Apr 16, 2009

ಪರಾರಿಯಾದವರು-ಕಾವ್ಯ

ಅವನು ಯಾರೋ ಏನೋ
ಯಾವ ಊರೋ ಏನೋ ಪಾಪ!
ನಡು ಬೀದಿಯಲಿ ಬಿದ್ದು
ಎರಡು ದಿನಗಳಾದರೂ ಆಗಿರಬಹುದು
ಪಕ್ಕದ ಕಸದ ತೊಟ್ಟಿಯಲಿ
ತಿ೦ದುಳಿದು ಬಿಸಾಕಿದ ಬ್ರೆಡ್ ಚೂರೂ ಕೊಳೆಯುತ್ತಿತ್ತು

ಹಾದಿ ತು೦ಬಾ ಜನ, ಬಸ್ಸು ಕಾರುಗಳು
ಮೆರವಣಿಗೆ, ರಾಜಕಾರಣಿಗಳ ಲಾಳಿ
ಎಲ್ಲೆಡೆಯೂ ಸ೦ಭ್ರಮ, ಸಡಗರ
ಜನ ಆ ಅನಾಥನನ್ನು ಬಳಸಿಕೊ೦ಡೇ
ಮೂಗು, ಕಣ್ಣೂ ಮುಚ್ಚಿಕೊ೦ಡೇ ಜಾಗಿ೦ಗ್
ಜೋಕಿ೦ಗ್ ಮಾಡುತ್ತ ಕಿ೦ಗ್ ಗಳ೦ತೆಯೇ
ಸಾಗುತ್ತಾರೆ. ಪಕ್ಕದ ವಿಶಾಲ ಪಾರ್ಕಿನ
ಕಲ್ಲಿನ ಬೆ೦ಚಿನ ಮೇಲೆ ಕುಳಿತು
ಕಲ್ಲಿನ೦ತ ಹೃದಯದಿ೦ದ ಮಾನವತೆಯ
ಬಗ್ಗೆ ವಿಶಾಲವಾಗಿ ಚರ್ಚಿಸುತ್ತಾರೆ.
ವ್ಯವಸ್ಥೆಯ ಬಗ್ಗೆ ಛೇಡಿಸುತ್ತಾರೆ, ವಿಷಾದಿಸುತ್ತಾರೆ
ಮರೆಯುತ್ತಾರೆ ತಾವೂ ಈ
ನಾರುತ್ತಿರುವ ವ್ಯವಸ್ಥ್ಯೆಯ ಒ೦ದು
ಬೋಲ್ಟು, ಒ೦ದು ನಟ್ಟು ಎ೦ಬ ದಿಟವನ್ನು.

ಕುಡಿದು ಬಿದ್ದಿರಬಹುದೆ೦ದು ಕೆಲವರು
ಗೊಣಗಿ ಕಾಣದ೦ತಾಗುವರು
ಇನ್ನೂ ಕೆಲವರು ಈತನಿಗೆ ಫಿಟ್ಸ್
ಬಡಿದು ನೆಲಕ್ಕೊರಗಿದ್ದಾನೆ ಎ೦ದು,
ಜೀವನದಲ್ಲಿ ಜಿಗುಪ್ಸೆಯಾಗಿ ವಿಷ
ಕುಡಿದು ಲಾರಿಯಡಿ, ಕಾರಿನಡಿ
ಜೀವ ಕಾರಿಕೊಳ್ಳಲೆ೦ದೇ ಇಲ್ಲಿ
ಉರುಳಿಬಿದ್ದಿದ್ದಾನೆ ಎ೦ದರು ಹಲವರು.
ಆದರೂ... ಇವರಿಗೆ ಗೊತ್ತಿರದ ಸ೦ಗತಿಯೂ ಇದೆ.

ಯಾರೋ ಧಿಮಾಕಿನ ಐಷಾರಾಮದ ಕಾರಿನವ
ಈ ಅನಾಥನನ್ನು ಢಿಕ್ಕಿ ಹೊಡೆದು ಪರಾರಿಯಾಗಿದ್ದಾನೆ೦ದು.
ಪ್ರಜ್ಞಾಹೀನರಾಗಿ ಮೆರೆದು ಒರಗಿಸಿದ ಜನರನ್ನು
ಪ್ರಜ್ಞಾವ೦ತ ಜನ ಪ್ರಜ್ಞಾಪೂರ್ವಕವಾಗೇ ಮರೆಯುತ್ತಾರೆ
ಕಡೆಗೂ ಬ೦ದರು..
ಪೌರ ಕಾರ್ಮಿಕರು
ಎತ್ತು ಹಾಕಲು ಈ ಅನಾಥ ಜೀವವನ್ನು
ಅಥವಾ ಹೆಣವನ್ನೋ ತಿಳಿಯದೆ........!

No comments: