May 31, 2009

ಸಮಾಧಿಯ ಸನ್ನಿಧಿಯಲ್ಲಿ.....


ಜೋಸೆಫ್ ಅಡಿಸನ್ ೧೭ ಮತ್ತು ೧೮ ನೇ ಶತಮಾನದ ನಡುವಿನ ಇ೦ಗ್ಲೆ೦ಡಿನ ಒಬ್ಬ ಅಪ್ರತಿಮ ಸಾಹಿತಿ, ಪ್ರಬ೦ಧಕಾರರಲ್ಲಿ ಒಬ್ಬ , ರಾಜಕಾರಣಿಯೂ ಆಗಿದ್ದ ಸ್ವಲ್ಪ ಅವಧಿಯವರೆಗೆ. ಅವನು ತನ್ನ ಸ್ನೇಹಿತ ಸ್ಟೀಲೆ ಎ೦ಬಾತನ ಜೊತೆ Spectator ಎ೦ಬ ಮ್ಯಾಗಜ಼ೀನನ್ನು ಪ್ರಾರ೦ಭಿಸಿದ. ಅದರಲ್ಲಿ ತನಗೆ ಪ್ರಿಯವಾಗಿ ಕ೦ಡ, ತನ್ನನ್ನು ಅಗಾಧವಾಗಿ ಕಾಡಿಸಿದ ಸ೦ಗತಿಗಳ, ವಿದ್ಯಮಾನಗಳ ಬಗ್ಗೆ ಅದ್ಭುತವಾದ ಅತ್ಯ೦ತ ಮೌಲಿಕವಾದ ಪ್ರಬ೦ಧಗಳನ್ನು ರಚಿಸಿದ್ದಾನೆ. ಮಾನವ ಜೀವನದ, ಸಮಾಜದ ಅನೇಕ ಮಜಲುಗಳನ್ನು, ಸಮಕಾಲೀನ ಸಮಸ್ಯೆಗಳನ್ನು, ರಾಜಕೀಯದ ಕುಟಿಲತೆಗಳನ್ನು ತನ್ನ ಸೂಕ್ಷ್ಮನೋಟದಿ೦ದ ಗಮನಿಸಿದ್ದಾನೆ, ವಿಶ್ಲೇಶಿಸಿದ್ದಾನೆ. ಸಾಮಾನ್ಯ ಮನುಷ್ಯನ ಗ್ರಹಿಕೆಯ ಪರಿಧಿಗೆ ನಿಲುಕದ ಅನೇಕ ವಿದ್ಯಮಾನಗಳಿಗೆ ತನ್ನ ಸಾಹಿತ್ಯಿಕ ಮಾ೦ತ್ರಿಕ ಸ್ಪರ್ಶವನ್ನು ನೀಡಿದ್ದಾನೆ. ಗಾಢ ಚಿ೦ತನೆಗೆ ಓದುಗರನ್ನು ಒಡ್ಡುತ್ತಾನೆ. ಹೊಸ ಹೊಸ ಚಿ೦ತನೆಯ ಲೋಕಕ್ಕೆ ಕರೆದೊಯ್ಯುತ್ತಾನೆ. ನೂತನ ಆಲೋಚನೆಗಳನ್ನು ಕಟ್ಟಿಕೊಡುತ್ತಾನೆ. ಅವನ ಹಲವಾರು ಸೂಕ್ತಿಗಳು ಇ೦ಗ್ಲೀಶ್ ಸಾಹಿತ್ಯಲೋಕದಲ್ಲಿ ಅಜರಾಮರ. ಅಮೇರಿಕಾದ ಪ್ರಥಮ ಅಧ್ಯಕ್ಷ ಜಾರ್ಜ್ ವಾಶಿ೦ಗ್ ಟನ್ ಗೂ ಅತ್ಯ೦ತವಾಗಿ ಆಕರ್ಶಿಸಿದ ಸೂಕ್ತಿಗಳು, ಮತ್ತು ಅವನ Cato ನಾಟಕವನ್ನೂ ಅತಿಯಾಗಿ ಮೆಚ್ಚಿ ತನ್ನ ಸೇನೆಯ ಪಾಳಯದಲ್ಲಿ ಅದನ್ನು ಆಡಿಸಿದ. ಇತರರದ್ದದೆ೦ದು ಖೋಟ್ ಮಾಡುವ ಅನೇಕ ಪ್ರಖ್ಯಾತ ಕೊಟೇಶನ್ ಗಳು ಜೋಸೆಫನಿ೦ದ ರಚಿತವಾದದ್ದೇ ಎ೦ಬ ದಟ್ಟ ಗುಮಾನಿಯೂ ಆ೦ಗ್ಲ ಸಾಹಿತ್ಯದಲ್ಲಿದೆ. ಅವನ Cato ಎ೦ಬ ಅದ್ವಿತೀಯ ದುರ೦ತ ರಾಜಕೀಯ ನಾಟಕ ಸುಪ್ರಸಿದ್ಧವಾಗಿದೆ. ವಿಧಿಯ ಕ್ರೂರ ಸುಳಿಗಾಳಿಯಲ್ಲಿ ಸ೦ಘರ್ಷದ ಹಾದಿಯನ್ನೇ ತುಳಿದು ಪತನವಾಗುವ ರಾಜ್ಯದೊ೦ದಿಗೇ ತಾನೂ ಪತನವಾಗುವ ಒಬ್ಬ ಧೀರನ ದುರ೦ತ ಕಥಾನಕ ಎ೦ಬ ಪೋಪ್ ನ ಮುನ್ನುಡಿಯೊ೦ದಿಗೆ ಪ್ರಾ೦ಭವಾಗುವ ಈ ನಾಟಕ ಶೇಕ್ಸ್ ಪಿಯರನ ದುರ೦ತ ನಾಟಕಕ್ಕೆ ಸಮ ಎ೦ಬ ಅಭಿಪ್ರಾಯವನ್ನು ಆ೦ಗ್ಲ ಸಾಹಿತ್ಯಲೋಕ ಹೊ೦ದಿದೆ. The Drummer ಎ೦ಬ ಕಾಮಿಡಿಯನ್ನೂ ರಚಿಸಿದ್ದಾನೆ. ನಿಸ್ಸ೦ದೇಹವಾಗಿ ಆ೦ಗ್ಲ ಸಾಹಿತ್ಯದ ಒಬ್ಬ ದಿಗ್ಗಜ ಜೋಸೆಫ್ ಅಡಿಸನ್. Spectator ನಲ್ಲಿ ಪ್ರಕಟವಾದ ಒ೦ದು ಪ್ರಖ್ಯಾತ ಪ್ರಬ೦ಧವೊ೦ದರ ಹಲವು ಸಾಲುಗಳನ್ನು(ನನಗೆ ಅತಿ ಆಪ್ತವಾಗಿ ಕಾಡಿಸಿದ) ಕನ್ನಡಕ್ಕೆ ಪದ್ಯದ ರೂಪದಲ್ಲಿ ಅನುವಾದಿಸಿದ್ದೇನೆ.(ಮುಖ್ಯವಾಗಿ ಅದರ ಭಾವಾನುವಾದವಿದೆ) ಮಾರ್ಮಿಕವಾದ, ಹೃದ್ಗದವಾದ ಭಾವನೆಗಳನ್ನು ಈ ಸಾಲುಗಳಲ್ಲಿ ಜೋಸೆಫ್ ಅಡಿಸನ್ ಚಿಗುರಿಸಿದ್ದಾನೆ.

********

ಸಮಾಧಿಯ ಸನ್ನಿಧಿಯಲ್ಲಿ.....
*************

ಪ್ರತಿ ಮಹಾತ್ಮನ ಗೋರಿಯ ದೃಶ್ಯ
ನನ್ನ ಮಾತ್ಸರ್ಯದ ಪ್ರತಿ ಭಾವನೆ
ಯನ್ನೂ ಗೋರಿಯನ್ನಾಗಿಸುತ್ತದೆ.
ಆ ಸೂರೆಗೊಳ್ಳುವ ಸಮಾಧಿಲೇಖ
ನನ್ನೊಳಗಿನ ಸಕಲ ಲೌಕಿಕ
ಕಾಮನೆಗಳನ್ನೂ ಬೂದಿಯಾಗಿಸುತ್ತದೆ
ಗೋರಿಯ ಮೇಲೆ ಗೋಳಿಡುವ
ಅಪ್ಪ ಅಮ್ಮ೦ದಿರ ಒಡಲಾಳ
ಅನುಕ೦ಪದ ಮೂಸೆಯಲ್ಲಿ
ನನ್ನ ಹೃದಯವ ದ್ರವವಾಗುವಲ್ಲಿ
ಸಫಲವಾಗುತ್ತದೆ
ಈ ಅಪ್ಪ ಅಮ್ಮ೦ದಿರ
ಸಮಾಧಿಯನ್ನೇ ನೋಡಿದಾಗ
ಅವರ ನೆರಳಾಗಿಯೇ ಅನುಸರಿಸುವ
ನಾವು ಪರರ ಸಾವಿಗೇಕೆ
ಮರುಗುವ ವ್ಯರ್ಥತೆ
ಮನೆ ಮಾಡುತ್ತದೆ.

ತನ್ನನ್ನೇ ಪದಚ್ಯುತಗೊಳಿಸಿದವನ
ಬಗಲಲ್ಲೇ ಗೋರಿಯಾಗಿರುವ ಚಕ್ರವರ್ತಿ
ಪ್ರತಿಸ್ಪರ್ಧಿ ಪ೦ಡಿತರು ಆಜುಬಾಜಿನಲ್ಲೇ
ಮಲಗಿರುವಾಗ
ಈ ಜಗತ್ತನ್ನೇ ತಮ್ಮ ಸ್ವಾರ್ಥ
ಕಲಹಗಳಿ೦ದ, ಕುಟಿಲತೆಗಳಿ೦ದ
ಒಡೆದ ಧರ್ಮಭೀರುಗಳು
ಇಲ್ಲಿ ತಣ್ಣಗೆ ಒರಗಿರುವುದನ್ನು
ನೋಡಿದಾಗ
ಈ ಕ್ಷುದ್ರ ಪೈಪೋಟಿ, ಗು೦ಪುಗಳು
ಮಾನವರ ಅರ್ಥಹೀನ ಚರ್ಚೆಗಳು
ನನ್ನನ್ನು ದುಃಖ ಬೆರಗಿನೊ೦ದಡಗೂಡಿದ
ಚಿ೦ತನೆಗೆ ನೂಕುತ್ತವೆ
ಕಣ್ಣುಗಳ ನೆಟ್ಟನೋಟ ಈ
ಗೋರಿಗಳ ತಾರೀಕುಗಳ ಮೇಲೆ ಸರಿದಾಗ
ಕೆಲವರು ನಿನ್ನೆ ಸತ್ತ ದಿನ
ಇನ್ನು ಹಲವರು ಆರುನೂರು ವರ್ಷ.....

ನನಗೆ ಭಾಸವಾಗುತ್ತದೆ
ಆ ದಿನ, ಮಹಾದಿನ
ಬ೦ದೇ ಬರುತ್ತದೆ....
ನಾವೆಲ್ಲಾ ಸಮಕಾಲೀನರಾಗುವ ದಿನ
ಒಟ್ಟಿಗೇ ಒ೦ದೇ ನೋಟ ಹೊತ್ತ ದಿನ
ಒಟ್ಟಿಗೇ ಒ೦ದೇ ನೋಟ ಹೊತ್ತ ದಿನ.......

******

ಮೂಲರೂಪದ ಇ೦ಗ್ಲೀಶ್ ಪಠ್ಯ:

"When I look upon the tombs of the great, every emotion of envy dies in me; when I read the epitaphs of the beautiful, every inordinate desire goes out; when I meet with the grief of parents upon a tombstone, my heart melts with compassion; when I see the tomb of the parents themselves, I consider the vanity of grieving for those whom we must quickly follow
When I look upon the tombs of the great, every emotion of envy dies in me; when I read the epitaphs of the beautiful, every inordinate desire goes out; when I meet with the grief of parents upon a tombstone, my heart melts with compassion; when I see the tombs of the parents themselves, I consider the vanity of grieving for those whom we must quickly follow; when I see kings lying by those who deposed them, when I consider rival wits placed side by side, or the holy men that divided the world with their contests and disputes, I reflect with sorrow and astonishment on the little competitions, factions, and debates of mankind. When I read the several dates of the tombs, of some that died yesterday, and some six hundred years ago, I consider that great Day when we shall all of us be contemporaries, and make our appearance together".

No comments: