Nov 25, 2008

ಒಗಟುಗಳು

೧. ದಡದಡ ಓಡುತ್ತೆ, ಕುದುರೆಯಲ್ಲ. ಕೂಕೂ ಕೂಗುತ್ತೆ, ಕೋಳಿಯಲ್ಲ. ಹೊಗೆ ಉಗುಳುತ್ತೆ, ಒಲೆಯ ಗೂಡಲ್ಲ. ಏನದು?
೨. ಪೆಟ್ಟಿಗೆ ತೆರೆದರೆ ಕೃಷ್ಣ ಹುಟ್ಟಿದ.
೩. ಹಗಲು ಹಾಳು ತೋಟ, ರಾತ್ರಿ ಹೂದೋಟ. ಹೂವ ನೋಡುವವರುಂಟು, ಮುಡಿವವರಿಲ್ಲ.
೪. ಅಕ್ಕ ಅಕ್ಕ ಬಾವಿ ನೋಡು, ಬಾವಿಯೊಳಗೆ ನೀರು ನೋಡು, ನೀರಿನೊಳಗೆ ಬಳ್ಳಿ ನೋಡು, ಬಳ್ಳಿಗೊಂದು ಹೂವು ನೋಡು.
೫. ಮಾಡಿದ್ದೇ ಮಾಡುತ್ತೆ, ಮಗುವಲ್ಲ. ನಕ್ಕರೆ ನಗುತ್ತೆ, ಕಪಿಯಲ್ಲ.
ಉತ್ತರ:
೧. ರೈಲು ಗಾಡಿ.
೨. ಕಡಲೆಕಾಯಿ.
೩. ಆಕಾಶ ಹಾಗು ನಕ್ಷತ್ರ.
೪. ದೀಪ
೫. ಕನ್ನಡಿಯೊಳಗಿನ ಪ್ರತಿಬಿ೦ಬ.
_________________
೧. ಅಕ್ಕ ಅತ್ತರೆ ತಂಗೀನೂ ಅಳ್ತಾಳೆ.
೨. ಅಗಣಿ ಮರದ ಮೇಲೆ ಕೆಂಚಪ್ಪ ಡಾಕ್ಟ್ರು ಕುಂತವ್ರೆ. ಮುಟ್ಟೋಕೆ ಹೋದವರ ಕೈಗೆಲ್ಲಾ ಸೂಜಿ ಹಾಕ್ತಾರೆ.
೩. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು.
೪. ಅಚ್ಚಯ್ಯನಂಗಡಿ, ಪುಚ್ಚಯ್ಯನಂಗಡಿ, ಎಲ್ಲಿ ನೋಡಿದರೂ ಒಂದೇ ಅಂಗಡಿ.
ಉತ್ತರ:
೧. ಕಣ್ಣುಗಳು.
೨. ಚೇಳು / ಗುಲಾಬಿ ಗಿಡ.
೩. ಕಲ್ಲಂಗಡಿ ಹಣ್ಣು.
೪. ನೇಸರ.
________
೧. ಬಿಳಿ ಲಂಗದ್ ಹುಡ್ಗಿ, ಮೇಲೆ ಥಳುಕು, ಒಳಗೆ ಹುಳುಕು. ಎಳೆದ್ರೆ, ಬಾಯಿ ತುಂಬಾ ಬರ್ತಾಳೆ, ಬಿಟ್ಟ್ರೆ, ದೇಶ ತುಂಬ್ತಾಳೆ.
೨. ಬಡಗಿ ಮಾಡಿದ ಬಂಡಿಯಲ್ಲ, ಮನುಷ್ಯ ಮಾಡಿದ ಯಂತ್ರವಲ್ಲ, ಒಂದು ನಿಮಿಷವೂ ಪುರುಸೊತ್ತಿಲ್ಲ.
೩. ಬರೋದು ಕಂಡವರೆಲ್ಲ ಕೈ ತೋರ್ತಾರೆ.
೪. ಆಕಾಶ್ದಾಗ್ ಅಪ್ಪಣ್ಣ, ಕೆಳಗ್ ಬಿದ್ರೆ ದುಪ್ಪಣ್ಣ, ಹುಲ್ಲಿನ್ ಒಳಗ್ ಅಡ್ಗಣ್ಣ, ಪೇಟೇಲಿ ಮಾರಣ್ಣ.
೫. ಪೆದ್ದು ಮುಂಡೇಗಂಡ, ಅಡ್ಡ ಬಿದ್ದವ್ನೆ.
ಉತ್ತರ:
೧. ಸಿಗರೇಟು.
೨. ಭೂಮಿ.
೩. ಬಸ್ಸು/ಆಟೋ ರಿಕ್ಷಾ.
೪. ಮಾವಿನಹಣ್ಣು.
೫. ಹೊಸಿಲು(ಹೊಸ್ತಿಲು).
____________
೧. ಅಗಿದರೆ ಹಲ್ಲಿಗೆ ಸಿಕ್ಕೊಲ್ಲ. ಹಿಡಿದರೆ ಕೈಗೆ ಸಿಕ್ಕೊಲ್ಲ. ಕಣ್ಣಿಗೆ ಕಾಣೋಲ್ಲ. ಬಿಟ್ಟರೆ ನಿಲ್ಲೊಲ್ಲ. ಏನದು?
೨. ಮನೆ ಮುಂದೆ ಚಪ್ಪರ, ಮೇಲೆ ಮಲ್ಲಿಗೆ ಹೂವು, ಕೆಳಗೂ ಮಲ್ಲಿಗೆ ಹೂವು, ಒಳಗೆಲ್ಲ ತಿರುಳು, ಬಿತ್ತಿದ ಮೇಲೆ ಕೀಳಬೇಕು, ಕುಡುಗೋಲಿನಲ್ಲಿ ಕುಯ್ಯಬೇಕು.
೩. ಮೂರು ಬಗೆಯ ಹಕ್ಕಿಗಳು ಗೂಡೊಳಗೆ ಹೋಗ್ತವೆ. ಬರೋ ಹೊತ್ತಿಗೆ ಒಂದೇ ಬಗೆಯಾಗಿರ್ತವೆ.
೪. ಮೂರು ಕಣ್ಣುಳ್ಳ ವಸ್ತು. ಊರೆಲ್ಲಾ ಸುತ್ತಿ ದೇವರ ಮುಂದೆ ಬಂದು ತಲೆ ಚಚ್ಚಿಕೊಳ್ಳುತ್ತದೆ.
ಉತ್ತರ:
೧. ಗಾಳಿ.
೨. ಪಡವಲಕಾಯಿ.
೩. ಎಲೆ, ಅಡಿಕೆ ಮತ್ತು ಸುಣ್ಣ.
೪. ತೆಂಗಿನಕಾಯಿ.
____________
೧. ಅಂಗಿ ಬಿಚ್ಚಿದ, ಬಾವಿಗೆ ಜಾರಿದ.
೨. ಕೈಗೆ ಹಾಕದ ಬಳೆಯಾವುದು?
೩. ಕಾಲಿಲ್ಲ, ಓಡುತ್ತದೆ. ತೋಳಿಲ್ಲ, ಈಜುತ್ತದೆ.
೪. ಹಾಕಲಾಗದ ಸರ ಯಾವುದು?
೫. ತಿಳಿನೀರಿನ ಸುತ್ತು ಬಿಳಿಕಲ್ಲಿನ ಕೋಟೆ.
ಉತ್ತರ:
೧. ಬಾಳೆಹಣ್ಣು.
೨. ಕೋಡುಬಳೆ.
೩. ಹಾವು.
೪. ಅವಸರ‎.
೫. ತೆಂಗಿನಕಾಯಿ.
__________
೧. ಭಾರದಲ್ಲಿದ್ದರೂ ಹೊರೆಯಲ್ಲಿಲ್ಲ, ರಥದಲ್ಲಿದ್ದರೂ ಪಲ್ಲಕ್ಕಿಯಲ್ಲಿಲ್ಲ, ನಾನ್ಯಾರು?
೨. ಮರದೊಳಗೆ ಮರಹುಟ್ಟಿ ಮರಚಕ್ರ ಕಾಯಾಗಿ ತಿನ್ನಲಾಗದ ಹಣ್ಣು ಬಲು ಸಿಹಿ.
೩. ಅಜ್ಜಿಗೆ ಮೈಯೆಲ್ಲಾ ಕಜ್ಜಿ.
೪. ಹೊರಗೆ ಬೆಳ್ಳಿಯ ಕವಚ, ಒಳಗೆ ಚಿನ್ನದ ಕವಚ.
೫. ಬಾಡಿಗೆಯಿಲ್ಲದ ಮನೆಯಾವುದು?
ಉತ್ತರ:
೧. ಭಾರತ.
೨. ಮಗು.
೩. ದೋಸೆ/ಹಾಗಲಕಾಯಿ/ಹಲಸಿನಹಣ್ಣು.
೪. ಕೋಳಿಮೊಟ್ಟೆ.
೫. ಸೆರೆಮನೆ.
__________
೧. ಗೂಡಿನಲ್ಲಿರುವ ಹಕ್ಕಿ ಊರನ್ನೆಲ್ಲಾ ನೋಡುತ್ತದೆ.
೨. ತಲೆಯುಂಟು, ಕೂದಲಿಲ್ಲ. ಮರವುಂಟು, ಎಲೆಯಿಲ್ಲ. ಮನೆಯುಂಟು, ಕಿಟಕಿಯಿಲ್ಲ. ನಾನ್ಯಾರು?
೩. ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಕರಗುವೆನು. ನಾನ್ಯಾರು?
೪. ನಡೆಯುತ್ತಾನೆ ಜೀವವಿಲ್ಲ.
೫. ಚಿನ್ನದ ಹಕ್ಕಿ ಬಾಲದಲ್ಲಿ ನೀರು ಕುಡಿಯುತ್ತೆ.
ಉತ್ತರ:
೧. ಕಣ್ಣುಗಳು.
೨. ಬೆಂಕಿಪೆಟ್ಟಿಗೆ.
೩. ಉಪ್ಪು.
೪. ಗಡಿಯಾರದ ಮುಳ್ಳುಗಳು.
೫. ಎಣ್ಣೆದೀಪ.
__________
೧. ಕಾಸಿನ ಕುದುರೆಗೆ ಬಾಲದಲ್ಲಿ ಲಗಾಮು.
೨. ಬಣ್ಣ ಉಂಟು ಚಿಟ್ಟೆಯಲ್ಲ, ಬಾಲ ಉಂಟು ಮಂಗನಲ್ಲ, ಪ್ರಕಾಶ ಉಂಟು ನಕ್ಷತ್ರವಲ್ಲ. ನಾನ್ಯಾರು?
೩. ಸಾವಿರ ಗಿಳಿಗಳಿಗೆ ಒಂದು ಕೊಕ್ಕು.
೪. ಆಕಾಶದಲ್ಲಿ ಅಡ್ಡಕತ್ತಿ.
೫. ಆಡಲಾಗದ ನುಡಿಯಾವುದು?
ಉತ್ತರ:
೧. ಸೂಜಿ, ನೂಲು.
೨. ಗೂಡುದೀಪ.
೩. ಬಾಳೆಗೊನೆ.
೪. ಚಂದ್ರ.
೫. ಮುನ್ನುಡಿ.
________
೧. ನೀರು ಕಂಡಲ್ಲಿ ನಿಲ್ಲುವ ಕುದುರೆ, ಹಾದಿ ಕಂಡಲ್ಲಿ ಓಡುವ ಕುದುರೆ.
೨. ಚಿಕ್ಕಮಕ್ಕಳಿಗೆ ಚಿಕ್ಕ ಚಿಕ್ಕ ಟೋಪಿ.
೩. ಕಡಿಯಲಾಗದ ಮರಯಾವುದು?
೪. ಅಕಟಕಟ ಮರಕಟ ಚಾಟಕ ಚೂಟಕ ನಿನ್ನನ್ನು ಕಂಡರೆ ಬಲು ಸೊಗಸು.
೫. ಅಕ್ಕನಮನೆಯಲ್ಲಿ ಹಚ್ಚಿದ ದೀಪ, ತಂಗಿಯ ಮನೆಯಲ್ಲಿ ಉರಿಯುತ್ತದೆ.
೬. ಹಾಲು ಕರಿಯದ ದನ ಯಾವುದು?
ಉತ್ತರ:
೧. ಚಪ್ಪಲಿ.
೨. ಉಗುರು/ಬೆಂಕಿಕಡ್ಡಿಗಳು.
೩. ಅಜರಾಮರ.
೪. ಹುಣಿಸೆಹುಳಿ.
೫. ಕೋಡೊಲೆ.
೬. ಕದನ.

No comments: