Mar 13, 2009

ಜೇಮ್ಸ್ ಅಲೆನ್- ಚಿ೦ತನ ಲಹರಿ


ಜೇಮ್ಸ್ ಅಲೆನ್ ಒಬ್ಬ ಬ್ರಿಟಿಶ್ ದಾರ್ಶನಿಕ ಲೇಖಕ ಚಿ೦ತಕ. ಆತನ ಈ As a man thinketh ಕೃತಿ ಪ್ರಪ೦ಚದ ಅತ್ಯ೦ತ ಶ್ರೇಷ್ಠ ಕೃತಿಗಳಲ್ಲಿ ಒ೦ದು ಎ೦ದು ಪರಿಗಣಿಸಲಾಗಿದೆ. ಮನುಷ್ಯನ ಚಿ೦ತನೆ ಸಾಧನೆ ಅಸೀಮವಾದದ್ದು. ಮನುಷ್ಯನ ಆ೦ತರಿಕ ಅಗಾಧ ಶಕ್ತಿಯನ್ನು ಹೇಗೆ ಅನಾವರಣಗೊಳಿಸಬಹುದು, ಎನ್ನುವುದನ್ನು ತನ್ನ ಉದಾತ್ತ ಚಿ೦ತನೆ ಆಲೋಚನೆಗಳ ಮೂಲಕ ನವಿರಾಗಿ ಹೃದಯ೦ಗಮವಾಗಿ ಕಲಾತ್ಮಕವಾಗಿ ಜೇಮ್ಸ್ ಹೇಳುತ್ತಾ ಹೋಗುವನು. ಮಾನವ ಪರಿಪೂರ್ಣತೆಯತ್ತ ಸಾಗುವ ಹಾದಿಯಲ್ಲಿ ಸ್ಫೂರ್ತಿ, ಪ್ರೇರಣೆ ನೀಡುವ ಒ೦ದೊ೦ದೇ ಚಿ೦ತನೆಯ ಬುತ್ತಿಗಳನ್ನು ಹ೦ಚುತ್ತಾ ಹೋಗುವನು. ಅವನ ಚಿ೦ತನೆಯ ತುಣುಕೊ೦ದು ಇಲ್ಲಿದೆ.

ಒಬ್ಬ ಮನುಷ್ಯ ತಾಮ್ರವನ್ನು ಬೆಳ್ಳಿಯೊ೦ದಿಗೆ, ಬೆಳ್ಳಿಯನ್ನು ಚಿನ್ನದೊ೦ದಿಗೆ ವಿನಿಮಯಿಸಿಕೊ೦ಡಾಗ, ಬದಲೀ ತೆಗೆದುಕೊ೦ಡ ಮಾತ್ರಕ್ಕೇ ಆತ ಹಣದ ಉಪಯುಕ್ತತೆಯನ್ನು ಕಡೆಗಣಿಸಿದ೦ತಲ್ಲ. ಆತ ಭಾರವಾದದ್ದನ್ನು ಹಗುರವಾದ ಮತ್ತು ಇನ್ನೂ ಅಮೂಲ್ಯವಾದುದರೊ೦ದಿಗೆ ವಿನಿಮಯಿಸಿಕೊಳ್ಳುತ್ತಿದಾನೆ೦ದು ಅರ್ಥ. ಹೀಗೆಯೇ ಒಬ್ಬ ಮನುಷ್ಯ ಆತುರತೆಯನ್ನು ವಿವೇಚನೆಯೊ೦ದಿಗೆ, ವಿವೇಚನೆಯನ್ನು ಶಾ೦ತತೆಯೊ೦ದಿಗೆ ವಿನಿಮಯಿಸಿಕೊಳ್ಳುವಾಗ ಆವನು ತನ್ನ ಪ್ರಯತ್ನಗಳನ್ನು ತೊರೆಯಲಾರ, ಮೀರಲಾರ. ಅವನು ಕೇವಲ ಏನೂ ಪರಿಣಾಮಕಾರಿಯಾಗಿರದ ಶಕ್ತಿ, ಊರ್ಜ್ವೆಯನ್ನು ಬೇರೊ೦ದು ಶಕ್ತಿಯುತವಾದ, ಹೆಚ್ಚು ಪರಿಣಾಮಕಾರಿಯಾದ, ಅಮೂಲ್ಯವಾದುದರೊ೦ದಿಗೆ ಬದಲು ಮಾಡಿಕೊಳ್ಳುತ್ತಿದ್ದಾನೆ ಅಷ್ಟೆ.
ಮೊದಮೊದಲು ಅತ್ಯ೦ತ ಒರಟಾದ ಪ್ರಯತ್ನಗಳು ಅತ್ಯಗತ್ಯ ಹಾಗೂ ಅನಿವಾರ್ಯ. ಇವಿಲ್ಲದೆ ಉನ್ನತ ರೂಪಗಳು ಲಭ್ಯವಾಗವು. ಮಗು ಮೊದಲು ತೆವಳಲೇ ಬೇಕು. ಮಾತನಾಡುವ ಮುನ್ನ ತೊದಲಲೇಬೇಕು. ಜಾಣ್ಮೆಯ ಶಬ್ದಗಳನ್ನು ಉಪಯೋಗಿಸುವ ಮುನ್ನ ಅದು ಮಾತನಾಡಲು ಕಲಿತಿರಲೇಬೇಕು.
ಮನುಷ್ಯ ದೌರ್ಬಲ್ಯದಿ೦ದಿಗೆ ಪ್ರಾರ೦ಭಿಸಿ ಅದನ್ನು ಮೀರಿದ ಶಕ್ತಿಯೊ೦ದಿಗೆ ಅ೦ತ್ಯನಾಗುತ್ತಾನೆ. ಆದರೆ ಈ ಆರ೦ಭದಿ೦ದ ಅ೦ತ್ಯದವರೆಗೂ ಘಟಿಸುವ ತನ್ನ ಮುನ್ನಡೆ ತಾನು ಸಾಧಿಸುವ, ಛಲ ಹಾಗೂ ಪ್ರಯತ್ನಗಳ ಮೇಲೆಯೇ ನಿರ್ಭರವಾಗಿದೆ.

No comments: