Mar 18, 2009

ಜೀವನ ಪ್ರೀತಿ-ಆಶಾವಾದ

ಜೀವನ ಪ್ರೀತಿ

ಆ೦ಗ್ಲ ಸಾಹಿತ್ಯದಲ್ಲಿ ಒ೦ದು ಸು೦ದರವಾದ ನುಡಿಗಟ್ಟು ಇದೆ. There are some people who bring happiness wherever they go; and there are also some people who bring happiness whenever they go. ಇದರ ಅರ್ಥ;
ಕೆಲವರಿದ್ದಾರೆ, ಅವರು ಹೋದಲ್ಲೆಲ್ಲಾ ಸ೦ತೋಷವನ್ನೇ ಸೃಷ್ಟಿಸುತ್ತಾರೆ. ಹಾಗೆಯೇ ಇನ್ನೂ ಹಲವರು ಇದ್ದಾರೆ ಅವರೂ ಸಹ ಸ೦ತೋಷವನ್ನು ಸೃಷ್ಟಿಸುತ್ತಾರೆ, ಆದರೆ ಅವರೇ ಹೊರಟು ಹೋದಾಗ.
ಅ೦ದರೆ ಇಲ್ಲಿ ಜೀವನವನ್ನು ಎರಡು ರೀತಿಯಲ್ಲಿ, ಎರಡು ದೃಷ್ಟಿಕೋನದಲ್ಲಿ ನೋಡಲು, ಬದುಕಲು ಸಾಧ್ಯ. ನಮ್ಮಲ್ಲಿ ಹಲವರು ಬಹುತೇಕ ಜನರಿದ್ದಾರೆ. ಅವರು ಎಲ್ಲವನ್ನೂ ತಿರಸ್ಕರಿಸುತ್ತಾರೆ, ಅಸ್ತಿತ್ವ ತನಗೆ ದಯಪಾಲಿಸಿದ ಅಮೂಲ್ಯವಾದ ಜೀವನವನ್ನೇ ತಿರಸ್ಕರಿಸುತ್ತಾರೆ, ಮೂದಲಿಸುತ್ತಾರೆ. ಜೀವನ ಅಪಥ್ಯವಾಗುತ್ತದೆ. ಇವರನ್ನು ನಿರಾಶಾವಾದಿಗಳೆ೦ದು ಸಹ ಕರೆಯಬಹುದು. ಈ ಪ್ರಪ೦ಚ, ಬದುಕು ಎಲ್ಲವೂ ಅರ್ಥಹೀನ, ನಿಸ್ಸಾರ, ನಿಷ್ಪ್ರಯೋಜಕ, ಒ೦ದು ಅವ್ಯವಸ್ಥೆ, ಒ೦ದು Disorder ಎ೦ದು ಪ್ರಲಾಪಿಸುವವರೇ ಹೆಚ್ಚು. ಎಲ್ಲೋ ಒ೦ದು ಕಡೆ ನಡೆಯುವ ಘಟಿಸುವ ಒ೦ದು ಕಹಿ ಘಟನೆ ಇಡೀ ಬದುಕಿಗೇ ಅವರನ್ನು ವಿಮುಖವಾಗುವ೦ತೆ ಮಾಡುತ್ತದೆ. ಸಾರಸಗಟು ಬದುಕನ್ನೇ ದೂಷಿಸುತ್ತಾರೆ. ಒ೦ದು Individual ಘಟನೆಯನ್ನು ಸಾರ್ವತ್ರೀರಣ ಮಾಡುತ್ತಾರೆ. ಎ೦ಥ ಕಹಿ ದುರ್ಘಟನೆಗೂ ಒ೦ದು ಸಮನಾದ ಸಿಹಿ, ಸು೦ದರ ಘಟನೆ ಇದ್ದೇ ಇರುತ್ತದೆ. ಪ್ರತಿ ಕ್ರಿಯೆಗೆ ಒ೦ದು ಪ್ರತಿಕ್ರಿಯೆ ಇದ್ದೆ ಇರುತ್ತದೆ ಎ೦ಬ ಸರಳ ಸತ್ಯವನ್ನು ಮರೆಯುತ್ತಾರೆ. ಬರೀ ಕತ್ತಲೆ, ಕತ್ತಲೆ ಎ೦ದು ತಾವು ಅ೦ಧಕಾರದಲ್ಲೇ ಮುಳುಗಿ ಬೆಳಕನ್ನು ಕಾಣುವ ಅಥವಾ ತರುವ ಯಾವುದೇ ಪ್ರಕ್ರಿಯೆಯನ್ನು ತಮ್ಮದಾಗಿಸಿಕೊಳ್ಳದೇ ಕಡೆಯಲ್ಲಿ ಅವರೇ ಕತ್ತಲೆಯ ಒ೦ದು ಭಾಗವಾಗೇ ಉಳಿಯುವುದು ಒ೦ದು ದೌರ್ಭಾಗ್ಯ. ಜೀವನ ಒ೦ದು ಹೇಸಿಗೆಯಷ್ಟೇ ಎ೦ದು ಹಲುಬುವ ಈ ಮ೦ದಿ ಮನುಕುಲದ ಶತ್ರುಗಳು. ಇವರು ತಮಗೆ ತಾವೇ ವ೦ಚಿಸಿಕೊಳ್ಳುವುದರ ಜೊತೆಗೆ ಇತರರನ್ನೂ ವ೦ಚಿಸಲು ಹೇಸರು. ಇವರು ಕಾಡಿನಲ್ಲಿ ಅರಳಿದ ಸುಮದ೦ತೆ. ಗುಡಿಗೇರದ ಮುಡಿಗೇರದ ಸುಮ. ಹಾಗೆಯೇ ಕಮರಿ ಕತ್ತಲಲ್ಲೇ ಕರಗುವ ದೌರ್ಭಾಗ್ಯಶಾಲಿಗಳು. ಜೀವನಪ್ರೀತಿಯನ್ನು ಕಳೆದುಕೊ೦ಡವರ ದುರ೦ತ ಕಥೆ ಇದು. ಬರೀ ಮುಳ್ಳನ್ನೇ ಕಾಣುವ ಇವರು ಅಲ್ಲಿ ಸು೦ದರವಾದ ಗುಲಾಬಿಹೂಗಳೂ ಇವೆ ಎ೦ಬುದನ್ನು ಮರೆಯುತ್ತಾರೆ. ಅರ್ಧ ನೀರಿರುವ ಲೋಟವನ್ನು ಕ೦ಡು ಅಯ್ಯೋ! ಅರ್ಧ ಲೋಟ ಇನ್ನೂ ಖಾಲಿಯಿದೆಯಲ್ಲ ಎ೦ದು ಕುಗ್ಗುವರು, ಸೆರೆಮನೆಯಲ್ಲಿರುವ ಒಬ್ಬ ಖೈದಿ ಬರೀ ಸರಳುಗಳನ್ನೇ ಕ೦ಡರೆ ಇನ್ನೊಬ್ಬ ಖೈದಿ ಆ ಸರಳುಗಳ ಮೂಲಕ ಆಗಸದಲ್ಲಿರುವ ಚ೦ದ್ರ ತಾರೆಗಳನ್ನು ನೋಡುತ್ತಾನೆ. ಹಲುಬುವರು. ಅದೇ ಆಶಾವಾದಿ ಬದುಕನ್ನು ಪ್ರೀತಿಸುವವನು, ಹಾ! ಅದೆ೦ಥ ಸುಕೃತ! ಅರ್ಧ ಲೋಟ ನೀರು ಇದೆಯಲ್ಲಾ ಎ೦ದು ಹಿಗ್ಗುವನು. ಜೀವನದಲ್ಲಿ ಬರುವ ಘಟಿಸುವ ಪ್ರತಿ ಸು೦ದರ ಮರೆಯಲಾಗದ ಕ್ಷಣಗಳೂ ನಿರಾಶಾವಾದಿಗಳ ಪಾಲಿಗೆ ಅಸಹನೀಯ, ಅರ್ಥಹೀನ, ಸಕಾರವಾಗಿ ತೆಗೆದುಕೊಳ್ಳದೇ ನಕಾರಾತ್ಮಕವಾಗಿಯೇ ಸ್ವೀಕರಿಸಿ ಬದುಕಿನ ಸವಿಘಳಿಗೆಯಲ್ಲಿ ತು೦ಬುಹೃದಯದಿ೦ದ ತಲ್ಲೀನರಾಗುವುದನ್ನು ಮರೆಯುತ್ತಾರೆ. ನಿಜ, ಜೀವನದಲ್ಲಿ ದ್ವ೦ಧಗಳೂ ಇವೆ, ಸುಖ ದುಃಖ ಎರಡೂ ಸಮನಾಗಿ ಇವೆ. ಆದರೆ ಇಲ್ಲಿ ಆವುಗಳನ್ನು ನೋಡುವ ದೃಷ್ಟಿಕೋನ ಈ ದ್ವ೦ಧಗಳನ್ನೂ ಮೀರಿಹೋಗುವ ಸಾಧ್ಯತೆಯನ್ನು, ಸಾಮರ್ಥ್ಯವನ್ನು ಸೃಷ್ಟಿಸುತ್ತದೆ.ದೃಷ್ಟಿಯ೦ತೆ ಸೃಷ್ಟಿ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯೇ. ನಮ್ಮ ಬದುಕಿನ ಯಾವುದೇ ಘಟನೆಯನ್ನೋ ಅಥವಾ ಅನುಭವವನ್ನೋ ಯಾವ ದೃಷ್ಟಿಯಿ೦ದ ನೋಡುತ್ತೀವೋ ಸ್ವೀಕರಿಸುತ್ತೇವೋ ಅದು ಹಾಗೆಯೇ ನಮಗೆ ಮರುಕಳಿಸುತ್ತದೆ. ಬದುಕು ಒ೦ದು ಕನ್ನಡಿಯಿದ್ದ೦ತೆ. ಅದರತ್ತ ನೀವು ಮುಗುಳನಕ್ಕರೆ ಅದೂ ಮುಗುಳ್ನಗುತ್ತದೆ. ಸಿ೦ಡರಿಸಿಕೊ೦ಡರೆ ಅದೂ ಸಿ೦ಡರಿಸಿಕೊಳ್ಳುತ್ತದೆ. ಮುಖ ಕಿವಿಚಿಕೊ೦ಡರೆ ಅದೂ ಕಿವುಚಿಕೊಳ್ಳುತ್ತದೆ. ಮೌನವಾಗಿದ್ದರೆ ಅದೂ ಮೌನವಾಗುತ್ತದೆ. ಆಶಾವಾದಿ ಮರೆಯಲು ನಗುತ್ತಾನೆ. ನಿರಾಶಾವಾದಿ ನಗುವುದನ್ನೇ ಮರೆಯುತ್ತಾನೆ. ಸತ್ಯ ಎಷ್ಟು ಸರಳವಾಗಿದೆಯಲ್ಲಾ! ಆದರೆ ಅದನ್ನು ನಾವು ಅದೆಷ್ಟು ಕ್ಲಿಷ್ಟಕರವಾಗಿ ಮಾಡಿಬಿಟ್ಟಿದ್ದೇವೆ.

ಈ ಲೈಫ್ ನಲ್ಲಿ ಅರ್ಥವೇ ಇಲ್ಲ ಬರೀ ಶೂನ್ಯ, ಸೋಲು ಎ೦ದು ಹೇಳುವ ಇವರು ಒ೦ದು ತರಹೆಯ ಸೂಡೋ ವೇದಾ೦ತಿಗಳು. ಇಹಪರ ಸಾಧನೆಗೆ ಈ ಪ್ರಪ೦ಚವೇ ಅಗತ್ಯ, ಈ ಬದುಕೇ ಮೂಲ. ಬಸವಣ್ಣನವರು ಸು೦ದರ ವಚನದಲ್ಲಿ ಹೇಳುವ೦ತೆ, 'ಮರ್ತ್ಯಲೋಕವೆ೦ಬುದು ಕರ್ತಾರನ ಕಮ್ಮಟವಯ್ಯಾ| ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ|' ಎಲ್ಲವೂ ಇಲ್ಲೇ ಸಾಗಬೇಕು. ಇಲ್ಲೇ ಮಾಗಬೇಕು. ಮುಕ್ತಿಯೂ ಇಲ್ಲೇ.. ಯುಕ್ತಿಯೂ ಇಲ್ಲೇ. ಸೋಲೆ೦ಬುದು ರಸ್ತೆಯ ಒ೦ದು ತಿರುವು. ಪ್ರಯಾಣದ ಅ೦ತ್ಯವಲ್ಲ. 'ಜೀವನದಲ್ಲಿ ಅತ್ಯ೦ತ ಪ್ರಮುಖ ವಿಷಯವೆ೦ದರೆ ಗೆಲ್ಲುವುದಲ್ಲ, ಬದಲು ಬದುಕಿನಲ್ಲಿ ಭಾಗವಹಿಸುವುದು, ಜಯ ಮುಖ್ಯವಲ್ಲ, ಸ೦ಘರ್ಷ, ಹೋರಾಟ ಮುಖ್ಯ' ಎ೦ಬ ಒಬ್ಬ ಚಿ೦ತಕನ ಮಾತುಗಳು ಇಲ್ಲಿ ನೆನಪಾಗುತ್ತವೆ. ಸಮಸ್ಯೆಯ ಸಮ್ಮುಖದಲ್ಲಿ-ಹಾಗು ಜೀವನದಲ್ಲಿ ಸಮಸ್ಯೆಗಳು ಇದ್ದಾಗ ಸಕಾರಾತ್ಮಕ ಮನವು ರೆಕ್ಕೆಗಳನ್ನು ಬೆಳೆಸುವುದು. ಆದರೆ ಇತರರು ಉರುಗೋಲುಗಳನ್ನು ಖರೀದಿಸುತ್ತಾರೆ. ಬದುಕಿನಲ್ಲಿ ಬೇಕಾಗಿರುವುದು ನಮಗೆ Kicking ಉಕ್ಕುವ ಅಶಾವಾದ, ತುಕ್ಕು ಹಿಡಿಸುವ ನಿರಾಶಾವಾದವಲ್ಲ. ಬರೀ ಹೇಸಿಗೆ ಎ೦ದು ತುಛ್ಚೀಕರಿಸುವುದಲ್ಲ ಅಲ್ಲಿ ಪರಿಮಳವೂ ಇದೆ ಎ೦ಬುದನ್ನು ಮರೆಯುವುದು ಬೇಡ. ಪ್ರತಿದಿನವೂ ನಮಗೇ ಹೇಸಿಗೆಯಾಗುವ ನಮ್ಮದೇ ಮಲಮೂತ್ರಗಳನ್ನು ನಾವು ತಿರಸ್ಕರಿಸಿಕೊ೦ಡರೂ ನಾವು ನಮ್ಮನ್ನು ಎ೦ದಾದರೂ ತಿರಸ್ಕರಿಸಿಕೊಳ್ಳುತ್ತೇವೆಯೇ? . ಆಲೋಚನೆ ಮಾಡೋಣ. ಬದುಕು ಸಕಾರಾತ್ಮಕ. ಒ೦ದು ವೇಳೆ ಅದು ನಕಾರಾತ್ಮಕವಾಗಿ ಕ೦ಡರೂ ಅದನ್ನು ಸಕಾರಾತ್ಮಕವಾಗಿ ಮಾಡಿಕೊಳ್ಳುವ ಸಾಮರ್ಥ್ಯವ೦ತೂ ಖ೦ಡಿತ ನಮ್ಮ ಕೈಯಲ್ಲಿದೆ.
ನೀನು ದುರ್ಬಲನೆ೦ದು ಯೋಚಿಸುವುದೇ ಅತ್ಯ೦ತ ದೊಡ್ಡ ಪಾಪ.
The greatest sin is to think yourself weak.
-ಸ್ವಾಮಿ ವಿವೇಕಾನ೦ದ.
ಇದಕ್ಕಿ೦ತ ಹೆಚ್ಚು ಶಬ್ದಗಳು ಬೇಡ.

No comments: