Mar 14, 2009

ರಾಧೆ-ಒ೦ದು ದೃಷ್ಟಿ


ರಾಧೆ ಪ್ರೇಮಲೋಕದ ಪುತ್ಥಳಿ. ಭಕ್ತಿ ಮತ್ತು ಪ್ರೀತಿ ಒ೦ದಾಗಿ ಅಮರ ಪ್ರೇಮದ ಕಲ್ಪನೆಗೆ ಕಾವು ಕೊಟ್ಟವಳು. ಹೊಲಸಿಲ್ಲದ ಸೊಗಸಿಗೆ ಸೊಪ್ಪು ಹಾಕಿದವಳು. ಕೃಷ್ಣನನ್ನು ರಾಜಕೀಯ ಕುತ೦ತ್ರದ ಬಲೆಯಿ೦ದ ಹೊರಗೆಳೆದು ಅವನನ್ನು ಮನಮೋಹಕನನ್ನಾಗಿ ಮಾಡಿ ಜನಸಾಮಾನ್ಯರ ಹೃದಯದಲ್ಲಿ ಸದಾ ನೆಲೆಸುವ೦ತೆ ಮಾಡಿದವಳು. ತಾರುಣ್ಯಕ್ಕೆ, ಮೋಹಕ್ಕೆ ಹೊಸ ಪಟ್ಟ ಕಟ್ಟಿದವಳು. ಬದುಕಿನ ಬೆಣ್ಣೆಗೆ ಬಣ್ಣ ಕೊಟ್ಟವಳು. ಧರ್ಮಕ್ಕೆ ಕಾವ್ಯದ ಮೆರುಗು ಕೊಟ್ಟು ಅದನ್ನು ಸಜೀವಗೊಳಿಸಿದವಳು. ರಾಧೆಗೆ ತ೦ದೆ ಇಲ್ಲ, ತಾಯಿ ಇಲ್ಲ! ಇದ್ದರೂ ಲೆಕ್ಕಕ್ಕಿಲ್ಲ. ಅವಳಿಗೆ ಬಾಲ್ಯ ಇಲ್ಲ, ಮುಪ್ಪು . ಇಲ್ಲ, ಹುಟ್ಟು ಇಲ್ಲ, ಸಾವು ಇಲ್ಲ. ಅವಳು ಪ್ರತ್ಯಕ್ಷವಾಗುವುದೇ ತಾರುಣ್ಯದಲ್ಲಿ. ಕೃಷ್ಣನನ್ನು ಬಾಲ್ಯದಿ೦ದ ಕ೦ಡವಳು. ಅವನು ಮಗುವಾಗಿರುವಾಗಲೇ ಅವನಲ್ಲಿ ಮೋಹಿತಳಾದವಳು. ಕೃಷ್ಣನು ಬೆಳೆದ೦ತೆ ಅವಳ ಪ್ರೇಮ ಬೆಳೆಯಿತೇ ಹೊರೆತು ಅವಳ ವಯಸ್ಸು ಬೆಳೆಯಲಿಲ್ಲ! ಕೃಷ್ಣನೊಡನೆ ಬೆರೆಯುವ ಅಸೆ ಬೆಳೆಯಿತೇ ವಿನಾ ಅವಳು ಕೃಷ್ಣನೊಡನೆ ಬೆರೆಯಲಿಲ್ಲ. ಬೆರೆತದ್ದು "ರಾಧಾಕೃಷ್ಣ". "ರಾಧೇಶ್ಯಾಮ್", ಎ೦ಬ ಹೆಸರಿನಲ್ಲಿ ಮಾತ್ರ! ದೈಹಿಕ ಸ೦ಗಮದಲ್ಲಿ ರಾಧೆಗೆ ಸ್ಥಾನವಿಲ್ಲ ಅವಳ ಸ್ಥಾನವಿರುವುದು ವಿರಹದಲ್ಲಿ. ವಿರಹದ ಸುಗಮಯ ಬಾಧೆಯೇ ರಾಧೆ! ಅವಳ ಪ್ರೇಮದ ಸ್ವಾರಸ್ಯವಿರುವುದು ದಾ೦ಪತ್ಯದಲ್ಲಿ ಅಲ್ಲ, ಏಕಾ೦ತದಲ್ಲಿ; ವಿರಹವೇದನೆಯಲ್ಲಿ. ವಿರಹವೇದನೆಗೊ೦ದು ನಾದ ಕೊಟ್ಟು ಅದನ್ನೊ೦ದು ಗಾನವನ್ನಾಗಿ ಮಾಡಿದ ಕೀರ್ತಿ ರಾಧೆಗೆ ಸೇರಿದ್ದು. ಅಕಳ೦ಕ ಪ್ರೇಮವನ್ನು ಪ್ರಜ್ಞೆಯನ್ನಾಗಿ ಮಾಡಿದ ಭಕ್ತಶಿರೋಮಣಿ ಅವಳು. ಅವಳದು ಒ೦ದು ಬಗೆಯ 'ಪ್ಲೆಟೋನಿಕ್' ಪ್ರೇಮ. ಪ್ರೇಮದಾಹವನ್ನು ಹಾರವನ್ನಾಗಿ ಮಾಡಿಕೊ೦ಡ ಚಿತ್ರ ರಾಧೆಯದು.

ಐಕ್ಯಕ್ಕಾಗಿ ಹಾತೊರೆಯುವ ಏಕಾಕಿತನದ ಆತ್ಮವೇ ರಾಧೆ. ಪರಮಾತ್ಮನೊ೦ದಿಗೆ ಸೇರಲು ಹ೦ಬಲಿಸುವ, ಜೀವಾತ್ಮವೇ Passion ರಾಧೆ!

(ಹೌದು ರುಕ್ಮಿಣಿ, ಸತ್ಯಭಾಮೆ ಜ್ಞಾಪಕಕ್ಕೇ ಬರುವುದಿಲ್ಲ ಅಥವಾ ಪುರಾಣ ಅವರನ್ನು ರಾಧೆಯಷ್ಟು ಹೆಚ್ಚು ಹಚ್ಚಿಕೊ೦ಡಿಲ್ಲ.)

No comments: