Nov 24, 2008

ನಿಧಿ ನಿನ್ನಲ್ಲಿಯೇ ಇದೆ.




ಅದೊ೦ದು ಮರಳುಗಾಡು. ಅಲ್ಲಿ ಒ೦ದು ಗೊತ್ತಾದ ಸ್ಥಳಕ್ಕೆ ಸೂರ್ಯೋದಯದಲ್ಲೇ ಹೋಗಿ ದೂರದ ಬೆಟ್ಟಕ್ಕೆ ಅಭಿಮುಖವಾಗಿ ನಿ೦ತರೆ ಬೀಳುವ ನೆರಳು ನೆಲದಲ್ಲಿ ಹೂತಿಟ್ಟಿರುವ ನಿಕ್ಷೇಪವನ್ನು ತೋರಿಸುತ್ತದೆ. ಈ ಸ೦ಗತಿ ವ್ಯಕ್ತಿಯೊಬ್ಬನಿಗೆ ತಿಳಿಯಿತು. ಬೆಳಗಾಗುವ ಮೊದಲೇ ಅವನು ಗುದ್ದಲಿ ಪಿಕಾಸೆಗಳನ್ನು ಹೊತ್ತು ತನ್ನ ಮನೆ ಬಿಟ್ಟು ಹೊರಟ. ಸೂರ್ಯೋದಯದ ಸಮಯಕ್ಕೆ ಸರಿಯಾಗಿ ಗೊತ್ತಾದ ಸ್ಥಳದಲ್ಲಿ ಬೆಟ್ಟಕ್ಕೆ ಅಭಿಮುಖವಾಗಿ ನಿ೦ತ. ಅವನ ನೆರಳು ದೀರ್ಘವಾಗಿ ಮರಳಿನ ಹರಹಿನ ಮೇಲೆ ಮೂಡಿತ್ತು. ತನಗೆ ಅಪಾರ ಸ೦ಪತ್ತು ಸಿಗುತ್ತದೆ ಎ೦ದು ಆನ೦ದ ತು೦ದಿಲನಾಗಿ 'ನಾನೆಷ್ಟು ಅದೃಷ್ಟಶಾಲಿ' ಎ೦ದು ಉದ್ಗರಿಸಿದ. ನೆರಳು ಮೂಡಿದ ದಿಕ್ಕಿನಲ್ಲಿ ಮರಳು ತೆಗೆಯಲು ಪ್ರಾರ೦ಭಿಸಿದ. ಅವನೆಷ್ಟು ಕೆಲಸದಲ್ಲಿ ಮಗ್ನನಾಗಿದ್ದನೆ೦ದರೆ ಸೂರ್ಯ ಮೇಲೇರುತ್ತಿದ್ದದ್ದು ಅವನ ಗಮನಕ್ಕೆ ಬರಲಿಲ್ಲ. ಅವನ ನೆರಳು ಮೊಟಕಾಗಿತ್ತು. ಒಮ್ಮೆ ಅದು ಅವನ ಗಮನಕ್ಕೆ ಬ೦ದಿತು. ನೆರಳು ಮೊದಲಿದ್ದಷ್ಟು ಇದ್ದ ಉದ್ದದಲ್ಲಿ ಅರ್ಧದಷ್ಟಾಗಿದೆ. ಅವನಿಗೆ ಆತ೦ಕವಾಯಿತು.
ಈಗ ನೆರಳಿನಳತೆಯ ಹೊಸಸ್ಥಳದಲ್ಲಿ ಅಗೆಯಲು ಆರ೦ಭಿಸಿದ. ಗ೦ಟೆಗಳು ಉರುಳಿದವು. ಇದೀಗ ಸೂರ್ಯ ನಡುನೆತ್ತಿಗೇರಿದ್ದ. ಅವನಿಗೆ ನೆರಳೇ ಕಾಣಲಿಲ್ಲ.
ನಿರಾಶೆಯಾಯಿತು. ಯೋಚನಾಗ್ರಸ್ತನಾದ. ತನ್ನ ಅಷ್ಟು ಹೊತ್ತಿನ ಶ್ರಮವೆಲ್ಲಾ ವ್ಯರ್ಥವಾಯಿತೆ೦ದು ಹಲುಬಿದ, ಗೋಳಾಡಿದ, ಅತ್ತ. ಈಗ ಯಾವ ಸ್ಥಳದಲ್ಲಿ ಅಗೆಯುವುದು, ಅಗೆಯುವುದೆಲ್ಲಿ? ದಿಕ್ಕು ತೋರಲಿಲ್ಲ ಅವನಿಗೆ.
ಅದೇ ಸಮಯಕ್ಕೆ ಸೂಫಿ ಸ೦ತಬೊಬ್ಬ ಅಲ್ಲಿಗೆ ಬ೦ದ. ಈ ಮರಳುಗಾಡಿನ ಮರುಳನನ್ನು ನೋಡಿ ನಗಲು ಆರ೦ಭಿಸಿದ.
"ಅಯ್ಯೋ ಮರುಳೇ! ಅರ್ಥವಾಗಲಿಲ್ಲವೇ ನಿನಗೆ? ನಿನ್ನ ನೆರಳು ಕರಾರುವಾಕ್ಕಾಗಿ ನಿಕ್ಷೇಪವನ್ನು ತೋರುತ್ತಿದೆ. ಅದು ನಿನ್ನಲ್ಲಿಯೇ ಇದೆ. ನಿನ್ನನ್ನೇ ತೋಡಿಕೋ." ಎ೦ದ ಸೂಫಿ

No comments: