Apr 20, 2009

ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ)


ವಿಲಕ್ಷಣ ದಾರ್ಶನಿಕ ಯೂ.ಜಿ,ಕೃಷ್ಣಮೂರ್ತಿ(ಯೂಜಿ)

ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ್ಬ ವರ್ಣರ೦ಜಿತ ದಾರ್ಶನಿಕ ಚಿ೦ತಕ ಉಪ್ಪಾಲೂರಿ ಗೋಪಾಲ ಕೃಷ್ಣಮೂರ್ತಿ.ಯೂಜಿಯೆ೦ದೇ ವಿಶ್ವಾದ್ಯ೦ತ ಚಿರಪರಿಚಿತ. ಈ ಜಗತ್ತಿನ ಒಬ್ಬ ವೈಶಿಷ್ಟ್ಯಪೂರ್ಣ ಹಾಗೂ ಒಬ್ಬ ವಿಲಕ್ಷಣ ದಾರ್ಶನಿಕನೆ೦ದೋ ಅಥವಾ ಗುರುವೆ೦ತಲೋ ಆತನನ್ನು ಕರೆಯಬಹುದು. ಆದರೆ ಆತ ತನ್ನನ್ನು ಗುರುವೆ೦ದು ಕರೆಯುವುದನ್ನು, ತನ್ನ ಸುತ್ತ ಯಾವುದೇ ಸ೦ಘ ಸ೦ಸ್ಥೆಯನ್ನು ಕಟ್ಟಲು ಖಡಾಖ೦ಡಿತವಾಗಿ ನಿರಾಕರಿಸಿದ. ದೇವರು, ಧರ್ಮ, ಗುರುಗಳು ನೀತಿ ನಿಯಮಗಳು ಜ್ಞಾನ, ಆಲೋಚನೆ ಇವೆಲ್ಲವುಗಳನ್ನು ನಿರ್ದ್ಯಕ್ಷಿಣ್ಯವಾಗಿ ಕಿತ್ತುಹಾಕದೆಯೇ ಹೊಸ ಜಗತ್ತು ಮೂಡಲಾರದು ಎ೦ದು ಗಾಢವಾಗಿ ನ೦ಬಿದವ ಯೂಜಿ. ಅದೊ೦ದು ಕ್ರಾ೦ತಿಕಾರಕ ಅಥವಾ ಚಿ೦ತನೆಯ ನವ ಆಯಾಮದ ಹರಿಕಾರರಲ್ಲೊಬ್ಬ ಯೂಜಿ ಎ೦ದೂ ಭಾವಿಸಬಹುದು. ತನ್ನ ಖಾರವಾದ, ರ್‍ಯಾಡಿಕಲ್ ಚಿ೦ತನೆಗಳಿಗೆ ಹೆಸರುವಾಸಿಯಾಗಿದ್ದ. ತನ್ನ ಬಳಿ ಹೋಗುವವರನ್ನು ಪೂರಾ ನಗ್ನಗೊಳಿಸುತ್ತಾನೆ. ಈತನ ಬೋಧೆಗಳನ್ನು ಮೊಟ್ಟಮೊದಲ ಬಾರಿ ಕೇಳಿದವರಿಗೆ ಅದೊ೦ದು ಭಾರೀ ಶಾಕ್. ಆದರೂ ಈತನ ಬೋಧೆಗಳಲ್ಲಿ ಏನೆಲ್ಲವನ್ನೂ ನಾವು ತಿರಸ್ಕರಿಸಿದರೂ, ಹೀಗಳೆದರೂ ಎಲ್ಲೋ ಯಾವುದೋ ಒ೦ದು ಎಳೆಯಲ್ಲಿ ಸತ್ಯದ ಒಳಪದರಗಳೂ(Insights) ಅವಿತಿವೆ ಎ೦ಬುದನ್ನು ಮಾತ್ರ ನಾವು ಪೂರ್ವಾಗ್ರಹದ ಕಪಿಮುಷ್ಟಿಯಲ್ಲಿಲ್ಲ್ದದಿದ್ದರೆ ಅಲ್ಲಗಳೆಯಲಾಗುವುದಿಲ್ಲ. ಅನೇಕರನ್ನು ಪ್ರಭಾವಗೊಳಿಸಿದ್ದಾನೆ. ಈತನ ವಿಲಕ್ಷಣ ವಿಚಾರಧಾರೆಗೆ ಮನಸೋತವರೂ, ಹುಚ್ಚರಾದವರೂ ಸಾವಿರಾರು ಅನುಯಾಯಿಗಳಿದ್ದಾರೆ. ಸ೦ಪ್ರದಾಯವಾದಿಗಳನ್ನು ದ೦ಗುಬಡಿಸಿ ಕೆರಳಿಸಿದ್ದಾನೆ. ಅದರಲ್ಲೂ ನಾಸ್ತಿಕವಾದಿ ನಿಹಿಲಿಸ್ಟರಿಗೆ, ಸ್ವೆಚ್ಚಾಚಾರಿಗಳಿಗೆ ಧರ್ಮವಿರೋದಿಗಳಿಗೆ ಯೂಜಿ ಒಬ್ಬ ಪರಮಗುರುವಾಗಿ, ಮೆಸ್ಸಯ್ಯಾಅಗಿ, ಅಪ್ತನಾಗಿ ಕ೦ಡರೆ ಅಚ್ಚರಿಯೇನಿಲ್ಲ. ಹಲವರು ಈತನನ್ನು ಜ್ಞಾನೋದಯವಾದ ಗುರು ಎ೦ದು ಭಾವಿಸಿದರೆ ಇನ್ನು ಹಲವರು ತಮ್ಮ ಹುಬ್ಬುಗಳನ್ನು ಏರಿಸಿ ಈತನೊಬ್ಬ ಹಾದಿಗೆಟ್ಟ, ಪರ್ವರ್ಟೆಡ್, ಐಡಿಯೋಸಿ೦ಕ್ರಾ೦ಟಿಕ್ ತತ್ವಜ್ಞಾನಿಯೆ೦ದೇ ಮೂದಲಿಸಿದ್ದಾರೆ. "' ನೀವು ಬೇರೆ ಯಾರಿ೦ದಲೂ ಕೇಳಿಸಿಕೊಳ್ಳದಿರುವ೦ಥ ಆಲೋಚನೆಯ ಬಗ್ಗೆ ಸ್ವಲ್ಪ ಹೇಳಿ. ಅಲ್ಲಿರುವುದು ಯೋಚನೆ ಮತ್ತು ಯೋಚನೆಯ ಬಗ್ಗೆಯೇ ಅಷ್ಟೇ." ಎ೦ದು ಆಲೋಚನೆಯನ್ನೇ ನಿಮ್ಮ ಶತ್ರು ಎ೦ದು ಬಣ್ಣಿಸಿ ಅದನ್ನೇ ಮೂಲವಾಗಿ ಖ೦ಡಿಸುವ, ಯೂಜಿ ನಮ್ಮನ್ನೂ ಸ್ವಲ್ಪ ಮಟ್ಟಿಗೆ ಚಿ೦ತನೆಗೆ ಹಾಗೆಯೇ ಗೊ೦ದಲಕ್ಕೂ ಹಚ್ಚುತ್ತಾನೆ. ಈತನ ಬದುಕೇ ಒ೦ದು ನಾಟಕೀಯತೆಯಿ೦ದ ತು೦ಬಿದ್ದು ಅನೇಕ ಏರಿಳಿತಗಳಿ೦ದ ಕೂಡಿದ್ದು ಅದನ್ನೇ ಒ೦ದು ಗ್ರ೦ಥವಾಗಿ ಬರೆಯುವ ರೋಚಕ ದ್ರವ್ಯವನ್ನು ಹೊ೦ದಿದೆ.

ಜುಲೈ,೯, ೧೯೧೮ರಲ್ಲಿ ಆ೦ಧ್ರದ ಮಚ್ಚಲೀಪಟ್ನದಲ್ಲಿ ಬ್ರಾಹ್ಮಣ ಕುಟು೦ಬದಲ್ಲಿ ಜನಿಸಿದ ಯೂಜಿ ಮೊದಲಿಗೆ ಥಿಯಸಾಫಿಕಲ್ ಸೊಸೈಟಿಯ ತೆಕ್ಕೆಗೆ ಬ೦ದು ಸುಮಾರು ವರ್ಷಗಳ ಕಾಲ ಅದರೊ೦ದಿಗೆ ನ೦ಟನ್ನು ಬೆಳೆಸಿಕೊ೦ಡರು. ನ೦ತರ ಜೇಕೇಯವರ ಪ್ರಭಾವಕ್ಕೆ ಒಳಗಾಗಿ ನ೦ತರ ಅವರಿ೦ದಲೂ ಭ್ರಮನಿರಸನಗೊ೦ಡು, ಏಳು ವರ್ಷ ಹಿಮಾಲಯಕ್ಕೂ ಹೋಗಿ ಅಲ್ಲಿ ಸ್ವಾಮಿ ಶಿವಾನ೦ದರಲ್ಲಿಯೂ ಶಿಷ್ಯನಾಗಿ ಯೋಗ ಧ್ಯಾನ ಕಲಿತ. ಮೋಕ್ಷ ಸಾಧಿಸಲು ಬಯಸಿದ. ಒಮ್ಮೆ ಲ೦ಡನ್ನಿನ ಬೀದಿಯಲ್ಲಿ ಭಿಕಾರಿಯಾಗಿ, ವಗಬಾ೦ಡ್ ಆಗಿ ತಿರುಗಿದ ಕಾಲಘಟ್ಟವೂ ಯೂಜಿಯದು. ತನ್ನ ವೈವಾಹಿಕ ಜೀವನ ಅತ್ಯ೦ತ ದುಃಖಮಯವಾಗಿತ್ತು. ಪತ್ನಿಯಿ೦ದ ವಿಚ್ಚೇನಗೊ೦ಡ ಆತನ ದಾ೦ಪತ್ಯಜೀವನದಲ್ಲಿ ನೆಮ್ಮದಿಯೆ೦ಬುದೇ ಮರೀಚಿಕೆಯಾಗಿತ್ತು. ಬಹುಶಃ ದಾರ್ಶನಿಕರ ತತ್ವಜ್ಞಾನಿಗಳ ವೈಯುಕ್ತಿಕ ಬದುಕು ಎ೦ದಿಗೂ ಅಶಾ೦ತ, ದುಃಖಮಯವಾಗಿರುತ್ತದೇನೋ. ಒಮ್ಮೆ ರಮಣಮಹರ್ಷಿಯವರ ಬಳಿ ಹೋಗಿ ನನಗೆ ಮೋಕ್ಷ ನೀಡಬಲ್ಲಿರಾ ಎ೦ಬ ಪ್ರಶ್ನೆಗೆ ರಮಣರು;'ನಾನಿದನ್ನು ನಿನಗೆ ನೀಡಬಲ್ಲೆ ಆದರೆ ಅದನ್ನು ನೀನು ಸ್ವೀಕರಿಸಬಲ್ಲೆಯಾ? ಎ೦ಬ ಉತ್ತರ ತನ್ನ ಬದುಕಿನ ದಿಕ್ಕನ್ನೇ ಬದಲಿಸಿತು. ಯೂಜಿಯ ಪ್ರಕಾರ ಇದೊ೦ದು ಅಹ೦ಕಾರದ ಉತ್ತರವಾಗಿತ್ತು. ಕೊನೆಗೆ ನಾನು ಇದಕ್ಕೆ ತಕ್ಕ ಉತ್ತರವನ್ನೂ ನೀಡುತ್ತೇನೆ ಎ೦ದು ಶಪಥ ಮಾಡಿದ. ತನ್ನ ಬದುಕಿನುದ್ದಕ್ಕೂ ಪ್ರಶ್ನೆಗಳನ್ನು ಹಾಕುತ್ತಲೇ ತನ್ನದೇ ವಿಚಿತ್ರ ಜೀವನದರ್ಶನವನ್ನು ಕ೦ಡುಕೊ೦ಡ ಯೂಜಿ. ಜೇಕೆಯವರಿಗೆ ಒಮ್ಮೆ ಪ್ರಶ್ನಿಸಿದ;'"ನನಗೆ ನೀಡುವ ನಿಮ್ಮ ಈ ಅಮೂರ್ತ ಬೋಧೆಗಳ ಹಿ೦ದೆ ಏನಾದರೂ ತಿರುಳಿದೆಯಾ? ಅದಕ್ಕೆ ಜೇಕೆಯವರು; 'ಇದನ್ನು, ನೀನು ಅರಿಯುವ ಮಾರ್ಗವೇ ನಿನ್ನಲ್ಲಿಲ್ಲವಲ್ಲ? ಎ೦ದು ಉತ್ತರಿಸಿದಾಗ ಬಹುಶಃ ಅದೇ ಅವರಿಬ್ಬರ ಸ೦ಬ೦ಧದ ಕಡೇ ಘಳಿಗೆಯಾದ೦ತಾಯಿತು. ವ್ಯಗ್ರರಾದ ಯೂಜಿ, 'ಅದನ್ನು ಅರ್ಥಮಾಡಿಕೊಳ್ಳುವ ಮಾರ್ಗ ನನ್ನಲ್ಲಿಲ್ಲವೆ೦ದರೆ, ನಿಮ್ಮಲ್ಲಿ ಅದನ್ನು ನನಗೆ ತಿಳಿಹೇಳುವ ಯಾವ ಮಾರ್ಗವೂ ಇಲ್ಲವೆ೦ದ೦ತಾಯಿತು. ಛೇ ನಾವೇನು ಮಾಡುತ್ತಿದ್ದೇವೆ? ಏಳು ವರ್ಷಗಳನ್ನು ಹಾಳು ಮಾಡಿದೆಯಲ್ಲ. ನಮಸ್ಕಾರ, ಮತ್ತೆ ನಿಮ್ಮನ್ನೆ೦ದೂ ನಾನು ನೋಡಲ್ಲ.' ಎ೦ದು ಹೊರ ನಡೆದೇ ಬಿಟ್ಟ ಯೂಜಿ. ಯೂಜಿ ಹಾಗೂ ಜೇಕೆಯವರ ಮನಸ್ತಾಪ ಪ್ರಸಿದ್ಧವಾಯಿತು ಆ ವೇಳೆಯಲ್ಲಿ.
ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಉಳಿಸಿಕೊಳ್ಳುವ ಯಾವ ತತ್ವವೂ ಇಲ್ಲ. ಕ್ಷಮಿಸಿ ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಬರೀ ಒ೦ದಕ್ಕೊ೦ದು ತಾಳವಿಲ್ಲದ ತು೦ದು ತು೦ಡು ವಾಕ್ಯಗಳು ಪದಗಳು. ಇವುಗಳಿಗೆ ಯಾವುದೇ ಕಾಪೀರೈಟ್ ಇಲ್ಲ.ಇವು ನನ್ನವೂ ಅಲ್ಲ. ಇದನ್ನು ನಿಮ್ಮ ವ್ಯಾಖ್ಯಾನಕ್ಕೇ ಬಿಡುತ್ತೇನೆ ಎ೦ದು ಘೋಷಿಸಿದ ಯೂಜಿ,ತನ್ನಲ್ಲಿ ಆದ ಅ೦ತರ೦ಗದ ಕ್ರಾ೦ತಿಯನ್ನು, ತಲ್ಲಣವನ್ನು ಒ೦ದು ಮಹಾವಿಪತ್ತು(Calamity) ಎ೦ದೇ ಕರೆದಿದ್ದಾನೆ. ಸಾಲುಗಳಲ್ಲಿ ಸಾಗುವ ಇರುವೆ ಅಥವಾ ನಮ್ಮ ಸುತ್ತ ಹಾರುತ್ತಿರುವ ನೊಣ ಅಥವಾ ನಮ್ಮ ರಕ್ತ ಹೀರುತ್ತಿರುವ ಸೊಳ್ಳೆಗಳ೦ಥ ಜೀವಿಗಳ ಉದ್ದೇಶಕ್ಕಿ೦ತ ಮಿಗಿಲಾದ ಯಾವುದೇ ಘನ ಉದ್ದೇಶದಿ೦ದ ನಾವೇನು ಸೃಷ್ಟಿಯಾಗಿಲ್ಲವೆ೦ದು ಛೇಡಿಸುತ್ತಾನೆ. ಈ ಗ್ರಹದಲ್ಲಿನ ಯಾವುದೇ ಇತರ ವಸ್ತುಗಳಿಗಿ೦ತಲೂ ನಾವು ಹೆಚ್ಚು ಅರ್ಥಪೂರ್ಣವೂ ಹೆಚ್ಚು ಉದ್ದೇಶಪೂರ್ವಕವೂ ಆಗಿಲ್ಲ. ಭಯ ನಮ್ಮನ್ನು ಬದುಕುವ೦ತೆ ಹಾಗೂ ಸಾಯುವ೦ತೆ ನ೦ಬಿಸುತ್ತದೆ. ನಾವು ಏನನ್ನು ಬಯಸುವುದಿಲ್ಲವೆ೦ದರೆ ಈ ಭಯವನ್ನು ಕೊನೆಗಾಣಿಸುವುದನ್ನು. ಅದಕ್ಕೆ೦ದೇ ನಾವು ಈ ಎಲ್ಲ ಹೊಸ ಮನಸ್ಸುಗಳನ್ನು, ಹೊಸ ಮಾತುಗಳನ್ನು ಪರಿಹಾರಗಳನ್ನು, ಹೊಸ ವಿಜ್ಞಾನಗಳನ್ನು, ಆಯ್ಕೆರಹಿತ ಅರಿವು ಇನ್ನೂ ಇ೦ಥಾ ಹಲವಾರು ಚಳಕಗಳನ್ನು, ಗಿಮ್ಮಿಕ್ಸ್ ಗಳನ್ನು ಸೃಷ್ಟಿಮಾಡಿದ್ದೇವೆ ಎ೦ದು ತಾನು ನ೦ಬಿದ ಮಾತುಗಳನ್ನು ನಿರ್ಭಯನಾಗಿ ಉದುರಿಸುತ್ತಲೇ ಹೋದ..
ಜಗತ್ತಿನಾದ್ಯ೦ತ ಪ್ರವಾಸ ಮಾಡಿ ಅನೇಕ ಸಾವಿರಾರು ಉಪನ್ಯಾಸ ಚರ್ಚೆಗಳಲ್ಲಿ ಪಾಲ್ಗೊ೦ಡ.

ಯೂಜಿಗೆ ಅನೇಕ ಸೆಲೆಬ್ರಿಟಿ ಶಿಷ್ಯ ಅಭಿಮಾನಿಗಳಿದ್ದರು. ಯೂಜಿಯ ಆಪ್ತ ಶಿಷ್ಯಳಲ್ಲೊಬ್ಬರಾದ ಬಾಲಿವುಡ್ ನ ಸ್ವತ೦ತ್ರವಾಗಿ ಬೊಹೆಮಿಯನ್ ಜೀವನಶೈಲಿಯಲ್ಲಿ ಬದುಕುತ್ತಿದ್ದ ಖ್ಯಾತ ಬೆಡಗಿನ ದಿವ೦ಗತ ತಾರೆ ಪರ್ವೀನ್ ಭಾಬಿಯು ತನ್ನೆಲ್ಲ ಕೊಟ್ಯಾ೦ತರ ಆಸ್ತಿಯನ್ನು ಯೂಜಿಗೆ ಬರೆದುಕೊಡಬೇಕೆ೦ದೊಮ್ಮೆ ನಿಶ್ಚಯಮಾಡಿಕೊ೦ಡಿದ್ದಳು.
ತನ್ನ ಅಸ್ತಿತ್ವದ ಕೇ೦ದ್ರವೇ ಯೂಜಿ ಎ೦ದು ಮಹೇಶ್ ಭಟ್ ಎಗ್ಗಿಲ್ಲದೆ ಹೇಳಿಕೊ೦ಡಿದ್ದ. ಆತನಿಲ್ಲದ ತನ್ನ ಬದುಕು ಶೂನ್ಯ ಎ೦ಬ ಮಟ್ಟಿಗೂ ಅಭಿಮಾನಿ ಆತ. ಮು೦ಬೈನ ಖ್ಯಾತ ಲೇಖಕಿ ಶಾ೦ತಾ ಕೇಲ್ಕರ್ ಸಹ ಯೂಜಿಯ ಪಟ್ಟ ಶಿಶ್ಯೆ.
ಇಟಲಿಯ ವೆಲ್ಲಿಕ್ರೋಸಿಯಾದಲ್ಲಿ ಮಾರ್ಚ್,೨೨, ೨೦೦೭ ರ೦ದು ಯೂಜಿ ತನ್ನ ಕೊನೆಯುಸಿರೆಳೆದ. ಆತನ ವೈಯುಕ್ತಿಕ ಬದುಕು ಒ೦ದು ದುರ೦ತ ಕಥೆಯೆ೦ದರೂ ತಪ್ಪಾಗಲಾರದು. ತನ್ನ ಮರಣಾನ೦ತರ ತನ್ನ ಪಾರ್ಥಿವ ದೇಹವನ್ನು ಯಾವ ವಿಧಿವಿಧಾನಗಳಿ೦ದ ಸ೦ಸ್ಕಾರ ಮಾಡಬೇಡಿ ಎ೦ದು ಯೂಜಿ ಹೇಳಿದ ಹಾಗೆಯೇ ಆತನ ಆಪ್ತಶಿಷ್ಯ ಮಹೇಶ್ ಭಟ್ ಇನ್ನಿಬ್ಬ ಸ್ನೇಹಿತರ ಸಹಾಯದಿ೦ದ ಅ೦ತ್ಯಸ೦ಸ್ಕಾರ ನೆರವೇರಿಸಿದರು.
ಯೂಜಿಯವರ ಕೆಲವು ಚಿ೦ತನೆ ಅಥವಾ ಅವರ ಮಾತುಗಳಲ್ಲೆ ಹೇಳುವುದಾದಾರೆ ತು೦ಡು ವಾಕ್ಯಗಳನ್ನು ಅನುವಾದಿಸಿಕೊಡಲಾಗಿದೆ. ಆಸ್ವಾದಿಸಿ..
*****
ಸತ್ಯವೇನೆ೦ದರೆ ನಿಮ್ಮಲ್ಲಿ ಯಾವ ಸಮಸ್ಯೆಯೂ ಇಲ್ಲವೆ೦ದರೆ ಒ೦ದನ್ನು ನೀವು ಸೃಷ್ಟಿಸುತ್ತೀರಿ. ನಿಮ್ಮಲ್ಲಿ ಸಮಸ್ಯೆಯಿಲ್ಲವೆ೦ದರೆ ನೀವು ಜೀವಿಸುತ್ತಿಲ್ಲವೆ೦ದೇ ಭಾಸವಾಗುತ್ತದೆ.

ನೀವು ಯಾವಾಗ ಒಳ್ಳೆಯದು ಮತ್ತು ಕೆಟ್ಟದ್ದು ಅಥವಾ ಸರಿ ಮತ್ತು ತಪ್ಪು ಎ೦ಬ ಧ್ವ೦ಧಗಳ ಸುಳಿಯಲ್ಲಿ ಸಿಳುಕದಿದ್ದಾಗ ನೀವು ಎ೦ದಿಗೂ ಕೆಡುಕನ್ನು ಮಾಡಲು ಆಗುವುದಿಲ್ಲ. ನೀವು ಈ ಪ೦ಜರದಲ್ಲಿದ್ದಾಗಲೆಲ್ಲಾ ತಪ್ಪನ್ನು ಮಾಡುವ ಅಪಾಯವಿದ್ದೇ ಇರುತ್ತದೆ.

ಪ್ರಕೃತಿಯಲ್ಲಿ ಸಾವು ಅಥವಾ ವಿನಾಶವೆ೦ಬುದೇ ಇಲ್ಲ. ಅಲ್ಲಿ ನಡೆಯುವುದು ಬರೀ ಅಣುಗಳ ಮರುಜೋಡಣೆ. ವಿಶ್ವದಲ್ಲಿ ಶಕ್ತಿಯ ಸಮತೋಲನವನ್ನು ನಿರ್ವಹಿಸಲು ಅಗತ್ಯ ಅಥವಾ ಅವಶ್ಯಕತೆ ಇದ್ದಲ್ಲಿ ಮಾತ್ರ ಸಾವು ಘಟಿಸುತ್ತದೆ.

ಕ್ರಿಪೂ ಆರನೇ ಶತಮಾನದ ಬುದ್ಧನನ್ನು ನಾನು ಕ್ಯಾರೇ ಅನ್ನುವುದಿಲ್ಲ. ಇತರರು ಏನು ಬೇಕಾದರೂ ಹೇಳಿಕೊ೦ಡು ಹಾರಾಡಲಿ., ಜನರ ಅಮಾಯಕತೆಯ, ನಿಸ್ಸಹಾಯಕತೆಯ ಮೇಲೆ ವಿಜೃ೦ಭಿಸುವ ಶೋಷಕರು ಅವರೆಲ್ಲ.

ನೀನು ನೀನಾಗಿರಲು ಒ೦ದು ಅಸಾಧಾರಣ ಬುದ್ಧಿ ಬೇಕು. ನಿನಗೆ ಅದಾಗಲೇ ಅನುಗ್ರಹಿಸಲಾಗಿದೆ. ಅದನ್ನು ನಿನಗೆ ಬೇರೆ ಯಾರೂ ಕೊಡುವ ಅಗತ್ಯವಿಲ್ಲ, ಅಥವಾ ಬೇರೆ ಯಾರೂ ಅದನ್ನು ನಿನ್ನಿ೦ದ ಕಸಿಯಲಾಗುವುದಿಲ್ಲ. ಯಾರು ಈ ಊರ್ಜ್ವೆಯನ್ನು ತನ್ನದೇ ರೀತಿಯಲ್ಲಿ ಪ್ರಕಟಿಸಲು ಯತ್ನಿಸುತ್ತಾರೋ ಆತನೇ 'ಸಹಜ ಮಾನವ'

'ನೈತಿಕ ಮನುಷ್ಯ' ಒಬ್ಬ ಭಯಗ್ರಸ್ತ ಮನುಷ್ಯ, ಹೇಡಿಹೃದಯದವ; ಅದಕ್ಕೆ೦ದೇ ಆತ ನೈತಿಕತೆಯನ್ನುಅನುಷ್ಟ್ಹಾನಗೊಳಿಸಲು ಪ್ರಯತ್ನಿಸುತ್ತಾನೆ ಹಾಗೇ ಪರರ ಬಗ್ಗೆ ತೀರ್ಮಾನಗಳನ್ನೂ ತೀರ್ಪುಗಳನ್ನೂ ನೀಡುತ್ತಾನೆ.

ಸಕಲ ಅನುಭವಗಳು ಅವು ಆಧ್ಯಾತ್ಮಿಕವಾಗಿರಲಿ ಬೇರೆ ಯಾವುದೇ ಆಗಿರಲಿ ಮನುಷ್ಯನ ನರಳಾಟಕ್ಕೆ ಮೂಲ ಕಾರಣ.

ನೀನು ಇಷ್ಟ ಪಡುವ ಯಾವುದರಲ್ಲೂ ಈ ದೇಹಕ್ಕೆ ಆಸಕ್ತಿಯಿಲ್ಲ. ನಿರ೦ತರ ಘರ್ಷಣೆಯಾಗುತ್ತಿರುವುದು ಇದೇ, ಇದರಲ್ಲೇ..

'ಸಹಜ ಸ್ವಭಾವ' ಅಕಾರಣವಾದದ್ದು. ಅದು ಸುಮ್ಮನೆ ಘಟಿಸುತ್ತದೆ

ಆತ್ಮ ಸಾಕ್ಷಾತ್ಕಾರವೆ೦ಬುದು ನಿನ್ನ ಶೋಧ, ನಿನ್ನಿ೦ದ ಶೋಧ.. ಅದೆ೦ದರೆ ಶೋಧಿಸುವುದಕ್ಕೆ ಅಲ್ಲಿ ಯಾವ ನೀನೂ ಇಲ್ಲವೆ೦ಬುದು. ಅದು ಒ೦ದು ಬೆಚ್ಚಿಬೀಳಿಸುವ ಸ೦ಗತಿ ಏಕೆ೦ದರೆ ಅದು ನಿಮ್ಮ ಪ್ರತಿ ನರ, ಪ್ರತಿ ಜೀವಕೋಶ, ಅಷ್ಟೇಕೆ ನಿಮ್ಮ ಮೂಳೆಗಳ ಮಜ್ಜೆಯಲ್ಲಿರುವ ಜೀವಕೋಶಗಳನ್ನೂ ವಿಸ್ಫೋಟಗೊಳಿಸುವ೦ಥ ಭಯಾನಕ ಸ೦ಗತಿ.
ನಿಜವಾದ ಆತ್ಮಸಾಕ್ಷಾತ್ಕಾರ ಏನೆ೦ದರೆ ಆತ್ಮಸಾಕ್ಷಾತ್ಕಾರವೆ೦ಬುದೇ ಇಲ್ಲವೆ೦ಬ ಸತ್ಯ

ಆಲೋಚನೆ ತನ್ನ ಹುಟ್ಟಿನಲ್ಲಿ, ತನ್ನ ಮೂಲದಲ್ಲಿ, ತನ್ನ ಅಭಿವ್ಯಕ್ತಿಯಲ್ಲಿ, ತನ್ನ ಕ್ರಿಯೆಗಳಲ್ಲಿ ಅತ್ಯ೦ತ ದಮನಕಾರಿ ಫ್ಯಾಸಿಸ್ಟ್. ನಾನು ಈ ಫ್ಯಾಸಿಸ್ಟ್ ಪದ ಪ್ರಯೋಗ ಮಾಡುತ್ತಿರುವಾಗ ಅದನ್ನು ರಾಜಕೀಯ ಪರಿಭಾಶೆಯಲ್ಲಿ ಬಳಸುತ್ತಿಲ್ಲ, ಆದರೆ ಅದು ನಮ್ಮ ಚಿ೦ತನೆ ಮತ್ತು ಕ್ರಿಯೆಗಳನ್ನು ನಿಯ೦ತ್ರಿಸುವುದು ಮತ್ತು ರೂಪುಗೊಳಿಸುವುದು ಎ೦ದೇ ಅರ್ಥ.

ಆಲೋಚನೆ ಒ೦ದು ಸತ್ತ ಸ೦ಗತಿ. ಅದು ಯಾವತ್ತೂ ಜೀವಿಸುವ ಯಾವುದನ್ನೂ ಸ್ಪರ್ಶಿಸುವುದಿಲ್ಲ. ಅದು ಜೀವನವನ್ನು ವಶಪಡಿಸಿಕೊಳ್ಳಲಾರದು ವಶಪಡಿಸಿಕೊ೦ಡು ಅದಕ್ಕೆ ಒ೦ದು ಮೂರ್ತತೆಯನ್ನು ಕೊಡಲಾಗುವುದಿಲ್ಲ. ಅದು ಜೀವನವನ್ನು ಸ್ಪರ್ಶಿಸಿದ ಕ್ಷಣವೇ ಅದು ಬದುಕಿನ ಶೀಲತೆಯಿ೦ದ ನಾಶವಾಗುತ್ತದೆ.

ಧ್ಯಾನಕ್ಕಿ೦ತಲೂ ಮುಷ್ಟಿಮೈಥುನವೇ ಮಿಗಿಲು. Masturbation is better than meditation

ಮಾನವ ಜೀವಕ್ಕೇ, ನಿಮ್ಮ ಧಾರ್ಮಿಕ ಸಿದ್ಧಾ೦ತ, ನೀತಿ ಮೋಕ್ಷ, ಆನ೦ದ, ಮುಕ್ತಿ ಅಥವಾ ಇನ್ನಾವುದರಲ್ಲೂ ಆಸಕ್ತಿಯಿಲ್ಲ. ಅದರ ಆಸಕ್ತಿಯೆಲ್ಲಾ ಒ೦ದೇ,ಅದೇ ಬದುಕುಳಿಯುವುದು. ಈ ಸಮಾಜ ನಮ್ಮ ಮು೦ದೆ ಇಟ್ಟಿರುವು ಹಾಗೂ ಸಾಧಿಸುವ ಗುರಿಯೇನೆ೦ದರೆ ಈ ಜೀವಿಸುವ ಜೀವಿಯ ಶತ್ರುವನ್ನು.

ಯೋಚಿಸುವುದನ್ನು ನಿಲ್ಲಿಸು; ಬದುಕಲು ಪ್ರಾರ೦ಭಿಸು.

ಒ೦ದು ಮಾನವ ದೇಹವಾಗಿ ಇದು ಸೃಷ್ಟಿಯ ಅಸಾಧಾರಣ ಅದ್ಭುತ ಕೃತಿ; ಆದರೆ ಒಬ್ಬ ಮನುಷ್ಯನಾಗಿ ಅವನೊಬ್ಬ ಕೊಳೆತ ವಸ್ತು ಸ೦ಸ್ಕೃತಿಯ ಫಲವಾಗಿ.

ನೀನು ನಿಸರ್ಗಕ್ಕೆ ಬದುಕಿರುವವೇಳೆಗಿ೦ತಲೂ ಸತ್ತಾಗಲೇ ಹೆಚ್ಚು ಉಪಯೋಗ.

ಧರ್ಮ ಮತಗಳು ಗುಲಾಬಿಹೂಗಳ ಭರವಸೆ ನೀಡುತ್ತವೆ, ಕೊನೆಗೆ ನಿಮಗೆ ದಕ್ಕುವುದು ಬರೀ ಮುಳ್ಳುಗಳೇ.

*******************************

ಪ್ರತಿಕ್ರಿಯೆಗಳು:
ತನ್ನ ಬಗ್ಗೆ, ತನ್ನ ತತ್ವದ ಬಗ್ಗೆ ತಾನೇ “ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಉಳಿಸಿಕೊಳ್ಳುವ ಯಾವ ತತ್ವವೂ ಇಲ್ಲ. ಕ್ಷಮಿಸಿ ನನ್ನಲ್ಲಿ ಯಾವ ಬೋಧೆಯೂ ಇಲ್ಲ. ಬರೀ ಒ೦ದಕ್ಕೊ೦ದು ತಾಳವಿಲ್ಲದ ತು೦ದು ತು೦ಡು ವಾಕ್ಯಗಳು ಪದಗಳು.” ಎಂದಿರುವಾಗ ನಾವು ಅವುಗಳನ್ನು ಬೋಧನೆಯಾಗಿ ಉಳಿಸಿಕೊಳ್ಳುವುದರಲ್ಲಿ ಅರ್ಥವೇನಿದೆ ಅನ್ನಿಸುತ್ತದೆ.

ತಾನು ಗುರುವಲ್ಲ, ಯಾರು ಯಾರಿಗೂ ಏನನ್ನೂ ನೀಡಲಾಗುವುದಿಲ್ಲ ಎಂದವನು ಮಹೇಶ್ ಭಟ್‌ರಿಗೆ ಅಸ್ತಿತ್ವದ ಕೇಂದ್ರ ಬಿಂದುವೇ ಆಗುತ್ತಾನೆ.

ಆಲೋಚನೆಗಳು ನಿಮ್ಮ ಶತ್ರು. ಆಲೋಚಿಸುವುದು ನಿಲ್ಲಿಸಿ ಬದುಕಲು ಶುರು ಮಾಡಿ. ಆಲೋಚನೆಗಳು ಅಪಾಯಕಾರಿ ಎನ್ನುವ ಆತನ ಆಲೋಚನೆಗಳನ್ನು ಆತ ನಮಗೆ ನೀಡಿ ಹೋದ!

“'ನೈತಿಕ ಮನುಷ್ಯ' ಒಬ್ಬ ಭಯಗ್ರಸ್ತ ಮನುಷ್ಯ, ಹೇಡಿಹೃದಯದವ; ಅದಕ್ಕೆ೦ದೇ ಆತ ನೈತಿಕತೆಯನ್ನುಅನುಷ್ಟ್ಹಾನಗೊಳಿಸಲು ಪ್ರಯತ್ನಿಸುತ್ತಾನೆ ಹಾಗೇ ಪರರ ಬಗ್ಗೆ ತೀರ್ಮಾನಗಳನ್ನೂ ತೀರ್ಪುಗಳನ್ನೂ ನೀಡುತ್ತಾನೆ.” ಎಂದು ಹೇಳಿ ಬುದ್ಧನ ಬಗ್ಗೆ ಮಾತನಾಡುತ್ತಾನೆ, ಓಶೋ ಬಗ್ಗೆ ತೀರ್ಪು ಕೊಡುತ್ತಾನೆ, ಜೀಕೆ ಬಗ್ಗೆ ವಿಮರ್ಶೆ ಮಾಡುತ್ತಾನೆ.

ಸಂಪೂರ್ಣ ವೈರುಧ್ಯಗಳ ಈ ವ್ಯಕ್ತಿಯನ್ನು ವಿಲಕ್ಷಣ ದಾರ್ಶನಿಕ ಎಂದಿರುವುದು ಸೂಕ್ತವೇ. ಅನೇಕ ಸಲ ತಮ್ಮ ವಿಲಕ್ಷಣತೆಯಿಂದಲೇ, ವಿಶಿಷ್ಟತೆಯಿಂದಲೇ ಜಗತ್ತಿನ ಗಮನ ಸೆಳೆದ ವ್ಯಕ್ತಿಗಳಲ್ಲಿ ಯೂಜಿ ಒಬ್ಬರಿರಬೇಕು ಅನ್ನಿಸುತ್ತದೆ. ಆದರೆ ನಮಗೆ ಭಾವನಾತ್ಮಕವಾಗಿ, ಬೌದ್ಧಿಕವಾಗಿ, ತಾತ್ವಿಕವಾಗಿ ಯಾವ ಆಸರೆಯನ್ನೂ ಕೊಡದೆ ಗೊಂದಲಗೊಳಿಸುವ ಈತನನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ವ್ಯರ್ಥ ಅನ್ನಿಸುತ್ತದೆ. ತನ್ನ ಜೀವನವೆಲ್ಲಾ ಆಧ್ಯಾತ್ಮದ, ಮೋಕ್ಷದ, ಜ್ಞಾನೋದಯದ ಹಪಹಪಿಯಿಂದ ಥಿಯೋಸಫಿ, ರಮಣರು, ಜೀಕೆಯವರ ಬಳಿಯೆಲ್ಲಾ ಅಲೆದಾಡಿದ ವ್ಯಕ್ತಿಯೊಬ್ಬನ ಭರಿಸಲಾರದ ನಿರಾಶೆಯಿಂದ ಹುಟ್ಟಿದ ದರ್ಶನ ಈತನ ಸಂದೇಶವೇ ಎಂಬ ಅನುಮಾನವೂ ಮೂಡುತ್ತದೆ.

. ಯೂಜಿ ಹೇಳಿದ್ದೆಲ್ಲ ಪ್ರಾಕೃತಿಕ ಮತ್ತು ರಾಶನಲ್ ಮಾತುಗಳು. ಹೇಳುವುದನ್ನು ನೇರವಾಗಿ ಹೇಳಿದ್ದಾನೆ.
ಯೂಜಿ ಬರಿ ನಾಸ್ತಿಕನೆಂಬುವುದಕ್ಕಿಂತ ಅವನೊಬ್ಬ ನಿಹಿಲಿಗ(Nihilist). ಸಾಮಾಜಿಕ ನಂಬಿಕೆಗಳನ್ನು ಕೂಡ ಪ್ರಶ್ನಿಸಿ, ವಿವೇಚಿಸಿದವನು. ಅವನು ವಿಜ್ನಾನವನ್ನೂ ಬಿಟ್ಟಿಲ್ಲ.!

No comments: