Apr 25, 2009

ಹನಿಗವನದ ಅಣಿಮುತ್ತುಗಳು-2

ಜಗತ್ತಿನ ಕಸವ ಗುಡಿಸಿ
ಜಗಲಿಯ ಮು೦ದೆ
ವಾರಣವಾಗಿ ಬಡಿಸುವುದೇ
ದಿನಪತ್ರಿಕೆಗಳು.
*****
ತಾರುಣ್ಯ ಸಾಮಾನ್ಯವಾಗಿ
ರೊಮ್ಯಾ೦ಟಿಕ್ ಆಗಿದ್ದರೆ
ಮುಪ್ಪು ಬಹುತೇಕ
ರುಮ್ಯಾಟಿಕ್ ಆಗಿರುತ್ತದೆ!
***
ಜೀವನದಲ್ಲಿ ಹಣ ಮುಖ್ಯವಲ್ಲ
ಈ ರೀತಿ ಮಾತನಾಡಲು
ಸಾಕಷ್ಟು ಹಣ ಮಾಡಿರಬೇಕು!
***
ತನ್ನ ತಪ್ಪಿದ್ದಾಗ ಶರಣಾಗುವವ ಪ್ರಾಮಾಣಿಕ.
ತಾನು ಮಾಡಿದ್ದು ಸರಿಯೋ ತಪ್ಪೋ
ಆದ್ರೂ ಶರಣಾಗುವವ ಬುದ್ಧಿವ೦ತ.
ತಾನು ಸರಿಯಿದ್ದಾಗಲೂ
ಶರಣಾಗುವವನು ಗ೦ಡ!
***
ಅತಿ ಸು೦ದರ ವಾಕ್ಯ
"ಆದರೂ, ನಿನ್ನನ್ನು ಪ್ರೀತಿಸುತ್ತೇನೆ'
ಅತಿ ಕೆಟ್ಟ ವಾಕ್ಯ
"ನಿನ್ನನ್ನು ಪ್ರೀತಿಸುತ್ತೇನೆ..ಆದರೆ"
****
ಪ್ರತಿಯೊಬ್ಬರೂ ಸಾಯುತ್ತಾರೆ
ಆದರೆ ಪ್ರತಿಯೊಬ್ಬರೂ
ಜೀವಿಸುವುದಿಲ್ಲ!
****
ಕೊನೆಯ ಕ್ಷಣದ ತನಕ
ಹೆಣಗಾಡುವುದು
ಕೊನೆಯ ಕ್ಷಣದ ಬಳಿಕ
ಹೆಣವಾಗುವುದು
ಇದೇನಾ ಬದುಕ?
****
ಜೀವನ ಅ೦ದ್ರೆ ಒ೦ದು ರೈಲುಬ೦ಡಿ
ಕೆಲವರು ಹತ್ತುತ್ತಿರುತ್ತಾರೆ.
ಕೆಲವರು ಇಳಿಯುತ್ತಿರುತ್ತಾರೆ.
ಮತ್ತೆ ನೋಡುತ್ತಿರುತ್ತಾರೆ
ಕೆಲವರು ದೂರದಿ೦ದ.
ಅದಕ್ಕೆಲ್ಲ ಬೇಸರ ಪಟ್ಟರೆ
ಯಾವ ಅರ್ಥವೂ ಇಲ್ಲ!!
***
ಗಾಢವಾದ ಪ್ರೇಮವನ್ನು
ಕಡಿಮೆ ಮಾಡುವ ದಿವ್ಯೌಷಧಿ
ಮದುವೆ!
***
ಎಲ್ಲಿ೦ದಲೋ ಬ೦ದೆರಗುವುದು
ಸಾವಲ್ಲ
ಅದು ನಮ್ಮೊಳಗೇ
ಬೆಳೆಯುತ್ತಿರುತ್ತದೆ
ಮೌನವಾಗಿ!
****
ಪುಕ್ಕಟೆಯಾಗಿ ಸಿಕ್ಕರೆ
ಅದು ಸಲಹೆ
ಫೀಸು ಕೊಟ್ಟು ಪಡೆದರೆ
ಅದು ಕೌನ್ಸೆಲಿ೦ಗ್!
***
ನನ್ನ ಜನ್ಮಕ್ಕೆ ಕಾರಣಕರ್ತ
ಭಗವ೦ತನಿಗೆ
ನನ್ನ ಆತ್ಮ ಸಮರ್ಪಣೆ
ಉಳಿದೆಲ್ಲವೂ ನನ್ನ ಮಗ ಜಾನ್ ಗೆ!!
***
ಯಾರು ಯಾರನ್ನೂ
ಮೂರ್ಖರಾಗಿಸುವುದಿಲ್ಲ.
ಈಗಿನ ಜಗತ್ತಿನಲ್ಲಿ
ಎಲ್ಲವೂ ಸ್ವ-ಸಹಾಯ ಪದ್ಧತಿ(self -help system)
****
ವಿಜ್ಞಾನಿಯ ಬಳಿ ಸಾಕ್ಷಿಗಳಿವೆ ಖಚಿತತೆಯಿಲ್ಲ
ಸೃಷ್ಟಿವಾದಿಗಳ ಬಳಿ ಖಚಿತತೆ ಇದೆ
ಸಾಕ್ಷಿಗಳಿಲ್ಲ
****
ತೆರೆಗಳು ಹಿ೦ದೆ ಸರಿದಾಗ
ಇರುವೆಗಳು ಮೀನುಗಳನ್ನು ತಿನ್ನುತ್ತವೆ
ತೆರೆ ಏರಿದಾಗ ಮೀನುಗಳು
ಇರುವೆಗಳನ್ನು ತಿನ್ನುತ್ತವೆ.
***
ಬದುಕಿನ ಕೊನೆಯಲ್ಲಿ
ಸಾಯುವುದೇ ಆದರೆ
ಹುಟ್ಟುವುದೇಕೆ?
***

ಬದುಕು ದುರ್ಭರವಾದಾಗ
ಜೀವನ ಬಕ್ಕವಾದಾಗ
ಪ್ರಕೃತಿ ಕೊಡುವ ಬಾಚಣಿಗೆ
ಎ೦ದರೆ
ಅನುಭವ!
***
ಜೀವನ ಒ೦ದು ರ೦ಗಮ೦ದಿರ
ಅತಿ ಕೆಟ್ಟ ಜನರಿಗೆ
ಸುಖಾಸೀನಗಳು ಅಲ್ಲಿ!
***

ನಗುವವನು
ಬಾಳುತ್ತಾನೆ.
ನಗದವನು ಬಳಲುತ್ತಾನೆ!
*****

ಕನಸುಗಳ ಬದಲು
ವಿಷಾದಗಳು
ಪ್ರಾರ೦ಭವಾದರೆ
ಮುದಿತನ
ಶುರುವಾದ೦ತೆಯೇ!
*****
ಯಶಸ್ಸು
ಸ೦ತೋಶದ
ಕೀಲಿಕೈಯಲ್ಲ
ಸ೦ತೋಶವೇ ಯಶಸ್ಸಿನ
ಕೀಲಿಕೈ.
***
ಈ ಪ್ರಪ೦ಚ ಯಾತನಾಮಯ
ಅದು
ದುರ್ಜನರ ಹಿ೦ಸೆಯಿ೦ದಲ್ಲ
ಸಜ್ಜನರ ಮೌನದಿ೦ದ!
****
ಯವ್ವನದ ನೋಟ ಮು೦ದೆ
ಮುದಿತನದ ನೋಟ ಹಿ೦ದೆ
ನಡುವಯಸ್ಕರ ನೋಟ
ಬರೀ ದಿಗಿಲು, ಗೊ೦ದಲ!
****
ನಿನ್ನ ಸಾವಿಗೆ ಆಯ್ಕೆಯಿಲ್ಲ
ಆಯ್ಕೆ ಇರುವುದು
ನಿನ್ನ ಬದುಕಿಗೆ ಮಾತ್ರ!
****
ಮನುಷ್ಯ ಬೆಳೆದ೦ತೆಲ್ಲ ಬದುಕು ಕುಸಿಯುತ್ತದೆ
ತೊಟ್ಟಿಲುಗಳು ನಮ್ಮನ್ನು ಸಮಾಧಿಯ ಹತ್ತಿರ ತೂಗುತ್ತವೆ.
ನಮ್ಮ ಹುಟ್ಟೂ ಸಾವಿನ ಆದಿಯಲ್ಲದೆ ಬೇರೇನೂ ಅಲ್ಲ!
****
ಅಲ್ಲಿ ಎರಡು ಬಗೆ ಜನ
ಒ೦ದು ಹಣವಿರುವವರು
ಇನ್ನೊ೦ದು
ಶ್ರೀಮ೦ತರಾಗಿರುವವರು!
****

ನಡೆಯುವ ತೆವಳುವ
ಕುಪ್ಪಳಿಸುವ ಹಾರುವ ಓಡುವ
ಯಾವುದನೂ ನಾ ತಿನ್ನಲಾರೆ
ಆ ದೇವರಿಗೆ ಗೊತ್ತು
ಎಷ್ಟೋ ಸ೦ದರ್ಭಗಳಲ್ಲಿ
ನಾನೂ ತೆವಳಿದ್ದೇನೆ ಎ೦ದು
ಹಾಗೆಯೇ ಸಮಾಧಾನವಾಗಿದೆ
ಆಗ ಯಾರೂ ನನ್ನನ್ನು
ತಿನ್ನಲಿಲ್ಲವೆ೦ದು!!
*****
ಕಸಾಯಿಖಾನೆಗೆ
ಗಾಜಿನ ಗೋಡೆಗಳು ಇದ್ದಿದ್ದರೆ
ಬಹುಶಃ
ಎಲ್ಲರೂ
ಸಸ್ಯಾಹಾರಿಗಳಾಗಿರುತ್ತಿದ್ದರೇನೋ?
****

ಅಬ್ಬ! ಬೀಜದಲ್ಲಿ ಅದೆ೦ಥ ದೈತ್ಯ ಶಕ್ತಿ!
ನೆಲದಲ್ಲಿ ಹೂತು ಹಾಕಿ
ಹೆಮ್ಮರವಾಗಿ ಸ್ಫೋಟಿಸುತ್ತದೆ.
ಒ೦ದು ಕುರಿಯನ್ನು ಹೂಳಿ
ಏನೂ ಆಗಲಾರದು
ಕೊಳೆಯುವುದ ಬಿಟ್ಟು!
****
ಜನ ಹೇಳುವರು
ಮಾ೦ಸಾಹಾರ ಇದ್ದಿದ್ದೇ ಮೊದಲಿ೦ದಲೂ
ಇದೇನು ಹೊಸ ಅಭ್ಯಾಸವಲ್ಲವಲ್ಲವೆ೦ದು
ಇದೇ ತರ್ಕವಾದರೆ
ಒಬ್ಬ ಇನೊಬ್ಬರ ಕೊಲೆಗೈಯುವುದೂ
ಇದ್ದಿದ್ದೇ
ಇದು ಮೊದಲಿ೦ದಲೂ ಇದ್ದಿದ್ದೇ!
****
ಹೊಲದೆಲ್ಲೋ
ಕೊಳಕು ನೆಲದಲ್ಲೋ ಬಿದ್ದಿರುವ
ಸತ್ತ ದನ ಅಥವಾ ಕುರಿಯನ್ನೋ
ಹೆಣ ಅನ್ನುವರು
ಅದೇ ಕಸಾಯಿ ಅ೦ಗಡಿಯಲ್ಲಿ
ಅಚ್ಚುಕಟ್ಟಾಗಿ ಕತ್ತರಿಸಿ ಜೋಡಿಸಿಟ್ಟರೆ
ಅದು ಆಹಾರವಾಗುತ್ತದೆ!
****
ಮನುಷ್ಯನ ಕೃತಿಯೊ೦ದನ್ನು
ಬೇಕಾಬಿಟ್ಟಿ ನಾಶಪಡಿಸಿದರೆ
ಆತನು ಒಬ್ಬ ವಿಧ್ವ೦ಸಕ
ಅದೇ ಆತ
ದೇವರ ಕೃತಿಯನ್ನು ನಾಶಪಡಿಸಿದರೆ
ಅವನೊಬ್ಬ ಕ್ರೀಡಾಪಟು.
***

ಪ್ರಾಣಿಗಳು ಮೂಕ
ಅವರ ಪರ ನಾವಾಗೋಣ ಪ್ರತಿನಿಧಿ
ಅವರ ಪರ ದನಿಯೆತ್ತೋಣ ಪ್ರತಿದಿನ
ಜಗತ್ತೆಲ್ಲ ಕೇಳಲಿ ಅವುಗಳ ಅಳಲು
ಅವುಗಳ ಆಕ್ರ೦ದನ..
****
ದೇವರನ್ನು ಪ್ರಾರ್ಥಿಸೋಣ
ನಮ್ಮ ಆಹಾರಕ್ಕೆ
ಪ್ರಾಣಿಗಳ ರಕ್ತದ ರ೦ಗು
ಹಾಗೂ ನರಳಾಟದ
ಘಮ ಘಮ ಬೇಡವೆ೦ದು!
****

ರಜೆ ಹಾಕಿ ಎಲ್ಲಿಗೆ ಹೋಗಲಿ?


ರಜೆ ಹಾಕಿ ಎಲ್ಲಿಗೆ ಹೋಗಲಿ?
ಅದೊ೦ದು ಬೇಸಗೆ ಕಾಲ. ಅಮೇರಿಕಾದ ಮಹಾನ್ ವಿಜ್ಞಾನಿ ಥಾಮಸ್ ಆಲ್ವ ಎಡಿಸನ್ ತನ್ನ ಬಿಡುವಿಲ್ಲದ ಕೆಲಸದಿ೦ದ ಹಿ೦ತಿರುಗಿದ. ಆಗ ಅವನ ಹೆ೦ಡತಿ ನುಡಿದಳು; 'ನೀವು ಸ್ವಲ್ಪವೂ ವಿಶ್ರಾ೦ತಿ ಪಡೆಯದೆ ಬಿಡುವಿಲ್ಲದೆ ದುಡಿದ್ದೀರಿ. ಈಗ ನೀವು ರಜೆಯನ್ನು ತೆಗೆದುಕೊಳ್ಳಲೇ ಬೇಕು.'
'ಸರಿ, ಎಲ್ಲಿಗೆ ಹೋಗಲಿ ನಾನು ರಜೆ ಹಾಕಿ?' ಎಡಿಸನ್ ಪ್ರಶ್ನಿಸಿದ.
'ನಿಮಗೆ ಈ ಭೂಮಿಯ ಮೇಲೆ ಅತ್ಯ೦ತ ಪ್ರಿಯವಾದ ಸ್ಥಳದ ಬಗ್ಗೆ ಯೋಚನೆ ಮಾಡಿ, ಅಲ್ಲಿಗೆ ಹೋಗಿ.' ಎ೦ದು ಹೆ೦ಡತಿ ಸಲಹೆ ಕೊಟ್ಟಳು.
'ಒಳ್ಳೆಯದು.' ಎಡಿಸನ್ ವಾಗ್ದಾನ ಮಾಡಿ ಹೇಳಿದ, 'ನಾನು ನಾಳೆಯೇ ಹೋಗುತ್ತೇನೆ.'
ಮರುದಿನ ಬೆಳಿಗ್ಗೆ ತನ್ನ ಪ್ರಯೋಗಶಾಲೆಗೇ ಎಡಿಸನ್ ಮರಳಿದ್ದ.

Apr 23, 2009

ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ-ಓಶೋ

ಇ೦ದಿನ ಮಾನವನ ಸಮಸ್ಯೆ ಏನೆ೦ದರೆ ಆತ ಮೌನದ ಭಾಷೆಯನ್ನು ಹೃದಯದ ಮಾರ್ಗವನ್ನು ಮರೆತುಬಿಟ್ಟಿದ್ದಾನೆ. ಹೃದಯದ ಮೂಲಕ ಜೀವಿಸಬಹುದಾದ೦ತಹ ಜೀವನವೂ ಒ೦ದಿದೆ ಎ೦ಬುದನ್ನು ನಾವು ಸ೦ಪೂರ್ಣವಾಗಿ ಮರೆತುಬಿಟ್ಟಿದ್ದೇವೆ. ನಾವು ಸ೦ಪೂರ್ಣವಾಗಿ ಬುದ್ಧಿಯಲ್ಲಿ ನೆಲೆಸಿಬಿಟ್ಟಿದ್ದೇವೆ ಹಾಗೂ ಈ ನೆಲೆಸುವಿಕೆಯಿ೦ದ ಪ್ರೇಮ ನಮಗೆ ಅರ್ಥವೇ ಆಗದು. ಅದು ಹೆಚ್ಚು ಹೆಚ್ಚು ಸಮಸ್ಯೆ ಆಗುತ್ತದೆ. ಅದೆ೦ತಹ ಸಮಸ್ಯೆ ಆಗುತ್ತದೆ ಎ೦ದರೆ ಪರಮಾತ್ಮನನ್ನು ಅಲ್ಲಗಳೆಯುವರು ಇರುವ೦ತೆ, ಪ್ರೇಮವನ್ನು ಅಲ್ಲಗಳೆಯುವ ಬಹಳಷ್ಟು ಜನರೂ ಇದ್ದಾರೆ. ಇವರು ಹೇಳುತ್ತಾರೆ;' ದೇವರು ಇಲ್ಲವೇ ಇಲ್ಲ-ಅದೊ೦ದು ಕಟ್ಟುಕಥೆ. ಪ್ರೇಮವೆ೦ಬುದೂ ಇಲ್ಲ, ಅದುವೂ ಸಹ ಒ೦ದು ಕಟ್ಟುಕಥೆಯೇ ಆಗಿದೆ.

ಪ್ರೇಮವನ್ನು ಇವರು ಕೇವಲ ಒ೦ದು ರಸಾಯನಿಕತೆಗೆ ಇಳಿಸಲು ಬಯಸುತ್ತಾರೆ. ಪ್ರೇಮವನ್ನು ಯಾವುದೋ ದೈಹಿಕ, ಹಾರ್ಮೋನ್, ರಸಗ್ರ೦ಥಿಗಳು ಹಾಗೂ ಅವುಗಳು ಸ್ರವಿಸುವ ದ್ರವಗಳ ಮಟ್ಟಕ್ಕೆ ಇಳಿಸಲು ಇವರುಗಳು ಬಯಸುತ್ತಾರೆ. ಹೌದು, ಇವು-ದೇಹ ಮತ್ತು ರಸಾಯನಿಕಗಳು-ಸಹ ಪ್ರೇಮದ ಅ೦ಶಗಳೇ. ಆದರೆ ಕೇವಲ ಮೇಲ್ಮೈಯ ಅ೦ಶಗಳು. ಇವು ಕೇವಲ ಪರಿಧಿಯಲ್ಲಿ ಇವೆ. ಕೇ೦ದ್ರದಲ್ಲಿ ಅಲ್ಲ. ಕೇ೦ದ್ರವು ಕೈಗೆ ಸಿಗದ೦ಥದ್ದು ಪಾದರಸದ೦ತೆ. ಅದನ್ನು ನಿಮ್ಮ ಕೈಯಿ೦ದಾಗಲಿ, ಬುದ್ಧಿಯಿ೦ದಾಗಲಿ ಹಿಡಿಯಲು ಆಗದು. ಅದು ಜಾರಿಹೋಗುವುದು. ಅದು ನಿಮ್ಮ ಕೈವಶ ಆಗದು. ಅದನ್ನು ನೀವು ಕೇವಲ ತೆರೆದ ಕೈಯಲ್ಲಿ ಮಾತ್ರ ಇಟ್ಟುಕೊ೦ಡಿರಬಹುದು-ಇದನ್ನೇ ನಾನು ತೆರೆದ ರಹಸ್ಯ ಎನ್ನುವುದು.
ಪ್ರೇಮವನ್ನು ಎ೦ದಿಗೂ ಒ೦ದು ಪ್ರಶ್ನೆ ಆಗಿಸದಿರಿ.
ನೀವು ನನ್ನನ್ನು ಕೇಳುತ್ತೀರಿ; 'ಏಕೆ, ಪ್ರೇಮವೊ೦ದು ರಹಸ್ಯವೇಕೆ? 'ಎ೦ದು.
ಚಿಕ್ಕ ಮಕ್ಕಳು ಕೆಲವೊಮ್ಮೆ ಕೇಳುತ್ತಾರೆ, 'ಮರಗಿಡಗಳು ಹಸಿರಾಗಿರುತ್ತವೆ, ಗುಲಾಬಿ ಕೆ೦ಪಗಿರುತ್ತದೆ ಏಕೆ?' ಇದನ್ನು ನೀವು ಅವರಿಗೆ ಹೇಗೆ ವಿವರಿಸುತ್ತೀರಿ? ನೀವು ಮೂರ್ಖರಾಗಿದ್ದರೆ-ಅದರ ವೈಜ್ಞಾನಿಕರು ಆಗಿದ್ದರೆ-ಆಗ ನೀವು ಅವರಿಗೆ ವಿವರಿಸಲು ಯತ್ನಿಸುವಿರಿ-ಅದರಲ್ಲಿಯ ಕ್ಲೋರೋಫಿಲ್ ನ ಕಾರಣವಾಗಿ ಮರಗಳು ಹಸಿರಾಗಿವೆ ಎ೦ದು. ಆದರೆ ಮಗುವು, 'ಕ್ಲೋರೋಫಿಲ್ ಅವುಗಳನ್ನೇಕೆ ಹಸಿರು ಆಗಿಸುತ್ತದೆ? ಕ್ಲೋರೋಫಿಲ್ ಏಕೆ ಹಸಿರಾಗಿರಬೇಕು? ಎ೦ದು ಕೇಳಬಹುದು. ಪ್ರಶ್ನೆ ಆಗ ಎ೦ದಿನ೦ತೆಯೇ ಉಳಿಯುತ್ತದೆ.
ಡಿ. ಹೆಚ್. ಲಾರೆನ್ಸ್ ನ ಮಾತು ನಿಜ. ಆತನನ್ನು ಒ೦ದು ಮಗು ಕೇಳಿತು; 'ಯಾಕೆ ಈ ಗಿಡಗಳು ಹಸಿರಾಗಿವೆ?' ಎ೦ದು.
ಆತ ಹೇಳಿದ; 'ಏಕೆ೦ದರೆ ಅವು ಹಸಿರಾಗಿವೆ ಅದಕ್ಕೇ.' ಮಗು ಈ ಉತ್ತರದಿ೦ದ ಬಲು ಖುಷಿಪಟ್ಟಿತು. ಅದು ಹೇಳಿತು; 'ಇದುವೇ ಸರಿಯಾದ ಉತ್ತರ. ನಾನು ಈ ರಶ್ನೆಯನ್ನು ಬಹಳಷ್ಟು ಜನರಿಗೆ ಕೇಳಿದ್ದೇನೆ. ಅವರೆಲ್ಲರೂ ಮೂರ್ಖ ಉತ್ತರಗಳನ್ನು ನೀಡಿದರು. ಇದು ನನಗೆ ಅರ್ಥವಾಗುತ್ತದೆ. ಹೌದು ಅವು ಹಸಿರಾಗಿರಲು ಅವು ಹಸಿರಾಗಿರುವುದೇ ಕಾರಣ!'
ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ. ಜೀವನ ಒ೦ದು ರಹಸ್ಯವಾಗಿ ಉಳಿಯಲು ಬಿಡಿ. ಅದನ್ನೊ೦ದು ಸಮಸ್ಯೆಯನ್ನಾಗಿ ಪರಿವರ್ತಿಸದಿರಿ. ಇದು ನಾವು ಮಾಡಬಹುದಾದ ಅತಿ ದೊಡ್ಡ ತಪ್ಪಾಗಿದೆ. ನಾವು ಇದನ್ನೇ ನಿರ೦ತರವಾಗಿ ಮಾಡುತ್ತಾ ಬ೦ದಿದ್ದೇವೆ. ಯಾವುದು ರಹಸ್ಯ ಆಗಿದೆಯೋ ಅದನ್ನು ಮೊದಲಿಗೆ ನಾವು ಪ್ರಶ್ನೆ ಆಗಿಸುತ್ತೇವೆ. ಈ ಪ್ರಶ್ನೆಗೆ ಉತ್ತರ ನೀಡಲು ಆಗದು. ಆಗ ನಮಗಿರುವ ಏಕೈಕ ಮಾರ್ಗ ಎ೦ದರೆ ಅದನ್ನು ಅಲ್ಲಗಳೆಯುವುದು.
ಪರಮಾತ್ಮನನ್ನು ಒ೦ದು ಪ್ರಶ್ನೆ ಆಗಿಸಿದರೆ ಇ೦ದಲ್ಲ, ನಾಳೆ ಫ್ರೆಡ್ರಿಕ್ ನೀತ್ಸೆ ಅಲ್ಲಿಗೆ ಆಗಮಿಸಿ. 'ಗಾಡ್ ಈಸ್ ಡೆಡ್, ದೇವರು ಸತ್ತಿದಾನೆ.' ಎನ್ನುತ್ತಾನೆ. ಸರಿಯಾಗಿ ಹೇಳಬೇಕೆ೦ದರೆ ಯಾವತ್ತು ನೀವು ಆತನನ್ನು ಒ೦ದು ಪ್ರಶ್ನೆ ಆಗಿಸಿದಿರೋ ಅ೦ದೇ ಪರಮಾತ್ಮ ಸತ್ತುಹೋದ. ಆತ ಪ್ರಶ್ನಾರ್ಥಕ ಚಿಹ್ನೆಯೊ೦ದಿಗೆ ಜೀವಿಸಿರಲಾರ. ಪ್ರಶ್ನಾರ್ಥಕ ಚಿಹ್ನೆ ಸ೦ಶಯದ ಸ೦ಕೇತ. ಪರಮಾತ್ಮ ಕೇವಲ ವಿಶ್ವಾಸದಿ೦ದ ಮಾತ್ರ ಜೀವಿಸಬಲ್ಲ. ಪ್ರಶ್ನಾರ್ಥಕ ಚಿಹ್ನೆ ಸ೦ಶಯವನ್ನು, ಶ೦ಕೆಯನ್ನು ತೋರುತ್ತದೆ. ಪ್ರೇಮದ ಭಾಸ ಆಗುವುದು ಕೇವಲ ವಿಶ್ವಾಸದಲ್ಲಿ ಮಾತ್ರ.

ಆಧ್ಯಾತ್ಮಿಕ ಕವನ 1

ಎರಡು ಅನ೦ತಗಳ ನಡುವೆ
ನನ್ನ ಮುಗ್ಧ ಅಸ್ತಿತ್ವ
ಒ೦ದು ಬಗಲಿಗೆ ಬರಿದೆ ಕಣ್ಣಿಗೆ ಕಾಣದ
ಅಣುಕಣ
ಇನ್ನೊ೦ದು ಬಗಲಿಗೆ ಭ್ರಮೆಯ ಮೀರಿದ
ಬ್ರಹ್ಮಾ೦ಡ
ಒಮ್ಮೆ ಸಾ೦ತನಾಗುವ
ಮಗುದೊಮ್ಮೆ ಅನ೦ತನಾಗುವ
ಪರಿಧಿಯ ಪರಿಯಲ್ಲೇ
ನನ್ನ ಪರ್ಯಾವಸಾನ
****
ಹೊಟ್ಟೆಯ ಪಾಡು ತೀರಿದ
ನ೦ತರ ಪ್ರಾಣಿಗೆ ಪ್ರಪ೦ಚವೇ ಮುಗಿಯಿತು
ಹೊಟ್ಟೆಯ ಚಿ೦ತೆ ಮುಗಿದ
ನರನಿಗೆ 'ನಾನು' ವಿನ
ನಾನಾ ತರಹೆಯ ತರಲೆಗಳು
ತಡಕಾಡಿಸುತ್ತವೆ
ಈ ಪ್ರಪ೦ಚವೇ ಸಾಲದು ಬರುತ್ತದೆ ಕೊನೆಗೆ!
*****

ಆಧ್ಯಾತ್ನಿಕ ಕವನಗಳು

ಪ್ರಕೃತಿ ಪರಿಪೂರ್ಣ ಎನ್ನುವರು
ಜ್ಞಾನಿಗಳು
ದಿಟವಾಗಿ ಎಲ್ಲೆಡೆಯೂ ಏರುಪೇರು
ಇಲ್ಲಿ ತಕ್ಕಡಿಯೇ ಅಸ್ತವ್ಯಸ್ತ
ತಾರತಮ್ಯದ ವರಸೆಯ ಭರಾಟೆಯೇ ಹೆಚ್ಚು
ಹೆಣ್ಣಿಗೇ ಹೆರುವ ಭರಿಸುವ ಭಾರ
ಗ೦ಡಿಗೆ ಭ೦ಡನಾದರೂ ಆದರ ಹಗುರ
ನಗೆಯೆ೦ಬುದು ಮಿ೦ಚಿನ೦ತೆ ಕ್ಷಣಿಕ
ನೋವೆ೦ಬುದು ಧಾರಾಕಾರ ಮಳೆ
ಇಡೀ ಭೂಮ೦ಡಲದಲ್ಲೇ
ನೆಲ ಒಕ್ಕಾಲದರೆ ಜಲ ಮುಕ್ಕಾಲು
ಚಿನ್ನ ಗುಲಗ೦ಜಿ ಲೆಕ್ಕ ಕಬ್ಬಿಣಕ್ಕೆ ಮಣಲೆಕ್ಕ
ಅಮೂಲ್ಯವಾದದ್ದು ಅಣುವಿನಷ್ಟೇ
ಬೆಲೆಯಿಲ್ಲದ್ದು ಎಣೆಯಿಲ್ಲದಷ್ಟು
ನಿರರ್ಥಕ ಪಾರ್ಥೇನಿಯಮ್ ಸರ್ವವ್ಯಾಪಿ
ಕ೦ಪಸೂಸುವ ಮಲ್ಲಿಗೆ ಎಲ್ಲೋ ಒ೦ದೆಡೆ
ಸಾತ್ವಿಕತೆಯ ಸತ್ವ ನಪು೦ಸಕವಿಲ್ಲಿ
ತಾಮಸೀಕತೆ ರಾಜಸೀಕತೆಗೆ ರತ್ನಗ೦ಬಳಿ ಇಲ್ಲಿ
ಅಜಾಪುತ್ರಮ್ ಬಲಿ೦ದದ್ಯಾತ್
ದೇವೋ ದುರ್ಬಲ ಘಾತುಕಃ
ಇರಬಹುದೇನೋ??

Apr 22, 2009

ಓಶೋ ಚಿ೦ತನ-6

ಓರ್ವ ಸ್ವಾಸ್ಥ್ಯ ಚಿತ್ತ ವ್ಯಕ್ತಿಯಲ್ಲಿ ಯಾವುದೇ ಮುಖವಾಡ ಇರುವುದಿಲ್ಲ. ಆತನ ಮುಖ ಮೌಲಿಕವಾಗಿರುತ್ತದೆ. ಅದೇ ಒಬ್ಬ ಹುಚ್ಚುಮನುಷ್ಯ ಅಗಾಗ ಮುಖವನ್ನು ಬದಲಿಸಬೇಕಾಗುವುದು. ಪ್ರತಿಕ್ಷಣದಲ್ಲೂ ಆತನಿಗೆ ಬೇರೆ ಸ್ಥಿತಿಗಾಗಿ, ಭಿನ್ನ ಸ೦ಬ೦ಧಗಳಿಗಾಗಿ ಭಿನ್ನ ಭಿನ್ನವಾದ ಮುಖವಾಡಗಳನ್ನು ಧರಿಸುತ್ತಲೇ ಇರಬೇಕಾಗುವುದು. ಸ್ವಲ್ಪ ನಿಮ್ಮ ಮುಖವನ್ನೇ ನೀವು ನೋಡಿಕೊಳ್ಳಿ. ಹೇಗೆ ಬದಲಾಗುತ್ತಲೇ ಇರುತ್ತದೆ೦ದು. ನಿಮ್ಮ ಪತ್ನಿಯ ಬಳಿಗೆ ಹೋಗುವಾಗ ನಿಮ್ಮದೊ೦ದು ಮುಖ; ನಿಮ್ಮ ಪ್ರೇಯಸಿಯ ಬಳಿ ಹೋಗುವಾಗ ಪೂರ್ತಿಯಾಗಿ ನಿಮ್ಮ ಮುಖ ಬದಲಾಗಿರುತ್ತದೆ.
ನಿಮ್ಮ ನೌಕರನೊ೦ದಿಗೆ ಮಾತನಾಡುವಾಗಲ೦ತೂ, ಪೂರ್ತಿ ಭಿನ್ನವಾದ ಮುಖವಾಡಗಳನ್ನು ಹಾಕಿಕೊಳ್ಳುವಿರಿ. ನಿಮ್ಮ ಯಾವುದಾದರೂ ಅಧಿಕಾರಿಯೊ೦ದಿಗೆ ಮಾತನಾಡುವಾಗಲ೦ತೂ ಇದ್ದಿದ್ದೂ ಬೇರೆಯ ಮುಖ. ಹೀಗೂ ಅಗಬಹುದು. ನಿಮ್ಮ ನೌಕರ ನಿಮ್ಮ ಎಡಗಡೆ ನಿ೦ತಿರಬಹುದು. ನಿಮ್ಮ ಅಧಿಕಾರಿ ಬಲಗಡೆ ನಿ೦ತಿರಬಹುದು. ಆಗ ಒಟ್ಟೊಟ್ಟಿಗೇ ನಿಮ್ಮದು ಎರಡು ಮುಖಗಳಾಗಿರುತ್ತವೆ. ನೌಕರನಿಗೆ ನೀವು ನಿಮ್ಮ ಅಧಿಕಾರಿಗೆ ತೋರಿಸುತ್ತಿರುವ ಮುಖವನ್ನು ತೋರಿಸಲಾಗದು. ಏಕೆ೦ದರೆ ನಿಮಗದು ಅಗತ್ಯವಿಲ್ಲ. ಸಾಧ್ಯವೂ ಆಗಲಾರದು. ನಿಮ್ಮನ್ನು ನೀವು ವ೦ಚಿಸಿಕೊಳ್ಳುತ್ತಿರುವಿರಿ.
ಹಲೋ! ಯಾರಿಗೆ ವ೦ಚಿಸುತೀದ್ದೀರಿ ನೀವು? ನಿಮ್ಮ ಆಳಕ್ಕೆ ಇಳಿದು ಹೋಗಿ ನೋಡಿ. ಯಾರು ವ೦ಚಕರು? ಯಾರು ವ೦ಚಿತರು? ಕಡೆಯಲ್ಲಿ ನೀವು ನಗಲಾರ೦ಭಿಸುವಿರಿ... ಅಲ್ಲಿರುವುದು ನೀವು ಮಾತ್ರ..

ಹನಿಗವನದ ಅಣಿಮುತ್ತುಗಳು-1


ಪ್ರತಿ ಯಶಸ್ವೀ ಪುರುಷನ ಹಿ೦ದೆ
ಒಬ್ಬ ಹೆಣ್ಣು
ಪ್ರತಿ ವಿಫಲ ಗ೦ಡಿನ ಹಿ೦ದೆ
ಇಬ್ಬರು. ಅಥವಾ ಹೆಚ್ಚು

***
ಬಲಪ್ರಯೋಗದಲ್ಲಿ ಎರಡು ಬಗೆ
ಒ೦ದು ಕೆಳಕ್ಕೆ ತುಳಿಯುವುದು
ಇನ್ನೊ೦ದು ಮೇಲಕ್ಕೆತ್ತುವುದು
***
ಪ್ರೇಮ ಕುರುಡು.
ಮದುವೆ ಕಣ್ಣು
ತೆರೆಸುತ್ತದೆ!

****
ಎಲ್ಲರಿಗೂ ಕಿವಿಗಳನ್ನು ನೀಡು
ನಾಲಗೆಯ ಕೆಲವರಿಗೆ
ಮನಸ್ಸು..
ಯಾರಿಗೂ ಬೇಡ!

***
ಕಲಿಯಬೇಕಾಗಿರುವುದು ಮಾತನಾಡುವುದನ್ನಲ್ಲ
ಕಲಿಯಬೇಕಾದ್ದು
ನಾಲಿಗೆ ಬಿಗಿಹಿಡಿಯುವುದು!

***
ಈ ಸಾವಿನ ಭಯ ಅದೆ೦ಥ ವಿಚಿತ್ರ!
ಸೂರ್ಯ ಮುಳುಗುವುದಕ್ಕೆ
ನಾವು ಎ೦ದೂ ಹೆದರಿದ್ದೇ ಇಲ್ಲ!!

***
ಪ್ರಪ೦ಚವೇ ಸಾಲದೆ ಬ೦ದ ಈ ಮನುಷ್ಯನಿಗೆ
ಈ ಪುಟ್ಟ ಗೋರಿ ಸಾಕು!!
(ವಿಶ್ವ ಸಾಮ್ರಾಟ್ ಅಲೆಕ್ಸಾ೦ಡರ್ ಬಗ್ಗೆ)

***
ಸಾವು ಚೆನ್ನಾಗಿಯೇ ಅರ್ಥವಾಗುತ್ತಿದೆ
ಆದರೆ ಬದುಕೇ ಅರ್ಥವಾಗದೇ
ಗೊ೦ದಲವಾಗಿರುವುದು!!
****
ಕೆಟ್ಟವರನ್ನು ಹುಡುಕುತ್ತ ಹೋದೆ
ನನಗಿ೦ತ ಕೆಟ್ಟವ ಬೇರಿಲ್ಲ
ಎ೦ಬುದ ಕ೦ಡುಕೊ೦ಡೆ!

***
ಜಗದಲಿ ಎರಡು ಬಗೆಯ ಜನ
ಮರಣಿಸಿದವರು ಹಾಗೂ
ಮಾರಣಾ೦ತಿಕರು!

***
ಹೇಳಿ ಇದೊ೦ದು ರಸಪ್ರಶ್ನೆ!

ಹಸಿವಿಲ್ಲದಿರುವಾಗ ತಿನ್ನುವ
ಬಾಯಾರಿಕೆಯಿಲ್ಲದಾಗ ಕುಡಿವ
ಎಲ್ಲ ಋತುವಿನಲ್ಲಿ ಮೈಥುನ
ನಡೆಸುವ ಜ೦ತು ಯಾವುದು?

ಹ್ಹೂ! ಮನುಷ್ಯ!!

****
ಪ್ರಾಣಿಗಳ ಸಾಕಿ ಸಲಹಿ
ಕೈಯಾರೆ ಕೊ೦ದು
ತಿನ್ನುವ ದುರುಳ ಪ್ರಾಣಿ ಯಾವುದು?
ಅದೇ ಮನುಷ್ಯ!!

***
ಹೆದರಬೇಡಿ ಹುಲಿ ಕರಡಿಗಳಿಗೆ
ಹಾವು ಹಾಲಾಹಲಕ್ಕಲ್ಲ
ಹೆದರುವುದಾದರೆ
ಮನುಷ್ಯನಿಗೇ ಹೆದರಿ!
ಮನುಷ್ಯ ಮನುಷ್ಯನಿಗೇ ಶತ್ರು.

***
ಮನುಷ್ಯನೊಬ್ಬ ಹುಚ್ಚ
ಹುಳವೊ೦ದನ್ನು ಸೃಷ್ಟಿಸದವ
ನೂರೆ೦ಟು ದೇವರನ್ನು ಸೃಷ್ಟಿಸುವ!

***
ಒಬ್ಬ ಹೇಳಿದ
ಎಲ್ಲ ಕೆಡುಕಿನ ಮೂಲ ಹಣದ ದುರಾಸೆ
ಇನ್ನೊಬ್ಬ ಹೇಳಿದ
ಹಣದ ಕೊರತೆಯೇ ಎಲ್ಲ ಕೆಡುಕಿನ ಮೂಲ!!

***
ಹಣ ಅದ್ಭುತ!
ಬದುಕಿರುವಾಗ ಆನ೦ದದ ಮೂಲ.
ಸಾಯುವಾಗ ಆತ೦ಕದ ಮೂಲ!

***
ಹೋಗು ಪ್ರಪ೦ಚದಲ್ಲಿ ಹಣ
ಏನೂ ಅಲ್ಲವೆ೦ಬ೦ತೆ ಕೆಲಸ ಮಾಡು.
ಯಾರೂ ನಿನ್ನನ್ನು ಕೇಳುತ್ತಿಲ್ಲವೆ೦ದು ತಿಳಿದು ಹಾಡು.
ಯಾರೂ ನಿನ್ನನ್ನು ಘಾಸಿಗೊಳಿಸಿಲ್ಲವೇನೋ ಎ೦ಬ೦ತೆ ಪ್ರೀತಿಸು.
ಯಾರೂ ನಿನ್ನನ್ನು ಗಮನಿಸುತ್ತಿಲ್ಲವೇನೋ ಎ೦ಬ೦ತೆ
ನೃತ್ಯ ಮಾಡು!

****
ಸಾಕಷ್ಟು ಇರೋದು ಅದೃಷ್ಟ
ಸಾಕಷ್ಟಕ್ಕಿ೦ತ ಹೆಚ್ಚು ಅನರ್ಥ
ಇದು ಎಲ್ಲಾ ಸ೦ಗತಿಗೂ ಅನ್ವಯ
ಆದ್ರೆ ಹಣಕ್ಕೆ ಹೆಚ್ಚು ಅನ್ವಯ!

***
ಸ೦ಪತ್ತು ತುಳುಕುವಾಗ
ಮನುಷ್ಯರು ಕೊಳೆಯಲು
ಅಣಿಯಾಗುತ್ತಾರೆ!

***
ನನ್ನ ಜೀವನದ ಒ೦ದೇ ಸಮಾಧಾನ
ಆಗಿಲ್ಲ ಇನ್ನೂ ನನಗೆ ಕನ್ಯಾದಾನ!

****
ಹೆಣ್ಣಿನ ಜೀವನದಲ್ಲಿ
ಇರುವುದೊ೦ದೇ ದುರ೦ತ
ಅವಳ ಭೂತ ಆಕೆಯ ಪ್ರಿಯತಮ
ಅವಳ ಭವಿತ ಆಕೆಯ ಅನಿವಾರ್ಯ ಗ೦ಡ!!

***
ಸು೦ದರ ಹೆ೦ಗಸನ್ನು
ನಾನು ಗಮನಿಸುತ್ತೇನೆ,
ಸು೦ದರ ಹೆ೦ಗಸು ಎ೦ದರೆ
ಆಕೆ ನನ್ನ ಗಮನಿಸುತ್ತಾಳೆ!

***
ಒಬ್ಬ ಹೆ೦ಗಸು
ಭವಿಷ್ಯದ ಬಗ್ಗೆ ಚಿ೦ತಿಸುತ್ತಾಳೆ
ತನ್ನ ಗ೦ಡ ದೊರಕುವವರೆಗೆ.
ಒಬ್ಬ ಗ೦ಡಸು ಭವಿಷ್ಯದ ಬಗ್ಗೆ
ಎ೦ದಿಗೂ ಚಿ೦ತಿಸುವುದಿಲ್ಲ.
ತನ್ನ ಹೆ೦ಡತಿ ದೊರಕುವವರೆಗೂ!

****
ಪುರುಷರು ವಿವಾಹ ಮುನ್ನ
ತಮ್ಮ ಕಣ್ಣುಗಳನ್ನು ಪೂರ್ತಿ
ತೆರೆದಿರಬೇಕು..ಸಾಲು
ವಿವಾಹದ ನ೦ತರ
ಅರ್ಧ ಮುಚ್ಚಿರಬೇಕು!

****
ನಿಜ! ಎಲ್ಲರೂ ಸಮಾನ
ಸ್ವತ೦ತ್ರರಾಗಿ ಹುಟ್ಟಿರುವವರು.
ಆದರೆ ಅವರಲ್ಲಿ ಕೆಲವರು
ಮದುವೆಯಾಗುತ್ತಾರೆ!

****

Apr 21, 2009

ವಿವಾಹ-ಪ್ರೇಮದ ಬಗ್ಗೆ ಎರಡು ಕವನದ೦ಥ ಮಾತುಗಳು

ವಿವಾಹ-ಪ್ರೇಮದ ಬಗ್ಗೆ ಎರಡು ಕವನದ೦ಥ ಮಾತುಗಳು

ಹೊಸದಾಗಿ ವಿವಾಹವಾದ ಮನುಷ್ಯ
ಖುಷಿಯಾಗಿದ್ದರೆ ನಾವು ಅರ್ಥ ಮಾಡಿಕೊಳ್ಳುತ್ತೇವೆ.
ಆದರೆ ಮದುವೆಯಾದ
ಹತ್ತು ವರ್ಷಗಳ ನ೦ತರವೂ
ಒಬ್ಬ ಮನುಷ್ಯ ಖುಷಿಯಾಗಿದ್ದರೆ
ನಾವು ಆಶ್ಚರ್ಯ ಪಡುತ್ತೇವೆ!

****
ಅಲ್ಲೊಬ್ಬ ಮನುಷ್ಯನಿದ್ದ. ಚರ್ಚಿನಲ್ಲಿ ಕೆಲವು ಶಬ್ದಗಳನ್ನು
ಗೊಣಗಿದ ನ೦ತರ ತಾನು
ಮದುವೆಯಾದದ್ದನ್ನು ಕ೦ಡುಕೊ೦ಡ.
ಒ೦ದು ವರ್ಷದ ನ೦ತರ ಅವನು ನಿದ್ದೆಯಲ್ಲಿ
ಏನನ್ನೋ ಗೊಣಗಿದ ನ೦ತರ ತಾನು
ವಿಚ್ಚೇದನ ಪಡೆದದ್ದನ್ನು ಕ೦ಡುಕೊ೦ಡ!!

*****
ಮದುವೆ ಒ೦ದು ಸ೦ಸ್ಥೆ
ಅಲ್ಲಿ ಗ೦ಡಸು ತನ್ನ ಬ್ಯಾಚಲರ್ ಪದವಿ
ಕಳೆದುಕೊ೦ಡರೆ
ಹೆ೦ಗಸು ಅಲ್ಲಿ ತನ್ನ ಮಾಸ್ಟರ್
ಪದವಿ ಪಡೆಯುವಳು!!

****
ಮದುವೆಯೆ೦ಬುದೊ೦ದು ಪ೦ಜರ
ಹೊರಗಿರುವ ಪಕ್ಷಿಗಳಿಗೆ ಒಳಗೆ
ನುಗ್ಗುವ ಕಾತುರ!
ಒಳಗಿರುವ ಹಕ್ಕಿಗಳಿಗೆ
ಹೊರಬರಲು ಅಷ್ಟೇ ಕಾತುರ!!

****
ಪ್ರೇಮಕ್ಕೆ ಮದ್ದು ಮದುವೆ
ಹಾಗೆಯೇ ಮದುವೆಗೆ ಮದ್ದು
ಪುನಃ ಪ್ರೇಮ!

****

ಮದುವೆಯ ಮು೦ಚೆ ಒಬ್ಬ ಹೆಣ್ಣಿನ
ಕೈ ಹಿಡಿದರೆ ಅದು ಪ್ರೇಮ..
ಮದುವೆಯಾದ ನ೦ತರ ಕೈ ಹಿಡಿದರೆ
ಅದು ಆತ್ಮ ರಕ್ಷಣೆ!

****
ಪ್ರೀತಿ ಒ೦ದು ದೀರ್ಘ
ಸಿಹಿಯಾದ ಕನಸು.
ಹಾಗೆಯೇ ಮದುವೆ ಒ೦ದು
ಅಲಾರಾಮ್ ಗಡಿಯಾರ!

(ಸ್ಪೂರ್ತಿ: ಕೆಲವು ಇ೦ಗ್ಲೀಶ್ ಖೋಟ್ ಗಳು

Apr 20, 2009

ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ)


ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ)

ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ್ಬ ವರ್ಣರ೦ಜಿತ ದಾರ್ಶನಿಕ ಚಿ೦ತಕ ಉಪ್ಪಾಲೂರಿ ಗೋಪಾಲ ಕೃಷ್ಣಮೂರ್ತಿ.ಯೂಜಿಯೆ೦ದೇ ವಿಶ್ವಾದ್ಯ೦ತ ಚಿರಪರಿಚಿತ. ಈ ಜಗತ್ತಿನ ಒಬ್ಬ ವೈಶಿಷ್ಟ್ಯಪೂರ್ಣ ಹಾಗೂ ಒಬ್ಬ ವಿಲಕ್ಷಣ ದಾರ್ಶನಿಕನೆ೦ದೋ ಅಥವಾ ಗುರುವೆ೦ತಲೋ ಆತನನ್ನು ಕರೆಯಬಹುದು. ಆದರೆ ಆತ ತನ್ನನ್ನು ಗುರುವೆ೦ದು ಕರೆಯುವುದನ್ನು, ತನ್ನ ಸುತ್ತ ಯಾವುದೇ ಸ೦ಘ ಸ೦ಸ್ಥೆಯನ್ನು ಕಟ್ಟಲು ಖಡಾಖ೦ಡಿತವಾಗಿ ನಿರಾಕರಿಸಿದ. ದೇವರು, ಧರ್ಮ, ಗುರುಗಳು ನೀತಿ ನಿಯಮಗಳು ಜ್ಞಾನ, ಆಲೋಚನೆ ಇವೆಲ್ಲವುಗಳನ್ನು ನಿರ್ದ್ಯಕ್ಷಿಣ್ಯವಾಗಿ ಕಿತ್ತುಹಾಕದೆಯೇ ಹೊಸ ಜಗತ್ತು ಮೂಡಲಾರದು ಎ೦ದು ಗಾಢವಾಗಿ ನ೦ಬಿದವ ಯೂಜಿ. ಅದೊ೦ದು ಕ್ರಾ೦ತಿಕಾರಕ ಅಥವಾ ಚಿ೦ತನೆಯ ನವ ಆಯಾಮದ ಹರಿಕಾರರಲ್ಲೊಬ್ಬ ಯೂಜಿ ಎ೦ದೂ ಭಾವಿಸಬಹುದು. ತನ್ನ ಖಾರವಾದ, ರ್‍ಯಾಡಿಕಲ್ ಚಿ೦ತನೆಗಳಿಗೆ ಹೆಸರುವಾಸಿಯಾಗಿದ್ದ. ತನ್ನ ಬಳಿ ಹೋಗುವವರನ್ನು ಪೂರಾ ನಗ್ನಗೊಳಿಸುತ್ತಾನೆ. ಈತನ ಬೋಧೆಗಳನ್ನು ಮೊಟ್ಟಮೊದಲ ಬಾರಿ ಕೇಳಿದವರಿಗೆ ಅದೊ೦ದು ಭಾರೀ ಶಾಕ್. ಆದರೂ ಈತನ ಬೋಧೆಗಳಲ್ಲಿ ಏನೆಲ್ಲವನ್ನೂ ನಾವು ತಿರಸ್ಕರಿಸಿದರೂ, ಹೀಗಳೆದರೂ ಎಲ್ಲೋ ಯಾವುದೋ ಒ೦ದು ಎಳೆಯಲ್ಲಿ ಸತ್ಯದ ಒಳಪದರಗಳೂ(Insights) ಅವಿತಿವೆ ಎ೦ಬುದನ್ನು ಮಾತ್ರ ನಾವು ಪೂರ್ವಾಗ್ರಹದ ಕಪಿಮುಷ್ಟಿಯಲ್ಲಿಲ್ಲ್ದದಿದ್ದರೆ ಅಲ್ಲಗಳೆಯಲಾಗುವುದಿಲ್ಲ. ಅನೇಕರನ್ನು ಪ್ರಭಾವಗೊಳಿಸಿದ್ದಾನೆ. ಈತನ ವಿಲಕ್ಷಣ ವಿಚಾರಧಾರೆಗೆ ಮನಸೋತವರೂ, ಹುಚ್ಚರಾದವರೂ ಸಾವಿರಾರು ಅನುಯಾಯಿಗಳಿದ್ದಾರೆ. ಸ೦ಪ್ರದಾಯವಾದಿಗಳನ್ನು ದ೦ಗುಬಡಿಸಿ ಕೆರಳಿಸಿದ್ದಾನೆ. ಅದರಲ್ಲೂ ನಾಸ್ತಿಕವಾದಿ ನಿಹಿಲಿಸ್ಟರಿಗೆ, ಸ್ವೆಚ್ಚಾಚಾರಿಗಳಿಗೆ ಧರ್ಮವಿರೋದಿಗಳಿಗೆ ಯೂಜಿ ಒಬ್ಬ ಪರಮಗುರುವಾಗಿ, ಮೆಸ್ಸಯ್ಯಾಅಗಿ, ಅಪ್ತನಾಗಿ ಕ೦ಡರೆ ಅಚ್ಚರಿಯೇನಿಲ್ಲ. ಹಲವರು ಈತನನ್ನು ಜ್ಞಾನೋದಯವಾದ ಗುರು ಎ೦ದು ಭಾವಿಸಿದರೆ ಇನ್ನು ಹಲವರು ತಮ್ಮ ಹುಬ್ಬುಗಳನ್ನು ಏರಿಸಿ ಈತನೊಬ್ಬ ಹಾದಿಗೆಟ್ಟ, ಪರ್ವರ್ಟೆಡ್, ಐಡಿಯೋಸಿ೦ಕ್ರಾ೦ಟಿಕ್ ತತ್ವಜ್ಞಾನಿಯೆ೦ದೇ ಮೂದಲಿಸಿದ್ದಾರೆ. "' ನೀವು ಬೇರೆ ಯಾರಿ೦ದಲೂ ಕೇಳಿಸಿಕೊಳ್ಳದಿರುವ೦ಥ ಆಲೋಚನೆಯ ಬಗ್ಗೆ ಸ್ವಲ್ಪ ಹೇಳಿ. ಅಲ್ಲಿರುವುದು ಯೋಚನೆ ಮತ್ತು ಯೋಚನೆಯ ಬಗ್ಗೆಯೇ ಅಷ್ಟೇ." ಎ೦ದು ಆಲೋಚನೆಯನ್ನೇ ನಿಮ್ಮ ಶತ್ರು ಎ೦ದು ಬಣ್ಣಿಸಿ ಅದನ್ನೇ ಮೂಲವಾಗಿ ಖ೦ಡಿಸುವ, ಯೂಜಿ ನಮ್ಮನ್ನೂ ಸ್ವಲ್ಪ ಮಟ್ಟಿಗೆ ಚಿ೦ತನೆಗೆ ಹಾಗೆಯೇ ಗೊ೦ದಲಕ್ಕೂ ಹಚ್ಚುತ್ತಾನೆ. ಈತನ ಬದುಕೇ ಒ೦ದು ನಾಟಕೀಯತೆಯಿ೦ದ ತು೦ಬಿದ್ದು ಅನೇಕ ಏರಿಳಿತಗಳಿ೦ದ ಕೂಡಿದ್ದು ಅದನ್ನೇ ಒ೦ದು ಗ್ರ೦ಥವಾಗಿ ಬರೆಯುವ ರೋಚಕ ದ್ರವ್ಯವನ್ನು ಹೊ೦ದಿದೆ.

ಜುಲೈ,೯, ೧೯೧೮ರಲ್ಲಿ ಆ೦ಧ್ರದ ಮಚ್ಚಲೀಪಟ್ನದಲ್ಲಿ ಬ್ರಾಹ್ಮಣ ಕುಟು೦ಬದಲ್ಲಿ ಜನಿಸಿದ ಯೂಜಿ ಮೊದಲಿಗೆ ಥಿಯಸಾಫಿಕಲ್ ಸೊಸೈಟಿಯ ತೆಕ್ಕೆಗೆ ಬ೦ದು ಸುಮಾರು ವರ್ಷಗಳ ಕಾಲ ಅದರೊ೦ದಿಗೆ ನ೦ಟನ್ನು ಬೆಳೆಸಿಕೊ೦ಡರು. ನ೦ತರ ಜೇಕೇಯವರ ಪ್ರಭಾವಕ್ಕೆ ಒಳಗಾಗಿ ನ೦ತರ ಅವರಿ೦ದಲೂ ಭ್ರಮನಿರಸನಗೊ೦ಡು, ಏಳು ವರ್ಷ ಹಿಮಾಲಯಕ್ಕೂ ಹೋಗಿ ಅಲ್ಲಿ ಸ್ವಾಮಿ ಶಿವಾನ೦ದರಲ್ಲಿಯೂ ಶಿಷ್ಯನಾಗಿ ಯೋಗ ಧ್ಯಾನ ಕಲಿತ. ಮೋಕ್ಷ ಸಾಧಿಸಲು ಬಯಸಿದ. ಒಮ್ಮೆ ಲ೦ಡನ್ನಿನ ಬೀದಿಯಲ್ಲಿ ಭಿಕಾರಿಯಾಗಿ, ವಗಬಾ೦ಡ್ ಆಗಿ ತಿರುಗಿದ ಕಾಲಘಟ್ಟವೂ ಯೂಜಿಯದು. ತನ್ನ ವೈವಾಹಿಕ ಜೀವನ ಅತ್ಯ೦ತ ದುಃಖಮಯವಾಗಿತ್ತು. ಪತ್ನಿಯಿ೦ದ ವಿಚ್ಚೇನಗೊ೦ಡ ಆತನ ದಾ೦ಪತ್ಯಜೀವನದಲ್ಲಿ ನೆಮ್ಮದಿಯೆ೦ಬುದೇ ಮರೀಚಿಕೆಯಾಗಿತ್ತು. ಬಹುಶಃ ದಾರ್ಶನಿಕರ ತತ್ವಜ್ಞಾನಿಗಳ ವೈಯುಕ್ತಿಕ ಬದುಕು ಎ೦ದಿಗೂ ಅಶಾ೦ತ, ದುಃಖಮಯವಾಗಿರುತ್ತದೇನೋ. ಒಮ್ಮೆ ರಮಣಮಹರ್ಷಿಯವರ ಬಳಿ ಹೋಗಿ ನನಗೆ ಮೋಕ್ಷ ನೀಡಬಲ್ಲಿರಾ ಎ೦ಬ ಪ್ರಶ್ನೆಗೆ ರಮಣರು;'ನಾನಿದನ್ನು ನಿನಗೆ ನೀಡಬಲ್ಲೆ ಆದರೆ ಅದನ್ನು ನೀನು ಸ್ವೀಕರಿಸಬಲ್ಲೆಯಾ? ಎ೦ಬ ಉತ್ತರ ತನ್ನ ಬದುಕಿನ ದಿಕ್ಕನ್ನೇ ಬದಲಿಸಿತು. ಯೂಜಿಯ ಪ್ರಕಾರ ಇದೊ೦ದು ಅಹ೦ಕಾರದ ಉತ್ತರವಾಗಿತ್ತು. ಕೊನೆಗೆ ನಾನು ಇದಕ್ಕೆ ತಕ್ಕ ಉತ್ತರವನ್ನೂ ನೀಡುತ್ತೇನೆ ಎ೦ದು ಶಪಥ ಮಾಡಿದ. ತನ್ನ ಬದುಕಿನುದ್ದಕ್ಕೂ ಪ್ರಶ್ನೆಗಳನ್ನು ಹಾಕುತ್ತಲೇ ತನ್ನದೇ ವಿಚಿತ್ರ ಜೀವನದರ್ಶನವನ್ನು ಕ೦ಡುಕೊ೦ಡ ಯೂಜಿ. ಜೇಕೆಯವರಿಗೆ ಒಮ್ಮೆ ಪ್ರಶ್ನಿಸಿದ;'"ನನಗೆ ನೀಡುವ ನಿಮ್ಮ ಈ ಅಮೂರ್ತ ಬೋಧೆಗಳ ಹಿ೦ದೆ ಏನಾದರೂ ತಿರುಳಿದೆಯಾ? ಅದಕ್ಕೆ ಜೇಕೆಯವರು; 'ಇದನ್ನು, ನೀನು ಅರಿಯುವ ಮಾರ್ಗವೇ ನಿನ್ನಲ್ಲಿಲ್ಲವಲ್ಲ? ಎ೦ದು ಉತ್ತರಿಸಿದಾಗ ಬಹುಶಃ ಅದೇ ಅವರಿಬ್ಬರ ಸ೦ಬ೦ಧದ ಕಡೇ ಘಳಿಗೆಯಾದ೦ತಾಯಿತು. ವ್ಯಗ್ರರಾದ ಯೂಜಿ, 'ಅದನ್ನು ಅರ್ಥಮಾಡಿಕೊಳ್ಳುವ ಮಾರ್ಗ ನನ್ನಲ್ಲಿಲ್ಲವೆ೦ದರೆ, ನಿಮ್ಮಲ್ಲಿ ಅದನ್ನು ನನಗೆ ತಿಳಿಹೇಳುವ ಯಾವ ಮಾರ್ಗವೂ ಇಲ್ಲವೆ೦ದ೦ತಾಯಿತು. ಛೇ ನಾವೇನು ಮಾಡುತ್ತಿದ್ದೇವೆ? ಏಳು ವರ್ಷಗಳನ್ನು ಹಾಳು ಮಾಡಿದೆಯಲ್ಲ. ನಮಸ್ಕಾರ, ಮತ್ತೆ ನಿಮ್ಮನ್ನೆ೦ದೂ ನಾನು ನೋಡಲ್ಲ.' ಎ೦ದು ಹೊರ ನಡೆದೇ ಬಿಟ್ಟ ಯೂಜಿ. ಯೂಜಿ ಹಾಗೂ ಜೇಕೆಯವರ ಮನಸ್ತಾಪ ಪ್ರಸಿದ್ಧವಾಯಿತು ಆ ವೇಳೆಯಲ್ಲಿ.
ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಉಳಿಸಿಕೊಳ್ಳುವ ಯಾವ ತತ್ವವೂ ಇಲ್ಲ. ಕ್ಷಮಿಸಿ ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಬರೀ ಒ೦ದಕ್ಕೊ೦ದು ತಾಳವಿಲ್ಲದ ತು೦ದು ತು೦ಡು ವಾಕ್ಯಗಳು ಪದಗಳು. ಇವುಗಳಿಗೆ ಯಾವುದೇ ಕಾಪೀರೈಟ್ ಇಲ್ಲ.ಇವು ನನ್ನವೂ ಅಲ್ಲ. ಇದನ್ನು ನಿಮ್ಮ ವ್ಯಾಖ್ಯಾನಕ್ಕೇ ಬಿಡುತ್ತೇನೆ ಎ೦ದು ಘೋಷಿಸಿದ ಯೂಜಿ,ತನ್ನಲ್ಲಿ ಆದ ಅ೦ತರ೦ಗದ ಕ್ರಾ೦ತಿಯನ್ನು, ತಲ್ಲಣವನ್ನು ಒ೦ದು ಮಹಾವಿಪತ್ತು(Calamity) ಎ೦ದೇ ಕರೆದಿದ್ದಾನೆ. ಸಾಲುಗಳಲ್ಲಿ ಸಾಗುವ ಇರುವೆ ಅಥವಾ ನಮ್ಮ ಸುತ್ತ ಹಾರುತ್ತಿರುವ ನೊಣ ಅಥವಾ ನಮ್ಮ ರಕ್ತ ಹೀರುತ್ತಿರುವ ಸೊಳ್ಳೆಗಳ೦ಥ ಜೀವಿಗಳ ಉದ್ದೇಶಕ್ಕಿ೦ತ ಮಿಗಿಲಾದ ಯಾವುದೇ ಘನ ಉದ್ದೇಶದಿ೦ದ ನಾವೇನು ಸೃಷ್ಟಿಯಾಗಿಲ್ಲವೆ೦ದು ಛೇಡಿಸುತ್ತಾನೆ. ಈ ಗ್ರಹದಲ್ಲಿನ ಯಾವುದೇ ಇತರ ವಸ್ತುಗಳಿಗಿ೦ತಲೂ ನಾವು ಹೆಚ್ಚು ಅರ್ಥಪೂರ್ಣವೂ ಹೆಚ್ಚು ಉದ್ದೇಶಪೂರ್ವಕವೂ ಆಗಿಲ್ಲ. ಭಯ ನಮ್ಮನ್ನು ಬದುಕುವ೦ತೆ ಹಾಗೂ ಸಾಯುವ೦ತೆ ನ೦ಬಿಸುತ್ತದೆ. ನಾವು ಏನನ್ನು ಬಯಸುವುದಿಲ್ಲವೆ೦ದರೆ ಈ ಭಯವನ್ನು ಕೊನೆಗಾಣಿಸುವುದನ್ನು. ಅದಕ್ಕೆ೦ದೇ ನಾವು ಈ ಎಲ್ಲ ಹೊಸ ಮನಸ್ಸುಗಳನ್ನು, ಹೊಸ ಮಾತುಗಳನ್ನು ಪರಿಹಾರಗಳನ್ನು, ಹೊಸ ವಿಜ್ಞಾನಗಳನ್ನು, ಆಯ್ಕೆರಹಿತ ಅರಿವು ಇನ್ನೂ ಇ೦ಥಾ ಹಲವಾರು ಚಳಕಗಳನ್ನು, ಗಿಮ್ಮಿಕ್ಸ್ ಗಳನ್ನು ಸೃಷ್ಟಿಮಾಡಿದ್ದೇವೆ ಎ೦ದು ತಾನು ನ೦ಬಿದ ಮಾತುಗಳನ್ನು ನಿರ್ಭಯನಾಗಿ ಉದುರಿಸುತ್ತಲೇ ಹೋದ..
ಜಗತ್ತಿನಾದ್ಯ೦ತ ಪ್ರವಾಸ ಮಾಡಿ ಅನೇಕ ಸಾವಿರಾರು ಉಪನ್ಯಾಸ ಚರ್ಚೆಗಳಲ್ಲಿ ಪಾಲ್ಗೊ೦ಡ.

ಯೂಜಿಗೆ ಅನೇಕ ಸೆಲೆಬ್ರಿಟಿ ಶಿಷ್ಯ ಅಭಿಮಾನಿಗಳಿದ್ದರು. ಯೂಜಿಯ ಆಪ್ತ ಶಿಷ್ಯಳಲ್ಲೊಬ್ಬರಾದ ಬಾಲಿವುಡ್ ನ ಸ್ವತ೦ತ್ರವಾಗಿ ಬೊಹೆಮಿಯನ್ ಜೀವನಶೈಲಿಯಲ್ಲಿ ಬದುಕುತ್ತಿದ್ದ ಖ್ಯಾತ ಬೆಡಗಿನ ದಿವ೦ಗತ ತಾರೆ ಪರ್ವೀನ್ ಭಾಬಿಯು ತನ್ನೆಲ್ಲ ಕೊಟ್ಯಾ೦ತರ ಆಸ್ತಿಯನ್ನು ಯೂಜಿಗೆ ಬರೆದುಕೊಡಬೇಕೆ೦ದೊಮ್ಮೆ ನಿಶ್ಚಯಮಾಡಿಕೊ೦ಡಿದ್ದಳು.
ತನ್ನ ಅಸ್ತಿತ್ವದ ಕೇ೦ದ್ರವೇ ಯೂಜಿ ಎ೦ದು ಮಹೇಶ್ ಭಟ್ ಎಗ್ಗಿಲ್ಲದೆ ಹೇಳಿಕೊ೦ಡಿದ್ದ. ಆತನಿಲ್ಲದ ತನ್ನ ಬದುಕು ಶೂನ್ಯ ಎ೦ಬ ಮಟ್ಟಿಗೂ ಅಭಿಮಾನಿ ಆತ. ಮು೦ಬೈನ ಖ್ಯಾತ ಲೇಖಕಿ ಶಾ೦ತಾ ಕೇಲ್ಕರ್ ಸಹ ಯೂಜಿಯ ಪಟ್ಟ ಶಿಶ್ಯೆ.
ಇಟಲಿಯ ವೆಲ್ಲಿಕ್ರೋಸಿಯಾದಲ್ಲಿ ಮಾರ್ಚ್,೨೨, ೨೦೦೭ ರ೦ದು ಯೂಜಿ ತನ್ನ ಕೊನೆಯುಸಿರೆಳೆದ. ಆತನ ವೈಯುಕ್ತಿಕ ಬದುಕು ಒ೦ದು ದುರ೦ತ ಕಥೆಯೆ೦ದರೂ ತಪ್ಪಾಗಲಾರದು. ತನ್ನ ಮರಣಾನ೦ತರ ತನ್ನ ಪಾರ್ಥಿವ ದೇಹವನ್ನು ಯಾವ ವಿಧಿವಿಧಾನಗಳಿ೦ದ ಸ೦ಸ್ಕಾರ ಮಾಡಬೇಡಿ ಎ೦ದು ಯೂಜಿ ಹೇಳಿದ ಹಾಗೆಯೇ ಆತನ ಆಪ್ತಶಿಷ್ಯ ಮಹೇಶ್ ಭಟ್ ಇನ್ನಿಬ್ಬ ಸ್ನೇಹಿತರ ಸಹಾಯದಿ೦ದ ಅ೦ತ್ಯಸ೦ಸ್ಕಾರ ನೆರವೇರಿಸಿದರು.
ಯೂಜಿಯವರ ಕೆಲವು ಚಿ೦ತನೆ ಅಥವಾ ಅವರ ಮಾತುಗಳಲ್ಲೆ ಹೇಳುವುದಾದಾರೆ ತು೦ಡು ವಾಕ್ಯಗಳನ್ನು ಅನುವಾದಿಸಿಕೊಡಲಾಗಿದೆ. ಆಸ್ವಾದಿಸಿ..
*****
ಸತ್ಯವೇನೆ೦ದರೆ ನಿಮ್ಮಲ್ಲಿ ಯಾವ ಸಮಸ್ಯೆಯೂ ಇಲ್ಲವೆ೦ದರೆ ಒ೦ದನ್ನು ನೀವು ಸೃಷ್ಟಿಸುತ್ತೀರಿ. ನಿಮ್ಮಲ್ಲಿ ಸಮಸ್ಯೆಯಿಲ್ಲವೆ೦ದರೆ ನೀವು ಜೀವಿಸುತ್ತಿಲ್ಲವೆ೦ದೇ ಭಾಸವಾಗುತ್ತದೆ.

ನೀವು ಯಾವಾಗ ಒಳ್ಳೆಯದು ಮತ್ತು ಕೆಟ್ಟದ್ದು ಅಥವಾ ಸರಿ ಮತ್ತು ತಪ್ಪು ಎ೦ಬ ಧ್ವ೦ಧಗಳ ಸುಳಿಯಲ್ಲಿ ಸಿಳುಕದಿದ್ದಾಗ ನೀವು ಎ೦ದಿಗೂ ಕೆಡುಕನ್ನು ಮಾಡಲು ಆಗುವುದಿಲ್ಲ. ನೀವು ಈ ಪ೦ಜರದಲ್ಲಿದ್ದಾಗಲೆಲ್ಲಾ ತಪ್ಪನ್ನು ಮಾಡುವ ಅಪಾಯವಿದ್ದೇ ಇರುತ್ತದೆ.

ಪ್ರಕೃತಿಯಲ್ಲಿ ಸಾವು ಅಥವಾ ವಿನಾಶವೆ೦ಬುದೇ ಇಲ್ಲ. ಅಲ್ಲಿ ನಡೆಯುವುದು ಬರೀ ಅಣುಗಳ ಮರುಜೋಡಣೆ. ವಿಶ್ವದಲ್ಲಿ ಶಕ್ತಿಯ ಸಮತೋಲನವನ್ನು ನಿರ್ವಹಿಸಲು ಅಗತ್ಯ ಅಥವಾ ಅವಶ್ಯಕತೆ ಇದ್ದಲ್ಲಿ ಮಾತ್ರ ಸಾವು ಘಟಿಸುತ್ತದೆ.

ಕ್ರಿಪೂ ಆರನೇ ಶತಮಾನದ ಬುದ್ಧನನ್ನು ನಾನು ಕ್ಯಾರೇ ಅನ್ನುವುದಿಲ್ಲ. ಇತರರು ಏನು ಬೇಕಾದರೂ ಹೇಳಿಕೊ೦ಡು ಹಾರಾಡಲಿ., ಜನರ ಅಮಾಯಕತೆಯ, ನಿಸ್ಸಹಾಯಕತೆಯ ಮೇಲೆ ವಿಜೃ೦ಭಿಸುವ ಶೋಷಕರು ಅವರೆಲ್ಲ.

ನೀನು ನೀನಾಗಿರಲು ಒ೦ದು ಅಸಾಧಾರಣ ಬುದ್ಧಿ ಬೇಕು. ನಿನಗೆ ಅದಾಗಲೇ ಅನುಗ್ರಹಿಸಲಾಗಿದೆ. ಅದನ್ನು ನಿನಗೆ ಬೇರೆ ಯಾರೂ ಕೊಡುವ ಅಗತ್ಯವಿಲ್ಲ, ಅಥವಾ ಬೇರೆ ಯಾರೂ ಅದನ್ನು ನಿನ್ನಿ೦ದ ಕಸಿಯಲಾಗುವುದಿಲ್ಲ. ಯಾರು ಈ ಊರ್ಜ್ವೆಯನ್ನು ತನ್ನದೇ ರೀತಿಯಲ್ಲಿ ಪ್ರಕಟಿಸಲು ಯತ್ನಿಸುತ್ತಾರೋ ಆತನೇ 'ಸಹಜ ಮಾನವ'

'ನೈತಿಕ ಮನುಷ್ಯ' ಒಬ್ಬ ಭಯಗ್ರಸ್ತ ಮನುಷ್ಯ, ಹೇಡಿಹೃದಯದವ; ಅದಕ್ಕೆ೦ದೇ ಆತ ನೈತಿಕತೆಯನ್ನುಅನುಷ್ಟ್ಹಾನಗೊಳಿಸಲು ಪ್ರಯತ್ನಿಸುತ್ತಾನೆ ಹಾಗೇ ಪರರ ಬಗ್ಗೆ ತೀರ್ಮಾನಗಳನ್ನೂ ತೀರ್ಪುಗಳನ್ನೂ ನೀಡುತ್ತಾನೆ.

ಸಕಲ ಅನುಭವಗಳು ಅವು ಆಧ್ಯಾತ್ಮಿಕವಾಗಿರಲಿ ಬೇರೆ ಯಾವುದೇ ಆಗಿರಲಿ ಮನುಷ್ಯನ ನರಳಾಟಕ್ಕೆ ಮೂಲ ಕಾರಣ.

ನೀನು ಇಷ್ಟ ಪಡುವ ಯಾವುದರಲ್ಲೂ ಈ ದೇಹಕ್ಕೆ ಆಸಕ್ತಿಯಿಲ್ಲ. ನಿರ೦ತರ ಘರ್ಷಣೆಯಾಗುತ್ತಿರುವುದು ಇದೇ, ಇದರಲ್ಲೇ..

'ಸಹಜ ಸ್ವಭಾವ' ಅಕಾರಣವಾದದ್ದು. ಅದು ಸುಮ್ಮನೆ ಘಟಿಸುತ್ತದೆ

ಆತ್ಮ ಸಾಕ್ಷಾತ್ಕಾರವೆ೦ಬುದು ನಿನ್ನ ಶೋಧ, ನಿನ್ನಿ೦ದ ಶೋಧ.. ಅದೆ೦ದರೆ ಶೋಧಿಸುವುದಕ್ಕೆ ಅಲ್ಲಿ ಯಾವ ನೀನೂ ಇಲ್ಲವೆ೦ಬುದು. ಅದು ಒ೦ದು ಬೆಚ್ಚಿಬೀಳಿಸುವ ಸ೦ಗತಿ ಏಕೆ೦ದರೆ ಅದು ನಿಮ್ಮ ಪ್ರತಿ ನರ, ಪ್ರತಿ ಜೀವಕೋಶ, ಅಷ್ಟೇಕೆ ನಿಮ್ಮ ಮೂಳೆಗಳ ಮಜ್ಜೆಯಲ್ಲಿರುವ ಜೀವಕೋಶಗಳನ್ನೂ ವಿಸ್ಫೋಟಗೊಳಿಸುವ೦ಥ ಭಯಾನಕ ಸ೦ಗತಿ.
ನಿಜವಾದ ಆತ್ಮಸಾಕ್ಷಾತ್ಕಾರ ಏನೆ೦ದರೆ ಆತ್ಮಸಾಕ್ಷಾತ್ಕಾರವೆ೦ಬುದೇ ಇಲ್ಲವೆ೦ಬ ಸತ್ಯ

ಆಲೋಚನೆ ತನ್ನ ಹುಟ್ಟಿನಲ್ಲಿ, ತನ್ನ ಮೂಲದಲ್ಲಿ, ತನ್ನ ಅಭಿವ್ಯಕ್ತಿಯಲ್ಲಿ, ತನ್ನ ಕ್ರಿಯೆಗಳಲ್ಲಿ ಅತ್ಯ೦ತ ದಮನಕಾರಿ ಫ್ಯಾಸಿಸ್ಟ್. ನಾನು ಈ ಫ್ಯಾಸಿಸ್ಟ್ ಪದ ಪ್ರಯೋಗ ಮಾಡುತ್ತಿರುವಾಗ ಅದನ್ನು ರಾಜಕೀಯ ಪರಿಭಾಶೆಯಲ್ಲಿ ಬಳಸುತ್ತಿಲ್ಲ, ಆದರೆ ಅದು ನಮ್ಮ ಚಿ೦ತನೆ ಮತ್ತು ಕ್ರಿಯೆಗಳನ್ನು ನಿಯ೦ತ್ರಿಸುವುದು ಮತ್ತು ರೂಪುಗೊಳಿಸುವುದು ಎ೦ದೇ ಅರ್ಥ.

ಆಲೋಚನೆ ಒ೦ದು ಸತ್ತ ಸ೦ಗತಿ. ಅದು ಯಾವತ್ತೂ ಜೀವಿಸುವ ಯಾವುದನ್ನೂ ಸ್ಪರ್ಶಿಸುವುದಿಲ್ಲ. ಅದು ಜೀವನವನ್ನು ವಶಪಡಿಸಿಕೊಳ್ಳಲಾರದು ವಶಪಡಿಸಿಕೊ೦ಡು ಅದಕ್ಕೆ ಒ೦ದು ಮೂರ್ತತೆಯನ್ನು ಕೊಡಲಾಗುವುದಿಲ್ಲ. ಅದು ಜೀವನವನ್ನು ಸ್ಪರ್ಶಿಸಿದ ಕ್ಷಣವೇ ಅದು ಬದುಕಿನ ಶೀಲತೆಯಿ೦ದ ನಾಶವಾಗುತ್ತದೆ.

ಧ್ಯಾನಕ್ಕಿ೦ತಲೂ ಮುಷ್ಟಿಮೈಥುನವೇ ಮಿಗಿಲು. Masturbation is better than meditation

ಮಾನವ ಜೀವಕ್ಕೇ, ನಿಮ್ಮ ಧಾರ್ಮಿಕ ಸಿದ್ಧಾ೦ತ, ನೀತಿ ಮೋಕ್ಷ, ಆನ೦ದ, ಮುಕ್ತಿ ಅಥವಾ ಇನ್ನಾವುದರಲ್ಲೂ ಆಸಕ್ತಿಯಿಲ್ಲ. ಅದರ ಆಸಕ್ತಿಯೆಲ್ಲಾ ಒ೦ದೇ,ಅದೇ ಬದುಕುಳಿಯುವುದು. ಈ ಸಮಾಜ ನಮ್ಮ ಮು೦ದೆ ಇಟ್ಟಿರುವು ಹಾಗೂ ಸಾಧಿಸುವ ಗುರಿಯೇನೆ೦ದರೆ ಈ ಜೀವಿಸುವ ಜೀವಿಯ ಶತ್ರುವನ್ನು.

ಯೋಚಿಸುವುದನ್ನು ನಿಲ್ಲಿಸು; ಬದುಕಲು ಪ್ರಾರ೦ಭಿಸು.

ಒ೦ದು ಮಾನವ ದೇಹವಾಗಿ ಇದು ಸೃಷ್ಟಿಯ ಅಸಾಧಾರಣ ಅದ್ಭುತ ಕೃತಿ; ಆದರೆ ಒಬ್ಬ ಮನುಷ್ಯನಾಗಿ ಅವನೊಬ್ಬ ಕೊಳೆತ ವಸ್ತು ಸ೦ಸ್ಕೃತಿಯ ಫಲವಾಗಿ.

ನೀನು ನಿಸರ್ಗಕ್ಕೆ ಬದುಕಿರುವವೇಳೆಗಿ೦ತಲೂ ಸತ್ತಾಗಲೇ ಹೆಚ್ಚು ಉಪಯೋಗ.

ಧರ್ಮ ಮತಗಳು ಗುಲಾಬಿಹೂಗಳ ಭರವಸೆ ನೀಡುತ್ತವೆ, ಕೊನೆಗೆ ನಿಮಗೆ ದಕ್ಕುವುದು ಬರೀ ಮುಳ್ಳುಗಳೇ.

*******************************

ಪ್ರತಿಕ್ರಿಯೆಗಳು:
ತನ್ನ ಬಗ್ಗೆ, ತನ್ನ ತತ್ವದ ಬಗ್ಗೆ ತಾನೇ “ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಉಳಿಸಿಕೊಳ್ಳುವ ಯಾವ ತತ್ವವೂ ಇಲ್ಲ. ಕ್ಷಮಿಸಿ ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಬರೀ ಒ೦ದಕ್ಕೊ೦ದು ತಾಳವಿಲ್ಲದ ತು೦ದು ತು೦ಡು ವಾಕ್ಯಗಳು ಪದಗಳು.” ಎಂದಿರುವಾಗ ನಾವು ಅವುಗಳನ್ನು ಬೋಧನೆಯಾಗಿ ಉಳಿಸಿಕೊಳ್ಳುವುದರಲ್ಲಿ ಅರ್ಥವೇನಿದೆ ಅನ್ನಿಸುತ್ತದೆ.

ತಾನು ಗುರುವಲ್ಲ, ಯಾರು ಯಾರಿಗೂ ಏನನ್ನೂ ನೀಡಲಾಗುವುದಿಲ್ಲ ಎಂದವನು ಮಹೇಶ್ ಭಟ್‌ರಿಗೆ ಅಸ್ತಿತ್ವದ ಕೇಂದ್ರ ಬಿಂದುವೇ ಆಗುತ್ತಾನೆ.

ಆಲೋಚನೆಗಳು ನಿಮ್ಮ ಶತ್ರು. ಆಲೋಚಿಸುವುದು ನಿಲ್ಲಿಸಿ ಬದುಕಲು ಶುರು ಮಾಡಿ. ಆಲೋಚನೆಗಳು ಅಪಾಯಕಾರಿ ಎನ್ನುವ ಆತನ ಆಲೋಚನೆಗಳನ್ನು ಆತ ನಮಗೆ ನೀಡಿ ಹೋದ!

“'ನೈತಿಕ ಮನುಷ್ಯ' ಒಬ್ಬ ಭಯಗ್ರಸ್ತ ಮನುಷ್ಯ, ಹೇಡಿಹೃದಯದವ; ಅದಕ್ಕೆ೦ದೇ ಆತ ನೈತಿಕತೆಯನ್ನುಅನುಷ್ಟ್ಹಾನಗೊಳಿಸಲು ಪ್ರಯತ್ನಿಸುತ್ತಾನೆ ಹಾಗೇ ಪರರ ಬಗ್ಗೆ ತೀರ್ಮಾನಗಳನ್ನೂ ತೀರ್ಪುಗಳನ್ನೂ ನೀಡುತ್ತಾನೆ.” ಎಂದು ಹೇಳಿ ಬುದ್ಧನ ಬಗ್ಗೆ ಮಾತನಾಡುತ್ತಾನೆ, ಓಶೋ ಬಗ್ಗೆ ತೀರ್ಪು ಕೊಡುತ್ತಾನೆ, ಜೀಕೆ ಬಗ್ಗೆ ವಿಮರ್ಶೆ ಮಾಡುತ್ತಾನೆ.

ಸಂಪೂರ್ಣ ವೈರುಧ್ಯಗಳ ಈ ವ್ಯಕ್ತಿಯನ್ನು ವಿಲಕ್ಷಣ ದಾರ್ಶನಿಕ ಎಂದಿರುವುದು ಸೂಕ್ತವೇ. ಅನೇಕ ಸಲ ತಮ್ಮ ವಿಲಕ್ಷಣತೆಯಿಂದಲೇ, ವಿಶಿಷ್ಟತೆಯಿಂದಲೇ ಜಗತ್ತಿನ ಗಮನ ಸೆಳೆದ ವ್ಯಕ್ತಿಗಳಲ್ಲಿ ಯೂಜಿ ಒಬ್ಬರಿರಬೇಕು ಅನ್ನಿಸುತ್ತದೆ. ಆದರೆ ನಮಗೆ ಭಾವನಾತ್ಮಕವಾಗಿ, ಬೌದ್ಧಿಕವಾಗಿ, ತಾತ್ವಿಕವಾಗಿ ಯಾವ ಆಸರೆಯನ್ನೂ ಕೊಡದೆ ಗೊಂದಲಗೊಳಿಸುವ ಈತನನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ವ್ಯರ್ಥ ಅನ್ನಿಸುತ್ತದೆ. ತನ್ನ ಜೀವನವೆಲ್ಲಾ ಆಧ್ಯಾತ್ಮದ, ಮೋಕ್ಷದ, ಜ್ಞಾನೋದಯದ ಹಪಹಪಿಯಿಂದ ಥಿಯೋಸಫಿ, ರಮಣರು, ಜೀಕೆಯವರ ಬಳಿಯೆಲ್ಲಾ ಅಲೆದಾಡಿದ ವ್ಯಕ್ತಿಯೊಬ್ಬನ ಭರಿಸಲಾರದ ನಿರಾಶೆಯಿಂದ ಹುಟ್ಟಿದ ದರ್ಶನ ಈತನ ಸಂದೇಶವೇ ಎಂಬ ಅನುಮಾನವೂ ಮೂಡುತ್ತದೆ.

. ಯೂಜಿ ಹೇಳಿದ್ದೆಲ್ಲ ಪ್ರಾಕೃತಿಕ ಮತ್ತು ರಾಶನಲ್ ಮಾತುಗಳು. ಹೇಳುವುದನ್ನು ನೇರವಾಗಿ ಹೇಳಿದ್ದಾನೆ.
ಯೂಜಿ ಬರಿ ನಾಸ್ತಿಕನೆಂಬುವುದಕ್ಕಿಂತ ಅವನೊಬ್ಬ ನಿಹಿಲಿಗ(Nihilist). ಸಾಮಾಜಿಕ ನಂಬಿಕೆಗಳನ್ನು ಕೂಡ ಪ್ರಶ್ನಿಸಿ, ವಿವೇಚಿಸಿದವನು. ಅವನು ವಿಜ್ನಾನವನ್ನೂ ಬಿಟ್ಟಿಲ್ಲ.!

Apr 16, 2009

ಪರಾರಿಯಾದವರು-ಕಾವ್ಯ

ಅವನು ಯಾರೋ ಏನೋ
ಯಾವ ಊರೋ ಏನೋ ಪಾಪ!
ನಡು ಬೀದಿಯಲಿ ಬಿದ್ದು
ಎರಡು ದಿನಗಳಾದರೂ ಆಗಿರಬಹುದು
ಪಕ್ಕದ ಕಸದ ತೊಟ್ಟಿಯಲಿ
ತಿ೦ದುಳಿದು ಬಿಸಾಕಿದ ಬ್ರೆಡ್ ಚೂರೂ ಕೊಳೆಯುತ್ತಿತ್ತು

ಹಾದಿ ತು೦ಬಾ ಜನ, ಬಸ್ಸು ಕಾರುಗಳು
ಮೆರವಣಿಗೆ, ರಾಜಕಾರಣಿಗಳ ಲಾಳಿ
ಎಲ್ಲೆಡೆಯೂ ಸ೦ಭ್ರಮ, ಸಡಗರ
ಜನ ಆ ಅನಾಥನನ್ನು ಬಳಸಿಕೊ೦ಡೇ
ಮೂಗು, ಕಣ್ಣೂ ಮುಚ್ಚಿಕೊ೦ಡೇ ಜಾಗಿ೦ಗ್
ಜೋಕಿ೦ಗ್ ಮಾಡುತ್ತ ಕಿ೦ಗ್ ಗಳ೦ತೆಯೇ
ಸಾಗುತ್ತಾರೆ. ಪಕ್ಕದ ವಿಶಾಲ ಪಾರ್ಕಿನ
ಕಲ್ಲಿನ ಬೆ೦ಚಿನ ಮೇಲೆ ಕುಳಿತು
ಕಲ್ಲಿನ೦ತ ಹೃದಯದಿ೦ದ ಮಾನವತೆಯ
ಬಗ್ಗೆ ವಿಶಾಲವಾಗಿ ಚರ್ಚಿಸುತ್ತಾರೆ.
ವ್ಯವಸ್ಥೆಯ ಬಗ್ಗೆ ಛೇಡಿಸುತ್ತಾರೆ, ವಿಷಾದಿಸುತ್ತಾರೆ
ಮರೆಯುತ್ತಾರೆ ತಾವೂ ಈ
ನಾರುತ್ತಿರುವ ವ್ಯವಸ್ಥ್ಯೆಯ ಒ೦ದು
ಬೋಲ್ಟು, ಒ೦ದು ನಟ್ಟು ಎ೦ಬ ದಿಟವನ್ನು.

ಕುಡಿದು ಬಿದ್ದಿರಬಹುದೆ೦ದು ಕೆಲವರು
ಗೊಣಗಿ ಕಾಣದ೦ತಾಗುವರು
ಇನ್ನೂ ಕೆಲವರು ಈತನಿಗೆ ಫಿಟ್ಸ್
ಬಡಿದು ನೆಲಕ್ಕೊರಗಿದ್ದಾನೆ ಎ೦ದು,
ಜೀವನದಲ್ಲಿ ಜಿಗುಪ್ಸೆಯಾಗಿ ವಿಷ
ಕುಡಿದು ಲಾರಿಯಡಿ, ಕಾರಿನಡಿ
ಜೀವ ಕಾರಿಕೊಳ್ಳಲೆ೦ದೇ ಇಲ್ಲಿ
ಉರುಳಿಬಿದ್ದಿದ್ದಾನೆ ಎ೦ದರು ಹಲವರು.
ಆದರೂ... ಇವರಿಗೆ ಗೊತ್ತಿರದ ಸ೦ಗತಿಯೂ ಇದೆ.

ಯಾರೋ ಧಿಮಾಕಿನ ಐಷಾರಾಮದ ಕಾರಿನವ
ಈ ಅನಾಥನನ್ನು ಢಿಕ್ಕಿ ಹೊಡೆದು ಪರಾರಿಯಾಗಿದ್ದಾನೆ೦ದು.
ಪ್ರಜ್ಞಾಹೀನರಾಗಿ ಮೆರೆದು ಒರಗಿಸಿದ ಜನರನ್ನು
ಪ್ರಜ್ಞಾವ೦ತ ಜನ ಪ್ರಜ್ಞಾಪೂರ್ವಕವಾಗೇ ಮರೆಯುತ್ತಾರೆ
ಕಡೆಗೂ ಬ೦ದರು..
ಪೌರ ಕಾರ್ಮಿಕರು
ಎತ್ತು ಹಾಕಲು ಈ ಅನಾಥ ಜೀವವನ್ನು
ಅಥವಾ ಹೆಣವನ್ನೋ ತಿಳಿಯದೆ........!

Apr 10, 2009

ಖರ್ಚು-ಎಷ್ಟು?

ಖರ್ಚು-ಎಷ್ಟು?
ಒಮ್ಮೆ ಸ್ಪೇನ್ ದೇಶದ ವಿಶ್ವವಿಖ್ಯಾತ ಚಿತ್ರಕಲಾವಿದ, ಶಿಲ್ಪಿ ಪ್ಯಾಬ್ಲೋ ಪಿಕಾಸೋ ತಾನು ವಾಸಿಸುತಿದ್ದ ದಕ್ಷಿಣ ಫ್ರಾನ್ಸ್ ನಲ್ಲಿನ ತನ್ನ ಬ೦ಗಲೆಯನ್ನು ಸುಸಜ್ಜಿತಗೊಳಿಸಲು ಒಬ್ಬ ಸುಪ್ರಸಿದ್ಧ ಬಡಗಿಯ ಬಳಿ ಹೋಗಿ ತನಗೆ ಒ೦ದು ಮಹೋಗನಿಯ ವಾರ್ಡ್ರೋಬ್ ನ್ನು ಮಾಡಿಕೊಡು ಎ೦ದು ಹೇಳಿದ. ತನ್ನ ಉದ್ದೇಶಿತ ವಾರ್ಡ್ರೋಬ್ ನ ಡಿಸೈನ್ ಹೇಗಿರಬೇಕೆ೦ಬುದನ್ನು ವಿವರಿಸಲು ಒ೦ದು ಪೇಪರ್ ಮೇಲೆ ಸ್ಕೆಚ್ ಹಾಕಿ ತೋರಿಸಿ, ಅದನ್ನು ಆ ಬಡಗಿಗೆ ಒಪ್ಪಿಸಿದ.
ಈ ವಾರ್ಡ್ರೋಬ್ ತಯಾರಿಸಲು ಅದೆಷ್ಟು ಖರ್ಚು ಬರಬಹುದೆ೦ದು ಹೇಳಿದ, ಪಿಕಾಸೋ
'ಏನೂ ಇಲ್ಲ!" ಆ ಬಡಗಿ ಎದೆಯುಬ್ಬಿಸಿ ಉತ್ತರಿಸಿದ, ' ಈ ಸ್ಕೆಚ್ಚಿಗೆ ನಿಮ್ಮ ಸಹಿ ಹಾಕಿ. ಅಷ್ಟು ಸಾಕು......"

Apr 8, 2009

ಹೋಗು ಸುಮ್ಮನೆ ಮಲಗು-ಝೆನ್

ಹೋಗು ಸುಮ್ಮನೆ ಮಲಗು
ಗಾಸನ್ ತನ್ನ ಗುರು ಟೆಕಿಸ್ಯುವಿನ ಹಾಸಿಗೆಯ ಪಕ್ಕದಲ್ಲೇ ಕುಳಿತಿದ್ದ. ಸಾಯಲು ಮೂರು ದಿನ ಉಳಿದಿತ್ತು. ಟೆಕಿಸ್ಯು, ಗಾಸನ್ ನನ್ನು ತನ್ನ ಉತ್ತಾರಾಧಿಕಾರಿಯಾಗಿ ಅಗಲೇ ಆಯ್ಕೆ ಮಾಡಿದ್ದ.
ಒ೦ದು ದೇಗುಲ ಇತ್ತೀಚಿಗೆ ಸುಟ್ಟುಹೋಗಿತ್ತು. ಗಾಸನ್ ಮತ್ತೆ ಆ ದೇಗುಲವನ್ನು ಪುನನಿರ್ಮಾಣಮಾಡುವುದರಲ್ಲಿ ನಿರತನಾಗಿದ್ದ. ಟೆಕಿಸ್ಯು ಅವನನ್ನು ಕೇಳಿದ;
' ಗುಡಿ ಪುನನಿರ್ಮಾಣವಾದ ನ೦ತರ ನೀನೇನು ಮಾಡುವೆ?'
'ನೀವು ಗುಣಮುಖವಾದಮೇಲೆ ಅಲ್ಲಿ ನೀವು ಉಪದೇಶಿಸಬೇಕು.' ಗಾಸನ್ ಹೇಳಿದ
'ಒ೦ದು ವೇಳೆ ಅಲ್ಲಿಯವರೆಗೂ ನಾನು ಬದುಕಿರದಿದ್ದರೆ?'
'ಆಗ ಬೇರೆ ಇನ್ನೊಬ್ಬರನ್ನು ಕರೆತರುತ್ತೇವೆ.'
'ಒ೦ದು ವೇಳೆ ನಿನಗೆ ಯಾರೂ ಸಿಗದಿದ್ದರೆ?'

ಗಾಸನ್ ಗಟ್ಟಿಯಾಗಿ ಉತ್ತರಿಸಿದ,' ಅ೦ಥಾ ಮೂರ್ಖ ಪ್ರಶ್ನೆಗಳನ್ನು ಹಾಕಬೇಡ. ಹೋಗು ಸುಮ್ಮನೆ ಮಲಗು....'

ಸುಭಾಷಿತಗಳು

"ಕೇವಲಾಘೋ ಭವತಿ ಕೇವಲಾದೀ"||
(ಋಗ್: ೧೦.೧೧೭.೬.)
"ಒಬ್ಬನೇ ತಿನ್ನುವವನು ಶುದ್ಧ ಪಾಪಿಯೆನಿಸುತ್ತಾನೆ".
ತಿನ್ನುವುದು ತಪ್ಪಲ್ಲ, ಬದುಕಿರುವವರೆಲ್ಲರೂ, ಬದುಕ ಬಯಸುವವರೆಲ್ಲರೂ ತಿನ್ನಲೇಬೇಕು. ಆದರೆ, ಏಕೆ ತಿನ್ನಬೇಕು? (ಕಳೆದು ಹೋದ ಶಕ್ತಿಯನ್ನು ಪಡೆಯಲು); ಯಾವಾಗ ತಿನ್ನಬೇಕು? (ಹಸಿವಾದಾಗ ತಿನ್ನಬೇಕು); ಏನು ತಿನ್ನಬೇಕು? (ಜ್ಞಾನ, ಶಕ್ತಿಗಳನ್ನು ನೀಡುವ ಸಾತ್ವಿಕ ಆಹಾರವನ್ನು); ಎಷ್ಟು ತಿನ್ನಬೇಕು? (ಅರ್ಧ ಹೊಟ್ಟೆ ಆಹಾರ, ಕಾಲು ಹೊಟ್ಟೆ ನೀರು, ಕಾಲು ಹೊಟ್ಟೆ ಗಾಳೀ); ಹೇಗೆ ತಿನ್ನಬೇಕು? (ಚೆನ್ನಾಗಿ ಅಗಿದು); ಈ ಪ್ರಶ್ನೆಗಳಿಗೆ ಉತ್ತರ ತಿಳಿದು ತಿನ್ನಬೇಕು. ತಿನ್ನುವ ಮುಂಚೆ, ನೀಡಿದ ಭಗವಂತನನ್ನು, ದುಡಿದ ರೈತನನ್ನು ಕೃತಜ್ಞತೆಯಿಂದ ಸ್ಮ್ರರಿಸಿ, ಇತರರೊಡನೆ ಹಂಚಿಕೊಂಡು ತಿನ್ನಬೇಕು. ಮರೆತು ಚೀಲ ತುಂಬಿದರೆ ಅದು ಪಾಪ. ರೋಗ-ರುಜಿನಗಳು ನಿಶ್ಚಿತ.
೨. "ವಯಂ ಸ್ಯಾಮ ಪತಯೋ ರಯೀಣಾಮ್"||
(ಯಜು.೧೯.೪೪.)
"ನಾವು ಸಂಪತ್ತಿನ ಒಡೆಯರಾಗೋಣ".
ವೇದಗಳು ವೈರಾಗ್ಯವನ್ನು ಹೇಳುತ್ತವೆ. ನಮ್ಮ ದೈನಂದಿನ ಜೀವನದ ಬಗ್ಗೆ ಹೇಳುವುದಕ್ಕಿಂತ ಪರಲೋಕದ ಬಗ್ಗೆಯೇ ಹೇಳುತ್ತವೆ ಎಂಬುದು ಸಾಮಾನ್ಯವಾದ ತಿಳುವಳಿಕೆ. ಮೇಲಿನ ಮಾತು ಇದನ್ನು ಸುಳ್ಳೆಂದು ಸಾಧಿಸುತ್ತದೆ. ನಮ್ಮ ಜೀವನಕ್ಕೆ ಸಂಪತ್ತು ಅತ್ಯಾವಶ್ಯಕ. ಸಂಪತ್ತುಳ್ಳವರು ಸ್ವಾವಲಂಬಿಗಳಾಗಿರುತ್ತಾರೆ, ಸ್ವತಂತ್ರರಾಗಿರುತ್ತಾರೆ. ಧರ್ಮಾಚರಣೆ ಗುಲಾಮರಿಗೆ ಸಾಧ್ಯವಿಲ್ಲ. ಆದರೆ, ಆ ಸಂಪತ್ತಿಗೆ ನಾವು ದಾಸರಾಗದೆ ಒಡೆಯರಾಗಿರಬೇಕು. ಸಂಪತ್ತನ್ನು ಗಳಿಸಲು ಏನನ್ನಾದರೂ ಮಾಡುತ್ತೇವೆ ಎಂಬುದು ದಾಸತ್ವ. ಸನ್ಮಾರ್ಗದಲ್ಲೇ ಪಡೆಯುತ್ತೇವೆಂಬ ಸಂಕಲ್ಪ ನಾವು ಸಂಪತ್ತಿನ ಒಡಯರಾಗುವುದಕ್ಕೆ ಸಹಕಾರಿ. ಆಗಲೇ ಸಂಪತ್ತಿನ ಸದ್ವಿನಿಯೋಗವೂ ಸಾಧ್ಯ.
೩. "ನ ಸ್ತೇಯಮದ್ಮಿ"||
(ಅಥರ್ವ.೧೪.೧.೫೭.)
"ಕಳ್ಳತನದಲ್ಲಿ ಭೋಗವನ್ನು ಅನುಭವಿಸುವುದಿಲ್ಲ".
ಒಂದು ಮಂತ್ರವನ್ನು ಸಾಮಾನ್ಯವಾಗಿ ವೈದಿಕ ವಿವಾಹ ಸಂಸ್ಕಾರದಲ್ಲಿ ವರನು ವಧುವಿಗೆ ನೀಡುವ ಪ್ರತಿಜ್ಞಾವಿಧಿಯಲ್ಲಿ ಸೇರಿಸಿರುತ್ತಾನೆ. ಆ ಮಂತ್ರದ ಭಾಗವಿದು. ವಿವಾಹ ಮಾಡಿಸುವ ಪುರೋಹಿತರಿಗೇ ತಾವು ಹೇಳುವ ಮಂತ್ರಗಳ ಅರ್ಥ ಗೊತ್ತಿಲ್ಲದಿರುವುದು ಶೋಚನೀಯ. ಅರ್ಥ ತಿಳಿದು ವರನು ಈ ಮಾತನ್ನಾಡಿದಾಗ, ಮುಂದಿನ ದಾಂಪತ್ಯ ಜೀವನದಲ್ಲಿ ವ್ಯಭಿಚಾರಾದಿ ದುಷ್ಟತನಗಳಿಗೆ ಸಿಕ್ಕಿಕೊಳ್ಳುವ ಸಂಭವವಿರುವುದಿಲ್ಲ. ವ್ಯಕ್ತಿಗೂ, ಸಮಾಜಕ್ಕೂ ಆರೋಗ್ಯಕರವಾದ ಏಕಪತ್ನೀವ್ರತವನ್ನು ಪಾಲಿಸಲು ಸತ್ಪ್ರೇರಣೆಯನ್ನು ನೀಡುತ್ತದೆ. ಪತಿ-ಪತ್ನಿಯರ ನಡುವಿನ "ಸ್ನೇಹ" ಬಿಗಿಯಾಗುತ್ತದೆ. ಈ ಹಿನ್ನಲೆಯಲ್ಲಿ ಹುಟ್ಟುವ ಸಂತಾನ ಶ್ರೇಷ್ಠವಾಗಿರುತ್ತದೆ. ಸುಭದ್ರ ಕುಟುಂಬಗಳೇ ಸುಭದ್ರ ಸಮಾಜದ ಅಡಿಪಾಯ.
೪. "ಆರೇ ಬಾಧಸ್ವ ದುಚ್ಛುನಾಮ್"||
(ಋಗ್.೯.೬೬.೧೯. ಸಾಮ.೬.೨೭.)
"ದುಷ್ಟ ವೇಗಗಳನ್ನು ದೂರಕ್ಕಟ್ಟಿರಿ".
ದುಷ್ಟಪ್ರವೃತ್ತಿಗಳೇ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೇ ಈ ವೇಗಗಳು| ಇವುಗಳ ವೇಗವೆಷ್ಟಿರುತ್ತದೆಂದರೆ ಎಂತಹವರನ್ನೂ ಬಲುಬೇಗ ಸೆಳೆದುಬಿಡುತ್ತವೆ, ಆಕ್ರಮಿಸಿಕೊಂಡುಬಿಡುತ್ತವೆ. ಸ್ವಲ್ಪ ಅವಕಾಶಕೊಟ್ಟರೆ ಸಾಕು ಸಂಪೂರ್ಣ ಹಬ್ಬಿಕೊಂಡುಬಿಡುತ್ತವೆ. ದೂರದಲ್ಲೇ ನಿವಾರಿಸಿಕೊಂಡುಬೆಡಬೇಕು. ಈ ಕೆಲಸವನ್ನು ದೃಢಮನಸ್ಸಿನಿಂದ, ಕಠಿಣವಾಗಿ ಮಾಡಿದರೆ ಮಾತ್ರ ಜಯ ಸಾಧ್ಯ. ಈ ಕಾರ್ಯವನ್ನು ಸಮರ್ಪಕವಾಗಿ ಮಾಡಲ್ಲು ಬೇಕಾದ ಇಚ್ಛಾಶಕ್ತಿಯನ್ನು ಬಲ-ವೀರ್ಯಗಳನ್ನು, ಇವುಗಳನ್ನು ನೀಡುವಂತಹ ಸಾತ್ವಿಕ ಅನ್ನವನ್ನು ನಮಗೆ ನೀಡು ಎಂಬುದು ನಮ್ಮ ಪ್ರಾರ್ಥನೆಯಾಗಬೇಕು. ಅಂತೆಯೇ ಮಾಡುತ್ತೇನೆ ಎಂಬುದೇ ಸಂಕಲ್ಪವಾಗಬೇಕು. ಅದರಂತೆ ಅನುಷ್ಠಾನವಿಲ್ಲದಿದ್ದರೆ ಪ್ರಾರ್ಥನೆಯೆಂದಿಗೂ ಉತ್ತರಿಸಲ್ಪಡುವುದಿಲ್ಲ.
***
ಆಪತ್ತು ಬರುವ ಮೊದಲೇ ಅದಕ್ಕೆ ಉಪಾಯಗಳನ್ನು ಯೋಚಿಸಬೇಕು. ಬೆಂಕಿ ಹತ್ತಿದ ಮೇಲೆ ಬಾವಿ ತೋಡಲು ಆರಂಭಿಸುವದು ಸರಿಯಲ್ಲ.
ಮೂಲ:-
ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾಗೃಹೇ ||
೩೮.
ದಾನ , ಉಪಭೋಗ, ನಾಶ ಇವು ಹಣದ ಮೂರು ಸಾಧ್ಯತೆಗಳು . ದಾನವನ್ನೂ ಮಾಡದ , ಸ್ವಂತದ ಸುಖಕ್ಕೆ ಉಪಯೋಗವಾಗದ ಹಣ ನಾಶವನ್ನೇ ಹೊಂದುವದು.
ಮೂಲ:-
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ |
ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾಗತಿರ್ಭವತಿ ||
೩೯.
ಕೇವಲ ಪಾಂಡಿತ್ಯ ಇದ್ದು ವಿವೇಕ ಇಲ್ಲದವನು ಶಾಸ್ತ್ರದ ನಿಜವಾದ ಅರ್ಥವನ್ನೇನು ಬಲ್ಲನು ? ಅಡಿಗೆಯಲ್ಲಿರುವ ಸವುಟಿನ ಹಾಗೆ . ಅದಕ್ಕೆ ಅಡಿಗೆಯ ರುಚಿಯೇನು ತಿಳಿದೀತು?
ಮೂಲ
ಯಸ್ಯ ನಾಸ್ತಿ ವಿವೇಕಸ್ತು ಕೇವಲಂ ಯೋ ಬಹುಶ್ರುತ: |
ನ ಸ ಜಾನಾತಿ ಶಾಸ್ತ್ರಾರ್ಥಾನ್ ದರ್ವೀ ಪಾಕರಸಾನ್ ಇವ||
****
ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ |
ಸುಭಾಷಿತ ರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ ||
ಸುಭಾಷಿತದ ಸ್ವಾರಸ್ಯವನ್ನು ನೋಡಿ ದ್ರಾಕ್ಷಿಯ ಮುಖ ಸಪ್ಪಗಾಯಿತು , ಸಕ್ಕರೆ ಕಲ್ಲಾಯಿತು , ಅಮೃತವು ಹೆದರಿ ಸ್ವರ್ಗಕ್ಕೆ ಓಡಿತು.
೨. ವಜ್ರ್ಆದಪಿ ಕಠೋರಾಣೀ ಮೃದೂನಿ ಕುಸುಮಾದಪಿ |
ಲೋಕೋತ್ತರಾಣಾಂ ಚೇತಾಂಸಿ ಕೋಹಿ ವಿಜ್ಞಾತುಂ ಅರ್ಹತಿ ? ||
ಸಜ್ಜನರ ಮನಸ್ಸು ಒಮ್ಮೆ ವಜ್ರಕ್ಕಿಂತಲೂ ಕಠೋರ , ಇನ್ನೊಮ್ಮೆ ಹೂವಿಗಿಂತ ಮೃದು . ಇತರ ಜನರಂತಲ್ಲದ ಅವರ ಮನಸ್ಸನ್ನು ತಿಳಿಯಬಲ್ಲವರಾರು ?
೩. ಪರಪರಿವಾದೇ ಮೂಕ: ಪರನಾರೀದರ್ಶನೇಪಿ ಜಾತ್ಯಂಧ:
ಪಂಗು: ಪರಧನಹರಣೇ ಸ ಜಯತಿ ಲೋಕೇ ಮಹಾಪುರುಷ:||
ಇತರರ ನಿಂದಿಸುವ ವಿಷಯದಲ್ಲಿ ಮೂಕರು , ಪರನಾರಿಯರ್ನ್ನು ನೋಡುವ ವಿಷಯಕ್ಕೆ ಹುಟ್ಟುಗುರುದರು , ಪರರ ಹಣವನ್ನು ಅಪಹರಿಸುವಲ್ಲಿ ವಿಷಯದಲ್ಲಿ ಹೆಳವರು ಲೋಕದಲ್ಲಿ ಮಹಾಪುರುಷರು ಹೀಗೆ ಇರುವರು.
****
ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:
ಪ್ರಾರಭ್ಯ ವಿಘ್ನವಿಹತಾ ವಿರಮಂತಿ ಮಧ್ಯಾ: |
ವಿಘ್ನೈ: ಪುನ: ಪುನರಪಿ ಪ್ರತಿಹನ್ಯಮಾನ:
ಪ್ರಾರಭ್ದಮುತ್ತಮಜನಾ: ನ ಪರಿತ್ಯಜಂತಿ ||
ಮುಂದೆ ಅಡೆತಡೆಗಳು ಬರುವವವೆಂದು ಹೆದರಿ ಕೀಳು ಜನರು ಕೆಲಸವನ್ನೇ ಪ್ರಾರಂಬಿಸುವದಿಲ್ಲ .ಸಾಮಾನ್ಯರು ಪ್ರಾರಂಭಿಸಿ , ತೊಂದರೆ ಬಂದೊಡನೆ ಕೆಲಸವನ್ನು ನಿಲ್ಲಿಸುವರು. ಆದರೆ ಉತ್ತಮರು ಎಷ್ಟು ಸಂಕಟಗಳು ಬಂದೊದಗಿದರೂ ಎದೆಗುಂದದೆ ಹಿಡಿದ ಕೆಲಸವನ್ನು ಯಶಸ್ವಿಯಾಗಿಯೇ ಮಾಡಿ ಮುಗಿಸುವರು.
೫.ಅಕೃತ್ವಾ ಪರಸಂತಾಪಂ ಅಗತ್ವಾ ಖಲನಮ್ರತಾಂ |
ಅನುತ್ಸೃಜ್ಯ ಸತಾಂ ಮಾರ್ಗಮ್ ಯತ್ ಸ್ವಲ್ಪಮಪಿ ತದ್ಬಹು.||
ಇನ್ನೊಬ್ಬರಿಗೆ ತೊಂದರೆ ಕೊಡದೆ , ದುಷ್ಟರಿಗೆ ತಲೆಬಾಗದೇ ಸಜ್ಜನರ ಮಾರ್ಗವನ್ನು ಅನುಸರಿಸಿ ಗಳಿಸಿದ್ದು ಬಹಳ ಸ್ವಲ್ಪವಾದರೂ , ಗುಣದಿಂದ ಹೆಚ್ಚಿನದಾಗಿದೆ.
೬. ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಮ್
ಮಾನೋನ್ನತಿಂ ದಿಶತಿ ಪಾಪಮಪಾಕರೋತಿ |
ಚಿತ್ತಂ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ
ಸತ್ಸಂಗತಿ: ಕಥಯ ಕಿಂ ನ ಕರೋತಿ ಪುಂಸಾ||
ಸಜ್ಜನರ ಸಹವಾಸವು ಮನಸ್ಸಿನ ಬೇಸರವನ್ನು ಪರಿಹರಿಸುವದು, ಸತ್ಯ ಗುಣ ಕಲಿಸುವದು, ಅಪಾರ ಮರ್ಯಾದೆ ಗಳಿಸಿಕೊಡುವದು, ಪಾಪವನ್ನು ಪುಣ್ಯವನ್ನಾಗಿ ಮಾರ್ಪಡಿಸುವದು. ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವದು , ಕೀರ್ತಿಯನ್ನು ಎಲ್ಲೆಡೆಗೆ ಹರಡುವದು . ಸಜ್ಜನರ ಸಹವಸವು ಮಾಡದೆ ಇದ್ದುದೇನು?
****
Satpurusha
ಸದ್ಭಿಸ್ತು ಲೀಲಯಾ ಪ್ರ್ಓಕ್ತಂ ಶಿಲಾಲಿಖಿತಮಕ್ಷರಂ|
ಅಸದ್ಭಿ: ಶಪಥೇನೋಕ್ತಂ ಜಲೇಲಿಖಿತಮಕ್ಷರಂ ||
ಸಜ್ಜನರು ಸಹಜವಾಗಿ ನುಡಿದುದು ಕೂಡ ಕಲ್ಲಿನ ಮೇಲೆ ಬರೆದಷ್ಟು ಶಾಸ್ವತವಾಗಿ ಉಳಿಯುತ್ತದೆ ; ಅದೇ ಉಳಿದವರು ಆಣೆ ಮಾಡೀ ಸಾರಿ ಹೇಳಿದರು ಕೂಡ ಅವರ ಮಾತು ನೀರಿನ ಮೇಲೆ ಬರೆದ ಅಕ್ಷರದಂತೆ.
೮. ಅಹೋ ಕಿಮಪಿ ಚಿತ್ರಾಣಿ ಚರಿತ್ರಾಣಿ ಮಹಾತ್ಮನಾಂ |
ಲಕ್ಷ್ಮೀಂ ತೃಣಾಯ ಮನ್ಯಂತೆ ತದ್ಭಾರೇಣ ನಮಂತ್ಯಪಿ||
ಮಹಾಪುರುಷರ ನಡತೆಯು ಎಷ್ಟು ವಿಚಿತ್ರವಾದದ್ದು! ಸಂಪತ್ತನ್ನು ಹುಲ್ಲಿಗೆ ಸಮನಾಗಿ ನೋಡುವರು ; ಆದರೆ ಸಂಪತ್ತಿನ ಭಾರದಿಂದ ಬಾಗಿ ನಮ್ರರಾಗಿ ನಡೆದುಕೊಳ್ಳುವರು .
೯. ಭವಂತಿ ನಮ್ರಾಸ್ತರವ: ಫಲಾಗಮೈ:
ನವಾಂಬುಭಿರ್ಭೂರಿವಿಲಂಬಿನೋ ಘನಾ: |
ಅನುದ್ಧತಾ: ಸತ್ಪುರುಷಾ: ಸಮೃದ್ಧಿಭಿ:
ಸ್ವಭಾವ ಏವೈಷ ಪರೋಪಕಾರಿಣಾಂ ||
ಗಿಡಗಳು ತಮ್ಮ ಹಣ್ಣುಗಳ ಮೂಲಕ ಬಾಗಿರುವವು , ಮೋಡಗಳು ನೀರಿನಿಂದ ತುಂಬಿ ಕೆಳಗೆ ಬಾಗುವವು . ಸಜ್ಜನರು ಸಂಪತ್ತು ತಮ್ಮಲ್ಲಿ ಅಪಾರವಾಗಿದ್ದರೂ ವಿನಯಶಾಲಿಗಳಾಗಿರುವರು. ಪರೋಪಕಾರಿ ಜನರ ಸ್ವಭಾವ ಇರುವದೇ ಹೀಗೆ.
******
ಪಾಪಾನ್ನಿವಾರಯತಿ ಯೋಜಯತೀ ಹಿತಾಯ
ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ |
ಆಪದ್ಗತಂ ಚ ನ ಜಹಾತಿ , ದದಾತಿ ಕಾಲೇ
ಸನ್ಮಿತ್ರ ಲಕ್ಷಣಮ್ ಇದಂ ಪ್ರವದಂತಿ ಸಂತ: ||
ನಿಮ್ಮನ್ನು ಪಾಪ ಕಾರ್ಯದಿಂದ ತಪ್ಪಿಸುತ್ತಾರೆ .
ನಿಮ್ಮ ಹಿತಕ್ಕಾಗಿ ಯೋಜನೆ ಮಾಡುತ್ತಾರೆ .
ಯಾವುದನ್ನು ಮುಚ್ಚಿಡಬೇಕೋ ಆದನ್ನು ಮುಚ್ಚಿಡುತ್ತಾರೆ.
ನಿಮ್ಮ ಗುಣಗಳನ್ನು ಬಹಿರಂಗಪಡಿಸುತ್ತಾರೆ .
ಸಂಕಟ ಸಮಯದಲ್ಲಿ ಕೈ ಬಿಡುವದಿಲ್ಲ ,
ಸಕಾಲಕ್ಕೆ ಸಹಾಯ ಮಾಡುತ್ತಾರೆ.
ಒಳ್ಳೆಯ ಮಿತ್ರರ ಲಕ್ಷಣಗಳು ಇವೆಂದು ಬಲ್ಲವರು ಹೇಳುತ್ತಾರೆ.
೧೭. ಗಂಗಾ ಪಾಪಂ ಶಶೀ ತಾಪಂ ದೈನ್ಯಂ ಕಲ್ಪತರುಸ್ತಥಾ |
ಪಾಪಂ ತಾಪಂ ಚ ದೈನ್ಯಂ ಘ್ನಂತಿ ಸಜ್ಜನ ಸಂಗತಿ: ||
ಗಂಗೆಯು ಪಾಪವನ್ನು ನಾಶಮಾಡುತ್ತಾಳೆ. ಚಂದ್ರನು ತಾಪವನ್ನು ಪರಿಹರಿಸುವನು. ದು:ಖವನ್ನು ಕಲ್ಪವೃಕ್ಷವು ದೂರ ಮಾಡುವದು . ಪಾಪ, ತಾಪ ಮತ್ತು ದು:ಖ ಇವು ಮೂರನ್ನೂ ಸಜ್ಜನರ ಸಹವಾಸವು ದೂರಮಾಡುವದು.
೧೮ ದಾನಾಯ ಲಕ್ಷ್ಮೀ: ಸುಕೃತಾಯ ವಿದ್ಯಾ ಚಿಂತಾ ಪರಬ್ರಹ್ಮವಿನಿಶ್ಚಯಾಯ
ಪರೋಪಕಾರಾಯ ವಚಾಂಸಿ ಯಸ್ಯ ವಂದ್ಯ: ತ್ರಿಲೋಕೀತಿಲಕ: ಸ ಏಕ: ||
ಸಂಪತ್ತು ದಾನಕ್ಕಾಗಿ , ವಿದ್ಯೆ ಒಳ್ಳೆಯ ಕೆಲಸಕ್ಕಾಗಿ , ಚಿಂತೆ ಆಧ್ಯಾತ್ಮಿಕ ವಿಷಯದಲ್ಲಿ , ಯಾರಿಗೆ ಇರುವದೋ ಅವರು ತ್ರಿಲೋಕ ವಂದ್ಯರು
****
ವಿಪದಿ ಧೈರ್ಯಂ , ಅಥ ಅಭ್ಯುದಯೆ ಕ್ಷಮಾ
ಸದಸಿ ವಾಕ್ಪಟುತಾ ಯುಧಿ ವಿಕ್ರಮ: |
ಯಸಸಿ ಚಾಭಿರುಚಿ: ವ್ಯಸನಂ ಶ್ರುತೌ ಪ್ರಕೃತಿ-
ಸಿದ್ಧಮಿದಂ ಹಿ ಮಹಾತ್ಮನಾಂ ||
ಸಂಕಟ ಸಮಯದಲ್ಲಿ ಧೈರ್ಯ , ಏಳಿಗೆಯ ಸಮಯದಲ್ಲಿ ಕ್ಷಮಾಗುಣ , ಸಭೆಯಲ್ಲಿ ಪಾಂಡಿತ್ಯ , ರಣರಂಗದಲ್ಲಿ ಪರಾಕ್ರಮ , ಕೀರ್ತಿಯಲ್ಲಿ ಅಭಿರುಚಿ , ಶಾಸ್ತ್ರಗಳಲ್ಲಿ ಅಭಿಲಾಷೆ , ಈ ಗುಣಗಳು ಮಹಾತ್ಮರಿಗೆ ಸಹಜವಾಗಿ ಸಿದ್ಧಿಯಾಗಿರುವವು.
೨೦. ಯ: ಪ್ರೀಣಯೇತ್ ಸುಚರಿತೈ: ಪಿತರಂ ಸ ಪುತ್ರ:
ಯದ್ ಭರ್ತುರೇವ ಹಿತಮಿಚ್ಛತಿ ತತ್ ಕಲತ್ರಂ |
ತನ್ಮಿತ್ರಂ ಆಪದಿ ಸುಖೇ ಚ ಸಮಕ್ರೀಯಂ ಯತ್
ಏತತ್ ತ್ರಯಂ ಜಗತಿ ಪುಣ್ಯಕೃತೋ ಲಭಂತೇ ||
ತನ್ನ ಒಳ್ಳೆಯ ನಡತೆಯಿಂದ ತಂದೆಯನ್ನು ಸಂತೋಷಗೊಳಿಸುವ ಮಗನು , ಗಂಡನ ಹಿತವನ್ನೇ ಬಯಸುವ ಹೆಂಡತಿ , ಸುಖದಲ್ಲಿಯೂ , ಆಪತ್ತಿನಲ್ಲಿಯೂ ಸಮನಾಗಿ ಇರುವ ಗೆಳೆಯ ಇವರು ಮೂವರು ಜಗತ್ತಿನಲ್ಲಿ ಪುಣ್ಯವಂತರಿಗೆ ಮಾತ್ರ ದೊರಕುತ್ತಾರೆ.
೨೧. ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ ,
ಪಾತ್ರತ್ವಾತ್ ಧನಮಾಪ್ನೋತಿ ಧನಾತ್ ಧರ್ಮಂ ತತ: ಸುಖಂ||
ವಿದ್ಯೆಯಿಂದ ವಿನಯ ಬರುವದು , ವಿನಯದಿಂದ ಅರ್ಹತೆ ದೊರಕುವದು , ಅರ್ಹತೆಯಿಂದ ಹಣ ಬರುವದು, ಹಣದಿಂದ ಧರ್ಮ ಕಾರ್ಯ ಮಾಡಬಹುದು , ಅದರಿಂದ ಸುಖವು ದೊರಕುವದು.
****
ದುರ್ಜನರು ವಿದ್ಯೆಯನ್ನು ವಿವಾದಕ್ಕೋಸ್ಕರ ಉಪಯೋಗಿಸುತ್ತಾರೆ , ಹಣವನ್ನು ಅಹಂಕಾರಕ್ಕೋಸ್ಕರ ಖರ್ಚು ಮಾಡುತ್ತಾರೆ , ಶಕ್ತಿಯನ್ನು ಇತರರನ್ನು ಪೀಡಿಸಲು ಬಳಸುತ್ತಾರೆ. ಸಜ್ಜನರಾದರೋ ವಿದ್ಯೆಯನ್ನು ಜ್ಞಾನಕ್ಕಾಗಿ , ಹಣವನ್ನು ದಾನಕ್ಕಾಗಿ , ಶಕ್ತಿಯನ್ನು ಇತರರ ರಕ್ಷಣೆಗಾಗಿ ಬಳಸುತ್ತಾರೆ.
ವಿದ್ಯಾ ವಿವಾದಾಯ ಧನಂ ಮದಾಯ
ಶಕ್ತಿ: ಪರಪೀಡನಾಯ
ಖಲಸ್ಯ ಸಾಧೋರ್ವಿಪರೀತಮೇತತ್
ಜ್ಞಾನಾಯ ದಾನಾಯ ಚ ರಕ್ಷಣಾಯ ||
***
ಮಂತ್ರವಾಗದ ಅಕ್ಷರವಿಲ್ಲ , ಔಷಧವಾಗದ ಗಿಡಮೂಲಿಕೆಯಿಲ್ಲ , ನಿರುಪಯೋಗಿ ಮನುಷ್ಯನಿಲ್ಲ . ಸರಿಯಾಗಿ ಯೋಜಿಸುವವರು ಕಡಿಮೆ.
ಅಮಂತ್ರಂ ಅಕ್ಷರಂ ನಾಸ್ತಿ , ನಾಸ್ತಿ ಮೂಲಂ ಅನೌಷಧಂ |
ಅಯೋಗ್ಯ ಪುರುಷ: ನಾಸ್ತಿ ಯೋಜಕ: ತತ್ರ ದುರ್ಲಭ: ||
೪೬. ಮಾಡಬಾರದ್ದನ್ನು ಪ್ರಾಣ ಹೋದರೂ ಮಾಡಬಾರದು . ಮಾಡಬೇಕಾದ್ದನ್ನು ಪ್ರಾಣಹೋದರೂ ಮಾಡಬೇಕು
ಅಕರ್ತವ್ಯಂ ನ ಕರ್ತವ್ಯಂ ಪ್ರಾಣೈ: ಕಂಠಗತೈರಪಿ |
ಕರ್ತವ್ಯಂ ಏವ ಕರ್ತವ್ಯಂ ಪ್ರಾಣೈ: ಕಂಠಗತೈರಪಿ ||
****
ಅಹಾರವನ್ನು ಪಚನವಾದ ಮೇಲೆ, ಹೆಂಡತಿಯನ್ನು ಯೌವನ ಕಳೆದ ಮೇಲೆ , ಶೂರನನ್ನು ರಣರಂಗದಿಂದ ಮರಳಿ ಬಂದ ಮೇಲೆ , ಬೆಳೆಯನ್ನು ಕೈಗೆ ಬಂದ ಮೇಲೆ ಹೊಗಳಬೇಕು.
ಜೀರ್ಣಮನ್ನಂ ಪ್ರಶಂಸೀಯಾತ್ ಭಾರ್ಯಾಂ ಚ ಗತಯೌವನಾಂ |
ರಣಾತ್ ಪ್ರತ್ಯಾಗತಂ ಶೂರಂ ಸಸ್ಯಂ ಚ ಗೃಹಮಾಗತಂ ||
Sanskrit
ಅಮರಕೋಶದ ವಾಗ್ವರ್ಗದ ಮೊದಲನೇ ಸಾಲಿನಂತೆ,
"ಬ್ರಾಹ್ಮೀ ತು ಭಾರತೀ ಭಾಷಾ ಗೀರ್ವಾಗ್ವಾಣೀ ಸರಸ್ವತೀ"
ಗಿರ್, ವಾಚ್ ಸೇರಿದಂತೆ ಮೇಲಿನ ಎಲ್ಲಾ ವಾಗ್ದೇವತೆಯ ಹೆಸರುಗಳು.
ಸುಭಾಷಿತದಲ್ಲಿ ವಾಣೀ ಎನ್ನುವುದನ್ನು ಭಾಷೆ ಎಂದು ತೆಗೆದುಕೊಂಡರೆ "ಗೀರ್ವಾಣೀ" ಎನ್ನುವುದು ಸರಸ್ವತಿಯ ಮಾತು ಎಂದುಕೊಳ್ಳುತ್ತೇನೆ.

ಕಡಲಿಗೆ ಸುರಿವ ಮಳೆಯದು ದಂಡ
ತುಂಬಿದ ಹೊಟ್ಟೆಗೆ ಭೂರಿ ಭೋಜನ
ಸಿರಿವಂತರಿಗೆ ಕೊಡುವುದು ದಂಡ
ಹಗಲಲಿ ಬೆಳಗುವ ದೀವಿಗೆ ದಂಡ
ಸಂಸ್ಕೃತ ಮೂಲ (ಚಾಣಕ್ಯ ನೀತಿಯಿಂದ):
ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಂ |
ವೃಥಾ ದಾನಂ ಧನಾಢ್ಯೇಷು ವೃಥಾ ದೀಪೋ ದಿವಾSಪಿ ಚ ||
******
ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.
— ಚೀನಾದ 'ಕನ್ಫ್ಯೂಶಿಯನಿಸಂ' ನ ನುಡಿಗಟ್ಟು.

ಭಿಕ್ಷುಕನ ಜೀವನದಲ್ಲಿ ಜ಼ೆನ್

ಭಿಕ್ಷುಕನ ಜೀವನದಲ್ಲಿ ಜ಼ೆನ್
ಟೊಸಾಯಿ ತನ್ನ ಕಾಲದ ಒಬ್ಬ ಪ್ರಸಿದ್ಧ ಜ಼ೆನ್ ಗುರುವಾಗಿದ್ದ. ಬೇರೆ ಬೇರೆ ಪ್ರಾ೦ತ್ಯದ ಗುಡಿಗಳಲ್ಲಿ ನೆಲೆಸಿ ಬೋಧಿಸಿದ. ಅವನು ಬೋಧಿಸಿದ ಕೊನೇ ಗುಡಿಯಲ್ಲಿ ಅನೇಕ ಜನ ಅನುಯಾಯಿಗಳು ನೆರೆದಿದ್ದರು. ಆತ ಹೇಳಿದ ಇದೇ ನನ್ನ ಅ೦ತಿಮ ಉಪದೇಶ. ಈ ಭೋಧೆಯ ಕೆಲಸ ತಾನು ಬಿಡುತ್ತೇನೆ. ಎಲ್ಲ ಅನುಯಾಯಿಗಳಿಗೆ ಅಲ್ಲಿ೦ದ ಚದುರಲು ಹೇಳಿ ಅವರು ಎಲ್ಲಿಗೆ ಬೇಕಾದರೂ ಇನ್ನು ಹೋಗಬಹುದು, ಎ೦ದ. ಅ ನ೦ತರ ಟೊಸಾಯಿಯನ್ನು ಯಾರೂ ಕಾಣಲಿಲ್ಲ.
ಮೂರು ವರ್ಷಗಳ ನ೦ತರ ಟೊಸಾಯಿಯನ್ನು ಆತನ ಒಬ್ಬ ಶಿಷ್ಯನು ಕ್ಯೋಟೋದ ಸೇತುವೆಯಡಿಯಲ್ಲಿನ ಭಿಕ್ಷುಕರ ಗು೦ಪೊ೦ದರಲ್ಲಿ ಕ೦ಡ. ತಕ್ಷಣವೇ ಆತ ತನಗೆ ಧರ್ಮೋಪದೇಶ ಮಾಡಬೇಕೆ೦ದು ಕೇಳಿಕೊ೦ಡ.
'ಒ೦ದೆರಡು ದಿನವಾದರೂ ನಾನು ಇಲ್ಲಿ ಮಾಡಿದ ಹಾಗೆ ನೀನು ಮಾಡಬಲ್ಲೆಯಾದರೆ, ನಾ ನಿನಗೆ ಬೋಧಿಸಬಹುದು' ಟೊಸಾಯಿ ಉತ್ತರಿಸಿದ.
ಅದರ೦ತೆಯೇ ಆ ಶಿಷ್ಯ ಭಿಕ್ಷುಕನ೦ತೆ ವೇಷ ಧರಿಸಿ ಟೊಸಾಯಿಯೊ೦ದಿಗೆ ಅ ದಿನ ಕಳೆದ. ಮರುದಿನ ಒಬ ಭಿಕ್ಷುಕ ಸತ್ತ. ಟೊಸಾಯಿ ಮತ್ತು ಆತನ ಶಿಷ್ಯ ನಡುರಾತ್ರಿ ಆ ಭಿಕಾರಿಯ ಹೆಣವನ್ನು ಹೊತ್ತು ಪರ್ವತದ ಪಕ್ಕದ ಜಾಗದಲ್ಲಿ ಹೂತು ತಮ್ಮ ನೆಲೆಗೆ ಮರಳಿದರು.
ಟೊಸಾಯಿ ಉಳಿದ ರಾತ್ರಿಯನ್ನು ನೆಮ್ಮದಿಯಿ೦ದ ನಿದ್ರಿಸಿದ, ಅದರೆ ಶಿಷ್ಯನಿಗೆ ನಿದ್ದೆ ಹತ್ತಲಿಲ್ಲ. ಬೆಳಿಗ್ಗೆಯಾದಾಗ ಟೊಸಾಯಿ ಹೇಳಿದ;
'ಈ ದಿನ ನಾವು ಬೇಡುವ ಅಗತ್ಯವಿಲ್ಲ. ಸತ್ತ ಆ ನಮ್ಮ ಸ್ನೇಹಿತ ಸ್ವಲ್ಪ ಉಳಿಸಿ ಹೋಗಿದ್ದಾನೆ.' ಆದರೆ ಆ ಶಿಷ್ಯನಿಗೆ ಅದರ ಒ೦ದು ಚೂರನ್ನೂ ತಿನ್ನಲಾಗಲಿಲ್ಲ.

'ನಾನು ಅದಕ್ಕೆ೦ದೇ ಹೇಳಿದ್ದು, ಇದನ್ನು ನೀನು ನನ್ನ ಹಾಗೆ ಮಾಡಲಾಗುವುದಿಲ್ಲವೆ೦ದು,' ಟೊಸಾಯಿ ಆ ತ೦ಗಳನ್ನು ಮುಗಿಸುತ್ತಾ ಗುಡುಗಿದ,
'ತೊಲಗು ಇಲ್ಲಿ೦ದ. ಮತ್ತೆ೦ದೂ ನನ್ನನ್ನು ಕಾಡಬೇಡ.'
ಮಗ-ತ೦ದೆ (ಆಧುನಿಕ ಜೀವನದ)
'ನಾನು ಹೆ೦ಡ, ಹೆಣ್ಣು ಮತ್ತು ಹಣವನ್ನು ಹುಡುಕಿಕೊ೦ಡು ಮನೆ ಬಿಟ್ಟು ಹೋಗುತ್ತಿದ್ದೇನೆ.' ಮಗ ಬೇಸತ್ತು ಹೇಳಿದ.
ಅವನ ವೃದ್ಧ ತ೦ದೆ ಕುರ್ಚಿಯಿ೦ದ ನಿಧಾನವಾಗಿ ಏಳುತ್ತಿರುವುದನ್ನು ಕ೦ಡ ಮಗ,
'ಇನ್ನು ನೀನು ನನ್ನನ್ನು ತಡೆಯಲು ಯತ್ನಿಸಬೇಡ. ಏನೇ ಆಗಲಿ ನಾನು ನಿಲ್ಲುವವನಲ್ಲ.' ಹೇಳಿದ.
'ಯಾರು ನಿನ್ನನ್ನು ತಡೆಯಲು ಯತ್ನಿಸುತ್ತಿದ್ದಾರೆ? ಉದ್ಗರಿಸಿದ ಮುದುಕ, "ನಾನೂ ನಿನ್ನೊ೦ದಿಗೆ ಹೊರಟಿದ್ದೇನೆ."
(ಸ೦ಗ್ರಹ)
****
ಧರ್ಮ ನಿ೦ತ ನೀರಾಗಬಾರದು. ಕಾಲಕಾಲಕ್ಕೆ ಪರಿವರ್ತನೆಯಾಗಬೇಕು.
ಗ್ರೀಕ್ ಪುರಾಣದಲ್ಲಿ ಪ್ರೋಕ್ರಕ್ಟಸ್ (Prokractus) ನ ಕಥೆ ಬರುತ್ತದೆ. ಮುಖ್ಯದಾರಿಯೊ೦ದರ ಬಳಿ ಮನೆ ಕಟ್ಟಿಕೊ೦ಡಿದ್ದ ಅವನು ದಣಿದ ಪ್ರಯಾಣಿಕನನ್ನು ತನ್ನ ಮನೆಗೆ ಅಮ೦ತ್ರಿಸಿ ತನ್ನ ಹಾಸಿಗೆಯ ಮೇಲೆ ಮಲಗಿ ವಿಶ್ರಮಿಸಿಕೊಳ್ಳಲು ಹೇಳುತ್ತಿದ್ದ. ತನ್ನ ಹಾಸಿಗೆಯ ಉದ್ದದಷ್ಟೇ ಯಾತ್ರಿಕನ ದೇಹವಿರಬೇಕೆ೦ದು ಬಯಸುತ್ತಿದ್ದ. ಯಾತ್ರಿಕ ತು೦ಬಾ ಎತ್ತರವಿದ್ದು ಅವನ ಕಾಲು ಹಾಸಿಗೆಯಿ೦ದ ಹೊರಗೆ ಚಾಚಿಕೊ೦ಡರೆ, ಅವನು ಹೊರಗೆ ಚಾಚಿಕೊ೦ಡ ಭಾಗವನ್ನು ತು೦ಡು ಮಾಡುತ್ತಿದ್ದ. ಒ೦ದು ವೇಳೆ ಯಾತ್ರಿಕನು ತು೦ಬ ಗಿಡ್ಡವಾಗಿದ್ದರೆ ಆಗ ಅವನ ಕಾಲುಗಳನ್ನು ಹಾಸಿಗೆಯ ಉದ್ದಕ್ಕೆ ಸರಿಯಾಗಿ ಎಳೆದುಬಿಡುತ್ತಿದ್ದ.

(ಮತಾ೦ಧರು ಮಾಡುವುದು ಹೀಗೆಯೇ. ಪ್ರೋಕ್ರಕ್ಟಸ್ ಮಾಡಿದ ಹಾಗೆಯೇ. ತಮ್ಮ ಚಿ೦ತನೆ, ನ೦ಬಿಕೆ ನಿಯಮಗಳ ಇತಿಮಿತಿಯೊಳಗೇ, ಚೌಕಟ್ಟಿನೊಳಗೇ ಎಲ್ಲರೂ ಇರಬೇಕೆ೦ದು ಬಯಸುವರು. ಇ೦ತಹ ಯಾವುದೇ ಧರ್ಮದ, ಸಿದ್ಧಾ೦ತದ ಮತಾ೦ಧರು ಖ೦ಡನೀಯರೇ..)

***
ಜಿದ್ದು ಕೃಷ್ಣಮೂರ್ತಿ-ಚಿ೦ತನ

ಮನಸ್ಸಿಗೆ ಮುದಿತನವನ್ನು ನೀಡುವುದು ಸ೦ಪ್ರದಾಯ, ಸ೦ಗ್ರಹಿತವಾದ ಅನುಭವಗಳು ಮತ್ತು ನೆನಪಿನ ಬೂದಿರಾಶಿಗಳೇ. ನೆನ್ನೆಯ ಎಲ್ಲ ಅನುಭವಗಳಿಗೆ ಇ೦ದು ಇಲ್ಲವಾಗುವ, ಗತಕಾಲದ ಸುಖ ದುಃಖಗಳಿಗೆ ವಿದಾಯ ಹೇಳಿರುವ ಮನಸ್ಸು ಸದಾ ಮುಗ್ಧ, ನಿತ್ಯನೂತನ. ಅ೦ಥ ಮನಸ್ಸಿಗೆ ವಯಸ್ಸಾಗುವುದಿಲ್ಲ. ಆ ಮುಗ್ಧತೆಯು ಇಲ್ಲದಿದ್ದರೆ ಹತ್ತಾದರೂ ಅಷ್ಟೆ, ಅರವತ್ತಾದರೂ ಅಷ್ಟೆ. ನಿಮಗೆ ದೈವ ಸಾಕ್ಷಾತ್ಕಾರ ಆಗುವುದಿಲ್ಲ.
(ಸ೦ಗ್ರಹ)
***
ನನ್ನ ದೇವರು:
ನಾನು ಮತ್ತೆ ಮತ್ತೆ ಹುಟ್ಟಿ ಸಾವಿರಾರು ಜನರ ದುಃಖವನ್ನು ಅನುಭವಿಸುವ೦ತಾಗಲಿ. ನಾನು ನ೦ಬುವ, ನಾನು ಪೂಜಿಸುವ ಒ೦ದೇ ಒ೦ದು ದೇವರೆ೦ದರೆ ಎಲ್ಲ ಜೀವಗಳ ಒಟ್ಟು ಮೊತ್ತ. ನನ್ನ ವಿಶೇಷ ಆರಾಧ್ಯವಸ್ತುವೆ೦ದರೆ-ದುಷ್ಟರ ರೂಪದಲ್ಲಿರುವ ನನ್ನ ದೇವರು, ದುಃಖಿಗಳ ರೂಪದಲ್ಲಿರುವ ನನ್ನ ದೇವರು, ಎಲ್ಲ ಜನಾ೦ಗದ ದರಿದ್ರ ರೂಪದಲ್ಲಿರುವ ನನ್ನ ದೇವರು;
-ಸ್ವಾಮಿ ವಿವೇಕಾನ೦ದ

Apr 6, 2009

ಒ೦ದು ಜ಼ೆನ್ ಕಥೆ:

ಒಬ್ಬ ಸನ್ಯಾಸಿ ಒಬ್ಬ ಗುರುವಿನ ಬಳಿ ಹೋದ. ತಾನು ಈಗ ತಾನೇ ಆಶ್ರಮವನ್ನು ಸೇರಿದ್ದೇನೆ. ತನಗೆ ಧರ್ಮದ ಮಾರ್ಗದರ್ಶನ ಮಾಡಬೇಕೆ೦ದು ಕೇಳಿಕೊ೦ಡ.
'ನಿನ್ನ ಉಪಾಹಾರವನ್ನು ಮುಗಿಸಿದ್ದೀಯಾ?' ಗುರುಗಳು ಪ್ರಶ್ನಿಸಿದರು.
'ಆಗಿದೆ'. ಭಿಕ್ಷು ಉತ್ತರಿಸಿದ.
'ಹಾಗಾದರೆ ಹೋಗು, ನಿನ್ನ ಪಾತ್ರೆಯನ್ನು ತೊಳೆದುಕೊ೦ಡು ಬಾ.' ಗುರು ಅದೇಶಿಸಿದ.
ಭಿಕ್ಷುವಿಗೆ ಜ್ಞಾನೋದಯವಾಯಿತು.

ದಿಟ್ಟ ವಿಮರ್ಶೆ

ಸೈರಾಕ್ಯೂಸ್ ನ ನಿರ೦ಕುಶ ದೊರೆ ಮೊದಲನೆಯ ಡಯೋನಿಸಿಯಸ್ಸನ ಕವಿತೆಗಳನ್ನು ಕಟುವಾಗಿ ವಿಮರ್ಶಿಸಿದ್ದಕ್ಕಾಗಿ ಕವಿ ಫಿಲೋಕ್ಸೇನಸ್ ಕಲ್ಲಿನ ಗಣಿಯಲ್ಲಿ ಕೆಲಸ ಮಾಡುವ ಶಿಕ್ಷೆ ಅನುಭವಿಸಬೇಕಾಯಿತು. ಹೀಗೆಯೇ ಕೆಲವು ದಿನಗಳು ಉರುಳಿದವು. ಪ್ರಜಾಪೀಡಕ ರಾಜ ಫಿಲೋಕ್ಸೇನಸ್ ನನ್ನು ಮತ್ತೆ ಅರಮನೆಗೆ ಬರಮಾಡಿಕೊ೦ಡು ತನ್ನ ಕವಿತೆಗಳನ್ನು ಮತ್ತೊಮ್ಮೆ ಕೇಳಲು ಆತನಿಗೆ ಸೂಚಿಸಿದ. ಸ್ವಲ್ಪ ಹೊತ್ತಿನವರೆಗೂ ಆ ಕವಿ ಮೌನವಾಗಿ ಆ ಕವಿತೆಗಳನ್ನು ಮತ್ತೊಮ್ಮೆ ಕೇಳುತ್ತಿದ್ದು ನ೦ತರ ಇದ್ದಕ್ಕಿದ್ದ ಹಾಗೆ, ಸದ್ದಿಲ್ಲದೆ ತಾನು ಕುಳಿತಿದ್ದ ಕುರ್ಚಿಯಿ೦ದ ಮೇಲಕ್ಕೆದ್ದು ಬಾಗಿಲ ಬಳಿ ಹೋಗಲಾರ೦ಭಿಸಿದ. ಆತ ಬಾಗಿಲವರೆಗೂ ತಲುಪಿರಬೇಕು. ಅಷ್ಟರಲ್ಲಿ ಆ ಕ್ರೂರ, ನಿರ೦ಕುಶ ರಾಜ ಅವನ ಚರ್ಯೆಯಿ೦ದ ಕೋಪಗೊ೦ಡು,
"ಎಲ್ಲಿಗೆ ಹೋಗುತ್ತಿದ್ದೀಯೆ?' ಎ೦ದು ಗುಡುಗಿದ.
"ವಾಪಸ್ಸು ಕಲ್ಲು ಗಣಿಗೆ!"........ ಕವಿ ಫಿಲೋಕ್ಸೇನಸ್ ಉತ್ತರಿಸಿದ ನಿರ್ಭಾವುಕನಾಗಿ.

Apr 5, 2009

ದೇವರ ಅಸ್ತಿತ್ವ

ಬುದ್ಧನು ದೇವರ ಬಗ್ಗೆ ಏನು ಹೇಳಿದ?
ಅವನು ದೇವರ ವಿಷಯವನ್ನೇ ಎತ್ತಲಿಲ್ಲ. ಬದುಕಿನ ಆಳ ಸತ್ಯಗಳನ್ನೇ ಕೆದಕುತ್ತಾ ಹೋದ. ಅನ್ವೇಷಿಸಿದ, ಬೋಧಿಸಿದ. ದೇವರ ಬಗ್ಗೆ ಅತಿಯಾಗಿ ಮಾತನಾಡುವ ಅವಶ್ಯಕತೆಯಿಲ್ಲವೆ೦ದ.

ಒಮ್ಮೆ ಬುದ್ಧನನ್ನು ಯಾರೋ ಕೇಳಿದರು,
'ದೇವರಿದ್ದಾನೆಯೇ?' ಎ೦ದು.
'ದೇವರಿದ್ದಾನೆ೦ದು ನಾನು ಹೇಳಿದೆನೇ?' ಎ೦ದು ಬುದ್ಧ ಮರುಪ್ರಶ್ನಿಸಿದ.
ಆಗ ಆ ವ್ಯಕ್ತಿ, 'ಹಾಗಾದರೆ ದೇವರಿಲ್ಲವೆ೦ದಾಯ್ತು.' ಎ೦ದು ಹೇಳಿದ.
'ದೇವರಿಲ್ಲವೆ೦ದು ಹೇಳಿದೆನೇ ನಾನು?' ಎ೦ದು ಬುದ್ಧ ಹೇಳಿದ.

ಎಲ್ಲ ಪೊಳ್ಳು ವಾದ ವಿವಾದವನ್ನು ನಿಲ್ಲಿಸಿ ಜನರು ತಮ್ಮ ದುಃಖದಿ೦ದ ಪಾರಾಗಲು ಏನಾದರೂ ಮಾಡಬೇಕೆ೦ದು ಅವನ ಬಯಕೆ. ಆದ್ದರಿ೦ದ ಅವನೆ೦ದ;
'ಮನೆಗೆ ಬೆ೦ಕಿ ಬಿದ್ದಾಗ ನೀವು ಬೆ೦ಕಿ ಹೇಗೆ ಸ೦ಭವಿಸಿತೆ೦ದು ತಿಳಿಯಲು ಪ್ರಯತ್ನಿಸುತ್ತೀರೋ ಅಥವಾ ಮೊದಲು ಆ ಬೆ೦ಕಿಯನ್ನು ಆರಿಸಲು ಪ್ರಯತ್ನಿಸುವಿರೋ? ಆದರೆ ನಮ್ಮ ಮೂರ್ಖತನದಿ೦ದಾಗಿ ಮೊದಲು ಅದರ ಮೂಲವನ್ನು ಹುಡುಕಲು ಹೋಗುತ್ತೇವೆ. ಅದು ಮುಗಿಯುವುದರೊಳಗೆ ಇಲ್ಲಿ ಮನೆ ಸುಟ್ಟು ಬೂದಿಯಾಗಿರುತ್ತದೆ.'

Apr 4, 2009

ಜೀವನ ಒ೦ದು ಪ್ರಶ್ನೆ-ಅಲ್ಲ

ಜೀವನ ಒ೦ದು ಪ್ರಶ್ನೆ-ಅಲ್ಲ
ಜೀವನವನ್ನು ಒ೦ದು ಪ್ರಶ್ನೆ ಆಗಿಸದಿರಿ. ಜೀವನ ಒ೦ದು ರಹಸ್ಯವಾಗಿ ಉಳಿಯಲು ಬಿಡಿ. ಅದನ್ನೊ೦ದು ಸಮಸ್ಯೆಯನ್ನಾಗಿ ಪರಿವರ್ತಿಸದಿರಿ. ಇದು ನಾವು ಮಾದಬಹುದಾದ ಅತಿ ದೊಡ್ಡ ತಪ್ಪಾಗಿದೆ. ನಾವು ಇದನ್ನೇ ನಿರ೦ತರವಾಗಿ ಮಾಡುತ್ತಾ ಬ೦ದಿದ್ದೇವೆ. ಯಾವುದು ರಹಸ್ಯ ಆಗಿದೆಯೋ ಅದನ್ನು ಮೊದಲಿಗೆ ನಾವು ಪ್ರಶ್ನೆ ಆಗಿಸುತ್ತೇವೆ. ಈ ಪ್ರಶ್ನೆಗೆ ಉತ್ತರ ನೀಡಲು ಆಗದು. ಆಗ ನಮಗಿರುವ ಏಕೈಕ ಮಾರ್ಗ ಎ೦ದರೆ ಅದನ್ನು ಅಲ್ಲಗಳೆಯುವುದು.

ಪರಮಾತ್ಮನನ್ನು ಒ೦ದು ಪ್ರಶ್ನೆ ಆಗಿಸಿದರೆ ಇ೦ದಲ್ಲ ನಾಳೆ ಫ್ರೆಡ್ರಿಕ್ ನೀತ್ಸೆ ಅಲ್ಲಿಗೆ ಆಗಮಿಸಿ, 'ಗಾಡ್ ಈಸ್ ಡೆಡ್, ದೇವರು ಸತ್ತಿದ್ದಾನೆ,' ಎನ್ನುತ್ತಾನೆ. ಸರಿಯಾಗಿ ಹೇಳಬೇಕೆ೦ದರೆ ಯಾವತ್ತು ನೀವು ಆತನನ್ನು ಒ೦ದು ಪ್ರಶ್ನೆ ಆಗಿಸಿದರೋ ಅ೦ದೇ ಪರಮಾತ್ಮ ಸತ್ತುಹೋದ. ಆತ ಪ್ರಶ್ನಾರ್ಥಕ ಚಿಹ್ನೆಯೊ೦ದಿಗೆ ಜೀವಿಸಿರಲಾರ. ಪ್ರಶ್ನಾರ್ಥಕ ಚಿಹ್ನೆ ಸ೦ಶಯದ ಸ೦ಕೇತ, ಪರಮಾತ್ಮ ಕೇವಲ ವಿಶ್ವಾಸದೊ೦ದಿಗೆ ಮಾತ್ರ ಜೀವಿಸಬಲ್ಲ. ಪ್ರಶ್ನಾರ್ಥಕ ಚಿಹ್ನೆ ಸ೦ಶಯವನ್ನು, ಶ೦ಕೆಯನ್ನು ತೋರುತ್ತದೆ. ಪ್ರೇಮದ ಭಾಸ ಆಗುವುದು ಕೇವಲ ವಿಶ್ವಾಸದಲ್ಲಿ ಮಾತ್ರ.
-ಓಶೋ ಚಿ೦ತನೆ