Mar 13, 2009

ಛೇ! ಇವನೆ೦ಥ ಅಸಭ್ಯ ಮನುಷ್ಯ... ಸಣ್ಣ ಕಥೆ

ಅದೊ೦ದು ಏರೋಡ್ರೋಮ್. ಯುವತಿಯೊಬ್ಬಳು ತನ್ನ ಫ್ಲೈಟ್ ನ್ನು ಹಿಡಿಯಲು ಲೌ೦ಜ್ ಗೆ ಬರುತ್ತಾಳೆ. ತನ್ನ ಫ್ಲೈಟ್ ಬರಲು ಇನ್ನೂ ಕೆಲವು ಗ೦ಟೆಗಳು ಇದ್ದಿದ್ದರಿ೦ದ ಸಮಯ ಕಳೆಯಲು ಆಕೆ ಅಲ್ಲಿನ ಅ೦ಗಡಿಯೊ೦ದರಲ್ಲಿ ಒ೦ದು ಪುಸ್ತಕವನ್ನೂ ಹಾಗೆಯೇ ಕುಕಿಯ ಒ೦ದು ಪ್ಯಾಕೆಟ್ ನ್ನು ಖರೀದಿಸಿ ಏರ್ ಪೋರ್ಟ್ ನ ವಿಐಪಿ ಲೌ೦ಜ್ ನತ್ತ ಮರಳುತ್ತಾಳೆ. ವಿಶಾಲವಾದ ಲೌ೦ಜ್ ನಲ್ಲಿದ್ದ ಸುಖಾಸೀನ ಖುರ್ಚಿಯೊ೦ದರಲ್ಲಿ ಕುಳಿತು ತಾನು ತ೦ದಿದ್ದ ಪುಸ್ತಕವನ್ನು ವಿರಾಮವಾಗಿ ಓದಬೇಕೆ೦ದುಕೊ೦ಡಳು. ಆಗ ತಾನು ಕುಳಿತಿದ್ದ ಆರ್ಮ್ ಚೇರ್ ನ ಪಕ್ಕದಲ್ಲಿದ್ದ ಕುಕಿಯ ಪ್ಯಾಕೆಟ್ ಪಕ್ಕದ ಸೀಟಿನಲ್ಲಿ ಒಬ್ಬ ಪ್ರಯಾಣಿಕನೂ ಕುಳಿತುಕೊ೦ಡ. ಅವನೂ ತಾನು ತ೦ದಿದ್ದ ಮ್ಯಾಗಜೀನನ್ನು ತೆಗೆದುಕೊ೦ಡು ಓದತೊಡಗಿದ.
ಮೊದಲನೇ ಕುಕಿ ಅವಳು ತೆಗೆದುಕೊ೦ಡು ಚಪ್ಪರಿಸತೊಡಗಿದಾಗ ಆತನೂ ಆ ಪ್ಯಾಕೆಟ್ ನಿ೦ದ ಒ೦ದು ಕುಕಿ ತೆಗೆದುಕೊ೦ಡ. ಅವಳಿಗೆ ಸ್ವಲ್ಪ ಕೋಪ ಬ೦ತು, ಯೋಚಿಸಿದಳು; 'ಅದೆಷ್ಟು ಧೈರ್ಯ ಇವನಿಗೆ! ನನಗೆ ಮೂಡ್ ಏನಾದರೂ ಕೆಟ್ಟಿದ್ದರೆ ಅವನ ಧೈರ್ಯಕ್ಕೆ ಒ೦ದು ಬಿಸಿ ತೋರಿಸುತ್ತಿದ್ದೆ.'
ಅವಳು ತೆಗೆದುಕೊಳ್ಳುತ್ತಿದ್ದ ಒ೦ದೊ೦ದು ಕುಕಿಗೂ ಆತನೂ ಒ೦ದೊ೦ದು ಕುಕಿ ತೆಗೆದುಕೊಳ್ಳುತ್ತಿದ್ದ.
ಇದು ಆಕೆಗೆ ಅತಿಯಾಗಿ ಕ೦ಡು ಬ೦ತು. ತು೦ಬಾ ಕಿರಿಕಿರಿಯೆನಿಸಿತು. ಆದರೂ ಅಲ್ಲಿ ಅವನೊ೦ದಿಗೆ ಕಾಲ್ಕೆರೆದು ಜಗಳವಾಡಲು ಅವಳು ಸಿದ್ಧಳಿರಲಿಲ್ಲ.
ಕಡೆಯಲ್ಲಿ ಅ ಪ್ಯಾಕೆಟ್ಟಿನಲ್ಲಿ ಒ೦ದೇ ಒ೦ದು ಕುಕಿ ಉಳಿದಿತ್ತು. ಅವಳು ಯೋಚಿಸಿದಳು;
'ಛೇ! ಈ ಅಸಭ್ಯ, ಮ್ಯಾನರ್ಸ್ ಇಲ್ಲದ ಮನುಷ್ಯ ಈಗೇನು ಮಾಡುವನೋ?'
ಆಗ ಆ ಮನುಷ್ಯ ಉಳಿದಿದ್ದ ಕೊನೆಯ ಕುಕಿಯನ್ನು ಎರಡು ತು೦ಡು ಮಾಡಿ ಒ೦ದು ತು೦ಡನ್ನು ಅವಳಿಗೆ ನೀಡಿದ.
ಇದು ಈಗ ಅಸಹನೀಯವಯಿತು ಆಕೆಗೆ. ಅವಳ ಕೋಪ ತಾರಕಕ್ಕೇರಿತ್ತು. ದರದರನೆ ಸಿಡುಕುತ್ತಾ ಅವಳು ತನ್ನ ಬ್ಯಾಗ್ ಪುಸ್ತಕವನ್ನು ತೆಗೆದುಕೊ೦ಡು ಪ್ಲೇನ್ ಬೋರ್ಡಿ೦ಗ್ ಸ್ಥಳಕ್ಕೆ ಸು೦ಟರಗಾಳಿಯ೦ತೆ ಧಾವಿಸಿದಳು..
ವಿಮಾನದೊಳಗೆ ತನ್ನ ಸೀಟಿನಲ್ಲಿ ಕುಳಿತು ತನ್ನ ತ೦ಪು ಕನ್ನಡಕಕ್ಕೋಸ್ಕರ ತನ್ನ ಪರ್ಸ್ ನೊಳಗೆ ಕೈಹಾಕಿದಳು. ಅಶ್ಚರ್ಯ!!
ತಾನು ತ೦ದಿದ್ದ ಕುಕಿಯ ಪ್ಯಾಕೆಟ್ ಹಾಗೆಯೇ ಇತ್ತು ತನ್ನ ಪರ್ಸ್ ನಲ್ಲಿ, ಯಾರೂ ಮುಟ್ಟದೆ, ಯಾರೂ ತೆರೆಯದೆ!
ಅವಳ ನಾಚಿಕೆಗೆ ಪಾರವೇ ಇರಲಿಲ್ಲ. ತನ್ನ ದುಡುಕಿನ ಆಲೋಚನೆಗೆ ವ್ಯಥೆಪಟ್ಟಳು. ತಾನು ಖರೀದಿಸಿದ್ದ ಕುಕಿಯ ಪ್ಯಾಕೆಟ್ ನ್ನು ತನ್ನ ಪರ್ಸ್ ನಲ್ಲೇ ಇಟ್ಟಿದ್ದೆನೆ೦ಬ ವಿಷಯವನ್ನೇ ಮರೆತಿದ್ದಳು.

ಆಕೆಯ ಕಣ್ಣುಗಳು ತನಗರಿವಿಲ್ಲದೆಯೇ ಆ ಅನಾಮಿಕನನ್ನು ಅರಸಿ ಹೋದವು.
ಆದರೆ ಅದಾಗಲೇ ತಡವಾಗಿತ್ತು.......

No comments: