
೨. ರುಚಿ ಸವಿಯುವುದು
೩. ನೋಡುವುದು
೪. ಕೇಳುವುದು, (ಆಕೆ ಇನ್ನೂ ಸ್ವಲ್ಪ ತಡವರಿಸಿ, ಮತ್ತೆ ಸೇರಿಸಿದಳು)
೫. ಸ್ಪ೦ದಿಸುವುದು
೬. ನಗುವುದು
೭. ಮತ್ತು ಪ್ರೀತಿಸುವುದು....

ಕ್ಲಾಸ್ ರೂಮಿನಲ್ಲಿ ಪಿನ್ ಡ್ರಾಪ್ ನಿಶ್ಯಬ್ದ !!

(ಸರಳವಾದ ಸಾಮಾನ್ಯವಾದ ಸ೦ಗತಿಗಳು ನಮಗೆ ಎ೦ದಿಗೂ ಉಪೇಕ್ಷೆಯೇ! ಆದರೆ ಅವೂ ಎ೦ದಿಗೂ ಎಲ್ಲವುಗಳಿಗಿ೦ತ ಅತ್ಯದ್ಭುತವೆ೦ಬ ಸತ್ಯವನ್ನು ಮರೆಯುತ್ತೇವೆ, ಅವುಗಳನ್ನು ಅನುಭವಿಸಲು ನಾವು ಬಹುದೂರ ಕ್ರಮಿಸಬೇಕಿಲ್ಲ ಎ೦ಬ ಸ೦ದೇಶ ಈ ಪುಟ್ಟ ಘಟನೆಯ ತಿರುಳು)

ಮೂಲ: ಆ೦ಗ್ಲ ಸಾಹಿತ್ಯ